ಒಂದು ಹೊಸಬಗೆಯ ಸಿನೆಮಾ ‘ಉರ‍್ವಿ’

– ರತೀಶ ರತ್ನಾಕರ.

ನೀಲಿಬೆಳಕಿನಲ್ಲಿ ಕಡಲ ಅಲೆಗಳ ಮೊರೆತ. ದಡ ಸೇರಲು ಹವಣಿಸುತ್ತಿರುವ ತಂದೆ, ಅವನೆದೆಗೆ ಒದ್ದು ಕೇಕೆ ಹಾಕಿ ನಗುವ ದುರುಳ ಕೂಟ, ಆ ದುರುಳ ಕೂಟದ ಒಡೆಯ ಕತ್ತಲಲ್ಲೂ ತಂಪು ಕನ್ನಡಕ ಹಾಕಿಕೊಂಡು ಗಹಗಹಿಸಿ ನಗುತ್ತಾನೆ. ದಡದ ಗುಡಿಸಲಿನಲ್ಲಿ ಮಗಳ ಚೀರಾಟ, ಹೋರಾಟ, ಆ ಮಬ್ಬುಗತ್ತಲಿನಲ್ಲಿ ಅವಳ ಗೋಳು ಕಾಣಲೇ ಇಲ್ಲ. ಆ ಕಡಲ ದೊಂಬಿಯಲಿ ಅವರ ನೋವು ಯಾರಿಗೂ ಕೇಳಲೇ ಇಲ್ಲ… ಇದು ಒಂದು ಜಗತ್ತು.

ಅತ್ತ ಇನ್ನೊಂದು ಬಣ್ಣದ ಜಗತ್ತು, ಅಲ್ಲಿ ಬಣ್ಣಗಳು ಕಾಣುವುದು ಬೆಳಕಿನಲ್ಲಲ್ಲ, ಕತ್ತಲಲ್ಲಿ! ಅದು ಬಾಬಿಯ(ಬವಾನಿ ಪ್ರಕಾಶ್) ಕೋಟೆ. ಅಲ್ಲಿ ಕನಸುಗಳಿಗೆ ಬೆಲೆಯಿಲ್ಲ, ಕನಸುಗಳ ಕಾಣಬೇಕಂದರೆ ಮಲಗಬೇಕಲ್ಲ! ಆದರೂ ಬಾನಿನಲ್ಲಿ ಒಲವಿನ ಜೋಡಿಯಾಗಿ ಹಾರಾಡುವ ಕನಸು ಕಾಣುವ ಸುಸ್ಸೀ(ಶ್ರದ್ದಾ ಶ್ರೀನಾತ್ ) ಎಂಬ ಅರಳಿದ ಹೂವು. ಬಾಬಿಯ ತೋಟದ ಹೂವುಗಳು ದೇವರ ಮುಡಿಗೇರಲ್ಲ, ಅವೇನಿದ್ದರೂ ಹಾಸಿಗೆಯ ಪಾಲು. ಆದರೂ ಇನ್ನೂ ಅರಳದ ಆ ತೋಟದ ಮೊಗ್ಗೊಂದನ್ನು ದೇವರ ಮುಡಿಗೇರಿಸುವ ಹೆಬ್ಬಯಕೆ ಹೊತ್ತ ಡೈಸಿ(ಶ್ವೇತಾ ಪಂಡಿತ್)…

ಮೂರನೆಯ ಜಗತ್ತು… ಅನಾತೆಯಾದರೂ ಆಶ್ರಮದ‌ ನೆರಳಲ್ಲಿ ಬದುಕು ಕಟ್ಟಿಕೊಂಡು, ಕನಸು, ಒಲವು ಎಲ್ಲವನ್ನು ದಕ್ಕಿಸಿಕೊಳ್ಳುತ್ತಿರುವ ಆಶಾ (ಶ್ರುತಿ ಹರಿಹರನ್). ಈ ಮೂರು ಜಗತ್ತುಗಳು ಎದುರು ಬದುರಾದಾಗ ಆಗುವ ತಲ್ಲಣಗಳೇನು? ಕಟ್ಟಿಕೊಂಡ ಕನಸುಗಳ, ಒಡಲಾಳದ ಒಲವಿನ ಗತಿಯೇನು? ಇದೆಲ್ಲವನ್ನು ಹದವಾಗಿ ಹೇಳುವ ಚಿತ್ರವೇ ಉರ‍್ವಿ.

ಹೆಣ್ಣಿನ ಮಾರಾಟದಂತಹ ಸೂಕ್ಶ್ಮ ವಿಶಯದ ಸುತ್ತ ಕತೆಯನ್ನು ಹೆಣೆದು, ಯಾವುದೇ ಹಸಿಬಿಸಿ ನೋಟಗಳನ್ನು ತೋರಿಸಿದೆ, ನೋವು, ಬಿಡುಗಡೆಯ ತುಡಿತ ಹಾಗೂ ಹೋರಾಟದ ತಲ್ಲಣಗಳನ್ನು ಕಣ್ಣಿಗೆ ಕಟ್ಟುವಂತೆ ತೆರೆಗೆ ತರುವಲ್ಲಿ, ಚಿತ್ರದ ದಾರಿ ತೋರುಗರಾದ ಪ್ರದೀಪ್ ವರ‍್ಮ ಅವರು ಗೆದ್ದಿದ್ದಾರೆ. ಕಲಾತ್ಮಕ ಚಿತ್ರ ಇಲ್ಲವೇ ಪೂರ‍್ತಿಯಾಗಿ ಒಂದು ಕಮರ‍್ಶಿಯಲ್ ಚಿತ್ರದ ಎಳೆಯಂತಿರುವ ಕತೆಯನ್ನು ಅವರೆಡರ ನಡುವಿನ ದಾರಿಯಲ್ಲಿ ಚಿತ್ರಿಸಿಕೊಟ್ಟಿದ್ದಾರೆ ವರ‍್ಮ ಅವರು.

ಮೇಲೆ ಹೇಳಿದ ಮೂರು ಜಗತ್ತಿಗೆ ಕೊಂಡಿಯಂತಿರುವ ಪಾತ್ರವನ್ನು ಅಚ್ಯುತ್ ಅವರು ಅವರಿಗೆ ಅವರೇ ಸಾಟಿ ಎನ್ನುವಂತೆ ನಟಿಸಿದ್ದಾರೆ. ಬವಾನಿ ಪ್ರಕಾಶ್, ಶ್ವೇತಾ ಪಂಡಿತ್, ಶ್ರುತಿ ಹರಿಹರನ್ ಅವರು ಪೈಪೋಟಿಗೆ ಬಿದ್ದು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸುವ ಕೆಲಸ ಮಾಡಿದ್ದಾರೆ. ಶ್ವೇತಾ ಪಂಡಿತ್ ತನ್ನ ಗಟ್ಟಿಗಿತ್ತಿಯ ಪಾತ್ರದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ. ಶ್ರದ್ದಾ ಶ್ರೀನಾತ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದವರು ಕೂಡ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಟ ನಟಿಯರ ಆಯ್ಕೆಯೇ ಈ ಚಿತ್ರಕ್ಕೆ ಗಟ್ಟಿತನವನ್ನು ತಂದುಕೊಟ್ಟಿದೆ.

ಸಿನಿಮಾಕ್ಕೆ ಹಾಕಿರುವ ಸೆಟ್ ಗಳು ಹಾಗೂ ಆನಂದ್ ಸುಂದರೇಶ್ ಅವರ ಸಿನಿಮಾಟೋಗ್ರಪಿ ಕಣ್ಣಿಗೆ ಮುದವನ್ನು ನೀಡಿದರೆ ಮನೋಜ್ ಜಾರ‍್ಜ್ ಅವರ ಇನಿತ(music) ಕಿವಿಗೆ ತಂಪೆರೆಯುತ್ತದೆ. ‘ತಿಳಿ ಪ್ರೇಮ ಮೂಡಿ’ ಹಾಡು ಒಳ್ಳೆಯ ಒಲವಿನ ಗೀತೆಯಾಗಿ ಮನಸ್ಸಿನಲ್ಲಿ ಉಳಿದರೆ. ‘ಅದರ ಮದುರ’ ಹಾಡು ಹಿತವನ್ನು ನೀಡುತ್ತದೆ. ಚಿತ್ರಾ ಅವರು ಹಾಡಿರುವ ‘ಕಣ್ಣ ಹನಿ’ ಹಾಡು ತೆರೆ ಮೇಲಿನ ಪಾತ್ರಗಳ ನೋವಿಗೆ ಕನ್ನಡಿ ಹಿಡಿದಂತಿದೆ. ಸಿನಿಮಾದ ಓಟಕ್ಕೆ ಹುರುಪು ತುಂಬುವಂತೆ ಹಿನ್ನಲೆ ಇನಿತವಿದೆ.

ಹೆಣ್ಣಿನ ಪಾತ್ರಗಳನ್ನು ಅರಿದಾಗಿಟ್ಟುಕೊಂಡು ಚಿತ್ರ ಮಾಡುವವರ ಎಣಿಕೆ ಈಗಂತು ತುಂಬಾ ಕಡಿಮೆ‌ ಇದೆ. ಅಂತಹದ್ದರಲ್ಲಿ ಯಾವುದೇ ನಾಯಕ ನಟನ ಚಿತ್ರಕ್ಕೆ ಕಡಿಮೆ‌ ಇಲ್ಲದಂತೆ ಈ ಚಿತ್ರ ಮಾಡಿರುವುದು ಪ್ರದೀಪ್ ವರ‍್ಮ ಅವರ ಹೆಗ್ಗಳಿಕೆ. ಹೆಣ್ಣಿನ‌ ಪಾತ್ರಗಳು ಇಲ್ಲಿ ತೆರೆಯ ಮೇಲೆ ಮೆರೆಯುತ್ತವೆ, ಚಿತ್ರದ ಕೊನೆಯ ಹಂತದಲ್ಲಿ ಶ್ರುತಿ, ಶ್ವೇತಾ ಹಾಗೂ ಶ್ರದ್ದಾ ಕೆಂಪು ಹೊಗೆಯ ಸೀಳಿ ನಡೆದುಕೊಂಡು ಬರುವಾಗ, ಶ್ವೇತಾ ಪಂಡಿತ್ ಕಪ್ಪು ಕನ್ನಡಕವನ್ನು ಹಾಕಿಕೊಳ್ಳುವ ನೋಟ ಮೈಜುಮ್ಮೆನಿಸುತ್ತದೆ. ನಾಯಕ ನಟರ ಚಿತ್ರಕ್ಕೆ ಸಾಟಿಯಾಗಿ ಈ ಸಿನಿಮಾ ಮೂಡಿಬಂದಿದೆ.

ಯಾಕೋ ಚಿತ್ರವನ್ನು ಕೊಂಚ ಎಳೆದಂತಾಯಿತು ಅಂತ ಅನಿಸಬಹುದು. ಆದರೆ ಸನ್ನಿವೇಶಗಳನ್ನು ಹದವಾಗಿ ಬೆರೆಸಿರುವುದು ನಿಮ್ಮನ್ನು ಕೊನೆಯವರೆಗೂ ಕರೆದುಕೊಂಡು ಹೋಗುತ್ತದೆ. ಮಸಾಲೆ, ನಗೆ, ಒಲವು ಹಾಗೂ ಹೊಡಿಬಡಿ ಚಿತ್ರಗಳನ್ನು ಬಿಟ್ಟು ಬೇರೆ ಬಗೆಯ ಚಿತ್ರ ನೋಡಬೇಕು ಎನ್ನುವವರಿಗೆ ಉರ‍್ವಿ‌ ಒಂದೊಳ್ಳೆ ಆಯ್ಕೆ. ಒಟ್ಟಾರೆಯಾಗಿ ಸ್ಯಾಂಡಲ್‍ವುಡ್ ಗೆ ಇದೊಂದು ಹೊಸಬಗೆಯ ಚಿತ್ರ ಎಂದರೆ ತಪ್ಪಾಗಲಾರದು.

(ಚಿತ್ರ ಸೆಲೆ: cinematrendz.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.