ಬೆಳೆಯುತಿಹಳು ಮಗಳು

– ಸುರಬಿ ಲತಾ.

ಬೆಳೆಯುತಿಹಳು ಮಗಳು
ಸಂತಸಗೊಂಡಿದೆ ಕರುಳು

ಸ್ವಲ್ಪ ಮುದ್ದು, ಮಾತು ಪೆದ್ದು
ತನ್ನದೇ ಗೆಲ್ಲಬೇಕೆನ್ನುವಳು
ಚಂದಿರನೇ ಕೇಳುವಳು
ದಿನಕ್ಕೊಂದು ಬಯಕೆ
ತೀರಿಸಲಾಗದ ಹರಕೆ

ಗದರಿಸಲು ಕಣ್ಣು ತುಂಬಿಕೊಳ್ಳುವಳು
ಕಳ್ಳ ಮುನಿಸು ತೋರಿ ಕೂರುವಳು
ಅವಳಲ್ಲಿ ನಗು ತರಲು
ಆಗುವುದು ಇರುಳು

ಕುಡಿ ನೋಟ, ಮುದ್ದು ಮೈಮಾಟ
ಮರೆಸುವುದು ಜೀವನ ಜಂಜಾಟ
ಪುಟ್ಟ ಕೈ ತಬ್ಬಲು ಕೊರಳು
ನಾನಾಗುವೆ ಮರುಳು

ಮನೆಯ ಮಂದಾರ ಹೂ ಅವಳು
ಮನೆಯ ಮೂಲೆಗಳಲ್ಲಿ ಅವಳದೇ ನೆರಳು
ಒಮ್ಮೊಮ್ಮೆ ಕೇಳುವ ಪ್ರಶ್ನೆಗಳಿಗೆ
ಹೇಳಲಾಗದೇ ಉತ್ತರ
ನಾನಾಗುವೆ ತತ್ತರ

ಬೆಳೆಯುತಿಹಳು ಮಗಳು
ಸಂತಸ ಗೊಂಡಿದೆ ಕರುಳು

ಸ್ರುಶ್ಟಿಯನ್ನೇ ಬದಲಿಸುವ ನಿರ‍್ದಾರ
ಮಾಡುವಳು ಚಮತ್ಕಾರ
ಬಣ್ಣಗಳನ್ನೇ ಬದಲಿಸುವ ಹುನ್ನಾರ
ಮುಗ್ದ ಮನಸ್ಸಿಗೆ ಏನು ಕೊಡಲಿ ಉತ್ತರ

ಕನಸಿನ ಕೂಸು ಅವಳು
ಹಿಡಿದು ನಡೆದಿಹಳು ಬೆರಳು
ಈ ಲೋಕವೇ ಒಂದು ಸಂತೆ
ಮನದಲ್ಲಿ ಅವಳ ಬವಿಶ್ಯದ ಚಿಂತೆ
ಅವಳು ಗುರಿ ಸಾದಿಸಬೇಕಾಗಿದೆ
ಅದುವರೆಗೂ ನನ್ನ ಉಸಿರು ತಡೆ ಹಿಡಿಯಬೇಕಾಗಿದೆ

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: