ಕೊಲೆಕ್ತರ್ – ಒಂದೇ ಪಾತ್ರವಿರುವ ಅಪರೂಪದ ರಶ್ಯನ್ ಸಿನೆಮಾ

– ಕರಣ ಪ್ರಸಾದ.

ನಿರ‍್ದೇಶಕರು: ಅಲೆಕ್ಸಿ ಕ್ರೋವಸ್ಕಿ
ಚಿತ್ರಕತೆ: ಅಲೆಕ್ಸಿ ಕ್ರೋವಸ್ಕಿ
ಸಿನಿಮಾಟೋಗ್ರಪಿ: ಡೆಮಿಟ್ರಿ ಸೆಲಿಪೆನೊವ್
ತಾರಾಗಣ: ಕೊನ್ಸ್ಟಂಟಿನ್ ಕಬೆನ್ಸ್ಕಿ
ನುಡಿ: ರಶ್ಯನ್

ಇಡೀ ಚಿತ್ರ ಒಂದೇ ಪಾತ್ರ ಹಾಗೂ ಒಂದೇ ಜಾಗದಲ್ಲಿ ನಡೆಯುವುದು. ಇಲ್ಲಿಯ ಕತಾನಾಯಕ ಹಣ ಸಂಗ್ರಹಿಸುವ ಒಂದು ಜನಪ್ರಿಯ ಸಂಸ್ತೆಯ ಕೆಲಸಗಾರ. ಅವನ ಕೆಲಸದ ಶೈಲಿಯಿಂದ ತುಂಬಾ ಪ್ರಸಿದ್ದಿ ಹಾಗೂ ಹಣವನ್ನು ಪಡದಿರುತ್ತಾನೆ. ಸಂಸ್ತೆಯಿಂದ ಸಾಲ ಬಾಕಿ ಇರುವವರನ್ನು ಹುಡುಕಿ ಸಾಲವನ್ನು ಮರುಪಾವತಿ ಮಾಡುವಂತೆ ಒಪ್ಪಿಸುವುದು ನಾಯಕನ ಕೆಲಸ. ಆದರೆ ಇವನ ಶೈಲಿ ಮಾತ್ರ ವಿಚಿತ್ರವಾದದ್ದು. ಪ್ರತಿ ಗ್ರಾಹಕರಿಗೂ ಕುತಂತ್ರ ರಚಿಸಿ ಅವರ ದೌರ‍್ಬಲ್ಯ ಅರಿತು ಅವರ ಮೇಲೆ ಒತ್ತಡ ಹೇರಿ ಮರುಪಾವತಿ ಮಾಡುವಂತೆ ಮಾಡುತ್ತಿರುತ್ತಾನೆ.

ಹೀಗೆ ತನ್ನ ಕೆಲಸವನ್ನು ಮಾಡುತ್ತಿರುವ ಕತಾನಾಯಕನಿಗೆ ಒಮ್ಮೆ ಹೆಂಗಸೊಬ್ಬಳ್ಳು ಕರೆ ಮಾಡಿ ಇವನ ಮಿಂಚಂಚೆಗೆ ಒಂದು ವಿಡಿಯೋ ಕಳಿಸಿರುವುದಾಗಿ ಹೇಳುತ್ತಾಳೆ. ವಿಡಿಯೋ ಬಗ್ಗೆ ಅಶ್ಟೇನು ತಲೆಕೆಡಿಸಿಕೊಳ್ಳದ ಇವನಿಗೆ ದೊಡ್ಡ ಗಂಡಾಂತರ ಎದುರಾಗುತ್ತದೆ. ವಿಡಿಯೋ ಎಲ್ಲಡೆ ಹರಿದಾಡಿ ಇವನ ಕೆಲಸ ಹಾಗೂ ಮರ‍್ಯಾದೆಗೆ ದಕ್ಕೆ ಬರುತ್ತದೆ. ಮಾದ್ಯಮಗಳ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಸಹೋದ್ಯೋಗಿಗಳು ಕೂಡ ಇವನಿಗೆ ಸಹಾಯ ಮಾಡಲು ನಿರಾಕರಿಸುತ್ತಾರೆ. ಕೊನೆಗೆ ತನ್ನ ಗೆಳತಿಯೂ ಸ್ಪಂದಿಸುವುದಿಲ್ಲ. ಅಶ್ಟಲ್ಲದೇ ಮಾದ್ಯಮಗಳ ಒತ್ತಡದಿಂದ ಇವನನ್ನು ಸಂಸ್ತೆಯಿಂದ ಹೊರಹಾಕಲಾಗಿದೆ ಎಂದು ಮೇಲದಿಕಾರಿ ತಿಳಿಸುತ್ತಾನೆ.

ಕೆಲವು ಗಳಿಗೆಗಳ ಹಿಂದೆ ತನ್ನೊಟ್ಟಿಗಿದ್ದ ಎಲ್ಲರೂ ಈಗ ವಿರುದ್ದವಾಗುತ್ತಾರೆ. ಆ ವಿಡಿಯೋಗೂ ಸತ್ಯಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಎಶ್ಟೇ ಹೇಳಿದರು ಯಾರೂ ಕಿವಿಗೊಡುವುದಿಲ್ಲ. ವಿಡಿಯೋ ಕಳಿಸಿದ ಹೆಂಗಸಿಗೆ ಕರೆ ಮಾಡಿ ಬೇಡಿಕೊಳ್ಳುತ್ತಾನೆ. ಆದರೆ ಆ ಹೆಂಗಸು, ತನ್ನ ಗಂಡನು ಇದೆ ರೀತಿ ಒತ್ತಡ ಅನುಬವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ಅದಕ್ಕೆ ಕಾರಣ ನೀನು ಎಂದು ಹೇಳುತ್ತಾಳೆ. ನಾಯಕನ ಸಂಸ್ತೆಯ ಕೆಳಗೆ ಪತ್ರಕರ‍್ತರ ಗುಂಪೊಂದು ಅವನಿಗೋಸ್ಕರ ಕಾಯುತ್ತಿರುತ್ತಾರೆ. ಒಳಗೂ ಇರಲಾಗದೆ ಹೊರಗೂ ಹೋಗಲಾಗದೆ ವಿಚಿತ್ರ ಒತ್ತಡಕ್ಕೆ ಅವನು ಒಳಗಾಗುತ್ತಾನೆ.

ಇಂತಹ ಒತ್ತಡದಲ್ಲಿ ಕತಾನಾಯಕನ ಮನಸೊಳಗೆ ನಡೆಯುವ ಗುದ್ದಾಟಗಳು, ತಲ್ಲಣಗಳು, ತೊಳಲಾಟಗಳೇ ಚಿತ್ರದ ಮುಕ್ಯಬಾಗ. ತಾನು ಮತ್ತೊಬ್ಬರಿಗೆ ನೀಡುತ್ತಿದ್ದ ಮಾನಸಿಕ ಒತ್ತಡದ ಅನುಬವ ಈಗ ತನಗೇ ಆಗುತ್ತಿದೆ. ತನ್ನವರು ದೂರವಾದರು, ಕೆಲಸ ಹೋಯಿತು, ಹೊರಜಗತ್ತಿನ ಪತ್ರಕರ‍್ತರ ಗುಂಪು ತನ್ನ ಪರಿಸ್ತಿತಿಯನ್ನು ಮಾರುಕಟ್ಟೆಯ ಸರಕಾಗಿಸಲು ಬಾಗಿಲಲ್ಲಿ ಕಾದುಕುಳಿತಿದೆ. ಇತ್ತ ದರಿ ಅತ್ತ ಪುಲಿ ಎತ್ತ ಹೋಗಲಿ ಎಂಬ ಸನ್ನಿವೇಶದಲ್ಲಿ, ಕತಾನಾಯಕನಿಗೆ ತಪ್ಪಿನ ಅರಿವಾಗುವುದೇ? ಹಣ, ಜನಪ್ರಿಯತೆ ಇವೆಲ್ಲ ಕ್ಶಣಿಕ, ದಯೆ ಹಾಗು ಮಾನವೀಯತೆ ದೊಡ್ಡದೆಂದು ತಿಳಿಯುವುದೇ? ಆ ವಿಡಿಯೋ ನಕಲಿ ಎಂದು ಎಲ್ಲರಿಗೂ ತಿಳಿದು ಕಳೆದುಕೊಂಡಿದ್ದ ಗೆಳತಿ, ಕೆಲಸ, ಮರ‍್ಯಾದೆ ಎಲ್ಲವೂ ಹಿಂತಿರುಗಿ ಬರುವುದೇ? ಒಂದು ವೇಳೆ ಕೆಲಸ ಮರಳಿ ಬಂದರೂ ತಿರುಗಿ ಅದೇ ಕೆಲಸ ಮಾಡುವುದಕ್ಕೆ ನಾಯಕನ ಮನಸ್ಸು ಒಪ್ಪುವುದೇ? ಇವುಗಳಿಗೆಲ್ಲ ಉತ್ತರ ಕೊಡುವುದೇ ಚಿತ್ರದ ಕೊನೆ.

ಚಿತ್ರಕತೆ
ಚಿತ್ರಕತೆ ಪ್ರಾರಂಬದಿಂದಲೂ ಬಿಗಿಯಾಗಿದೆ, ಅತಿಬೇಗನೆ ಮುಕ್ಯಕತೆಯತ್ತ ಸಾಗುತ್ತದೆ. ಕತೆಯಲ್ಲಿ ಒಂದೇ ಪಾತ್ರವಿದ್ದರು ನೋಡುಗರಿಗೆ ಪಾತ್ರದ ಒಳ ಹಾಗು ಹೊರ ಸಂಗರ‍್ಶಗಳು ನಾಟುತ್ತವೆ.

ನಿರ‍್ದೇಶನ
ನಿರ‍್ದೇಶಕರು ಪಾತ್ರ ಹಾಗು ಕ್ಯಾಮೆರಾ ಕೋನಗಳನ್ನು ಅತ್ಯುತ್ತಮವಾಗಿ ಸಂಯೋಜಿಸಿದ್ದಾರೆ, ಒಂದೇ ಪಾತ್ರ ಚಿತ್ರದಲ್ಲಿದ್ದರೂ ಮುಕ್ಯ ಪಾತ್ರದ ಜೊತೆ ಪೋನಿನಲ್ಲಿ ಮಾತಾಡುವ ಪಾತ್ರಗಳನ್ನು ಗಮನಸೆಳೆಯುವಂತೆ ಮಾಡಿದ್ದಾರೆ. ಪ್ರತಿಯೊಂದು ಪಾತ್ರಗಳ ಸಂಗರ‍್ಶಗಳನ್ನು ಅಚ್ಚುಕ್ಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಹಾಗು ರಶಿಯನ್ ಚಲನಚಿತ್ರದ ನೈಜತೆಯನ್ನು ಬಿಟ್ಟುಕೊಡದೆ ಚಿತ್ರೀಕರಿಸಿದ್ದಾರೆ.

ನಟನೆ
ಚಿತ್ರದಲ್ಲಿ ಕತಾನಾಯಕನಾಗಿ ಕೊನ್ಸ್ಟಂಟಿನ್ ಕಬೆನ್ಸ್ಕಿ ನಟಿಸಿದ್ದಾರೆ. ಇಡೀ ಚಿತ್ರ ನೈಜ ಸಮಯದಲ್ಲಿ ನಡೆಯುವುದರಿಂದ ಪಾತ್ರದ ಸೂಕ್ಮತೆ ಅತಿಯಾಗಿರುತ್ತದೆ. ಇದನ್ನು ಅವರು ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ.

ಸಿನಿಮಾಟೋಗ್ರಪಿ
ನೈಜ ಸಮಯದಲ್ಲಿ ಕತೆ ನಡೆಯುವುದರಿಂದ ಸಹಜವಾಗಿ ಲಾಂಗ್ ಟೇಕ್‍ಗಳಲ್ಲಿ ಚಿತ್ರೀಕರಿಸಿದ್ದಾರೆ. ಅತಿ ಕಡಿಮೆ ಬೆಳಕಿನಲ್ಲಿ ಚಿತ್ರಣ ಮಾಡಿದ್ದರಿಂದ ನೈಜತೆಗೆ ಹತ್ತಿರವಾಗುತ್ತದೆ.

ಈ ಸಿನಿಮಾ ನೋಡಲೇಬೇಕಾದ ಕಾರಣ

  • ಇಡೀ ಚಿತ್ರ ಒಂದೇ ಸ್ತಳ ಹಾಗು ಒಂದೇ ಪಾತ್ರವನ್ನು ಒಳಗೊಂಡಿದೆ.
  • ಪಾತ್ರದ ಸಂಗರ‍್ಶವು ಹಲವು ಆಂತರಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
  • ಕೊನ್ಸ್ಟಂಟಿನ್ ಕಬೆನ್ಸ್ಕಿ ಅವರ ನಟನೆ.
  • ವಿಶಿಶ್ಟ ನಿರ‍್ದೇಶನ ಶೈಲಿ.

(ಚಿತ್ರ ಸೆಲೆ: youtube)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.