ಅಕ್ಕಮಹಾದೇವಿಯ ವಚನದ ಓದು
– ಸಿ.ಪಿ.ನಾಗರಾಜ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ
“ಒಳ್ಳೆಯ ನಡೆನುಡಿಗಳನ್ನು ಹೊಂದದಿರುವ ವ್ಯಕ್ತಿಗಳು ನೀಡುವ ವಸ್ತುಗಳನ್ನಾಗಲಿ ಇಲ್ಲವೇ ಬಹುಬಗೆಯ ಆಚರಣೆಗಳನ್ನೊಳಗೊಂಡು ಮಾಡುವ ಪೂಜೆಯನ್ನಾಗಲಿ ಚೆನ್ನಮಲ್ಲಿಕಾರ‍್ಜುನ ದೇವರು ಒಪ್ಪಿಕೊಳ್ಳುವುದಿಲ್ಲವೆಂದು” ಅಕ್ಕಮಹಾದೇವಿಯು ಈ ವಚನದಲ್ಲಿ ಹೇಳಿದ್ದಾಳೆ.
ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸಿ , ದೇವರನ್ನು ಒಪ್ಪಿಕೊಂಡಿದ್ದರು. ಗುಡಿಯ ಲಿಂಗವನ್ನು ಬಿಟ್ಟು , ತಮ್ಮ ಅಂಗಯ್ ಮೇಲೆ ಚಿಕ್ಕದಾದ ಶಿವಲಿಂಗವನ್ನು ಇಟ್ಟುಕೊಂಡು ಪೂಜಿಸತೊಡಗಿದ್ದರಿಂದ, ಅವರ ಮತ್ತು ಶಿವನ ನಡುವೆ ಪೂಜಾರಿಯ ಅಗತ್ಯವಿಲ್ಲದಂತಾಯಿತು. ಶಿವಶರಣಶರಣೆಯರು ತಮ್ಮ ಅಂಗಯ್ ಮೇಲಿಟ್ಟುಕೊಂಡು ಪೂಜಿಸುತ್ತಿದ್ದ ಶಿವಲಿಂಗ ಇಲ್ಲವೇ ತಮ್ಮ ಕೊರಳಲ್ಲಿ ಕಟ್ಟಿಕೊಂಡಿದ್ದ ಇಶ್ಟಲಿಂಗ ಅವರ ಪಾಲಿಗೆ ಸಾಂಕೇತಿಕ ದೇವರು ಮಾತ್ರವಾಗಿತ್ತು. ನಿಜಜೀವನದಲ್ಲಿ ಅವರ ಪಾಲಿನ ದೇವರು ಕಲ್ಲು , ಮಣ್ಣು , ಲೋಹ , ಮರದಿಂದ ಮಾಡಿದ ಮೂರ‍್ತಿಯಾಗಿರಲಿಲ್ಲ. ಸಹ ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ತಮ್ಮ ದೇವರೆಂದು ನಂಬಿದ್ದರು. ಆದುದರಿಂದಲೇ , ದೇವರನ್ನು ಪೂಜಿಸುವ ಮತ್ತು ದೇವರಿಗೆ ಕಾಣಿಕೆಯನ್ನು ಸಲ್ಲಿಸುವ ವ್ಯಕ್ತಿಗಳಲ್ಲಿ ಒಳ್ಳೆಯ ನಡೆನುಡಿಗಳು ಕಡ್ಡಾಯವಾಗಿ ಇರಲೇಬೇಕೆಂಬ ಮಾನದಂಡವನ್ನು ಹಾಕಿಕೊಂಡಿದ್ದರು. ಒಳ್ಳೆಯ ನಡೆನುಡಿಗಳು ಎಂದರೆ “ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳನ್ನು ಹೊಂದಿರುವುದು ”.
( ತನು=ಮಯ್/ದೇಹ/ಶರೀರ ; ಕರಗು=ಗಟ್ಟಿಯಾದ ವಸ್ತುಗಳನ್ನು ನೀರು ಇಲ್ಲವೇ ಹಾಲು ಮುಂತಾದ ದ್ರವಗಳಲ್ಲಿ ಹಾಕಿದಾಗ , ಅವು ನೆನೆದು ಒದ್ದೆಯಾಗಿ ಮೆದುವಾಗುವುದು ಇಲ್ಲವೇ ತನ್ನ ಆಕಾರವನ್ನೇ ಕಳೆದುಕೊಳ್ಳುವುದು ; “ ತನುಕರಗು ”ಎಂಬ ನುಡಿಗಟ್ಟು “ ಮಯ್ ಮುರಿದು ದುಡಿಮೆಯನ್ನು ಮಾಡುವುದು / ವ್ಯಕ್ತಿಯು ತನ್ನ ಪಾಲಿನ ಕೆಲಸವನ್ನು ಒಲವು-ನಲಿವುಗಳಿಂದ ಅಚ್ಚುಕಟ್ಟಾಗಿ ಮಾಡುವುದು ” ಎಂಬ ತಿರುಳಿನಲ್ಲಿ ಬಳಕೆಯಾಗಿದೆ ; ತನುಕರಗದವರು=ಮಯ್ಗಳ್ಳರು / ದೇಹವನ್ನು ದಂಡಿಸಿ ದುಡಿಯದವರು / ತಮ್ಮ ಪಾಲಿನ ಕೆಲಸವನ್ನು ಒಲವುನಲಿವುಗಳಿಂದ ಪ್ರಾಮಾಣಿಕವಾಗಿ ಮಾಡದವರು / ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದವರು ; ಮಜ್ಜನ+ಅನ್+ಒಲ್ಲೆ+ಅಯ್ಯಾ ; ಮಜ್ಜನ=ಸ್ನಾನ / ಜಳಕ / ನೀರಿನಿಂದ ಮಯ್ಯನ್ನು ತೊಳೆಯುವುದು / ದೇವರ ವಿಗ್ರಹದ ಮೇಲೆ ನೀರು-ಹಾಲು-ಜೇನು ಮುಂತಾದ ದ್ರವಗಳನ್ನು ಎರೆದು ಮಾಡುವ ಆಚರಣೆ ; ಅನ್=ಅನ್ನು ; ಒಲ್+ಎ=ಒಲ್ಲೆ ; ಒಲ್=ಒಪ್ಪು / ಸಮ್ಮತಿಸು / ಮೆಚ್ಚು / ಬಯಸು ; ಒಲ್ಲೆ=ಒಪ್ಪುವುದಿಲ್ಲ / ಪಡೆಯುವುದಿಲ್ಲ / ಸ್ವೀಕರಿಸುವುದಿಲ್ಲ ; ಅಯ್ಯಾ=ಒಲವುನಲಿವಿನಿಂದ ಇತರರನ್ನು ಕುರಿತು ಮಾತನಾಡುವಾಗ ಬಳಸುವ ಪದ ; ಮನ=ಮನಸ್ಸು ; ಮನಕರಗದವರು=ಇತರರ ಸಂಕಟವನ್ನು ಕಂಡು ಮರುಕಗೊಂಡು ಅವರಿಗೆ ನೆರವಾಗದವರು / ಸಹಮಾನವರ ಹಸಿವು,ಬಡತನ,ನೋವನ್ನು ಕಂಡು ಕಾಣದಂತಿರುವವರು ; ಪುಷ್ಪ+ಅನ್+ಒಲ್ಲೆ+ಅಯ್ಯಾ ; ಪುಷ್ಪ=ಹೂವು / ಕುಸುಮ ; ಹದುಳಿಗರ‍್+ಅಲ್ಲದ+ಅವರ‍್+ಅಲ್ಲಿ ; ಹದುಳ್+ಇಗ ; ಹದುಳು=ಒಲವು/ನಂಬಿಕೆ ; ಹದುಳಿಗ=ನಂಬಿಕಸ್ತ / ಒಲವಿನಿಂದ ಕೂಡಿದ ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ ; ಹದುಳಿಗರಲ್ಲದವರು=ನಂಬಿಕೆಗೆ ಯೋಗ್ಯರಲ್ಲದವರು / ಒಳ್ಳೆಯ ನಡೆನುಡಿಯಿಲ್ಲದವರು ; ಗಂಧ+ಅಕ್ಷತೆ+ಅನ್+ಒಲ್ಲೆ+ಅಯ್ಯಾ ; ಗಂಧ=ಚಂದನ / ಸುವಾಸನೆ / ಪರಿಮಳ ; ಅಕ್ಷತೆ=ಅಕ್ಕಿಯ ಕಾಳು ; ಗಂಧಾಕ್ಷತೆ=ಚಂದನದ ಕೊರಡನ್ನು ನೀರಿನಲ್ಲಿ ತೆಯ್ದಾಗ ಬರುವ ಗಂದದ ಹಸಿಯೊಡನೆ ಕಲಸಿ ತಯಾರಿಸಿರುವ ಅಕ್ಕಿಯ ಕಾಳುಗಳು ; ಅರಿವು=ತಿಳುವಳಿಕೆ / ಒಳ್ಳೆಯದು ಯಾವುದು-ಕೆಟ್ಟದ್ದು ಯಾವುದು ಎಂಬುದನ್ನು ಗುರುತಿಸಿ , ಒಳ್ಳೆಯ ಹಾದಿಯಲ್ಲಿ ನಡೆಯಬೇಕೆಂಬ ಎಚ್ಚರ ; ಕಣ್+ತೆರೆಯದ+ಅವರ‍್+ಅಲ್ಲಿ ; ತೆರೆ=ಬಿಚ್ಚು/ತೆಗೆ/ಅರಳು ; ಕಣ್ದೆರೆ=ಕಣ್ಣನ್ನು ಬಿಡುವುದು. ಕಣ್ದೆರೆ ಎಂಬ ನುಡಿಗಟ್ಟು ಒಳಿತನ್ನು ಕಾಣುವುದು / ಒಳ್ಳೆಯ ತಿಳಿವನ್ನು ಪಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ ; ಕಣ್ದೆರೆಯದವರು=ಒಳ್ಳೆಯ ತಿಳುವಳಿಕೆಯನ್ನು ಹೊಂದದಿರುವವರು / ಒಳ್ಳೆಯದು ಕೆಟ್ಟದ್ದರ ನಡುವಣ ವ್ಯತ್ಯಾಸವನ್ನು ತಿಳಿಯದೆ , ಕೆಟ್ಟನಡೆನುಡಿಗಳಿಂದ ಬಾಳುತ್ತಿರುವವರು ; ಆರತಿ+ಅನ್+ಒಲ್ಲೆ+ಅಯ್ಯಾ ; ಆರತಿ=ತಟ್ಟೆ ಇಲ್ಲವೇ ಇನ್ನಿತರ ಉಪಕರಣದಲ್ಲಿ ಅರಿಸಿನ , ಕುಂಕುಮ ಹೂವು ಮುಂತಾದ ವಸ್ತುಗಳನ್ನು ಇಟ್ಟುಕೊಂಡು ದೇವರ ಮುಂದೆ ಜ್ಯೋತಿಯನ್ನು ಬೆಳಗಿಸುತ್ತ ಮಾಡುವ ಪೂಜೆ ; ಭಾವ+ಶುದ್ಧ+ಇಲ್ಲದ+ಅವರ‍್+ಅಲ್ಲಿ ; ಭಾವ=ಮನದಲ್ಲಿ ಮೂಡುವ ಒಳಮಿಡಿತಗಳು ; ಶುದ್ಧ=ಸರಿಯಾಗಿರುವುದು / ತಪ್ಪಿಲ್ಲದಿರುವುದು / ಚೊಕ್ಕಟವಾಗಿರುವುದು / ಕೊಳಕಿಲ್ಲದಿರುವುದು ; ಭಾವಶುದ್ಧವಿಲ್ಲದವರು=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ತುಡಿತವಿಲ್ಲದವರು / ಇತರರಿಗೆ ಕೇಡನ್ನು ಬಗೆಯುವ ಆಲೋಚನೆಗಳಿಂದ ಕೂಡಿದವರು ; ಧೂಪ+ಅನ್+ಒಲ್ಲೆ+ಅಯ್ಯಾ ; ಧೂಪ=ಹಾಲುಮಡ್ಡಿ / ಸಾಂಬ್ರಾಣಿ ಮುಂತಾದ ಸುವಾಸನೆಯ ಪುಡಿ. ಇದನ್ನು ಕೆಂಡದ ಮೇಲೆ ಹಾಕಿದಾಗ ಪರಿಮಳದಿಂದ ಕೂಡಿದ ಹೊಗೆಯು ಎಲ್ಲಾ ಕಡೆ ಹರಡುತ್ತದೆ ; ಪರಿಣಾಮಿ+ಗಳ್+ಅಲ್ಲದ+ಅವರ‍್+ಅಲ್ಲಿ ; ಪರಿಣಾಮಿ=ತಾಳ್ಮೆ / ಶಾಂತಿ / ಸಮಚಿತ್ತದ ನಡೆನುಡಿಯಿಂದ ಸಹಮಾನವರಿಗೆ ಒಳಿತನ್ನು ಮಾಡುವವರು ; ಪರಿಣಾಮಿಗಳಲ್ಲದವರು=ಉದ್ರೇಕ / ಆವೇಶದ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟು ಮಾಡುವವರು ; ನೈವೇದ್ಯ+ಅನ್+ಒಲ್ಲೆ+ಅಯ್ಯಾ ; ನೈವೇದ್ಯ=ದೇವರ ವಿಗ್ರಹದ ಮುಂದೆ ಇಡುವ ಹಣ್ಣುಕಾಯಿ / ಹಾಲು / ಬೇಯಿಸಿ ತಯಾರಿಸಿದ ಉಣಿಸಿತಿನುಸುಗಳು ; ತ್ರಿಕರಣ=ದೇಹ , ಮನಸ್ಸು , ಮಾತು ಎಂಬ ಮೂರು ಅಂಗಗಳು ; ಶುದ್ಧ+ಇಲ್ಲದ+ಅವರ‍್+ಅಲ್ಲಿ ; ತ್ರಿಕರಣ ಶುದ್ಧವಿಲ್ಲದವರು= ಮನದಲ್ಲಿನ ಒಳಮಿಡಿತ , ಆಡುವ ಮಾತು ಮತ್ತು ಮಾಡುವ ಕೆಲಸದಲ್ಲಿ ಹೊಂದಾಣಿಕೆಯಿಲ್ಲದಿರುವವರು / ಆಡುವುದೇ ಒಂದು-ಮಾಡುವುದೇ ಮತ್ತೊಂದು ಎಂಬ ವಂಚನೆಯ ನಡೆನುಡಿಯುಳ್ಳವರು / ಕಾಯಾ(ದೇಹ)-ವಾಚಾ(ಮಾತು)- ಮನಸಾ(ಮನಸ್ಸು) ಬೇರೆ ಬೇರೆಯಾದ ನಡೆನುಡಿಯುಳ್ಳವರು ; ತಾಂಬೂಲ+ಅನ್+ಒಲ್ಲೆ+ಅಯ್ಯಾ ; ತಾಂಬೂಲ=ಅಡಕೆ , ಸುಣ್ಣ ಮುಂತಾದುವುಗಳ ಸಹಿತವಾದ ವೀಳೆಯದ ಎಲೆ ; ಹೃದಯ=ಎದೆ ; ಕಮಲ=ತಾವರೆ ; “ ಹೃದಯಕಮಲ” ಎಂಬ ರೂಪಕವು “ ಮನಸ್ಸು “ ಎಂಬ ತಿರುಳಿನಲ್ಲಿ ಬಳಕೆಯಾಗಿದೆ ; ಅರಳದವರ‍್+ಅಲ್ಲಿ ; ಅರಳು=ಬಿರಿಯುವುದು / ಅಗಲವಾಗುವುದು / ವಿಕಾಸಗೊಳ್ಳುವುದು ; ಹೃದಯಕಮಲ ಅರಳುವುದು=ಒಲವು ನಲಿವು ಕರುಣೆಯ ಒಳಮಿಡಿತಗಳಿಂದ ಕೂಡಿ ಸಹಮಾನವರ ಮತ್ತು ಸಮಾಜದ ಹಿತವನ್ನು ಬಯಸುವ ಮನಸ್ಸು / ಕಣ್ಣಮುಂದಿನ ಸಮಾಜದಲ್ಲಿ ಒಳ್ಳೆಯ ಕೆಲಸಗಳು ನಡೆದಾಗ , ಅದನ್ನು ಕಂಡು ಮುದಗೊಳ್ಳುವುದು ; ಹೃದಯಕಮಲ ಅರಳದವರು=ಮನದಲ್ಲಿ ಸಂಕುಚಿತವಾದ ಒಳಮಿಡಿತಗಳಿಂದ ಕೂಡಿದವರು / ಇತರರ ಒಳಿತಿನ ನಡೆನುಡಿಗಳನ್ನು ಕಂಡು ಕರುಬುವವರು ; ಇರಲ್+ಒಲ್ಲೆ+ಅಯ್ಯಾ ; ಇರಲು=ನೆಲೆಸಲು / ವಾಸಿಸಲು ; ಇರಲೊಲ್ಲೆ=ನೆಲೆಸಲು ಬಯಸುವುದಿಲ್ಲ ; ಎನ್ನ್+ಅಲ್ಲಿ ; ಎನ್ನ=ನನ್ನ ; ಎನ್ನಲ್ಲಿ=ನನ್ನಲ್ಲಿ / ನನ್ನ ನಡೆನುಡಿಯಲ್ಲಿ / ನನ್ನ ವ್ಯಕ್ತಿತ್ವದಲ್ಲಿ ; ಏನ್+ಉಂಟು+ಎಂದು ; ಏನ್=ಯಾವುದು ; ಉಂಟು=ಇರುವುದು ; ಎನ್ನಲ್ಲಿ ಏನುಂಟೆಂದು=ನನ್ನ ನಡೆನುಡಿಯಲ್ಲಿ ಯಾವ ಒಳ್ಳೆಯ ಗುಣವಿದೆಯೆಂದು ತಿಳಿದು ; ಕರ+ಸ್ಥಲ+ಅನ್+ಇಂಬು+ಕೊಂಡೆ ; ಕರ=ಕಯ್ ; ಸ್ಥಲ=ನೆಲೆ/ಜಾಗ ; ಕರಸ್ಥಲ=ಅಂಗಯ್ / ಹಸ್ತ ; ಇಂಬು=ಎಡೆ/ಆಶ್ರಯ ; ಇಂಬು+ಕೊಂಡೆ=ಇಂಬುಗೊಂಡೆ=ನೆಲೆಸಿದೆ ; ಕರಸ್ಥಲವನಿಂಬುಗೊಂಡೆ=ನನ್ನ ಅಂಗಯ್ ಮೇಲೆ ನೀನು ನೆಲೆಸಿರುವೆ ; ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ= “ ನನ್ನ ನಡೆನುಡಿಯಲ್ಲಿ / ನನ್ನ ವ್ಯಕ್ತಿತ್ವದಲ್ಲಿ ಯಾವ ಒಳ್ಳೆಯ ಗುಣವನ್ನು ಕಂಡು ನನ್ನ ಕರಸ್ತಳದಲ್ಲಿ ನೀವು ನೆಲೆಸಿರುವಿರಿ “ ಎಂದು ಅಕ್ಕಮಹಾದೇವಿಯು ಅಚ್ಚರಿ ಮತ್ತು ಆನಂದದಿಂದ ಚೆನ್ನಮಲ್ಲಿಕಾರ‍್ಜುನನ್ನು ಕೇಳುತ್ತಿದ್ದಾಳೆ / ತಾನು ಒಲಿದಿರುವ ಚೆನ್ನಮಲ್ಲಿಕಾರ‍್ಜುನನೊಡನೆ ಅಕ್ಕನು ಒಲವುನಲಿವಿನ ಒಳಮಿಡಿತಗಳಿಂದ ಕೂಡಿದ ನುಡಿಗಳನ್ನಾಡುತ್ತಿದ್ದಾಳೆ ; ಹೇಳಾ=ಹೇಳುವಂತಹವನಾಗು / ಮಾರುತ್ತರವನ್ನು ನೀಡು ; ಚೆನ್ನಮಲ್ಲಿಕಾರ್ಜುನ=ಅಕ್ಕಮಹಾದೇವಿಯ ಮೆಚ್ಚಿನ ದೇವರು / ಶಿವ ; ‘ ಚೆನ್ನಮಲ್ಲಿಕಾರ್ಜುನ ‘ ಎಂಬ ದೇವರ ಹೆಸರನ್ನು ಅಕ್ಕಮಹಾದೇವಿಯು ತಾನು ಹಾಡಿದ ವಚನಗಳ ಅಂಕಿತನಾಮವನ್ನಾಗಿ ಬಳಸಿಕೊಂಡಿದ್ದಾಳೆ)
( ಚಿತ್ರ ಸೆಲೆ: travelthemes.in )
ಅಕ್ಕನ ಸತ್ವಯುತ ವಚನದ ವಿವರಣೆ ಸುಂದರವಾಗಿದೆ.