“ಪರ‍್ಸನಲ್ ಶಾಪರ‍್” – ಒಂದು ವಿಶಿಶ್ಟ ಸಿನಿಮಾ

– ಕರಣ ಪ್ರಸಾದ.

ನಿರ‍್ದೇಶಕರು : ಒಲಿವಿಯೆ ಅಸಾಯಸ್
ಚಿತ್ರಕತೆ : ಒಲಿವಿಯೆ ಅಸಾಯಸ್
ಸಿನಿಮಾಟೋಗ್ರಪಿ : ಯಾರಿಕ್ ಲೇ ಸೌಕ್ಸ್
ತಾರಾಗಣ : ಕ್ರಿಸ್ಟೀನ್ ಸ್ಟೂವರ‍್ಟ್

ಪರ‍್ಸನಲ್ ಶಾಪರ್ ಎಂದರೆ ಹೆಸರೇ ಹೇಳುವ ಹಾಗೆ, ಸಮಾಜದ ಕೆಲವು ಶ್ರೀಮಂತ ವರ‍್ಗದವರು ತಮಗೆ ಬೇಕಾದ ವಸ್ತುಗಳನ್ನು ಕರೀದಿಸಲು ಒಬ್ಬರನ್ನು ನೇಮಿಸಿರುತ್ತಾರೆ. ಅವರೇ ಪರ‍್ಸನಲ್ ಶಾಪರ್. ಈ ಸಿನಿಮಾದ ಕತಾನಾಯಕಿ ಪ್ಯಾರಿಸ್ ನ ಒಬ್ಬ ಶ್ರೀಮಂತ ಸೆಲೆಬ್ರಿಟಿಗೆ ಪರ‍್ಸನಲ್ ಶಾಪರ್ ಆಗಿರುತ್ತಾಳೆ. ಅವಳ ಅವಳಿ ಅಣ್ಣ ಹ್ರುದಯಕ್ಕೆ ಸಂಬಂದಿಸಿದ ಕಾಯಿಲೆ ಇಂದ ಸತ್ತಿರುತ್ತಾನೆ. ಅಣ್ಣ ಮತ್ತು ನಾಯಕಿಯು, ಆದ್ಯಾತ್ಮ ಮತ್ತು ಸಾವಿನ ನಂತರದ ಜೀವನದ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟಿರುವವರು. ಅವಳಿಗೊಂದು ನಂಬಿಕೆಯೇನೆಂದರೆ ತನ್ನ ಅಣ್ಣ ವಾಸಿಸಿದ್ದ ಮನೆಯಲ್ಲಿ ಇದ್ದರೆ ಅವನನ್ನು ಬೇಟಿಯಾಗಬಹುದು ಎಂದು. ಅದಕ್ಕಾಗಿ ಅವಳು ಅವಳ ಅಣ್ಣನ ಮನೆಯಲ್ಲಿ ವಾಸಿಸಲು ಶುರುಮಾಡುವಳು.

ಒಂದುದಿನ ಅವಳಿಗೆ ಅಲ್ಲಿ ಆತ್ಮದ ಅನುಬವ ಆಗುತ್ತದೆ. ಈ ವಿಶಯವನ್ನು ಬಂದು ಅವಳು ಅವಳ ಅಣ್ಣನ ಗರ‍್ಲ್ ಪ್ರೆಂಡ್ ಗೆ ಹೇಳುವಳು. ಅದಕ್ಕೆ ಅವಳ ಅಣ್ಣನ ಗೆಳತಿಯು ಆ ಮನೆಯನ್ನು ಮಾರಲು ತೀರ‍್ಮಾನಿಸುವಳು. ಹೀಗೆ ಕತೆ ಮುಂದುವರಿಯುತ್ತಾ ಹೋಗುವಾಗ ನಾಯಕಿಗೆ ಒಂದು ಗೊತ್ತಿರದ ಮೊಬೈಲ್ ಸಂಕೆಯಿಂದ ಸಂದೇಶ ಬರಲು ಶುರುವಾಗುವುದು. ಸಂದೇಶಗಳಿಂದ ನಾಯಕಿಯಲ್ಲಿ ಆಗುವ ಬದಲಾವಣೆ, ಆಕೆಗೆ ಆಗುವ ಆತಂಕ – ಎಲ್ಲವನ್ನು ಅಚ್ಚುಕಟ್ಟಾಗಿ ನಿರ‍್ದೇಶಿಸಲಾಗಿದೆ. ಮೊಬೈಲ್ ಸಂದೇಶ ಯಾರಿಂದ ಬಂದಿರುವುದು ಎಂದು ಕೊನೆವರೆಗೂ ತಿಳಿಯುವುದಿಲ್ಲ. ನಿರ‍್ದೇಶಕರು ಇದನ್ನು ವೀಕ್ಶಕರ ಯೋಚನೆಗೆ ಬಿಟ್ಟಿದ್ದಾರೆ.

ಚಿತ್ರಕತೆ:

ಆರಂಬ ನಿದಾನವಾಗಿದೆ. ಕತೆ ಸಾಗುತ್ತಾ ಒಂದೊಂದೇ ಎಳೆಗಳು ಬಿಡಿಸಿದಂತಾಗಿ ಎಲ್ಲವು ಬಯಲಾಗುತ್ತ ಹೋಗುವುದು. ಮೊದಮೊದಲು ಹಾರರ್ ಸಿನೆಮಾವಾಗಿ ಗೋಚರಿಸಿದರೂ ಮುಂದೆ ಸೈನ್ಸ್ ಪಿಕ್ಶನ್ ಎನಿಸುವುದು.

ನಿರ‍್ದೇಶನ:

ಸಿನೆಮಾದ ಬಾಶೆ ಇಂಗ್ಲಿಶ್ ಆದರೂ, ಇದು ಎಲ್ಲಾ ಆಯಾಮಗಳಿಂದ ಒಂದು ಪ್ರೆಂಚ್ ಸಿನಿಮಾದ ಅನುಬವ ನೀಡುವುದು. ಅದಕ್ಕೆ ಕಾರಣ ನಿರ‍್ದೇಶಕರ ಪ್ರಾನ್ಸ್ ನ ಮೂಲ. ಯಾವುದೂ ಅತಿಯಾಗದ ಅತವಾ ಯಾವುದೂ ಕಮ್ಮಿಯಾಗದ ಹಾಗೆ ಚಿತ್ರೀಕರಿಸಲಾಗಿದೆ. ಚಲನಚಿತ್ರವನ್ನು ಒಂದು ಪ್ರತ್ಯೇಕ ಶೈಲಿಗೆ ಸೀಮಿತವಾಗಿಸದೆ, ಕತೆ ಹೇಳುವ ಹಲವಾರು ಶೈಲಿಗಳನ್ನು ಬೆರೆಸಿ ನೋಡುಗರ ಮುಂದೆ ಇಟ್ಟಿದ್ದಾರೆ ಒಲಿವಿಯೆ ಅಸಾಯಸ್. ಇದು ನಿರ‍್ದೇಶಕರ ಕೌಶಲ್ಯತೆಯನ್ನು ತೋರಿಸುತ್ತದೆ.

ನೆನಪಿನಲ್ಲುಳಿಯುವ ಕ್ರಿಸ್ಟೀನ್ ಸ್ಟೂವರ‍್ಟ್ ರ ನಟನೆ:

ಮುಕ್ಯ ಬೂಮಿಕೆಯಲ್ಲಿ ಕ್ರಿಸ್ಟೀನ್ ಸ್ಟೂವರ‍್ಟ್ ನಟಿಸಿದ್ದಾರೆ. ಹಲವು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿದರೂ ಇಂತ ಚಿಕ್ಕ ಬಜೆಟ್ ನ ಚಿತ್ರ ಒಪ್ಪಿಕೊಂಡು ಮಾಡಿರುವದನ್ನು ಮೆಚ್ಚಬೇಕು. ಅವರ ಪಾತ್ರ ಕೇಳುವ ಸೂಕ್ಶ್ಮವಾದ ಬದಲಾವಣೆಗಳನ್ನೂ ಅಚ್ಚುಕಟ್ಟಾಗಿ ನಿರ‍್ವಹಿಸಿದ್ದಾರೆ. ಇದೇ ನಿರ‍್ದೇಶಕರ ಹಿಂದಿನ ಚಲನಚಿತ್ರದಲ್ಲೂ ಅವರೊಡನೆ ಕೆಲಸ ಮಾಡಿದ ಅನುಬವವೂ ಇದಕ್ಕೆ ಮುಕ್ಯ ಕಾರಣವಾಗಿರಬಹುದು.

ಈ ಸಿನಿಮಾ ನೋಡಬೇಕಾದ ಕಾರಣ:

– ಚಲನಚಿತ್ರವು ಒಂದು ಪ್ರತ್ಯೇಕ ಶೈಲಿಗೆ ಸೀಮಿತವಾಗದೆ, ತ್ರಿಲ್ಲರ್, ಹಾರರ್, ಸೈನ್ಸ್ ಪಿಕ್ಶನ್ ಎಲ್ಲವನ್ನೂ ಒಳಗೊಂಡಿದೆ.
– ಕ್ರಿಸ್ಟೀನ್ ಸ್ಟೂವರ‍್ಟ್ ರ ಪಾತ್ರ ಕೊನೆವರೆಗೂ ಮನಸಿನಲ್ಲಿ ಉಳಿಯುವುದು
– ಪ್ರೆಂಚ್ ಸಿನೆಮಾದ ಅನುಬವ
– ಈ ಚಿತ್ರವು 2016 ನೇ ಪ್ರತಿಶ್ಟಿತ ಕಾನ್ಸ್ ಪಿಲಂ ಪೆಸ್ಟಿವಲ್ ನಲ್ಲಿ “ಪಾಲ್ಮ್ ಡೋರ‍್” ಪ್ರಶಸ್ತಿಗೆ ಸ್ಪರ‍್ದಿಸಿತ್ತು.

( ಚಿತ್ರ ಸೆಲೆ:  mrcsays.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: