ಅಕ್ಕಮಹಾದೇವಿಯ ವಚನಗಳ ಓದು – 2ನೆಯ ಕಂತು
– ಸಿ.ಪಿ.ನಾಗರಾಜ.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ.
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ.
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ.
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಯಾವುದೇ ಒಬ್ಬ ವ್ಯಕ್ತಿ “ಇಂತಹ ಕುಟುಂಬದಲ್ಲಿಯೇ/ಇಂತಹ ಊರಿನಲ್ಲಿಯೇ ನಾನು ಹುಟ್ಟಿಬರಬೇಕು “ ಎಂಬ ಉದ್ದೇಶವನ್ನು ಹೊಂದಿ ಈ ಜಗತ್ತಿಗೆ ಬಂದಿರುವುದಿಲ್ಲ. ಆದರೆ ಸಾಯುವ ತನಕ ಜೀವನದಲ್ಲಿ ಬರುವ ಎಡರುತೊಡರುಗಳನ್ನು ತಾನೇ ಎದುರಿಸಬೇಕಾಗುತ್ತದೆ. ಏಕೆಂದರೆ ನಿಸರ‍್ಗದಲ್ಲಿನ ಆಗುಹೋಗುಗಳು, ಮಾನವ ಸಮಾಜ ರೂಪಿಸಿಕೊಂಡಿರುವ ಸಂಪ್ರದಾಯ , ಆಚರಣೆ ಹಾಗೂ ಕಟ್ಟುಪಾಡುಗಳು ಮತ್ತು ಆಳುವ ಸರ‍್ಕಾರದ ಕಾನೂನು ಕಟ್ಟಲೆಗಳು ವ್ಯಕ್ತಿಯ ಮಯ್ ಮನಗಳ ಮೇಲೆ ಬಹುಬಗೆಯಲ್ಲಿ ಪರಿಣಾಮವನ್ನು ಬೀರುತ್ತಿರುತ್ತವೆ. ಇದರಿಂದಾಗಿ ಜೀವನದ ಉದ್ದಕ್ಕೂ ಒಂದಲ್ಲ ಒಂದು ಬಗೆಯ ಏರಿಳಿತಗಳಲ್ಲಿ , ತಾಕಲಾಟ ತೊಳಲಾಟಗಳಲ್ಲಿ ಮತ್ತು ಸೋಲು-ಗೆಲುವುಗಳಲ್ಲಿ ಸಿಲುಕುವ ವ್ಯಕ್ತಿಯು ಎಂತಹ ಸನ್ನಿವೇಶಗಳಲ್ಲಿಯೂ ಕಂಗೆಡದೆ/ಎಚ್ಚರತಪ್ಪದೆ/ಬೀಗಿಬೆರೆಯದೆ ತನ್ನ ಬದುಕನ್ನು ಸಮಚಿತ್ತದಿಂದ ರೂಪಿಸಿಕೊಂಡು ಬಾಳಬೇಕಾದ ರೀತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
(ಬೆಟ್ಟ=ಗಿರಿ/ಮಲೆ/ಕಲ್ಲುಬಂಡೆಮರಗಿಡಗಳಿಂದ ಕೂಡಿ ನೆಲಮಟ್ಟದಿಂದ ಎತ್ತರೆತ್ತರವಾಗಿರುವ ಜಾಗ ; ಮೇಲೆ+ಒಂದು ; ಮನೆಯ ಮಾಡಿ=ಮನೆಯನ್ನು ಕಟ್ಟಿಕೊಂಡು ನೆಲೆಸಿರುವಾಗ ; ಮೃಗಗಳಿಗೆ+ಅಂಜಿದಡೆ+ಎಂತು+ಅಯ್ಯಾ ; ಮೃಗ=ಪ್ರಾಣಿಪಕ್ಶಿ/ಜೀವಜಂತು ; ಅಂಜು=ಹೆದರು/ಹಿಂಜರಿ/ಆತಂಕಪಡು ; ಅಂಜಿದಡೆ=ಹೆದರಿಕೆಯಿಂದ ನಡುಗಿದರೆ/ಕಂಪಿಸಿದರೆ/ತಲ್ಲಣಸಿದರೆ ; ಎಂತು=ಹೇಗೆ/ಏನು ತಾನೆ ಮಾಡುವುದು ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ ; ಮೃಗಗಳಿಗಂಜಿದಡೆಂತಯ್ಯಾ= ಕಾಡುಮೇಡುಗಳಿಂದ ಸುತ್ತುವರಿದಿರುವ ಬೆಟ್ಟದ ಮೇಲೆ ತಾನೇ ಕಟ್ಟಿಕೊಂಡ ಮನೆಯಲ್ಲಿ ನೆಲೆಸಿರುವಾಗ, ಅಲ್ಲಿನ ಪರಿಸರದಲ್ಲಿರುವ ಸಿಂಹ ಹುಲಿ ಚಿರತೆ ಆನೆ ಹಾವು ರಣಹದ್ದು ಮುಂತಾದ ಜೀವಿಗಳಿಂದ ಉಂಟಾಗುವ ಹಾನಿಯನ್ನು ನೆನೆನೆನೆದು ತಲ್ಲಣಗೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಏಕೆಂದರೆ ಈ ರೀತಿ ತಲ್ಲಣಗೊಳ್ಳುವುದರಿಂದ ಇತ್ತ ಬದುಕಲಾರದೆ ಅತ್ತ ಸಾಯಲಾರದೆ ಒದ್ದಾಡುವುದರಲ್ಲಿಯೇ ಜೀವನದ ಸಮಯವೆಲ್ಲವೂ ಕಳೆದುಹೋಗುತ್ತದೆ ;
ಸಮುದ್ರ=ಕಡಲು/ಸಾಗರ ; ತಡಿಯಲಿ+ಒಂದು ; ತಡಿ=ದಡ/ದಂಡೆ/ತೀರ ; ತಡಿಯಲ್ಲಿ=ದಂಡೆಯಲ್ಲಿ/ಪಕ್ಕದಲ್ಲಿ/ಹತ್ತಿರದಲ್ಲಿ ; ನೊರೆತೆರೆಗಳಿಗೆ+ಅಂಜಿದಡೆ+ಎಂತು+ಅಯ್ಯಾ ; ನೊರೆ=ಸಾಗರದ ಅಲೆಗಳ ಬಡಿತದಿಂದ ಉಂಟಾಗುವ ಬೆಳ್ಳನೆಯ ನೀರಿನ ಕಣಗಳು ; ತೆರೆ=ನೀರಿನ ಅಲೆ/ತರಂಗ ; ನೊರೆತೆರೆಗಳಿಗಂಜಿದಡೆಂತಯ್ಯಾ=ಗಾಳಿಯು ಬೀಸಿದಂತೆಲ್ಲಾ ಉಬ್ಬರವಿಳಿತಕ್ಕೆ ಒಳಗಾಗುವ ಕಡಲಿನ ಅಲೆಗಳು ದಡವನ್ನು ಅಪ್ಪಳಿಸುತ್ತಿದ್ದಂತೆಲ್ಲಾ , ಕಡಲಂಚಿನ ಮನೆಯಲ್ಲಿನ ವ್ಯಕ್ತಿಗಳು “ ಎಲ್ಲಿ ಕೊಚ್ಚಿಹೋಗುತ್ತೇವೆಯೋ “ ಎಂಬ ಹೆದರಿಕೆಯಿಂದ ತತ್ತರಿಸುತ್ತಿದ್ದರೆ, ಅಂತಹ ನೆಮ್ಮದಿಗೆಟ್ಟ ಬದುಕಿನಿಂದ ಯಾವ ಪ್ರಯೋಜನವೂ ಇಲ್ಲ;
ಸಂತೆ+ಒಳಗೆ+ಒಂದು ; ಸಂತೆ=ಸರಕುಗಳನ್ನು ಮಾರಲು/ಕೊಳ್ಳಲು ಜನರು ಜತೆಗೂಡುವ ಜಾಗ; ಶಬ್ದ=ದನಿ/ಸದ್ದು/ಸಪ್ಪಳ/ಗಲಾಟೆ/ಗದ್ದಲ ; ನಾಚಿದಡೆ+ಎಂತು+ಅಯ್ಯಾ ; ನಾಚು=ಹಿಂಜರಿಯುವುದು/ಹೆದರುವುದು/ಕುಗ್ಗುವುದು/ಮುದುಡಿಕೊಳ್ಳುವುದು ; ನಾಚಿದೊಡೆ=ನಾಚಿಕೊಂಡರೆ ; ಶಬ್ದಕ್ಕೆ ನಾಚಿದಡೆಂತಯ್ಯಾ=ಸದ್ದುಗದ್ದಲಗಳಿಂದಲೇ ತುಂಬಿರುವ ಸಂತೆಯ ನಡುವೆ ಕಟ್ಟಿರುವ ಮನೆಯಲ್ಲಿದ್ದುಕೊಂಡು , ಸಂತೆಯಲ್ಲಿನ ಕೂಗಾಟ/ಅರಚಾಟಗಳನ್ನು ಕೇಳಿ ಒದ್ದಾಡುವುದರಿಂದ ಯಾವ ಪ್ರಯೋಜನವೂ ಇಲ್ಲ; ಈ ಮೂರು ಸಂಗತಿಗಳನ್ನು ರೂಪಕವಾಗಿ ಬಳಸಿಕೊಂಡು ಜೀವನದಲ್ಲಿ ಬರುವ ಆಪತ್ತು/ನೋವು/ಸಂಕಟಗಳನ್ನು ನೇರವಾಗಿ ಎದುರಿಸಿ ಕೆಚ್ಚೆದೆಯಿಂದ ಬಾಳಬೇಕೆ ಹೊರತು , ಜೀವನದ ಸಮಸ್ಯೆಗಳಿಗೆ ಬೆನ್ನುಮಾಡಿ ಓಡಬಾರದು ಇಲ್ಲವೇ ಯಾವಾಗಲೂ ನರಳಬಾರದೆಂಬ ಸಂದೇಶವನ್ನು ಅಕ್ಕನು ನೀಡಿದ್ದಾಳೆ. ಚೆನ್ನಮಲ್ಲಿಕಾರ್ಜುನದೇವ=ಶಿವ/ಅಕ್ಕನ ಒಲವಿನ ದೇವರು/ನೆಚ್ಚಿನ ನಲ್ಲ ; ಕೇಳ್+ಅಯ್ಯಾ ; ಕೇಳಯ್ಯಾ=ಕೇಳುವಂತಹವನಾಗು;
ಲೋಕದ+ಒಳಗೆ ; ಲೋಕ=ಜಗತ್ತು/ಪ್ರಪಂಚ/ಸಮಾಜ/ಜನಸಮುದಾಯ; ಲೋಕದೊಳಗೆ ಹುಟ್ಟಿದ ಬಳಿಕ=ಲೋಕಜೀವನದಲ್ಲಿ ಜನರೊಡನೆ ವ್ಯವಹರಿಸುತ್ತಿರುವಾಗ/ಜನಸಮುದಾಯದೊಡನೆ ಬೆರೆತು ಬಾಳುತ್ತಿರುವಾಗ ; ಸ್ತುತಿ=ಹೊಗಳಿಕೆ/ಮೆಚ್ಚುಗೆ ; ನಿಂದೆ=ತೆಗಳಿಕೆ/ಕಡೆಗಣಿಸುವಿಕೆ/ಬಯ್ಯುವಿಕೆ ; ಬಂದಡೆ=ಬಂದರೆ/ಒದಗಿದರೆ/ಕೇಳಿಬಂದರೆ ; ಮನದಲ್ಲಿ=ಮನಸ್ಸಿನಲ್ಲಿ; ಕೋಪ=ಸಿಟ್ಟು/ಮುನಿಸು/ಆಕ್ರೋಶ ; ತಾಳು=ಹೊಂದು/ಪಡೆ ;ತಾಳದೆ=ಹೊಂದದೆ/ಪಡೆಯದೆ/ಒಳಗಾಗದೆ/ಈಡಾಗದೆ ; ಸಮಾಧಾನಿ+ಆಗಿರಬೇಕು ; ಸಮಾಧಾನ=ಆತಂಕ ತಲ್ಲಣ ದುಗುಡಗಳಿಗೆ ಒಳಗಾಗದೆ ನೆಮ್ಮದಿಯಿಂದಿರುವುದು ; ಸಮಾಧಾನಿ=ನೆಮ್ಮದಿಯಿಂದಿರುವ/ತಾಳ್ಮೆಯಿಂದಿರುವ ವ್ಯಕ್ತಿ;
ಜೀವನದ ಏಳುಬೀಳಿನ ಪ್ರಸಂಗಗಳಲ್ಲಿ ಕೇಳಿಬರುವ ಹೊಗಳಿಕೆಗೆ ಹಿಗ್ಗದೆ , ತೆಗಳಿಕೆಗೆ ಕುಗ್ಗದೆ , ಸೋಲು/ಗೆಲುವುಗಳು ಮತ್ತು ಮಾನ/ಅಪಮಾನಗಳು ಸಾಮಾಜಿಕ ಜೀವನದಲ್ಲಿ ಮಾನವರಿಗೆ ಬರುವ ವಾಸ್ತವಗಳೆಂಬುದನ್ನು ಅರಿತು ಸಮಚಿತ್ತದಿಂದ ಅಂದರೆ ಮನಸ್ಸಿನಲ್ಲಿ ಆತಂಕ/ತಲ್ಲಣ/ಕಳವಳ/ತಳಮಳ/ಉದ್ವೇಗ/ಅಹಂಕಾರದ ಒಳಮಿಡಿತಗಳಿಗೆ ಒಳಗಾಗದೆ ಬಾಳುವುದನ್ನು ಕಲಿಯಬೇಕು ಎಂಬುದನ್ನು ” ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ” ಎಂಬ ನುಡಿಗಳು ಸೂಚಿಸುತ್ತಿವೆ)
ಹೆದರದಿರು ಮನವೆ ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬಯ್ವರೊಂದು ಕೋಟಿ
ಭಕ್ತಿಯಿಲ್ಲದವರ ಬಯ್ವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿ ಸೋಪಾನ
ಚೆನ್ನಮಲ್ಲಿಕಾರ್ಜುನಾ.
ಒಳ್ಳೆಯ ನಡೆನುಡಿಗಳಿಂದ ಕೂಡಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಲೆಂದು ದುಡಿಯುವ ವ್ಯಕ್ತಿಗಳ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ನೋವಿನ / ಕಡೆಗಣಿಸುವಿಕೆಗೆ ಗುರಿಯಾಗುವ / ಸುಳ್ಳು ಆರೋಪಕ್ಕೆ ಒಳಗಾಗುವ ಅವಮಾನದ ಪ್ರಸಂಗಗಳು ಎದುರಾಗುತ್ತಲೇ ಇರುತ್ತವೆ. ಆದರೆ ಜೀವನದಲ್ಲಿ ಬರುವ ಎಡರುತೊಡರುಗಳಿಗೆ ಕುಗ್ಗದೆ ಕುಸಿಯದೆ ದಿಟ್ಟತನದಿಂದ ಒಳಿತಿನ ಹಾದಿಯಲ್ಲೇ ಮುನ್ನಡೆಯಬೇಕೆಂಬ ಆಶಯವನ್ನು ಈ ವಚನ ಸೂಚಿಸುತ್ತದೆ.
( ಹೆದರದೆ+ಇರು ; ಹೆದರು=ಅಂಜು/ಹಿಂಜರಿ/ಹಿಮ್ಮೆಟ್ಟು ; ಮನ=ಮನಸ್ಸು; ಬೆದರು=ಬೆಚ್ಚು/ಆತಂಕಗೊಳ್ಳು/ನಡುಗು/ತಲ್ಲಣಿಸು ; ತನು=ಮಯ್/ದೇಹ/ಶರೀರ ; ನಿಜವನ್+ಅರಿತು ; ನಿಜ=ದಿಟ/ಸತ್ಯ/ವಾಸ್ತವ ; ನಿಜವನ್=ನಿಜವನ್ನು ; ಅರಿ=ತಿಳಿ/ಗೊತ್ತುಮಾಡಿಕೊಳ್ಳುವುದು ; ಅರಿತು=ತಿಳಿದುಕೊಂಡು ; ನಿಶ್ಚಿಂತನ್+ಆಗಿ+ಇರು ; ನಿಶ್ಚಿಂತೆ=ಚಿಂತೆಯಿಲ್ಲದಿರುವಿಕೆ/ನೆಮ್ಮದಿ ; ನಿಶ್ಚಿಂತನಾಗಿರು=ಯಾವುದೇ ಬಗೆಯ ಆತಂಕ/ತಲ್ಲಣ/ನಿರಾಶೆಗೆ ಒಳಗಾಗದೆ ನೆಮ್ಮದಿಯಿಂದಿರು ; ಫಲ+ಆದ ; ಫಲ=ಹಣ್ಣು/ಬೆಳೆ ; ಫಲವಾದ ಮರನ=ರೆಂಬೆಕೊಂಬೆಗಳ ತುಂಬಾ ಹೂವುಹೀಚುಕಾಯಿಹಣ್ಣುಗಳಿಂದ ಕಂಗೊಳಿಸುತ್ತಿರುವ ಮರವನ್ನು/ಮಾನವರು ತಿನ್ನುವಂತಹ ಹಣ್ಣುಗಳನ್ನು ಬಿಟ್ಟಿರುವ ಮರವನ್ನು ; ಕಲ್ಲಲಿ=ಕಲ್ಲಿನಲ್ಲಿ ; ಇಡುವುದು+ಒಂದು ; ಇಡು=ಹೊಡೆ/ಎಸೆ/ಮಡಗು ; ಕಲ್ಲಲಿ ಇಡುವುದು=ಹಣ್ಣುಕಾಯಿಗಳನ್ನು ಉದುರಿಸಲೆಂದು ಕಲ್ಲನ್ನು ಎಸೆಯುವರು/ಹೊಡೆಯುವರು ; ಕೋಟಿ=ಒಂದು ನೂರು ಲಕ್ಶವನ್ನು ಸೂಚಿಸುವ ಅಂಕಿ/ಲೆಕ್ಕವಿಲ್ಲದಶ್ಟು ಮಂದಿ; ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ=ಈ ಪ್ರಸಂಗವು ಒಂದು ರೂಪಕವಾಗಿ ಬಳಕೆಯಾಗಿದೆ.
ಕುಟುಂಬದ/ಸಮಾಜದ ನೆಲೆಯಲ್ಲಿ ಇತರರ ಒಳಿತಿಗಾಗಿ ದುಡಿಯುವ ಇಲ್ಲವೇ ಇತರರ ಸಂಕಟಕ್ಕೆ ಮರುಗಿ ನೆರವನ್ನು ನೀಡುವ ವ್ಯಕ್ತಿಗಳನ್ನು ಎಲ್ಲರೂ ಕಿತ್ತು ತಿನ್ನತೊಡಗುತ್ತಾರೆ. ಒಳ್ಳೆಯವರ ಬಳಿ ಇರುವುದನ್ನೆಲ್ಲಾ ಪಡೆದುಕೊಂಡ ನಂತರ , ಅವರನ್ನೇ ಕಡೆಗಣಿಸಿ ನಿಂದಿಸಿ ದೂರತಳ್ಳುತ್ತಾರೆ ಎಂಬ ತಿರುಳಿನಲ್ಲಿ ಬಳಕೆಯಾಗಿದೆ. ಎಲವದ ಮರ=ಬೂರಗ/ಬೂರಲ/ದೂದಿ ಮರ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ-ಈ ಮರದಲ್ಲಿ ಬಿಡುವ ಕಾಯಿಯ ಒಳಗಡೆ ಅರಳೆಯ/ಹತ್ತಿಯ ನೂಲಿನಂತಹ ಎಳೆಗಳಿರುತ್ತವೆ. ಎಲವದ ಕಾಯಿ/ಹಣ್ಣಿನಲ್ಲಿ ಯಾವುದೇ ಬಗೆಯ ರಸವಾಗಲಿ ಇಲ್ಲವೇ ರುಚಿಯಾಗಲಿ ಇರುವುದಿಲ್ಲ; ಇಡುವರ‍್+ಒಬ್ಬರ ; ಇಡುವರ‍್=ಹೊಡೆಯುವವರು/ಕಲ್ಲನ್ನು ಎಸೆಯುವವರು ; ಒಬ್ಬರ=ಒಬ್ಬ ವ್ಯಕ್ತಿಯನ್ನಾದರೂ ; ಕಾಣ್+ಎ ; ಕಾಣ್=ನೋಡು ; ಕಾಣೆ=ನೋಡಿಲ್ಲ/ಕಂಡಿಲ್ಲ ; ಎಲವದ ಮರನ ಇಡುವರೊಬ್ಬರ ಕಾಣೆ=ಈ ಪ್ರಸಂಗವು ಒಂದು ರೂಪಕವಾಗಿ ಬಳಕೆಯಾಗಿದೆ. ಎಲವದ ಮರದ ಕಾಯಿ/ಹಣ್ಣುಗಳನ್ನು ಮಾನವರು ತಿನ್ನುವುದಿಲ್ಲ. ಆದುದರಿಂದ ತಮಗೆ ಅಗತ್ಯವಿಲ್ಲದ/ಉಪಯೋಗವಿಲ್ಲದ ಮರದ ಬಳಿಗೆ ಯಾರೊಬ್ಬರೂ ಹೋಗುವುದಿಲ್ಲ. ಅಂತೆಯೇ ಕುಟುಂಬದಲ್ಲಾಗಲಿ ಇಲ್ಲವೇ ಸಮಾಜದ ನೆಲೆಯಲ್ಲಾಗಲಿ ನೀಚರ/ಕೇಡಿಗಳ/ಸೋಂಬೇರಿಗಳ/ಇನ್ನೊಬ್ಬರ ನೋವಿಗೆ ಮಿಡಿಯದವರ ಬಳಿಗೆ ಯಾರೊಬ್ಬರೂ ಸುಳಿಯುವುದಿಲ್ಲ. ಅವರನ್ನು ಯಾರೊಬ್ಬರೂ ಕಾಡುವುದಿಲ್ಲ/ಬೇಡುವುದಿಲ್ಲ /ಅವರ ತಂಟೆಗೆ ಹೋಗುವುದಿಲ್ಲ ಎಂಬ ತಿರುಳಿನಲ್ಲಿ ಬಳಕೆಯಾಗಿದೆ ;
ಭಕ್ತಿ+ಉಳ್ಳವರ ; ಭಕ್ತಿ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿ/ದೇವರ ಬಗೆಗಿನ ಒಲವು ; ಉಳ್ಳವರು=ಹೊಂದಿರುವವರು ; ಭಕ್ತಿಯುಳ್ಳವರ=ಒಳ್ಳೆಯ ನಡೆನುಡಿಯುಳ್ಳವರನ್ನು ; ಬಯ್ವರ‍್+ಒಂದು ಕೋಟಿ ; ಬಯ್=ತೆಗಳು/ನಿಂದಿಸು ; ಬಯ್ವರ‍್=ನಿಂದಿಸುತ್ತಾರೆ/ತೆಗಳುತ್ತಾರೆ/ಕಡೆಗಣಿಸುತ್ತಾರೆ/ಅಲ್ಲಗಳೆಯುತ್ತಾರೆ; ಬಯ್ವರ‍್+ಒಬ್ಬರ ಕಾಣೆ ; ಒಬ್ಬರ=ಒಬ್ಬ ವ್ಯಕ್ತಿಯನ್ನಾದರೂ ; ಶರಣ=ಶಿವನ ಬಗ್ಗೆ ಒಲವುಳ್ಳವನು/ಒಳ್ಳೆಯ ನಡೆನುಡಿಯಿಂದ ಬಾಳ್ವೆ ನಡೆಸುವುದನ್ನೇ ಶಿವನೆಂದು ತಿಳಿದವನು ; ನುಡಿ=ಮಾತು ; ಶಿವಶರಣರ ನುಡಿ=ಮಾನವ ಜೀವನದ ವಾಸ್ತವವನ್ನು/ದಿಟವನ್ನು/ನಿಜವನ್ನು ತಿಳಿಸುವ ವಚನಗಳು ; ಎನಗೆ=ನನಗೆ ; ಗತಿ=ದಾರಿ ತೋರುತ್ತವೆ/ಕಯ್ ಹಿಡಿದು ನಡೆಸುತ್ತವೆ ; ಸೋಪಾನ=ಮೆಟ್ಟಿಲು/ಹಂತ/ಜೀವನದಲ್ಲಿ ಒಳ್ಳೆಯದನ್ನು ಪಡೆಯಲು ಪ್ರೇರಣೆಯನ್ನು ನೀಡುವ ನೆಲೆ)
( ಚಿತ್ರ ಸೆಲೆ: travelthemes.in )
ಇತ್ತೀಚಿನ ಅನಿಸಿಕೆಗಳು