ನಗೆಬರಹ: ಕೂದಲಾಯಣ

ಪ್ರಶಾಂತ ಎಲೆಮನೆ.

ಏನೇ ಹೇಳಿ, ತಲೆಮೇಲೆ ಕೂದಲಿದ್ದರೇನೆ ಚೆಂದ.ಕೂದಲಿಲ್ಲ ಅಂದರೆ ಸ್ವಲ್ಪ ಜಾಸ್ತಿನೇ ವಯಸ್ಸಾದಂತೆ ಕಾಣುತ್ತೆ. ನಮ್ಮ ಚಿತ್ರ ತಾರೆಯರನ್ನೆ ನೋಡಿ, ಅವರು ಬೇರೆ ಬೇರೆ ಹೇರ್ ಸ್ಟೈಲ್ ನಲ್ಲಿ ಬಂದಾಗಲೇ ನಮಗೆ ಚೆಂದ ಅನಿಸೋದು. ಹಾಗಂತ ಇದು ಇಂದು, ನಿನ್ನೆದಲ್ಲ. 900 ವರುಶ ಕೆಳಗೆಯೇ ಚಾಲುಕ್ಯರಲ್ಲಿ 300ಕ್ಕೂ ಹೆಚ್ಚು ಬಗೆಯ ಕೇಶ ಶ್ರುಂಗಾರ ರೀತಿಗಳಿದ್ದುವಂತೆ! ಇನ್ನು ತಿರುಪತಿ ತಿಮ್ಮಪ್ಪನಿಗೊ ಮುಡಿ ಮಾಡಿಸೋರಿಂದಲೇ ಕೋಟಿ ಕೋಟಿ ಆದಾಯ.

ನಾನು ಚಿಕ್ಕವನಿದ್ದಾಗ ನಮ್ಮನೇಲಿ ಕೂದಲ ವಿಶಯದಲ್ಲಿ ನಾವು ಸ್ವಲ್ಪ ಜಾಸ್ತಿನೇ ಮಡಿವಂತರಿದ್ದೆವೇನೋ ಅನಿಸುತ್ತೆ. ನಮ್ಮಲ್ಲಂತೂ ಮಂಗಳವಾರ, ಶನಿವಾರ, ಹುಟ್ಟಿದ ದಿನ, ಹಬ್ಬ ಹರಿದಿನ ಹೀಗೆ ಯಾವ ದಿನವೂ ಕೂದಲು ಕತ್ತರಿಸಬಾರದು. ನನ್ನ ಗ್ರಹಚಾರಕ್ಕೆ ನಾನು ಹುಟ್ಟಿದ್ದು ರವಿವಾರ. ನಡುಹಗಲ ಮೇಲಂತೂ ಕೂದಲು ಕತ್ತರಿಸೋಕೆ ಹೋಗೊ ಹಾಗೇನೆ ಇಲ್ಲ. ಕತ್ತರಿಸಿದ ಮೇಲಂತೂ ಎಂಜಲನ್ನು ನುಂಗದೆ, ಸೀದಾ ಹಿತ್ತಲ ಬಾಗಿಲ್ಲಲ್ಲಿ ಒಳಗೆ ಬಂದು ಜಳಕ ಮಾಡಿಯೆ ಒಳಗೆ ಬರಬೇಕು. ಜಳಕದ ನೀರಿಗೆ ಗಂಜಲ ಹಾಕಿ, ಅಪ್ಪನೊ, ಅಮ್ಮನೊ ಅದನ್ನ ಮೊದಲು ತಲೆ ಮೇಲೆ ಹೊಯ್ಯಬೇಕು. ಅದಾದ ಮೇಲಶ್ಟೆ ನಾವು ಜಳಕದ ಹಂಡೆ ಮುಟ್ಟಬಹುದು.

ಮನೆಯಲ್ಲೂ ಎಲ್ಲಂದರಲ್ಲಿ ಕೂದಲು ಬಾಚುವಂತಿಲ್ಲ, ಅದಕ್ಕೇನೆ ಪ್ರತ್ಯೇಕ ಜಾಗ. ನಮ್ಮಜ್ಜ ಕೂದಲು ಕತ್ತರಿಸೋಕೆ ಹೊರಗಡೆ ಹೋಗ್ತಿರಲಿಲ್ಲ, ಯಾವೊದೊ ಊರಿಂದ ನಮ್ಮನೆಗೇನೆ ಬಂದು ಕತ್ತರಿಸಿ ಹೋಗ್ತಿದ್ರು. ತಲೆಗೆ ಕೊಬ್ಬರಿ ಎಣ್ಣೆ ಬಿಟ್ಟು ಬೇರೇನೂ ಹಾಕ್ತಿರಲಿಲ್ಲ.ಆದರೂ ನನ್ನಕ್ಕನಿಗೆ ಆಗಾಗ ಅಶ್ವಿನಿ ಹೇರ್ ಆಯಿಲ್ ಮಸಾಜ್ ನಡೀತಿತ್ತು. ನಮ್ಮಜ್ಜಿಗೆ ಮೆಂತೆ ಲೇಪ ಅಂದರೆ ಇಶ್ಟ. ಅದೇನೊ ತಂಪಂತೆ. ನಾನೋ ಮೆಂತೆ ಅಂದರೆ ಮಾರುದ್ದ ಓಡ್ತಿದ್ದೆ. ವಾರಕ್ಕೊಮ್ಮೆ ಮೆಂತೆ ಸೊಪ್ಪು ನೆನೆಸಿ ತಲೆಸ್ನಾನ. ಆಗೆಲ್ಲ ಶಾಂಪುವಿನ ಹವಾ ಇಶ್ಟಿರಲಿಲ್ಲ. ನಾವೇನಾರು ಮನೆ ಕಟ್ಟೆ ಮೇಲೆ ಅಜ್ಜಿ ಹತ್ರ ಕೂತ್ವಿ ಅಂದ್ರೆ ಅಜ್ಜಿ ತಲೆ ಮೇಲೆ ಕೈ ಬಿಡ್ತಾ ಹೇನು, ಸೀರು ಅಂತ ಡಿಟೆಕ್ಟಿವ್ ಆಗಿಬಿಡ್ತಿದ್ಲು.

ಈಗ ಕಾಲ ಬದಲಾಗಿದೆ ಹಾಗೇನೆ ಹಳ್ಳಿಗಳು, ಪಟ್ಟಣಗಳು ಕೂಡ. ಪಟ್ಟಣದಲ್ಲಂತೂ ಕೂದಲ ಸಲೂನಿಗೆ ಹೋಗಿ ತಲೆ ಕೊಟ್ಟರೆ 100 ರಿಂದ 1,000, 10,000 ದ ವರೆಗೆ ಕಾಸಾದರು ಅಚ್ಚರಿಯಿಲ್ಲ. ದಿನಕ್ಕೊಂದು ಹೇರ್ ಸ್ಟೈಲ್ ಒಮ್ಮೆ ವಿರಾಟ್, ಮಾಲಿಂಗ, ಒಮ್ಮೆ ಬೆಕೆಮ್, ಹೆಬ್ಬುಲಿ ಸುದೀಪ್ ಹೀಗೆ ಏನೇನೊ. ಕೆಲವರಿಗಂತೂ ಕೂದಲು ಬಣ್ಣ ಬಣ್ಣವಾದರೇನೆ ಚೆಂದ. ಕಪ್ಪು, ಕೆಂಪು, ಕಂದು ಹೀಗೆ.

ಪಟ್ಟಣದವರ ಚಿಂತೆಗಳ ಸಾಲಿನಲ್ಲಿ ತಲೆ ಕೂದಲೂ ಈಗ ಸೇರಿಕೊಂಡಿದೆ. ಕೂದಲಿಲ್ಲದೋರಿಗೆ ತಲೇಲಿ ಕೂದಲಿಲ್ಲ ಅಂತ, ಗುಂಗುರು ಕೂದಲವರಿಗೆ ಕೂದಲು ನೇರ ಇಲ್ಲ ಅಂತ, ನೇರ ಇದ್ದೋರಿಗೆ ಗುಂಗರಿಲ್ಲ ಅಂತ, ಉದ್ದ ಇರೋರಿಗೆ ತುಂಡ ಬೇಕು, ತುಂಡು ಕೂದಲು ಇರೋರಿಗೆ ಉದ್ದ ಬೇಕು.ಈ ಎಲ್ಲಾ ಸಮಸ್ಯೆಗಳಿಗೆ ಆಡ್-ಆನ್ ಆಗಿ ತಲೆಹೊಟ್ಟು. ಪುಕ್ಕಟೆ ಬಳುವಳಿ, ಕರೆಯದೆ ಬರುವ ನೆಂಟ.

ತಲೆ ಕೂದಲುದುರೋದು ಈಗ ಸಾಮಾನ್ಯ ಸಂಗತಿ. ನಮ್ಮ ಆಹಾರ, ಹವಾಮಾನ, ನೀರು ಎಲ್ಲವೂ ಕಲಬೆರೆಕೆ ಆಗಿರುವಾಗ ಅದರ ಪರಿಣಾಮ ಕೂದಲ ಮೇಲೂ ಆಗಿರುವುದಿಲ್ವೇ? 50ರ ನಂತರವೂ ತಲೇಲಿ ಕೂದಲು (ಗಂಡಸರಿಗೆ) ಗಟ್ಟಿಮುಟ್ಟಾಗಿದೆ ಅಂದರೆ ನೀವು ಅದ್ರುಶ್ಟವಂತನೆ ಸರಿ. ಅದರಲ್ಲೂ ನಮ್ಮ ಬ್ರಾಹ್ಮಣ ಮಾಣಿಗಳಿಗೆ ತಲೇಲಿ ಕೂದಲಿಲ್ಲ ಅಂದರೆ ಆಕಾಶ ಕಳಚಿ ಬಿದ್ದಂತೆಯೆ. ಮೊದಲೆ ಹೆಣ್ಣು ಸಿಗಲ್ಲ, ಅದರಲ್ಲೂ ತಲೇಲಿ ಕೂದಲು ಕಡಿಮೆ ಅಂತಾದರಂತೂ ಹೆಣ್ಣು ಕೊಡೊ ಮಾವ 10 ಸಲ ಜಾಸ್ತಿನೆ ಯೋಚನೆ ಮಾಡ್ತಾನೆ. “ತಲೆ ಕೂದಲು ಕಾಲಿಯಾಗೊ ಒಳಗೆ ಮದುವೆಯಾಗಪ್ಪ” ಅಂತ ಕಿಚಾಯಿಸೋರು ಸಾಮಾನ್ಯ. ನೀವೇನಾದರೂ ಹೋಗಿ ಗೂಗಲ್ ನಲ್ಲಿ ಕೂದಲು (hair) ಅಂತ ಬರೆದರೊ ಗೂಗಲ್ ಗು ಕುಶಿಯಾಗಿಬಿಡುತ್ತೆ, ಅಶ್ಟು ರಿಸಲ್ಟ್ ಗಳು. ಏನಿಲ್ಲ ಅಂದ್ರು ಅದು ಸಾವಿರಾರು ಕೋಟಿ ಉದ್ಯಮ ಈಗ.

ಕೂದಲ ಬಗ್ಗೆ ನನಗೂ ವಿಶೇಶ ಆಸ್ತೆ. ಈ ಆಸ್ತೆ ಬರೋಕೆ ಕಾರಣ ಕೂದಲುದುರೋಕೆ ಶುರುವಾದದ್ದು. ಹಳ್ಳಿ ಬಿಟ್ಟು ಪಟ್ಟಣ ಸೇರಿದ ಮೇಲೆ ನೀರು ಬದಲಾಯಿತು, ಅದೇ ಕಾರಣ ಇರಬೇಕು ಅಂತ ನನ್ನಮ್ಮ. ಇದು ನನ್ನ ತಂದೆ ರೀತಿ ಅಂತ ನನ್ನ ವಾದ. ಸರಿ ಗೂಗಲ್ ನಲ್ಲಿ ನನ್ನ ಹುಡುಕಾಟ ಶುರುವಿಟ್ಟೆ. ನನ್ನ ಪ್ರಶ್ನೆ, ಕೂದಲು ಉದುರೋದರ ತಡೆ ಹೇಗೆ? ಅಬ್ಬಾ! ಎಶ್ಟೊಂದು ಸಲಹೆಗಳು, ಕಡಲೆ ಹಿಟ್ಟಿನಿಂದ ಶುರುಮಾಡಿದೆ. ನಿಂಬೆ ಹುಳಿ, ಈರುಳ್ಳಿ ಬೆಳ್ಳುಳ್ಳಿ ರಸ, ಮೊಟ್ಟೆಯ ಲೋಳೆ, ಹರಳೆಣ್ಣೆ, ಪತಂಜಲಿಯ ಎಣ್ಣೆಗಳು, ಲೋಳೆ ರಸ, ಆಲಿವ್ ಎಣ್ಣೆ – ಹೀಗೆ ಒಂದಾದ ಮೇಲೆ ಒಂದು. ನನ್ನೊಬ್ಬ ಗೆಳೆಯ ಇದನ್ನ ತಿಕ್ಕಿ ಹಚ್ಚು ಅಂತ ಚಾಲಿ ಅಡಿಕೆ ಕೊಟ್ಟಾಗ ನಾನು ದಂಗು. ನಮ್ಮ ಮನೇಲಿ ಬೆಳೆಯೋದೆ ಅಡಿಕೆ, ಆದರೂ ಗೊತ್ತಾಗಲಿಲ್ವಲ್ಲ. ಹೀಗೂ ಉಂಟಾ ! ಅಂತ.

ಇದೆಲ್ಲ ಆದ ಮೇಲೆ ಆಯುರ್ ವೇದಿಕ್(ayurvedic) ನೋಡೋಣ ಅಂತ ಡಾಕ್ಟರ್ ಬಳಿಗೆ ಹೋದೆ.ಅವರೋ ಕೊಟ್ಟ ಮಾತ್ರೆನ ಲೆಕ್ಕ ಹಾಕಿ ತಗೊಂಡ್ರು, ಒಂದಾದರು ತಪ್ಪುತ್ತಿತ್ತು. ಅಶ್ಟು ಮಾತ್ರೆಗಳು. ಮಾತ್ರೆ ತಿನ್ನೋದೆ ಬೇಜಾರಾಗಿ ಬಿಟ್ಟುಬಿಟ್ಟೆ. ಈ ನಡುವೆ ನನ್ನ ಒಬ್ಬ ಸ್ನೇಹಿತ ಡಾ. ಬಾತ್ರಾನಿಂದ ಉಮೇದು ಪಡೆದು ತಲೇಲಿ ಕೂದಲು ನೆಟ್ಟಿಸಿಕೊಂಡು ಬಂದ. ಆದರೆ ಅವನು ಹೇಳಿದ ಬೆಲೆ ಕೇಳಿ ಸಾವಾಸ ಬೇಡಪ್ಪ ಅಂತ ಬಿಟ್ಟು ಬಿಟ್ಟೆ.

ಮತ್ತೆ ಮುಂದುವರೆಸಿ ಆಯುರ್ ವೇದಿಕ್ ಆಯ್ತು, ಯಾಕೆ ಹೋಮಿಯೋಪತಿಕ್ ನೋಡಬಾರದು ಅಂತ, ಅವರನ್ನೂ ಹುಡುಕಿಕೊಂಡು ಹೋದೆ. ಸಕ್ಕರೆ ಗುಳಿಗೆ, ನುಂಗುವಾಗ ನೀರು ಕುಡಿಯೋದೂ ಬ್ಯಾಡ, ಕರಗಿಬಿಡುತ್ತೆ. ಹೀಗೆ ಒಂದು ಸಲ ಟಿವಿ ನೋಡ್ಬೇಕಿದ್ದರೆ ಬಾಬಾ ರಾಮದೇವ್ ಕಾಣಿಸಿಕೊಂಡು, ಶಿರಸಾಸನ ಮಾಡಿ ಕೂದಲಿಗೆ ಒಳ್ಳೆಯದು, ಗಟ್ಟಿಮುಟ್ಟಾಗತ್ತೆ ಅಂದ್ರು. ಸರಿ ಪ್ರತಿ ದಿನ ಸಂಜೆ ಶಿರಸಾಸನ. ಒಂದು ವಾರ ಆಗಿರಬೇಕು ಅನಿಸುತ್ತೆ, ನನಗೆ ಒಂದು ಅನುಮಾನ ಬಂತು. ಈ ಪುಣ್ಯಾತ್ಮ ಎಶ್ಟು ದಿನ ಶಿರಸಾಸನ ಮಾಡಬೇಕು ಅಂತ ಹೇಳಲೇ ಇಲ್ಲವಲ್ಲ ಅಂತ. ಹೆಚ್ಚು ಕಡಿಮೆ ಮಾಡಿ ಕುತ್ತಿಗೆ ನೋವು ಬಂದಂಗಿತ್ತು. ವಾರಕ್ಕೆ ಮುಕ್ತಾಯ ಮಾಡಿಬಿಟ್ಟೆ.

ಈ ನಡುವೆ ಸಾಕಶ್ಟು ಸಲಹೆಗಳು ಆ ಕಡೆಯಿಂದ, ಈ ಕಡೆಯಿಂದ ತೂರಿ ಬರತಿತ್ತು. ಕೂದಲು ಕಡಿಮೆಯಾದ ಮೇಲೆ ಬಾಚೋದು ಹೇಗೆ, ಕೂದಲ ಕಟಾವು ಹೇಗಾಗಬೇಕು ಹೀಗೆ ಹಲವು. ನನ್ನ ಒಬ್ಬ ಸ್ನೇಹಿತ ಹೀಗೆಂದ, “ಕೂದಲನ್ನ ಸಣ್ಣಗೆ ಕತ್ತರಿಸಿ ಬಿಟ್ಟರೆ ಕೂದಲುದುರೋಲ್ಲ” ಅಂತ. ನಾನೆಂದೆ “ಯಾರದ್ದೆಲ್ಲ ಮಾತು ಕೇಳಿದೀನಿ, ನಿನ್ನ ಮಾತು ಕೇಳಲ್ವೇನೊ” ಅಂತ ಹೇಳುತ್ತಾ ಅವನ ಬೆನ್ನು ತಟ್ಟಿದೆ.

ಆಯುರ್ ವೇದಿಕ್, ಹೋಮಿಯೋಪತಿಕ್ ಆದ ಮೇಲೆ ಅಲೋಪತಿಕ್ ಕೂಡ ನೋಡಿಯೆ ಬಿಡೋಣ ಅಂತ ಹುಡುಕಿಕೊಂಡು ಹೋದೆ. ಅವರೊ ತೊಗಲು ಮತ್ತು ಕೂದಲು ಪರಿಣಿತರು. ತಮ್ಮ ಬತ್ತಳಿಕೆಯ ಬೇರೆ ಬೇರೆ ಬಾಣ (ಮಾತ್ರೆ)ಗಳನ್ನ ನನ್ನ ಮೇಲೆ ಬಿಟ್ಟರು..ಅದರಲ್ಲಿ ಕೆಲವು ಎಲ್ಲಿಯೂ ಸಿಗದಂತವು, ಅವರ ಹತ್ತಿರ ಮಾತ್ರ ಸಿಗುವಂತವು. ಸರಿ ಇನ್ನೇನು ಹೊರಡಬೇಕು ಅನ್ನೋದರಲ್ಲೆ ಹೇಗೂ ಬಂದಿದೀನಲ್ಲ ಅಂತ ನನ್ನ ಬೆನ್ನೆಲ್ಲೇನೊ ಕಜ್ಜಿ, ಒಂದ್ಸಲ ನೋಡಿ ಬಿಡಿ ಅಂದೆ. ಆ ಯಮ್ಮ ಅದನ್ನ ನೋಡಿ, “ಅಯ್ಯೋ ಇದು ಸರ‍್ಪ ಸುತ್ತು, ತಕ್ಶಣ ಮಾತ್ರೆ ತಗೋಬೇಕು” ಅಂತ ಮತ್ತಶ್ಟು ಮಾತ್ರೆ ಗಂಟು ಕೈಗಿಟ್ಟಳು. ನನಗೆ ಸರ‍್ಪ ಸುತ್ತಾಗಿತ್ತೋ ಇಲ್ಲವೊ ಗೊತ್ತಿಲ್ಲ, ಆ ಮಾತ್ರೆ ಎಲ್ಲಾ ತಗೊಂಡ್ ಮೇಲೆ ಗ್ಯಾಸ್ಟ್ರಿಕ್ ಅಂತು ಶುರುವಾಯ್ತು.

ಮೊನ್ನೆ ತಲೆಗೆ ಮೆಂತೆ ಲೇಪ ಮಾಡಿ ವಾಟ್ಸಾಪ್ ನೋಡುತ್ತಾ ಕೂತಿದ್ದೆ. ಅದರಲ್ಲೊಂದು ಹೀಗಿತ್ತು,

ಒಬ್ಬ ಅಜ್ಜ ಸಲೂನಿಗೆ ಹೋದನಂತೆ, ಆ ಅಜ್ಜನ ತಲೇಲಿ ಕೂದಲಿದ್ದಿದ್ದೆ ನಾಲ್ಕು. ಅಜ್ಜನ ತಲೆ ನೋಡಿ ಕೋಪದಲ್ಲಿ ಆ ಕ್ಶೌರಿಕ ಕೇಳಿದನಂತೆ “ನಾನೇನು ನಿಮ್ಮ ತಲೆ ಕೂದಲು ಎಣಿಸಲಾ ಅತವಾ ಕತ್ತರಿಸಲಾ”. ಅದಕ್ಕೆ ಅಜ್ಜ ಅಂದನಂತೆ, “ಎರಡೂ ಬ್ಯಾಡ, ಬಣ್ಣ ಹಾಕಿಬಿಡು” ಅಂತ.

ಈ ರೀತಿಯ ಅಜ್ಜ ನಮಗೆಶ್ಟು ಪ್ರೇರಣೆ ಅಲ್ಲವಾ!

( ಚಿತ್ರ ಸೆಲೆ: wikihow )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: