ಗುಬ್ಬಚ್ಚಿಗಳಿಂದ ಹೀಗೊಂದು ಓಲೆ

– ಶಾಂತ್ ಸಂಪಿಗೆ.

ಸಮಸ್ತ ವಿದ್ಯಾವಂತ ನಾಗರಿಕರಿಗೆ ಗುಬ್ಬಚ್ಚಿಗಳ ನಮಸ್ಕಾರಗಳು,

ನಾವು ಗುಬ್ಬಚ್ಚಿ ಗೆಳೆಯರು, ನಿಮ್ಮ ಮನೆಯ ಹಳೆಯ ಸ್ನೇಹಿತರು. ಓಹ್ ನೆನಪಿಲ್ಲವೆ? ಕ್ಶಮಿಸಿ, ನಿಮ್ಮ ಮನೆಯ ಹಿರಿಯರನ್ನು ಕೇಳಿ, ನಮ್ಮ ಕತೆ ತಿಳಿಯುತ್ತದೆ. ನಾವು ನಿಮ್ಮ ಮನೆಗಳಲ್ಲಿ ತುಂಬ ಆನಂದದಿಂದ ನಮ್ಮ ಬದುಕು ಕಟ್ಟಿಕೊಂಡು ಸುಂದರ ಜೀವನ ನಡೆಸುತ್ತಿದ್ದೆವು. ಆದರೆ ಕಳೆದ 20 ವರ‍್ಶಗಳಿಂದ, ಈ ನಿಮ್ಮ ಅಬಿವ್ರುದ್ದಿಯ ಯುಗ ಯಾವಾಗ ಆರಂಬವಾಯಿತೋ ಆ ದಿನದಿಂದ ನಮ್ಮ ಸಂಕುಲ ವಿನಾಶದ ಹಾದಿ ಹಿಡಿಯಿತು. ಸರಿ ಸುಮಾರು 80% ನಮ್ಮ ಜೀವಸಂಕುಲವನ್ನು ಕಳೆದುಕೊಂಡು ಈಗ ಅಳಿವಿನ ಅಂಚಿನಲ್ಲಿದ್ದೇವೆ. ಹೇಗೆ ಎನ್ನುತ್ತೀರ? ಹೇಳುತ್ತೇವೆ ಕೇಳಿ…

ಹಿಂದೆ ನಿಮ್ಮ ಮನೆಗಳು ನೈಜವಾಗಿ ಪ್ರಕ್ರುತಿಗೆ ಪೂರಕವಾಗಿ ಕಟ್ಟಿದಂತ ಹೆಂಚಿನ ಮನೆಗಳಾಗಿದ್ದವು. ಅದರಲ್ಲಿ ನೀವು ಕೆಳಗಡೆ, ನಾವು ಮೇಲೆ ಆನಂದದಿಂದ ಜೀವನ ನಡೆಸುತ್ತಿದ್ದೆವು. ಆದರೆ ಈಗ ಎಲ್ಲೆಲ್ಲೂ ಕಾಂಕ್ರೀಟ್ ಮನೆಗಳನ್ನು ನಿರ‍್ಮಿಸಿಕೊಂಡು ಬದಲಾದಿರಿ. ಆದರೆ ನಿಮ್ಮ ಮನೆಗಳೇ ಆವಾಸ ಸ್ತಾನವಾಗಿದ್ದ ನಮಗೆ ಜಾಗವಿಲ್ಲದೆ ನಾವು ಅನಾತರಾದೆವು, ಬೀದಿಗೆ ಬಿದ್ದೆವು. ನಾವು ಇಡೀ ದೇಶದ ಮನೆ ಮನೆಗಳಿಂದ ಬೀದಿಗೆ ಬಿದ್ದು ನಮ್ಮವರನ್ನೆಲ್ಲ ಕಳೆದುಕೊಂಡೆವು. ಈ ಸಮಯದಲ್ಲಿ ಕರ‍್ನಾಟಕದ ಕೊಡಗು ಜಿಲ್ಲೆಯ ಮಹಾಜನತೆ ಮಾತ್ರ ನಮ್ಮ ಬಗ್ಗೆ ಚಿಂತಿಸಿ, ಅವರ ಮನೆಗಳಲ್ಲಿ ಹಾಗು ಅಂಗಡಿ ಮುಂದೆ ನಮಗಾಗಿ ಒಂದು ಡಬ್ಬಿಯನ್ನು ಇಟ್ಟು ಅದಕ್ಕೆ ಗುಬ್ಬಚ್ಚಿ ಡಬ್ಬಿ ಎಂದು ಕರೆದು ಅದರಲ್ಲಿ ದಾನ್ಯಗಳನ್ನು ಹಾಗು ನೀರನ್ನು ಇಟ್ಟು ನಮ್ಮನ್ನು ಪೋಶಿಸುತ್ತ ನಮ್ಮ ಉಳಿವಿಗಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇವರಿಗೆ ನಮ್ಮ ಕ್ರುತಜ್ನತೆಗಳು.

ನಮಗೆ ಬೆಚ್ಚನೆ ಮನೆಗಳು ಇಲ್ಲದೆ ಇದ್ದರೂ ಪರವಾಗಿಲ್ಲ, ಹೇಗೋ ಬೀದೀಲಿ ಜೀವನ ನಡೆಸುತ್ತೇವೆ. ಆದರೆ ನಮಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ಏಕೆಂದರೆ, ಮೊದಲು ನೀವೆಲ್ಲ ವರ‍್ಶಕ್ಕೆ ಒಂದುಬಾರಿ ದೀಪಾವಳಿ ಆಚರಿಸುತ್ತಿದ್ದಿರಿ, ಸಿಡಿಮದ್ದು ಸಿಡಿಸುತ್ತಿದ್ದಿರಿ. ಆದರೆ ಈಗ  ನಿಮ್ಮ ನೆಚ್ಚಿನ ನಟನ ಚಿತ್ರ ಶುರುವಾಗುವ ಮುನ್ನ, ನಿಮ್ಮ ನೆಚ್ಚಿನ ತಂಡ ಗೆದ್ದ ನಂತರ, ಚುನಾವಣೆ ಬಂದಾಗ ನಿಮ್ಮ ನಾಯಕರು ಗೆದ್ದಾಗ, ಪ್ರತಿಬಟನೆಗಳು, ಜಾತ್ರೆಗಳು, ಉತ್ಸವಗಳು – ಹೀಗೆ ಪ್ರತಿದಿನ ಸಿಡಿಮದ್ದು ಸಿಡಿಸಿ ಬಾಣ ಬಿರುಸುಗಳನ್ನು ಬಿಟ್ಟು ಸಂಬ್ರಮಿಸುತ್ತೀರಿ. ಆದರೆ ನಾವು ಇದರಿಂದ ಪ್ರತಿನಿತ್ಯ ಸಂಕಟ ಅನುಬವಿಸುತ್ತ ನಮ್ಮ ಸಂಕುಲವನ್ನು ಕಳೆದುಕೊಳ್ಳುತ್ತ ಅನಾತರಾಗುತ್ತಿದ್ದೇವೆ. ನಿಮಗೆ ಬುದ್ದಿ ಹೇಳುವಶ್ಟು ದೊಡ್ಡವರಲ್ಲ ನಾವು, ಆದರೂ ನಮ್ಮ ಒಂದು ವಿನಂತಿ ಎಂದರೆ ನಿಮ್ಮ ಸಂಬ್ರಮ ನಮಗೆ ಮ್ರುತ್ಯುವಾಗಬಾರದು, ಅಶ್ಟೆ.

ನಿಮಗಿದು ತಿಳಿದಿದೆಯೆ? ಮೊದಲು ನಾವು ಹಸಿರು ಉದ್ಯಾನವನಗಳನ್ನು ಕಂಡಾಕ್ಶಣ ತುಂಬ ಸಂತೋಶದಿಂದ ಹೋಗಿ, ಚಿಲಿಪಿಲಿ ಕಲರವ ಸ್ರುಶ್ಟಿಸಿ, ಆನಂದದಿಂದ ಆಹಾರವನ್ನು ತಿಂದು ಕುಶಿಯಾಗಿದ್ದೆವು ಆದರೆ ಈಗ ಹಸಿರೇ ನಮ್ಮ ಉಸಿರನ್ನು ನಿಲ್ಲಿಸುತ್ತಿದೆ. ನೀವು ನಿರ‍್ಮಿಸಿರುವ ಹಸಿರು ಉದ್ಯಾನವನದಲ್ಲಿ ಏನಾದರು ತಿನ್ನಲು ನಮಗೆ ಬಯವಾಗುತ್ತಿದೆ, ಯಾಕೆಂದರೆ ನೀವು ಅದರಲ್ಲಿ ರಾಸಾಯನಿಕವನ್ನು ಸಿಂಪಡಿಸಿರುತ್ತೀರಿ. ನಮ್ಮ ಆಹಾರವೆಲ್ಲ ವಿಶವಾಗಿದೆ. ವಿಶ ಆಹಾರ ಸೇವಿಸಿ ಪ್ರತಿವರ‍್ಶ 7 ಮಿಲಿಯನ್ ಗುಬ್ಬಚ್ಚಿಗಳು ಸಾಯುತ್ತಿವೆ. ನಮಗೆ ಈಗ ಆಹಾರವೇ ಸಿಗುತ್ತಿಲ್ಲ. ಅದು ಸಿಕ್ಕರೂ ವಿಶಪೂರಕವಾಗಿರುತ್ತದೆ. ನೀವೆ ಹೇಳಿ ಈ ಸಮಸ್ಯಗೆ ಪರಿಹಾರ ಏನು?

ನಮಗೆ ವಾಸಿಸಲು ಮನೆ ಇಲ್ಲ, ತಿನ್ನಲು ಆಹಾರವಿಲ್ಲ. ಹಾಗೆ ಈಗ ಬದುಕಲು ಯೋಗ್ಯವಾದ ಸ್ತಳವೂ ಇಲ್ಲದಂತಾಗಿದೆ. ಯಾಕೆಂದರೆ ನಿಮಗೆ ಗೊತ್ತು ಈ ಮೊಬೈಲ್ ಟವರ‍್ಗಳು ಎಶ್ಟು ಸಂಕ್ಯೆಯಲ್ಲಿವೆ ಎಂದು. ನಾವು ಪುಟ್ಟ ಜೀವಿಗಳು, ಈ ರೇಡಿಯೇಶನ್ಗಳನ್ನು ತಡೆದುಕೊಳ್ಳುವ ಶಕ್ತಿಯು ಇಲ್ಲ. ನಿಮ್ಮ ಪುಟ್ಟ ಮಕ್ಕಳೊಂದಿಗೆ ಮೊದಲು ನಾವು ಆಟ ಆಡುತ್ತಿದ್ದೆವು. ಆದರೆ ಈಗ ಎಲ್ಲ ಸಣ್ಣ ಮಕ್ಕಳ ಕೈಯಲ್ಲು ಸ್ಮಾರ‍್ಟ್ ಪೋನುಗಳನ್ನು ನೀಡುತ್ತಿದ್ದೀರಿ. ಇದರ ಪರಿಣಾಮ ನಿಮಗೆ ತಿಳಿದಿಲ್ಲ, ಆದರೆ ನಮ್ಮ ಮಕ್ಕಳನ್ನ ಕಳೆದುಕೊಂಡ ನಮಗೆ ಚೆನ್ನಾಗಿ ತಿಳಿದಿದೆ.

ನಾವು ಈ ಲೋಕದಲ್ಲಿ ಲೆಕ್ಕಕ್ಕೆ ಇಲ್ಲದವರು ನಮ್ಮ ಕಶ್ಟ, ಬಯವನ್ನು ಯಾರೂ ಅರಿಯುವುದಿಲ್ಲ. ನಿಮ್ಮೆದುರು ತಿರುಗಿಬಿದ್ದು ನ್ಯಾಯ ಕೇಳುವ ಪಡೆಯುವ ದೈರ‍್ಯವೂ ನಮಗಿಲ್ಲ. ಆದರೆ ನೀವು ವಿದ್ಯಾವಂತರು, ಎಲ್ಲ ಜೀವರಾಶಿಗಳಿಗಿಂತ ಶ್ರೇಶ್ಟ ಎನಿಸಿಕೊಂಡವರು ಅಲ್ಲವೆ? ನಮ್ಮ ಸಂತತಿ ಉಳಿವಿಗೆ ದಿನದಲ್ಲಿ ಒಂದು ಕ್ಶಣವಾದರೂ ಚಿಂತಿಸಿದರೆ ನಿಮ್ಮ ಕರುಣೆಯೆಂಬ ಮರದ ಕೆಳಗೆ ನಮ್ಮ ಬದುಕಿದೆ.

ಇಂತಿ,
ಗುಬ್ಬಚ್ಚಿಗಳು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: