ಸಂಬಂದಗಳ ಬೆಲೆ

ಕುಮಾರ್ ಬೆಳವಾಡಿ.

ಮುಂಗೋಪಿ ಪ್ರಕಾಶ ಮೇಜಿನ ಮೇಲೆ ಪುಸ್ತಕವನ್ನಿಟ್ಟು ಏನೋ ಬರೆಯುತ್ತಿದ್ದ. ಬರೆಯುವುದೆಲ್ಲಾ ಮುಗಿದ ಮೇಲೆ ಪುಸ್ತಕವನ್ನು ಮುಚ್ಚುವಾಗ ಮೇಜಿನ ಮೇಲೆ ಇದ್ದ ತನ್ನ ತಂದೆಯ ಕನ್ನಡಕವನ್ನು ನೋಡದಾದ. ಪ್ರಕಾಶನ ಕೈ ತಾಗಿ ಕನ್ನಡಕ ಕೆಳಗೆ ಬಿದ್ದು ಒಡೆದು ಹೋಯಿತು. ಒಡೆದುಹೋದ ತಂದೆಯ ಕನ್ನಡಕವನ್ನು ನೋಡಿ ಜೋರಾಗಿ ಕೂಗಾಡತೊಡಗಿದ. ಅದ್ಯಾವುದರ ಅರಿವಿಲ್ಲದ ಪ್ರಕಾಶನ ಹೆಂಡತಿ ಪಾರ‍್ವತಿ ತನ್ನ ತವರು ಮನೆಗೆ ಹೋಗಿ ಬರಲು ಸಿದ್ದತೆ ಮಾಡಿಕೊಳ್ಳುತಿದ್ದಳು. ಪುಟ್ಟ ಮಗಳು ಅಜ್ಜಿಯ ಜೊತೆ ವರಾಂಡದಲ್ಲಿ ತೊದಲು ನುಡಿಯಿಂದ ಮಾತನಾಡುತ್ತಿದ್ದಳು. ವಯಸ್ಸಾದ ತಂದೆ-ತಾಯಿ ಪ್ರಕಾಶನ ಮಾತುಗಳನ್ನು ಅಸಹಾಯಕತೆಯಿಂದ ಕೇಳಿಸಿಕೊಳ್ಳುತ್ತಿದ್ದರೂ ಹಿಂದಿರುಗಿ ಮಾತಾಡಲು ದೈರ‍್ಯ ಮಾಡಲಿಲ್ಲ.

ಹೆಂಡತಿ ಪಾರ‍್ವತಿಯನ್ನ 8 ಗಂಟೆಯ ಬಸ್ಸಿಗೆ ಹತ್ತಿಸಲು ಪಟ್ಟಣದವರೆಗೆ ಹೋಗಿದ್ದ ಪ್ರಕಾಶ ಹಿಂದಿರುಗಿ ಮನೆಗೆ ಬಂದು ತಿಂಡಿ ತಿನ್ನಲು ಕುಳಿತಾಗ, ತನ್ನ ಮಗಳ ಪುಟ್ಟ ಕೈ ಟಾಟಾ ಮಾಡಿದ್ದನ್ನ ನೆನೆಸಿಕೊಂಡಾಗ ಮನಸ್ಸಿಗೆ ಹಿತವೆನ್ನಿಸಿತು. ತಿಂಡಿ ಮುಗಿಸಿ ತೋಟದ ಕಡೆ ನಡೆದ. ಎಂದಿನಂತೆ ಸಂಜೆ 5 ಗಂಟೆಗೆ ಮನೆಗೆ ಪ್ರಕಾಶ ಮನೆಗೆ ಬಂದ. ಬಾಗಿಲ ಬಳಿ ಆತನ ತಾಯಿ ಲಕ್ಶ್ಮಮ್ಮ ತನ್ನ ಕಿತ್ತುಹೋಗಿದ್ದ ಚಪ್ಪಲಿ ಸರಿಮಾಡಿಕೊಳ್ಳುತ್ತಿದ್ದರು. ಮಗನನ್ನು ಕಂಡ ತಾಯಿ ಟೀ ತರಲು ಒಳಗೆ ಹೋದಳು. ಟೀ ಕುಡಿದು ಹೊರಗೆ ಹೋದವ ರಾತ್ರಿ 9 ಕ್ಕೆ ಮನೆಗೆ ಬಂದವನೇ ಊಟ ಮುಗಿಸಿ ಮಲಗಿದ.

ಮಾರನೆಯ ದಿನ ಬೆಳಿಗ್ಗೆ ತೋಟಕ್ಕೆ ಹೊರಡುವ ಮೊದಲು ಔಪಚಾರಿಕವಾಗಿ ಹೆಂಡತಿಗೆ ಕರೆ ಮಾಡಿದ್ದ. ತನಗೆ ಅರಿವಿಲ್ಲದೆ ಮಗಳ ಬಳೆ ಕಳೆದುಹೋಗಿದ್ದರಿಂದ ಹೆದರಿದ್ದ ಪಾರ‍್ವತಿ, ಮುಂಗೋಪಿ ಗಂಡನಿಗೆ ಅದು ಗೊತ್ತಾಗಬಾರದು ಎಂದು “ಟೇಬಲ್ ಮೇಲಿರುವ ಮಗುವಿನ ಚಿನ್ನದ ಬಳೆಗಳನ್ನು ಒಳಗಿಡಿ” ಎಂದು ಹೇಳಿದ್ದಳು. ಹೆಂಡತಿಯ ಸುಳ್ಳಿನ ಮರ‍್ಮವನ್ನ ಅರಿತ ಪ್ರಕಾಶ, ಮಾತು ಮುಗಿಸಿ ತನ್ನಶ್ಟಕ್ಕೆ ಗೊಣಗುತ್ತ ಹೊರಟ. ಆದರೆ ತಂದೆ-ತಾಯಿಗೆ ಏನೂ ಅರ‍್ತವಾಗಲಿಲ್ಲ.

ಮದ್ಯಾಹ್ನದ ಊಟಕ್ಕೆಂದು ಪ್ರಕಾಶ ಮನೆಗೆ ಬರುತ್ತಿರುವಾಗ, ಬೀದಿಯ ಕೊನೆ ಮನೆಯಲ್ಲಿ ತಂದೆ-ತಾಯಿಗಳಿಬ್ಬರೂ ತಮ್ಮ ಅಳುತ್ತಿರುವ ಮಗುವನ್ನು ಸಮಾದಾನ ಮಾಡುತ್ತಿದ್ದುದ್ದನ್ನು ನೋಡಿದ. ನೆನ್ನೆ ತನ್ನ ತಂದೆಯ ಮೇಲೆ ಕೂಗಾಡಿದ್ದು ನೆನಪಾಗಿ ಹೊಟ್ಟೆಯಲ್ಲಿ ಸಂಕಟವಾಯಿತು, ಜೊತೆಗೆ ಅಸಹ್ಯವೆನಿಸಿ ತನ್ನನು ತಾನೇ ಶಪಿಸಿಕೊಂಡ. ಮನೆಯ ದಾರಿಯನ್ನು ಬಿಟ್ಟು ಊರ ಹೊರಗಿನ ಅರಳಿಕಟ್ಟೆಯ ಬಳಿ ಹೋಗಿ ಕುಳಿತ. ತವರಿಗೆ ಹೋಗಿದ್ದ ಹೆಂಡತಿ ವಾಪಸ್ಸು ಬರುವುದು ನೆನಪಾಗಿ ಮನೆಗೆ ಹಿಂದಿರುಗಿದ.

ಮದ್ಯಾಹ್ನವಾದ್ದರಿಂದ ತಂದೆ ಮಲಗಿದ್ದರು. ತಾಯಿ ಮನೆಯಲ್ಲಿ ಇಲ್ಲದ್ದನ್ನು ತಿಳಿದ ಪ್ರಕಾಶ ಹೊರಗೆ ಬಂದು ಜಗುಲಿಯ ಮೇಲೆ ಹಾಗೆ ಮಲಗುತ್ತಿದ್ದಂತೆ ಹಿಂದಿನ ದಿನ ತನ್ನ ತಂದೆಯೊಂದಿಗೆ ಕೂಗಾಡಿದ್ದು ನೆನಪಿಗೆ ಬಂತು. ತನ್ನ ಬಾಲ್ಯದ ದಿನಗಳ ಬಗ್ಗೆ ಯೋಚಿಸುತ್ತಿದ್ದಂತೆ ತನ್ನ ಬಗ್ಗೆ ಅವನಿಗೆ ನಾಚಿಕೆಯಾಯಿತು. ಏನೋ ತಳಮಳ ಶುರುವಾಯಿತು ಜೊತೆಗೆ ಸಂಕಟವೂ ಅಯಿತು. ಅದೇ ಯೋಚನೆಯಲ್ಲಿದ್ದವನು ನಿದ್ರೆಗೆ ಜಾರಿದ. ಸ್ವಲ್ಪ ಸಮಯದ ನಂತರ ತಾಯಿ ಬಂದು ಊಟಕ್ಕೆ ಎಬ್ಬಿಸಿದರು. ನಿದ್ರೆಯಿಂದ ಎದ್ದವನಿಗೆ ಮನಸ್ಸು ಹಗುರವೆನ್ನಿಸುತಿತ್ತು. ಹೆಂಡತಿ ಬಸ್ ನಿಲ್ದಾಣಕ್ಕೆ ಬರಲು ಇನ್ನು ಸಮಯವಿದ್ದರೂ, ತನಗೆ ಹಸಿವಿಲ್ಲವೆಂದು ಹೇಳಿ ಬಸ್ ನಿಲ್ದಾಣದ ಕಡೆ ಹೊರಟ.

ಬಸ್ಸಿಂದ ಹೆಂಡತಿ ಮತ್ತು ಮಗಳು ಇಳಿಯುತ್ತಿದ್ದಂತೆ ಪ್ರಕಾಶ ತಾನು ತಂದಿದ್ದ ಚಿನ್ನದ ಬಳೆಗಳನ್ನ ಮಗಳ ಕೈಗೆ ತೊಡಿಸಿದ. ತನ್ನ ತಪ್ಪಿನ ಅರಿವಾದ ಪಾರ‍್ವತಿಯು ಮೌನವಾಗಿಯೇ ಪ್ರಕಾಶನನ್ನು ಹಿಂಬಾಲಿಸಿದಳು. ದಾರಿಯಲ್ಲಿ ಒಂದು ಮಾತನ್ನು ಆಡಲಿಲ್ಲ. ಪ್ರಕಾಶ ಮಾತ್ರ ಮಗಳೊಂದಿಗೆ ಮಾತಾಡುತ್ತ ಗಾಡಿ ಓಡಿಸುತಿದ್ದ.

ಮನೆಗೆ ಬರುತ್ತಿದ್ದಂತೆ ತಾಯಿ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿದ ಪ್ರಕಾಶ, ತಂದಿದ್ದ ಚಪ್ಪಲಿಯನ್ನು ತಾಯಿಗೆ ಕೊಟ್ಟ. ಹೊಸ ಕನ್ನಡಕವನ್ನು ತಂದೆಯ ಪಕ್ಕದಲ್ಲಿಟ್ಟ. ಜಗುಲಿಯ ಮೇಲೆ ಕುಳಿತು ಎಲ್ಲವನ್ನು ನೋಡುತ್ತಿದ್ದ ತಂದೆ ಕಣ್ಣಂಚಲ್ಲಿ ನೀರಿತ್ತು. ತಾಯಿಯ ಮುಕದಲ್ಲಿ ಮಂದಹಾಸವಿತ್ತು.

ಪ್ರಕಾಶ ಮಗಳೊಂದಿಗೆ ಮಾತನಾಡುತ್ತ ಮನೆಯ ಒಳಗೆ ಹೋದನು, ಪಾರ‍್ವತಿ ಹಿಂಬಾಲಿಸಿದಳು.

(ಚಿತ್ರ ಸೆಲೆ:  wikihow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: