ಲಡಾಕಿನ ಮಂಜಿನ ‘ಸ್ತೂಪ’

ಕೊಡೇರಿ ಬಾರದ್ವಾಜ ಕಾರಂತ.

ಲಡಾಕ್ ಎಂದ ಕೂಡಲೆ ಬೌದ್ದ ಗುಡಿಗಳು, ಬೌದ್ದ ಸನ್ಯಾಸಿಗಳು, ಹಿಮಾಲಯದ ಎತ್ತರೆತ್ತರದ ಬೆಟ್ಟಗಳ ತಿಟ್ಟ ಕಣ್ಣಮುಂದೆ ಬರುತ್ತದೆ. ಹೀಗೆ ಹಿಮಾಲಯದ ಮಡಿಲಲ್ಲೇ ಇದ್ದರೂ ಲಡಾಕಿನಲ್ಲಿ ಬೇಸಿಗೆಯಲ್ಲಿ ನೀರಿಗೆ ಕೊರತೆಯುಂಟಾಗುತ್ತದೆ ಎಂದರೆ ನಂಬುತ್ತೀರಾ? ಹೌದು, ನೆಲದ ಬಿಸಿಯೇರಿಕೆಯ(global warming) ಪರಿಣಾಮದಿಂದ ಇತ್ತೀಚಿನ ಕೆಲ ವರುಶಗಳಿಂದ ಲಡಾಕಿನಲ್ಲಿ ಬೇಸಿಗೆಯ ಎಪ್ರಿಲ್ ಹಾಗು ಮೇ ತಿಂಗಳಿನಲ್ಲಿ ನೀರಿಗೆ ಕೊರತೆಯಾಗುತ್ತಿದೆ.

ಲಡಾಕನ್ನು ನೆಲದರಿಮೆಯ ನೋಟದಿಂದ ಹೇಳುವುದಾದರೆ, ಇದೊಂದು ಮೇಲ್ಮಟ್ಟದ ಮರುಬೂಮಿ (high altitude desert)

ಕಡಲಮಟ್ಟದಿಂದ ಲಡಾಕಿನ ಎತ್ತರ ಸುಮಾರು 2700 ಮೀ – 4500ಮೀ. ಇಲ್ಲಿ ಹೆಚ್ಚು ಮರಗಿಡಗಳು ಬೆಳೆಯುವುದಿಲ್ಲ. ಇಲ್ಲಿನ ಬೆಟ್ಟಗಳನ್ನು ಗಮನಿಸಿದರೆ ಕಾಣುವುದು ಒಂಚೂರು ಹಸಿರಿಲ್ಲದ ಬೋಳು ಗುಡ್ಡಗಳು. ಈ ಮೇಲ್ಮಟ್ಟದ ಮರುಬೂಮಿಗಳ ವಿಶೇಶವೇನೆಂದರೆ ಇಲ್ಲಿ ಬೇರೆ ಮರುಬೂಮಿಗಳಂತೆ ಹಸಿರು ಕಾಣದಿದ್ದರೂ, ಇಲ್ಲಿನ ವಾತಾವರಣ ತಂಪಾಗಿರುತ್ತದೆ. ಚಳಿಗಾಲದಲ್ಲಿ -15° ಸೆಲ್ಸಿಯಸ್ಸಿನವರೆಗೆ ಇಳಿಯುತ್ತದೆ.

ಪ್ರತಿ ವರುಶವೂ ಸರಾಸರಿ 100 ಮಿಲಿ ಮೀಟರಿನಶ್ಟು ಮಳೆ ಹಾಗು ಹಿಮ ಬೀಳುತ್ತದೆ. ಲಡಾಕಿನ ಬೂಮಿಯ ರಚನೆ ಹೇಗಿದೆಯೆಂದರೆ ಅಲ್ಲಿ ಬೀಳುವ ಮಳೆ ಬೆಟ್ಟಗಳ ಮೇಲಿನ ಕೆರೆಗಳಲ್ಲಿ ತುಂಬುತ್ತದೆ, ಅಲ್ಲಿನ ಚಳಿಗೆ ನೀರ‍್ಗಲ್ಲಾಗಿ ಮಾರ‍್ಪಾಡಾಗುತ್ತದೆ. ಈ ನೀರ‍್ಗಲ್ಲು ಬೇಸಿಗೆಯಲ್ಲಿ ನಿದಾನವಾಗಿ ಕರಗುತ್ತಾ ಲಡಾಕಿಗೆ ನೀರಿನ ಸೆಲೆಯಾಗುತ್ತದೆ. ಬೆಟ್ಟದ ಮೇಲಿನ ನೀರ‍್ಗಲ್ಲುಗಳು ಕರಗಿ ಸಣ್ಣ ಸಣ್ಣ ತೊರೆಗಳಾಗಿ ಹರಿಯುತ್ತವೆ. ಅಲ್ಲಿನ ನಾಗರಿಕತೆಯು ಈ ನೀರಿನ ತೊರೆಗಳ ಸುತ್ತಲು ಬೆಳೆದಿವೆ. ಅಲ್ಲಿನ ತೊರೆಯ ನೀರನ್ನು ಸಣ್ಣ-ಪುಟ್ಟ ಕಾಲುವೆಗಳಿಂದ ಹರಿಸಿ ಬಾರ‍್ಲಿ, ಗೋದಿ, ತರಕಾರಿಗಳನ್ನಲ್ಲದೆ ಎಪ್ರಿಕಾಟ್, ಸೇಬು, ವಿಲ್ಲೊ ಮರಗಳನ್ನೂ ಬೆಳೆಯುತ್ತಾರೆ

ಆದರೆ ಈಗ ಬೂಮಿಯು ಬೆಚ್ಚಗಾಗುತ್ತಿದೆ. ಮಳೆನೀರು ಹೆಪ್ಪುಗಟ್ಟಿ ನೀರ‍್ಗಲ್ಲಾಗಿ ನಿದಾನವಾಗಿ ಕರಗಬೇಕಿತ್ತು ಆದರೆ ಈಗ ನೀರ‍್ಗಲ್ಲುಗಳು ತುಂಬ ಬೇಗನೆ ಕರಗುತ್ತಿವೆ. ಹೀಗಾಗಿ ಬೆಟ್ಟದ ಮೇಲೆ ಕೆರೆಯಂತೆ ನೀರು ಕೂಡಿಕೊಳ್ಳುತ್ತದೆ. ಲಡಾಕಿನ ಮಣ್ಣಿನ ಗುಣ ಹೇಗಿದೆಯೆಂದರೆ ಅದಕ್ಕೆ ಈ ಪರಿ ನೀರನ್ನು ತಡೆಹಿಡದಿಟ್ಟುಕೊಳ್ಳುವ ತಾಕತ್ತಿಲ್ಲ. ಹಾಗಾಗಿ ಅಲ್ಲಿ ಅಗಾಗ ಕೆರೆ ಕೋಡಿ ಒಡೆದು ಚೆಚ್ಚರನೆರೆ(flash flood) ಉಂಟಾಗುತ್ತಿದೆ. ಬೇಸಿಗೆಯಲ್ಲಿ ನೀರಿಗೆ ಬರ ಉಂಟಾಗುತ್ತಿದೆ.

ಬೇಸಿಗೆಯ ನೀರಿನ ಬರವನ್ನು ನೀಗಿಸಲು ಲಡಾಕಿನವರು ಕಂಡುಕೊಂಡ ದಾರಿಯೇ ‘ಮಂಜಿನ ಸ್ತೂಪ’

ಹರಿಯುವ ನೀರನ್ನು ಸಣ್ಣ ಸಣ್ಣ ಅಣೆಕಟ್ಟು ಕಟ್ಟಿ ನೀರಿನ ಹರಿವನ್ನು ಕಡಿಮೆ ಮಾಡಿದರೆ ನೀರು ಹೆಪ್ಪುಗಟ್ಟಿ ನೀರ‍್ಗಲ್ಲು ತಯಾರಾಗುತ್ತದೆ. ಹೀಗೆ ಕ್ರುತಕವಾಗಿ ಮಾಡಿದ ನೀರ‍್ಗಲ್ಲು ಚೆಚ್ಚರನೆರೆಯನ್ನು ಕಡಿಮೆ ಮಾಡುವುದಲ್ಲದೆ, ಬೇಸಿಗೆಗೆ ನೀರಿನ ಸೆಲೆಯಾಗುತ್ತದೆ.

ಲಡಾಕಿಗರು ಕಂಡುಕೊಂಡ ಎರಡನೆ ಉಪಾಯ ಎಂದರೆ ‘ಮಂಜಿನ ಸ್ತೂಪ'(ಬೌದ್ದರು ಪೂಜಿಸುವ ದಿಬ್ಬವನ್ನು ಸ್ತೂಪ ಎನ್ನುತ್ತಾರೆ. ಇದು ಗುಡಿಯ ಗೋಪುರದ ಅಕಾರವನ್ನು ಹೋಲುತ್ತದೆ). ಗುಡ್ಡದ ಮೇಲಿಂದ ಹರಿದು ಬರುವ ನೀರನ್ನು ಎತ್ತರದಲ್ಲಿಯೇ ತಡೆಯಲಾಗುತ್ತೆ. ಅಲ್ಲಿಂದ ಅದನ್ನು ಕೊಳವೆಯ ಮೂಲಕ ಹರಿಸಲಾಗುತ್ತೆ. ಎತ್ತರದಿಂದ ಬರುವ ಕಾರಣ ನೀರಿನ ಒತ್ತಡ ಸಹಜವಾಗೆ ಹೆಚ್ಚಿರುತ್ತದೆ ಹೀಗೆ ಒತ್ತರಿಸಿಕೊಂಡು ಬರುವ ನೀರನ್ನು ಚಿಮ್ಮುಕದಿಂದ ಕಾರಂಜಿಯ ಹಾಗೆ ಚಿಮ್ಮಿಸಲಾಗುತ್ತೆ. ಚಿಮ್ಮಿದ ನೀರು ಹೊರಗಿನ ಚಳಿಗೆ ಮಂಜುಗಟ್ಟುತ್ತದೆ. ಹೀಗೆ ಕಾರಂಜಿಯ ಸುತ್ತ ಮಂಜಿನಗುಡ್ಡೆ ಬೆಳೆಯುತ್ತದೆ. ಚಳಿಗಾಲ ಮುಗಿಯುವ ಒಳಗೆ ದೊಡ್ಡ ಮಂಜಿನ ದಿಬ್ಬದ ರೀತಿಯ(ಸ್ತೂಪದ)ಆಕಾರ ಪಡೆಯುತ್ತದೆ. ಬೇಸಿಗೆಯಲ್ಲಿ ಕ್ರಮೇಣವಾಗಿ ಕರಗುತ್ತಾ ಎಪ್ರಿಲ್ ಹಾಗು ಮೇ ತಿಂಗಳಿಗೆ ನೀರಾಗುತ್ತದೆ.


ಮೊದಲ ಬಾರಿಗೆ 2014ರಲ್ಲಿ ಈ ರೀತಿ ಮಾಡಿ ನೋಡಿದಾಗ, ಮೇ ತಿಂಗಳ ಶುರುವಿನವರೆಗೂ ಇರಬಹುದು ಎಂದು ಎಣಿಸಲಾಗಿತ್ತು. ಆದರೆ ಮೇ ತಿಂಗಳಲ್ಲಿ ಇನ್ನು ಒಂದು ಮಹಡಿಯಶ್ಟು ಎತ್ತರದ ದಿಬ್ಬ ಉಳಿದುಕೊಂಡಿತ್ತು. ಪಯಾಂಗ್ ಎಂಬ ಹಳ್ಳಿಯಲ್ಲಿ ಜನವರಿಯಲ್ಲಿ ನಿರ‍್ಮಿಸಲಾದ ದಿಬ್ಬವು 64 ಅಡಿಗಳಶ್ಟು ಎತ್ತರವಾಗಿತ್ತು. ಇದು ಮನುಶ್ಯ ಕಟ್ಟಿದ ಅತಿ ಎತ್ತರದ ಮಂಜಿನ ಕಟ್ಟಡವಾಗಿದೆ. ಯಾವುದೆ ಮಿಂಚಾಗಲಿ(electricity), ನೀರಿನ ಮೇಲೆತ್ತುಕವಿಲ್ಲದೆ, ತೊಡಕಿನ ಮಾರ‍್ಪಾಡುಗಳಿಲ್ಲದೆ ಕೇವಲ ಸೆಳೆತ ಶಕ್ತಿಯನ್ನು ಬಳಸಿಕೊಂಡು ಮಾಡಬಹುದು ಎನ್ನುತ್ತಾರೆ ಇದನ್ನು ಕಂಡುಹಿಡಿದ ಸೋನಮ್ ವಾನ್ಗ್ ಚುಕ್.

(ಮಾಹಿತಿ ಸೆಲೆ ಮತ್ತು ಚಿತ್ರ ಸೆಲೆ: Youtube, icestupa.org,Wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: