ಸತ್ತವನ ಪ್ರೀತಿಗೆ ಸಾರ‍್ತಕತೆ ಸಿಕ್ಕಿತು

– ಬಾವನ ಪ್ರಿಯ

valentines-day-rose

ಅವರ ಪ್ರೀತಿಯ ವಿಶಯ ಅರಿತ ಅವಳ ಅಣ್ಣಂದಿರು ಅವನನ್ನು ಹೊಡೆದು ಕೊಂದರು. ಅದಾರದೋ ಹೊಲದಲ್ಲಿ ಮುಚ್ಚಿಹಾಕಿದರು. ಅವನೋ ಅನಾತ – ಹೇಳುವರಿಲ್ಲ, ಕೇಳುವರಿಲ್ಲ.

ದಿನಗಳು ಕಳೆದವು..

ರೈತ ಹೊಲದಲ್ಲಿ ಗುಲಾಬಿ ಗಿಡಗಳನ್ನು ನೆಟ್ಟ. ಗಿಡದ ಬೇರುಗಳು ಪ್ರೀತಿಯ ಅರಸುತ್ತಾ ಬೂಮಿಯ ಗರ‍್ಬಕ್ಕೆ ಹೋದವು.
ಪ್ರೀತಿಯ ವಿರಹದಲ್ಲಿ ಕೊರಗುತ್ತಿದ್ದ ಹ್ರುದಯದ ದನಿಯನ್ನು ಆಲಿಸಿದವು.
ಮೊದಲು ಅವನನ್ನು ಮುಟ್ಟಿದವು.
ನಂತರ ಅವನ ಕೊಳೆತ ದೇಹವನ್ನು ಹೊಕ್ಕು, ಮಾಂಸದ ತುಂಡುಗಳನ್ನು, ಪುಡಿಯಾದ ಎಲುಬಿನ ಚೂರುಗಳನ್ನು, ಒಣಗಿದ ರಕ್ತವನ್ನು ಎಳೆದು ಗಿಡಕ್ಕೆ ಕಳುಹಿಸಿದವು.

ಅವನ ಕೊಳೆತ ದೇಹದ ಮಾಂಸ ದಳಗಳಾಯಿತು
ಮೂಳೆಯ ಚೂರುಗಳು ಶಲಾಕೆಗಳಾದವು
ರಕ್ತವು ಕಣ್ಣ ಕುಕ್ಕುವ ಹೂವಿನ ರಂಗಾಯಿತು
ಈಗ ಅವನೊಂದು ಕೆಂಪುಗುಲಾಬಿ.

ರೈತ ಕಣ್ಣರಳಿಸುವಂತೆ ಬಿರಿದು ನಿಂತ ಹೂಗಳನ್ನು ಕೊಯ್ದು ಮಾರುಕಟ್ಟೆಗೆ ತಂದ.
ಅಣ್ಣಂದಿರು ಹೂಗಳನ್ನು ತಂಗಿಗಾಗಿ ಕೊಂಡು ತಂದರು.
ಮತ್ತೆ ಅವನು ಅವಳ ಮುಡಿಗೇರಿದ. ನಿಶ್ಕಲ್ಮಶ ಪ್ರೀತಿ ಅವರನ್ನು ಮತ್ತೆ ಒಂದುಗೂಡಿಸಿತ್ತು.
ಅವನ ಪ್ರೀತಿಗೆ ಸಾರ‍್ತಕತೆ ಸಿಕ್ಕಿತು.

( ಚಿತ್ರ ಸೆಲೆ: healthtwit.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks