ಎಲ್ಲಿದ್ದೇನೆ ನಾನು…?
– ಅಜಯ್ ರಾಜ್.
(ಬರಹಗಾರರ ಮಾತು: ಅದೆಶ್ಟೋ ಬಾರಿ ಬದುಕಲ್ಲಿ ನಾನು ಯಾರು? ನನ್ನ ಇರುವಿಕೆಯ ಅರ‍್ತವೇನು? ಹೀಗೆ ಹಲವು ಪ್ರಶ್ನೆಗಳು ನನ್ನನ್ನು ತಿಂಗಳುಗಟ್ಟಲೆ ಕಾಡಿವೆ. ಅದೆಶ್ಟೇ ಚಿಂತಿಸಿ, ತರ‍್ಕ ಮಾಡಿದರೂ ಉತ್ತರಗಳು ಗೊಂದಲ ಇಲ್ಲವೇ ಅನರ‍್ತ. ಈ ಮದ್ಯೆ ನನ್ನನ್ನೇ ನಾನು ಪ್ರಶ್ನಿಸಿಕೊಂಡು, ನನ್ನ ಬಾವನೆಗಳನ್ನು ಅಕ್ಶರ ರೂಪಕ್ಕಿಳಿಸಿದಾಗ ಮೂಡಿದ್ದು ಈ ಸಾಲುಗಳು)
ಎಲ್ಲಿದ್ದೇನೆ ನಾನು?
ಸುಂದರ ಜಗದ ಕಲ್ಪನೆಯೊಳಗೋ?
ಕಲ್ಪನಾತೀತ ಜಗದೊಳಗೋ?
ಈ ಗೌಪ್ಯ ಗೊಂದಲದಿ ಸಿಲುಕಿ ಹೈರಾಣಾಗಿಹೆನು!
ವಿಕ್ರುತ-ಸುಕ್ರುತ ಮನಸ್ಸುಗಳ ನಡುವೆ
ಅಸ್ಪ್ರುಶ್ಯನಂತವನು
ನನ್ನದೇ ಕಟ್ಟುಪಾಡುಗಳ ನಿರಂತರ ಕೈದಿ!
ಎಡಪಂತೀಯನೋ? ಬಲಪಂತೀಯನೋ? ಯಾರು ನಾನು…?
ದಲಿತ-ಬಲಿತರ ನಡುವಲಿ ನಾನೆಂತವನು?
ನನ್ನ ಈ ಬದುಕೇ
ವರ‍್ಣರಹಿತ ಮನಸ್ಸಿನ ವಿಹ್ವಲ ಜಿಜ್ನಾಸೆ
ಕಲಿತ ಸುಲಲಿತರ ವಾಗ್ವಾದದೊಳಗಿನ
ಕಿಚ್ಚು-ಕ್ರೋದದ ಒತ್ತಾಸೆ!
ಬರಿದಾದ ಮಡಿಲು, ಕಿರಿದಾದ ಹ್ರುದಯ
ದುರಬಿಲಾಶೆಗಳ ಮನೆಯೊಡೆಯ!!
ಅನುಚಿತನೋ..? ಅತಿರೇಕದವನೋ..?
ಸಂಕುಚಿತತೆಯ ಸರಹದ್ದಿನಲಿ ನಾನೆಶ್ಟರವನು?
ಜೀವನ ನೌಕೆಯ ನಾವಿಕ
ಗುಂಡಿಗೆಯ ಗೂಡಲ್ಲಿ
ಕಾಣದ ನೆನಪುಗಳ ಹೊತ್ತು ಮುನ್ನುಗುತಿಹ
ನತದ್ರುಶ್ಟ ಪಯಣಿಗ!!!
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು