ಶರೀಪನ ಚರಿತೆಯನು ಹಾಡ್ಯಾವು

– ಚಂದ್ರಗೌಡ ಕುಲಕರ‍್ಣಿ.

ಬಯಲ ಬಸವನ ನಂಬಿ ಜಯದ ಹಾಡನು ಕಟ್ಟಿ
ಸ್ವಯದ ಅನುಬಾವ ಹಂಚಿದ | ಶರೀಪನ
ದಯದಿಂದ ಕಾವ್ಯ ಕಟ್ಟಿರುವೆ |

ಶರೀಪ ಶಿವಯೋಗಿಯ ಚರಿತೆಯ ಮಜಕೂರ
ಅರಿವಿನ ಸೆಲೆಯ ತೇಜದಲಿ | ಮೂಡುತ್ತ
ಹರಿದು ಬಂದಿಹುದು ತ್ರಿಪದಿಯಲಿ |

ಅಂದದ ಲಯದಲ್ಲಿ ಹೊಂದಿದ ಪದಗಳು
ಸುಂದರ ಕತನ ಕಟ್ಟ್ಯಾವು | ತ್ರಿಪದಿಯ
ಚಂದ ಸ್ವಚ್ಚಂದ ಬೆಡಗಿನಲಿ |

ಅಕ್ಶರಕೆ ನಿಲುಕದ ಪದಗಳಿಗೆ ಸಿಲುಕದ
ಅರ್ತರ ಬಾವಗಳ ಮೀರಿದ | ಬಯಲಿಗನ
ಕೆತ್ತಿ ನಿಲಿಸುವುದು ಬಹುಕಶ್ಟ |

ಕಾಡುವ ಶರೀಪನು ಹಾಡಿನ ರೂಪದಲಿ
ಮೂಡಿ ಬಂದಾನೊ ಅವತರಿಸಿ | ಬಾವದಲಿ
ಬೀಡು ಬಿಟ್ಟಾನೊ ತ್ರಿಪದಿಯಲಿ |

ಹತ್ತಾರು ಕವಿಗಳು ಹೊತ್ತಿಗೆಯಲಿ ಬರೆದಿರುವ
ಮತ್ತೆ ಹಿರಿಯರು ಹೇಳಿದ | ಶರೀಪನ
ಮುಕ್ತ ಚರಿತೆಯನು ಹಾಡಿರುವೆ |

ಶರೀಪನ ನುಡಿಚಿತ್ರ ಚಿರವಾದ ಪದಗಳಲಿ
ವರರೂಪ ಪಡೆದು ನಿಂತಿಹುದು | ತ್ರಿಪದಿಯಲಿ
ಒರೆ ಹಚ್ಚಿ ನೋಡೊ ಸವಿಗಾರ |

ಪದಗಳ ಒಡಲಲ್ಲಿ ಹುದುಗಿಸಿ ಅರ್ತ ವನು
ಹದವಾದ ಕಾವ್ಯ ಕಟ್ಟಿರುವೆ | ಶರೀಪನ
ಸುದೆಯಲ್ಲಿ ಸುಗ್ಗಿ ಮಾಡಿರುವೆ |

ನುಡಿರತುನ ಕನ್ನಡದಿ ನಡೆರತುನ ಶರೀಪನ
ಬೆಡಗಿನ ಚರಿತೆ ಕಟ್ಟಲು | ತ್ರಿಪದಿಯೇ
ಒಡಲಲ್ಲಿ ತುಂಬಿ ತುಳುಕಿಹುದು |

ತಿಳಿಗನ್ನದುಡುಗೆಯಲಿ ನಳನಳಿಸಿ ಹಬ್ಬಿಹುದು
ಬಳುಕುತ್ತ ಕುಡಿಯ ಚಾಚಿಹುದು | ಈ ಕಾವ್ಯ
ಸೆಳೆದು ಪರಿಮಳವ ನೀಡುವುದು |

ಪ್ರಾಸ ಗಣ ಮಾತ್ರೆಗಳು ಬಾಶೆ ನುಡಿಕಟ್ಟುಗಳು
ಆಶಯದ ರುಚಿಯಲ್ಲಿ ಅರಳ್ಯಾವು | ಓದುಗನೇ
ದೋಶಗಳ ಮರೆತು ಸವಿದುಣ್ಣೊ |

ಕಪ್ಪೆ ಚಿಪ್ಪನ್ನಾಯ್ದು ಒಪ್ಪಗೊಳಿಸಿದ್ದಲ್ಲ
ಉಪ್ಪು ಸಾಗರದ ಆಳ್ಕಿಳಿದು | ರತುನವ
ಅಪ್ಪಿತರು ಯತ್ನ ಮಾಡಿರುವೆ |

ಸಾಗರಾಳಕೆ ಇಳಿದು ಯೋಗ ರತುನವ ಬಗೆದು
ಜಾಗರದಿ ಹಿಡಿದು ತಂದಿರುವೆ | ಎನ್ನುತ್ತ
ಬೀಗುವ ದಾರ್ಶ್ಟ್ಯ ನನಗಿಲ್ಲ |

ಹಿರಿಗನತೆ ಶರೀಪನು ಕಿರಿಪದಕೆ ಸಿಲುಕಿಲ್ಲ
ಬರೆದ ಸಾಲ್ಗಳಿಗು ನಿಲುಕಿಲ್ಲ | ಕಾಡುತ್ತ
ಬರಿಲಾರ್ದೆಗ ಇರಲು ಬಿಡಲಿಲ್ಲ |

ಸವಿಯಾದ ಹಾಡುಗಳು ಕಿವಿಮ್ಯಾಲ ಬಿದ್ದಾಗ
ಕವಿಯು ಯಾರೆಂದು ಕೇಳಿತ್ತು | ಎಳೆಮನಸು
ರವಿರತುನ ಶರೀಪನಲಿ ಬೆರೆತಿತ್ತು |

ಇಳೆಯಸಿರಿ ಶಿಶುನಾಳ ಸೆಳೆದಿತ್ತು ಮನಸನ್ನು
ಎಳೆವಯದ ಮುಗ್ದ ಕಾಲದಲಿ | ಶರೀಪನ
ಗೆಳೆತನದ ಬಳ್ಳಿ ಹಬ್ಬ್ಸಿತ್ತು |

ನಾನು ಮಾಡೆನೆಂಬುದೇನೇನು ಇಲ್ಲಿಲ್ಲ
ಸ್ವಾನುಬವವಂತು ಮೊದಲಿಲ್ಲ | ಶರೀಪನು
ತಾನೇ ಒಳಗಿದ್ದು ನುಡಿಸ್ಯಾನೊ |

ಕಲ್ಮೇಶ ಕಾಸ್ಗತನ ಬಲ್ಮೆಯ ಈಕವಿಯು
ಒಲ್ಮೆಯಲಿ ಕಾವ್ಯ ಕಟ್ಟ್ಯಾನ | ಬೆರಗಿನ
ನಿಲ್ಮೆಯಲಿ ಓದಿ ಸವಿಯಿರಿ |

ಒಳ್ಳೆಯ ಮನಸಿಂದ ಕಳ್ಳಿನ ಮಾತಿಂದ
ಬಳ್ಳಿಯ ಬಳುಕು ಲಯದಿಂದ | ಕಾವ್ಯದ
ಬಳ್ಳ ತುಂಬಿಹುದು ಸವಿನೋಡು |

ನಂಬಿಕೆಯ ಮಾಂತನು ಅಂಬರಕೆ ನಕ್ಶತ್ರ
ಸಾಂಬಹರ ಬಕ್ತ ಶರೀಪನ | ಕತನದ
ಅಂಬಲಿಯ ಉಣ್ಣೊ ಸವಿಗಾರ |

ಶರೀಪ ಶಿವಯೋಗಿಯ ಚರಿತೆ ಅಮ್ರುತವಿಲ್ಲಿ
ಚಿರವಾದ ತ್ರಿಪದಿ ರೂಪದಲಿ | ಮೂಡಿಹುದು
ಕೊರತೆ ಮನ್ನಿಸುತ ಸವಿದುಣ್ಣೊ |

ಜನಪದರ ನಾಲಿಗೆಯ ಗನತೆಯ ನುಡಿಯಲ್ಲಿ
ತನಿರಸ ತುಂಬಿ ಹಾಡಿರುವೆ | ಸವಿಗಾರ
ಮನತುಂಬಿಕೊಳ್ಳೊ ರುಚಿನೋಡಿ |

ಸದ್ದಿಲದೊಳಗಡಗಿ ಮುದ್ದ್ಯಾಗಿ ಕುಳಿತಿದ್ದ
ಪದ್ಯಗಳು ಚಿಗುರಿ ಪಲ್ಲವಿಸಿ | ಶರೀಪನ
ಶುದ್ದ ಚರಿತೆಯನು ಹಾಡ್ಯಾವು |

(ಚಿತ್ರ ಸೆಲೆ: youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: