ತ್ರಿಪದಿಯಲ್ಲಿ ಬಕಾಸುರನ ಕತೆ

– ಚಂದ್ರಗೌಡ ಕುಲಕರ‍್ಣಿ.

ಬರತಬೂಮಿಯ ದೊಡ್ಡ ಚರಿತೆಯನು ಸಾರುವ
ನಿರುಪಮ ಕಾವ್ಯ ಬಾರತದ | ಒಡಲಲ್ಲಿ
ಬೆರೆತಿರುವ ಒಂದು ಕತೆ ಕೇಳು |

ಅರಗಿನ ಮನೆ ಕಟ್ಟಿ ದುರುಳ ದುರ‍್ಯೋದನನು
ಕೊರಳ ಕೊಯ್ಯುವ ಗನಗೋರ | ಸಂಚನ್ನು
ಅರಿತು ಪಂಡವರು ಪಾರಾದ್ರು |

ಕಾಡಡವಿ ಹೊಕ್ಕಂತ ಜೋಡಿಲ್ದ ಪಾಂಡವರ
ಪಾಡು ಏನೆಂದು ಹೇಳುವುದು | ಕೂಳಿಲ್ದ
ಬಾಡಿದರು ಹೊಟ್ಟೆ ಹಸಿವಿಂದ |

ಕಾಡು ಕಾಡನು ಸುತ್ತಿ ನಾಡಿಗೆ ಬಂದರು
ಗೂಡ ಬ್ರಾಹ್ಮಣ ವೇಶದಲಿ | ಪಾಂಡವರು
ಕೂಡಿ ಪುರ ಏಕ ಚಕ್ರದಲಿ |

ಊರ ಪಕ್ಕದ ಗುಡ್ಡ ವಾರಿಗವಿಯಲಿ ಇದ್ದು
ಕೋರೆ ಹಲ್ಲನ್ನು ಮಸೆಯುತ್ತ | ರಕ್ಕಸನು
ಕ್ರೂರಿ ಕೊಲುತಿದ್ದ ಮನುಜರನು |

ಬಕನೆಂಬ ರಕ್ಕಸನು ಮಿಕಪ್ರಾಣಿ ಬೆನ್ನತ್ತಿ
ಚಿಕ್ಕಮಕ್ಕಳ ರಕ್ತ ಹೊಳೆಯನ್ನು | ಹರಿಸುತ್ತ
ತಕತಕನೆ ಕುಣಿದು ನಲಿತಿದ್ದ |

ದಾನವ ಬಲುಕ್ರೂರಿ ಮಾನವ ಕುರಿಕೋಳಿ
ಪ್ರಾಣದ ಕೂಡ ಚೆಲ್ಲಾಟ | ಆಡುತ್ತ
ಗೋಣು ಮುರಿಮುರಿದು ತಿನುತಿದ್ದ |

ಊರಿನ ಜನರೆಲ್ಲ ಸೇರಿ ಒಂದೆಡೆ ಕೂಡಿ
ಬೂರಿ ಬೋಜನವ ಅನುದಿನ | ಕಳಿಸುವೆವು
ಕ್ರೂರತನದಿಂದ ಕೊಲಬೇಡ |

ಹಿತವಾದ ನಡೆಯಿದು ಚತುರತನ ಇಲ್ಲಿಲ್ಲ
ಯತಿಲಿಂದ ನಮ್ಮ ನುಡಿ ಕೇಳು | ರಕ್ಕಸನೆ
ಮತಿವಂತನಾಗು ಈಗಿಂದ |

ಗಾಡಿ ಅನ್ನದ ಹಂಡೆ ಜೋಡಿ ಕೋಣಗಳನ್ನು
ಹೂಡಿ ಕಳಿಸುವೆವು ನರರನ್ನು | ನೀ ತಿಂದು
ಕಾಡನ್ನು ತೊರೆದು ಬರಬೇಡ |

ರಕ್ಕಸನ ಕಾಟಕ್ಕೆ ಸಿಕ್ಕೇಕ ಚಕ್ರವು
ಬಿಕ್ಕಳಿಸುತಿತ್ತು ಅನುದಿನ | ಬಕನಿಗೆ
ತಕ್ಕ ಊಟವನು ಕಳಿಸುತ್ತ |

ಬಡವ ಬ್ರಾಹ್ಮಣನಂದು ಅಡಿಗಿಯ ಮಾಡಿಸಿ
ಹುಡುಗನ ಕಳಿಸಿ ಕೊಡುವುದು | ಹೇಗೆಂದು
ಮಿಡುಕಿದನು ಬಂದ ದುಕ್ಕಕ್ಕೆ |

ಇದ್ದೊಬ್ಬ ಮಗನನ್ನು ಕುದ್ದು ಕಳಿಸುವುದೆಂಗ
ಮತ್ತೆಲ್ಲಿ ಹುಡುಕಿ ತರಬೇಕು | ಎಂದೆನುತ
ಬಿದ್ದಾಡಿ ಅತ್ರು ಮನೆಯವರು |

ಹಾರುವರೊಡೆಯನ ಗೋರ ದುಕ್ಕವ ಕಂಡು
ಸಾರಿ ಹೋದಳು ಅವರತ್ರ | ಕುಂತಿಯು
ಮೀರಿದ ಸುದ್ದಿ ಕೇಳಿದಳು |

ಪುಂಡ ಬಕ ರಕ್ಕಸನ ಗುಂಡಿಗೆಯ ಸೀಳುವ
ಗಂಡು ಮಗನೊಬ್ಬ ನನಗುಂಟು | ಅನ್ನದ
ಬಂಡಿಯಲಿ ಅವನ ಕಳಿಸುವೆನು |

ಕುಂತಿ ಮಾತನು ಕೇಳಿ ಶಾಂತನಾದನು ಒಡೆಯ
ಚಿಂತೆಯನು ದೂರ ಅಟ್ಟಿದ | ಒಳಗುಟ್ಟು
ಸಂತೆ ಸುದ್ದಿಯ ಮಾಡದೆ |

ತೋಳನ ಹೊಟ್ಟೆಯ ಕಾಳಬೀಮನ ಕರೆದು
ಗೋಳಾಡಬೇಡ ಹಸಿವಿಂದ | ಕೊಡಿಸುವೆ
ನಾಳೆ ಹೊಟ್ತುಂಬ ಊಟವನು |

ಗುಟ್ಟಿನ ಮಾತಿದು ರಟ್ಟು ಮಾಡಲು ಬೇಡ
ಇಟ್ಟು ಕಳಿಸುವೆನು ಅನ್ನದ | ಹಂಡೆಗಳ
ಹೊಟ್ಟೆ ಹರಿವಂಗ ನೀ ಉಣ್ಣು |

ಬಂಡಿಯಲಿ ಹೊಯ್ದಂತ ಕಂಡುಗ ಅನ್ನವನು
ಕೊಂಡೊಯ್ದ ಬೀಮ ಬಾಯಲ್ಲಿ | ನೀರೂರಿ
ಉಂಡು ತಣಿಯಲು ಕುಳಿತನು |

ಕೊಬ್ಬಿದ ರಕ್ಕಸ ಅಬ್ಬರಿಸಿ ಬಂದನು
ಗುಬ್ಬಿ ಮರಿ ನಿನ್ನ ಕೊಲ್ಲುವೆ | ಎನ್ನುತ್ತ
ಬೊಬ್ಬಿರಿಸಿ ಮೇಲೆ ಬಿದ್ದನು |

ನನ್ನ ಊಟವ ನೀನು ತಿನ್ನುವೆ ಏಕೆಂದು
ಬೆನ್ನಿನ ಮೇಲೆ ಗುದ್ದಿದ | ಬಕನಿಗೆ
ಕಣ್ತೆರೆದು ಬೀಮ ಹೇಳಿದ |

ಇನ್ನೊಮ್ಮೆ ಸರಿಯಾಗಿ ಬೆನ್ನಿಗೆ ಗುದ್ದಾಕು
ಚನ್ನಾಗಿ ಒಳಗೆ ಇಳಿಯುವುದು | ರಕ್ಕಸನೆ
ನಿನ್ನ ಉಪಕಾರ ಮರಿಲಾರೆ |

ಬೀಮನ ನುಡಿ ಕೇಳಿ ತಾಮಸಿ ರಕ್ಕಸನು
ಜೋಮು ಹಿಡಿವಂತೆ ಗುದಿಗುದ್ದಿ | ದಣಿದನು
ಸಾಮು ತೆಗೆಯುತ ನಿಂದನು |

ಉಂಡು ತೇಗಿದ ಬೀಮ ಗಂಡು ಗಚ್ಚೆಯ ಹಾಕಿ
ಬಂಡ ರಕ್ಕಸಗೆ ನಾಲ್ಕೇಟು | ಗುದ್ದಲು
ಗುಂಡಿಗೆಯ ಜೀವ ಬಿಕ್ಕಳಿಸಿ |

ಸಿಟ್ಟಿನ ಹೊಡೆತಕ್ಕೆ ಹೊಟ್ಟೆಯ ಕರುಳುಗಳು
ಮಿಟ್ಟಿ ಮಣ್ಣನ್ನು ತೋಯಿಸಿ | ರಕ್ತದ
ಕಟ್ಟೆ ಒಡೆಯಿತು ನದಿಯಾಗಿ |

ನೆತ್ತರು ಮಡುತುಂಬಿ ಸುತ್ತಲು ಹರಿಯಿತು
ಸತ್ತಿರುವ ಬಕನು ತೇಲುತ್ತ | ಹರಿದೊಂಟ
ಮತ್ತೆ ಬೀಮನೆ ತಡೆ ಹಿಡಿದ |

ನುಗ್ಗಾದ ದೇಹವನು ಬಗ್ಗಿಸಿ ಹೇರಿದನು
ಕುಗ್ಗುವ ವರೆಗೆ ಕಾದನು | ಸೂರ‍್ಯನು
ಬಗ್ಗಿ ಪಡುವಣದಿ ಮರೆಯಾದ |

ನಾಡಿನರಗಳ ಹರಿದು ಜೋಡಿ ಕಾಲನು ಸಿಗಿದು
ನಾಡ ಅಗಸಿಯ ಬಾಗಿಲಿಗೆ | ತೋರಣವ
ಮಾಡಿ ಕಟ್ಟಿದನು ನಡುರಾತ್ರಿ |

ರಕ್ಕಸ ಬಕನಿಗೆ ತಕ್ಕಶಾಸ್ತಿಯ ಮಾಡಿ
ಹೊಕ್ಕನು ಬೀಮ ಮನೆಯೊಳಗೆ | ತಾಯಿಗೆ
ನಕ್ಕು ಸನ್ನೆಯ ಮಾಡಿದ |

ಹೊತ್ತು ಏರುವ ಮುನ್ನ ಸುತ್ತೆಲ್ಲ ಹಬ್ಬಿತು
ಸತ್ತು ಹೋದನು ರಕ್ಕಸನು | ಇನ್ನೆಂದು
ಕುತ್ತು ಬರದೆಂದು ಕುಣಿದರು |

ದೇವ ಮಾನವ ಬಂದು ಸಾವ ತಂದನು ಬಕಗೆ
ಜೀವ ಬಯ ಬಿಡಿಸಿ ಹೋದಂತ | ಪುರುಶನಿಗೆ
ಸಾವಿರ ನಮನ ಸಲಿಸಿದರು |

ಯಾರಿಗೂ ತಿಳಿದಂಗ ದೀರ ಬೀಮನು ಅಂದು
ಗೋರ ರಕ್ಕಸ ಬಕನನ್ನು | ಕೊಂದನು
ಮೀರಿದ ಸಂಕಟ ಕಳೆದನು |

( ಚಿತ್ರ ಸೆಲೆ:  wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: