ಅಮುಗೆ ರಾಯಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

——————————————————

ಅಮುಗೆ ರಾಯಮ್ಮನು  12 ನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಕನ್ನಡದ ಕಾವ್ಯ ಮತ್ತು ಪುರಾಣಗಳಲ್ಲಿರುವ ಸಂಗತಿಗಳನ್ನು ಗಮನಿಸಿ, ಸಾಹಿತ್ಯ ಚರಿತ್ರೆಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ.

ಹೆಸರು: ಅಮುಗೆ ರಾಯಮ್ಮ

ಊರು: ಸೊನ್ನಲಾಪುರ

ಗಂಡ: ಅಮುಗೆ ದೇವಯ್ಯ

ಕಸುಬು: ನೆಯ್ಗೆಯ ಕಾಯಕ

ದೊರೆತಿರುವ ವಚನಗಳು: 116(ಒಂದು ನೂರ ಹದಿನಾರು)

ವಚನಗಳ ಅಂಕಿತನಾಮ: ಅಮುಗೇಶ್ವರಾ
——————————————————

ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳ ಮುಖವ ನೋಡಲಾಗದು
ಜಂಗಮವಾಗಿ ಜಗದಿಚ್ಛೆಯ ನುಡಿವ
ಜಂಗುಳಿಗಳ ಮುಖವ ನೋಡಲಾಗದು
ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು
ಕಾಣಾ ಅಮುಗೇಶ್ವರಲಿಂಗವೆ.

ಸರ‍್ವಸಂಗಪರಿತ್ಯಾಗಿಗಳಂತೆ ಉಡುಗೆತೊಡುಗೆಯನ್ನು ತೊಟ್ಟು , ನಯವಾದ ನಡೆನುಡಿಗಳಿಂದ ಜನಸಮುದಾಯವನ್ನು ಮರುಳುಗೊಳಿಸುತ್ತ , ಒಳಗೊಳಗೆ ಅಂದರೆ ಜನರ ಕಣ್ಣಿಗೆ ಕಾಣದಂತೆ ಕೆಟ್ಟಕೆಲಸಗಳಲ್ಲಿ ತೊಡಗಿರುವಂತಹ ವಂಚಕರ ಜತೆಯಲ್ಲಿ ಯಾವುದೇ ಬಗೆಯ ಒಡನಾಟವನ್ನು ಇಟ್ಟುಕೊಳ್ಳಬಾರದು/ವ್ಯವಹಾರವನ್ನು ಮಾಡಬಾರದು ಎಂಬ ಎಚ್ಚರಿಕೆಯನ್ನು ಈ ವಚನದಲ್ಲಿ ನೀಡಲಾಗಿದೆ.

( ಕಾವಿ=ಕೆಂಪು ಬಣ್ಣದ ಮಣ್ಣು/ಕೆಂಪನೆಯ ಬಣ್ಣ; ಕಾಷಾಯ+ಅಂಬರವ; ಕಾಷಾಯ=ಕೆಂಪನೆಯ ಬಣ್ಣದ; ಅಂಬರ=ಬಟ್ಟೆ/ಅರಿವೆ/ವಸ್ತ್ರ; ಕಾವಿ ಕಾಷಾಂಬರ=ಕೆಂಪನೆಯ ಬಣ್ಣದ ಬಟ್ಟೆ/ಉಡುಗೆ; “ಕೆಂಪನೆಯ ಬಣ್ಣ” ಎಂಬ ಒಂದೇ ಬಗೆಯ ತಿರುಳನ್ನು ಹೊಂದಿರುವ ‘ಕಾವಿ’ಮತ್ತು ‘ಕಾಷಾಯ’ ಎಂಬ ಪದಗಳು ಒಟ್ಟಿಗೆ ಬಳಕೆಯಾಗಿವೆ; ಹೊದ್ದು=ಉಟ್ಟುಕೊಂಡು/ಮಯ್ ಮೇಲೆ ಹಾಕಿಕೊಂಡು; ಕಾವಿ ಕಾಷಾಂಬರವ ಹೊದ್ದುಕೊಳ್ಳುವುದು=ಆಸ್ತಿಪಾಸ್ತಿ/ಹಣಕಾಸು/ಸಂಪತ್ತಿನ ಒಡೆತನವನ್ನು ವ್ಯಕ್ತಿಗತವಾಗಿ ನಿರಾಕರಿಸುವುದರ ಜತೆಗೆ , ಹೆಣ್ಣಿನೊಡನೆ ಕಾಮದ ನಂಟನ್ನು ಬಿಟ್ಟು , ಹುಟ್ಟಿ ಬೆಳೆದ ಕುಟುಂಬದ ನೆಲೆಯಿಂದ ದೂರಸರಿದು , ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುವ ನಿಲುವನ್ನು ತಳೆದ ಸಂಕೇತವಾಗಿ ಕಾವಿಬಟ್ಟೆಯನ್ನು ಉಟ್ಟುಕೊಳ್ಳುವ ಆಚರಣೆಯು ನಮ್ಮ ಸಮಾಜದಲ್ಲಿದೆ. ರಿಸಿಮುನಿಗಳು, ಜಾತಿ ಜಗದ್ಗುರುಗಳು ಮತ್ತು ದೇವಮಾನವರು ಕಾವಿಬಟ್ಟೆಯನ್ನು ಉಡುತ್ತಾರೆ; ಕಾಮ=ಹೆಣ್ಣು-ಗಂಡಿನ ದೇಹಗಳ ನಂಟು/ಮಿಲನ; ವಿಕಾರ=ಈಗಿರುವ ರೂಪ/ಆಕಾರ ಹಾಳಾಗಿ ಕೆಟ್ಟ ರೂಪವನ್ನು ತಳೆಯುವುದು/ಬದಲಾವಣೆ/ಮಾರ‍್ಪಾಡು; ಕಾಮವಿಕಾರ=ಹೆಣ್ಣಿನ ದೇಹದೊಡನೆ ಕೂಡಬೇಕೆಂಬ ಒಳಮಿಡಿತದಿಂದ ಮಯ್ ಮನಗಳು ನೂರಾರು ಬಗೆಗಳಲ್ಲಿ ಹಂಬಲಿಸುವುದು/ಕುದಿಯುತ್ತಿರುವುದು; ತಿರುಗುವ=ಅಲೆಯುವ/ಹುಡುಕಾಡುವ/ಹೊಂಚುಹಾಕುವ; ಕರ್ಮಿ=ಕೆಟ್ಟ/ನೀಚ/ಪಾಪದ ಕೆಲಸಗಳಲ್ಲಿ ತೊಡಗಿದವನು; ನೋಡಲು+ಆಗದು; ಆಗದು=ಆಗುವುದಿಲ್ಲ; ಕರ್ಮಿಗಳ ಮುಖವ ನೋಡಲಾಗದು=ಒಳಗೊಂದು ಹೊರಗೊಂದು ಬಗೆಯ ನಡೆನುಡಿಗಳನ್ನುಳ್ಳ ವ್ಯಕ್ತಿಗಳೊಡನೆ ಯಾವುದೇ ರೀತಿಯಲ್ಲಿಯೂ ವ್ಯವಹರಿಸಬಾರದು/ಒಡನಾಡಬಾರದು;

ಜಂಗಮ+ಆಗಿ; ಜಂಗಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಲ್ಲಿ ಶಿವನನ್ನು ಕಾಣುವ ಮತ್ತು ಕಾಯಕದ ಬೆಲೆಯನ್ನು ಅರಿತಿರುವ ವ್ಯಕ್ತಿ; ಜಂಗಮವಾಗಿ=ಒಳ್ಳೆಯ ನಡೆನುಡಿಗಳಿಂದ ಕೂಡಿದವನಾಗಿ ಮತ್ತು ಶಿವನನ್ನು ಒಲಿದಿರುವ ವ್ಯಕ್ತಿಯಾಗಿದ್ದುಕೊಂಡು; ಜಗದ+ಇಚ್ಛೆಯ; ಜಗ=ಲೋಕ/ಪ್ರಪಂಚ/ಜನಸಮುದಾಯ; ಇಚ್ಛೆ=ಆಸೆ/ಬಯಕೆ/ಹಂಬಲ; ನುಡಿ=ಹೇಳು; ಜಂಗುಳಿ=ನಾಡಾಡಿ/ಅಲೆಮಾರಿ/ಎಲ್ಲಿಯೂ ಒಂದೆಡೆ ನಿಲ್ಲದೆ ಯಾವಾಗಲೂ ಊರಿಂದೂರಿಗೆ ಅಲೆಯುತ್ತಿರುವವನು; ಜಂಗಮವಾಗಿ ಜಗದಿಚ್ಛೆಯ ನುಡಿವ ಜಂಗುಳಿಗಳು=ಹೊರನೋಟಕ್ಕೆ ಶಿವನನ್ನು ಓಲಯಿಸುವ/ಸತ್ಯರೂಪಿಯಾದ ಶಿವನಿಗಾಗಿ ಹಂಬಲಿಸುವವನಂತೆ ನಟಿಸುತ್ತಾ, ಸಮಾಜದಲ್ಲಿ ಜಾತಿಬಲ/ಹಣಬಲ/ಗದ್ದುಗೆಯ ಬಲವುಳ್ಳವರನ್ನು ಹಾಡಿಹೊಗಳುತ್ತ , ಅವರ ತಾಳಕ್ಕೆ ತಕ್ಕಂತೆ ವರ‍್ತಿಸುವ/ನಡೆದುಕೊಳ್ಳುವ ಜಂಗಮ ವೇಶದಲ್ಲಿರುವ ನೀಚ ವ್ಯಕ್ತಿಗಳು; ‘ಜಂಗುಳಿ’ ಎಂಬ ಪದ ಬಯ್ಗುಳವಾಗಿ ಬಳಕೆಯಾಗಿದೆ;

ಲಿಂಗ+ಐಕ್ಯರು+ಎನಿಸಿಕೊಂಡು; ಲಿಂಗ=ಶಿವನ ಸಂಕೇತವಾದ ಕಲ್ಲು/ಮಣ್ಣು/ಮರದ ವಿಗ್ರಹ; ಐಕ್ಯ=ಒಂದಾಗುವುದು/ಲೀನವಾಗುವುದು/ಸೇರಿಕೊಳ್ಳುವುದು/ಬೆರೆತುಹೋಗುವುದು; ಲಿಂಗೈಕ್ಯರು=ಒಳ್ಳೆಯ ನಡೆನುಡಿಗಳಿಂದ ಬಾಳುವುದರಲ್ಲಿ ದೇವರೆಂದು ನಂಬಿರುವ ಶಿವನನ್ನು ಕಾಣುತ್ತಿರುವ ವ್ಯಕ್ತಿಗಳು; ಅಂಗ=ದೇಹ/ಶರೀರ/ಮಯ್; ಅಂಗವಿಕಾರ=ಮಯ್ ಮನಗಳಲ್ಲಿ ಕೆರಳುವಂತಹ ಕೆಟ್ಟಬಯಕೆ/ಕಾಮನೆ/ಹಂಬಲ; ದ್ರೋಹಿ=ವಂಚಕ/ಮೋಸಗಾರ/ಕೇಡಿಗ/ನಂಬಿಸಿ ಕಯ್‍ಕೊಡುವವನು; ಲಿಂಗದ್ರೋಹಿ=ಶಿವನ ಹೆಸರಿನಲ್ಲಿ ಜನಸಮುದಾಯವನ್ನು ವಂಚಿಸುತ್ತಿರುವ ವ್ಯಕ್ತಿ; ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳು=ಸಮಾಜದಲ್ಲಿ ಜನರ ಕಣ್ಣಿಗೆ ಶಿವನನ್ನು ಒಲಿದವರಂತೆ ಹೊರನೋಟಕ್ಕೆ ಕಾಣಿಸಿಕೊಳ್ಳುತ್ತಿದ್ದು , ಒಳಗೊಳಗೆ ಅಂದರೆ ಜನರಿಗೆ ಗೊತ್ತಾಗದಂತೆ ಕೆಟ್ಟಕೆಲಸಗಳಲ್ಲಿ ಮಗ್ನರಾಗಿ , ತಮ್ಮ ಮಯ್ ಮನಗಳಲ್ಲಿ ತುಡಿಯುತ್ತಿರುವ ಕಾಮನೆಗಳನ್ನು ಹಿಂಗಿಸಿಕೊಳ್ಳುತ್ತಿರುವ ವಂಚಕರು; ಕಾಣ್+ಆ; ಕಾಣ್=ನೋಡು/ತಿಳಿ; ಕಾಣಾ=ನೋಡುವಂತಹವನಾಗು; ಅಮುಗೇಶ್ವರ=ಅಮುಗೆ ರಾಯಮ್ಮನ ಮೆಚ್ಚಿನ ದೇವರ ಹೆಸರು/ಅಮುಗೆ ರಾಯಮ್ಮನ ವಚನಗಳ ಅಂಕಿತನಾಮ.)

 

ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ
ಅನ್ಯರ ಕೂಡೆ ಬಣ್ಣಬಚ್ಚಣೆಯ ಮಾತಾಡುವ
ಅಣ್ಣ ಅಪ್ಪ ಎಂಬ ಕುನ್ನಿಗಳ
ಮೆಚ್ಚುವನೆ ಅಮುಗೇಶ್ವರಲಿಂಗವು.

ಯಾವುದೇ ವ್ಯಕ್ತಿಯಾಗಲಿ ತಾನು ಮಾಡುವ ಕೆಟ್ಟಕೆಲಸವನ್ನು ಇತರರ ಮುಂದೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ ತನ್ನ ನೀಚತನವನ್ನು ಮುಚ್ಚಿಟ್ಟುಕೊಂಡು , ಅತಿ ವಿನಯದಿಂದ ಕೂಡಿದ ಸೋಗಿನ ಮಾತುಗಳ ಮೂಲಕ ಜನರನ್ನು ಮರುಳುಗೊಳಿಸುವುದರಲ್ಲಿ ತೊಡಗಿರುತ್ತಾನೆ. ಆದುದರಿಂದ ವ್ಯಕ್ತಿಗಳ ಗುಣ/ಅವಗುಣಗಳನ್ನು ಅವರು ಮಾಡುವ ಒಳಿತು/ಕೆಡುಕಿನ ಕೆಲಸಗಳಿಂದ ತಿಳಿಯಬೇಕೆ ಹೊರತು ಅವರು ಆಡುವ ಮಾತುಗಳಿಂದಲ್ಲ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಕನ್ನ+ಅನ್+ಇಕ್ಕುವ; ಕನ್ನ=ಗೋಡೆಯಲ್ಲಿ ಕೊರೆದಿರುವ ಕಂಡಿ/ರಂದ್ರ; ಅನ್=ಅನ್ನು; ಇಕ್ಕು=ಹಾಕು; ಕನ್ನವನಿಕ್ಕುವುದು=ಮನೆಯಲ್ಲಿರುವ ಒಡವೆವಸ್ತುಗಳನ್ನು ಕಳವು ಮಾಡುವ ಉದ್ದೇಶದಿಂದ ಒಬ್ಬ ವ್ಯಕ್ತಿಯು ನುಸುಳಿ ಒಳನುಗ್ಗಲು ಅನುವಾಗುವಂತೆ ಮನೆಯ ಗೋಡೆಯಲ್ಲಿ ಕಂಡಿಯನ್ನು ಕೊರೆಯುವುದು; ಕಳ್ಳ=ಇತರರ ಒಡವೆವಸ್ತುಗಳನ್ನು ಅಪಹರಿಸುವವನು/ದೋಚುವವನು/ಲಪಟಾಯಿಸುವವನು; ಕನ್ನ+ಕಳ್ಳನ್+ಎಂದು; ಕನ್ನಗಳ್ಳ=ಗೋಡೆಯಲ್ಲಿ ಕಂಡಿಯನ್ನು ಕೊರೆದು ಕಳವನ್ನು ಮಾಡುವ ವ್ಯಕ್ತಿ; ಉಸುರು=ಹೇಳು/ನುಡಿ; ಉಸುರುವನೆ=ಹೇಳುತ್ತಾನೆಯೆ/ನುಡಿಯುತ್ತಾನೆಯೆ ; ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ=ಕೆಟ್ಟ ಕೆಲಸಗಳನ್ನು ಮಾಡುವ ಯಾವುದೇ ವ್ಯಕ್ತಿಯು ತನ್ನನ್ನು ತಾನು ಕೆಟ್ಟವನೆಂದು ಹೇಳಿಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ ಸಮಾಜದಲ್ಲಿ ತನ್ನನ್ನು ಒಳ್ಳೆಯ ವ್ಯಕ್ತಿಯೆಂದೇ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ ಎಂಬ ಇಂಗಿತವನ್ನು ಈ ಮಾತುಗಳು ಸೂಚಿಸುತ್ತವೆ;

ಅನ್ಯ=ಬೇರೆ/ಮತ್ತೊಂದು; ಅನ್ಯರ=ಬೇರೆಯವರ/ಇತರರ; ಕೂಡೆ=ಜತೆಯಲ್ಲಿ/ಸಂಗಡದಲ್ಲಿ/ಒಡನಾಟದಲ್ಲಿ; ಬಣ್ಣ=ರಂಗು/ಅಂದ/ಚೆಂದ/ಚೆಲುವು; ಬಚ್ಚಣೆ=ಸೋಗು/ತೋರಿಕೆಯ ನಟನೆ; ಮಾತು+ಆಡುವ; ಬಣ್ಣಬಚ್ಚಣೆಯ ಮಾತು=ಇತರರನ್ನು ಮರಳುಮಾಡುವಂತೆ ಆಡುವಂತಹ ತೋರಿಕೆಯ/ಸೋಗಿನ ಮಾತುಗಳು; ಎಂಬ=ಎನ್ನುವ/ಎಂದು ನುಡಿಯುವ; ಅಣ್ಣ ಅಪ್ಪ ಎಂಬ=ಇತರರೊಡನೆ ಮಾತನಾಡುವಾಗ, ಅವರ ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ ಇಲ್ಲವೇ ಅವರಿಂದ ತಮಗೆ ಬೇಕಾದ ಒಡವೆವಸ್ತುಗಳನ್ನು ಪಡೆಯಲೆಂದು ಅತಿಯಾದ ಒಲವು/ನಲಿವು/ವಿನಯವನ್ನು ತೋರಿಸುತ್ತಾ, ” ಅಣ್ಣ/ಅಪ್ಪ ” ಎಂಬ ಹಿರಿಯತನವನ್ನು ಸೂಚಿಸುವ ಪದಗಳನ್ನಾಡುವುದು; ಕುನ್ನಿ=ನಾಯಿಮರಿ/ನಾಯಿ ; ಮೆಚ್ಚು=ಒಲಿ/ಹೊಗಳು/ಕೊಂಡಾಡು/ಒಪ್ಪು ; ಮೆಚ್ಚುವನೆ=ಮೆಚ್ಚುತ್ತಾನೆಯೆ; ಅಣ್ಣ ಅಪ್ಪ ಎಂಬ ಕುನ್ನಿಗಳ ಮೆಚ್ಚುವನೆ=ಬಣ್ಣಬಣ್ಣದ ಮಾತುಗಳನ್ನಾಡುತ್ತಾ ಜನರನ್ನು ವಂಚಿಸುವ ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಗಳನ್ನು ದೇವರಾದ ಅಮುಗೇಶ್ವರನು ಒಪ್ಪುವುದಿಲ್ಲ. ಏಕೆಂದರೆ ದೇವರು ಮೆಚ್ಚಿಕೊಳ್ಳುವುದು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಿಜದ ನಡೆನುಡಿಯುಳ್ಳವರನ್ನು ಮಾತ್ರ ಎಂಬ ಇಂಗಿತವನ್ನು ಈ ವಾಕ್ಯ ಸೂಚಿಸುತ್ತದೆ. ‘ ಕುನ್ನಿ ‘ ಎಂಬ ಪದವನ್ನು ” ನೀಚ/ಕೇಡಿ/ವಂಚಕ ” ಎಂಬ ರೂಪಕದ ತಿರುಳಿನಲ್ಲಿ ಬಯ್ಗುಳವಾಗಿ ಬಳಸಲಾಗಿದೆ. )

 

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ
ಎನ್ನ ಮನದಲ್ಲಿದ್ದ ಮಾಯಾ ಪ್ರಪಂಚುವ
ಕೆಡಿಸುವವರನಾರನೂ ಕಾಣೆನಯ್ಯಾ
ಆದ್ಯರ ವೇದ್ಯರ ವಚನಗಳಿಂದ
ಅರಿದೆವೆಂಬರು ಅರಿಯಲಾರರು ನೋಡಾ
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರಲಿಂಗವ ನಾನೆ ಅರಿಯಬೇಕು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಬರುವ ಎಡರುತೊಡರುಗಳನ್ನು ತಾನೇ ಎದುರಿಸಿ, ತನ್ನನ್ನು ಕಾಡುವ ನೋವು/ಸಂಕಟ/ಆಪತ್ತನ್ನು ನಿವಾರಿಸಿಕೊಂಡು, ತನ್ನ ಮಯ್ ಮನಗಳಲ್ಲಿ ತುಡಿಯುವ ಒಳಮಿಡಿತಗಳನ್ನು ತಾನೇ ಹತೋಟಿಯಲ್ಲಿಟ್ಟುಕೊಂಡು , ತನ್ನ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವ ಹೊಣೆಗಾರಿಕೆಯನ್ನು ತಾನೇ ಹೊರಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಎನ್ನ=ನನ್ನ; ಕಣ್ಣು+ಒಳಗಣ; ಒಳಗಣ=ಒಳಗಿರುವ/ಒಳಗೆ ಚುಚ್ಚಿಕೊಂಡಿರುವ; ಕಟ್ಟಿಗೆ=ಮರದ ತೆಳ್ಳಗಿನ ಹಾಗೂ ಚಿಕ್ಕದಾದ ಚೂರು/ಸಿವುರು/ಚೆಕ್ಕೆ ; ಮುರಿವವರನು+ಆರನೂ; ಮುರಿ=ಕೀಳು/ಈಚೆಗೆ ತೆಗೆ; ಆರು=ಯಾರು; ಆರನೂ=ಯಾರೊಬ್ಬರನ್ನೂ; ಕಾಣ್+ಎ; ಕಾಣು=ನೋಡು; ಕಾಣೆ=ನೋಡಿಲ್ಲ/ಕಂಡಿಲ್ಲ; ಕಾಲ್+ಒಳಗಣ; ಕಾಲೊಳಗಣ=ಪಾದಕ್ಕೆ ಹೊಕ್ಕಿಕೊಂಡಿರುವ; ಮುಳ್ಳ=ಮುಳ್ಳನ್ನು; ಮುಳ್ಳು+ಅ; ಮುಳ್ಳು=ಹರಿತವಾದ ಮೊನೆಯುಳ್ಳ ವಸ್ತು; ತೆಗೆವವರು+ಆರನೂ; ತೆಗೆ=ಈಚೆಗೆ ಕೀಳು/ಹೊರಕ್ಕೆ ಬರುವಂತೆ ಮಾಡು ;

ಅಂಗದಲ್ಲಿ+ಇದ್ದ; ಅಂಗ=ದೇಹ/ಶರೀರ/ಮಯ್; ಇದ್ದ=ಇರುವ/ನೆಲೆಗೊಂಡಿರುವ; ಅಹಂಕಾರ=ಎಲ್ಲವೂ ನನ್ನಿಂದಲೇ ನಡೆಯುತ್ತಿದೆ/ನಾನೇ ಎಲ್ಲರಿಗಿಂತ ಮೇಲು ಎಂಬ ಒಳಮಿಡಿತ/ನಾನತ್ವ-ಮಯ್ಯಿನ ಅಂದ ಮತ್ತು ಕಸುವು/ಕಲಿತ ವಿದ್ಯೆ/ಗಳಿಸಿದ ಸಂಪತ್ತು/ಪಡೆದಿರುವ ಗದ್ದುಗೆ/ಸಮಾಜದಲ್ಲಿರುವ ಜಾತಿಮತಗಳ ನೆಲೆಯಲ್ಲಿ ತಾನೇ ಇತರರಿಗಿಂತ ದೊಡ್ಡವನು/ಮೇಲಿನವನು ಎಂಬ ಒಳಮಿಡಿತದಿಂದ ಕೂಡಿದ ಸೊಕ್ಕಿನ/ಗರ‍್ವದ ನಡೆನುಡಿ; ಸುಡುವವರನು+ಆರನೂ; ಸುಡು=ಬೆಂಕಿಯಲ್ಲಿ/ಉರಿಯಲ್ಲಿ ಬೇಯಿಸು/ನಾಶಪಡಿಸು/ಇಲ್ಲದಂತೆ ಮಾಡು;

ಮನದಲ್ಲಿ+ಇದ್ದ; ಮನ=ಮನಸ್ಸು; ಮಾಯಾ=ಮಾಯೆಯಿಂದ ಕೂಡಿದ; ಮಾಯೆ=ಮಯ್ ಮನಗಳಲ್ಲಿ ಬಯಕೆಗಳನ್ನು ಕೆರಳಿಸಿ, ತಮ್ಮತ್ತ ಸೆಳೆಯುವಂತಹ ವಸ್ತು/ಜೀವಿ/ಸಂಗತಿಗಳು; ಪ್ರಪಂಚು=ಬದುಕು/ಸಂಸಾರ/ಜೀವನ; ಪ್ರಪಂಚುವ=ಪ್ರಪಂಚವನ್ನು/ಬದುಕನ್ನು/ಜೀವನವನ್ನು; ಮಾಯಾಪ್ರಪಂಚ=ಮಾನವ ಜೀವಿಗಳ ಮಯ್ ಮನಗಳಲ್ಲಿ ಬಗೆಬಗೆಯಾದ ವ್ಯಾಮೋಹಗಳನ್ನು ಉಂಟುಮಾಡಿ ಕಾಮನೆಗಳನ್ನು ಕೆರಳಿಸಿ, ತೊಳಲಾಡುವಂತೆ ಮಾಡುವ ವಸ್ತು/ಜೀವಿ/ಸಂಗತಿಗಳಿಂದ ತುಂಬಿರುವ ಜಗತ್ತು/ಬದುಕು/ಜೀವನ; ಕೆಡಿಸುವವರನು+ಆರನೂ; ಕೆಡಿಸು=ನಾಶಗೊಳಿಸು/ಅಳಿಸಿಹಾಕು/ಇಲ್ಲದಂತೆ ಮಾಡು; ಕಾಣೆನ್+ಅಯ್ಯಾ; ಕಾಣೆನು=ನೋಡಿಲ್ಲ/ಕಂಡಿಲ್ಲ; ಅಯ್ಯಾ=ವ್ಯಕ್ತಿಗಳೊಡನೆ ಮಾತನಾಡುವಾಗ ಒಲವು ನಲಿವಿನ ಸೂಚಕವಾಗಿ ಬಳಸುವ ಪದ ;

ಆದ್ಯರು=ಹಿಂದಿನವರು/ಪೂರ‍್ವಿಕರು/ಹಿರಿಯರು; ವೇದ್ಯರು=ತಿಳಿದವರು/ಅರಿತವರು/ಲೋಕದ ನಡೆನುಡಿಗಳನ್ನು ಒರೆಹಚ್ಚಿ ನೋಡಿ, ಯಾವುದು ಒಳಿತು/ಯಾವುದು ಕೆಡುಕು ಎಂಬುದನ್ನು ಜನಸಮುದಾಯಕ್ಕೆ ಹೇಳಿದವರು; ವಚನಗಳ್+ಇಂದ; ವಚನ=ನುಡಿ/ಮಾತು; ಅರಿದೆವು+ಎಂಬರು; ಅರಿ=ತಿಳಿ; ಅರಿದೆವು=ತಿಳಿದುಕೊಂಡೆವು/ಅರಿತುಕೊಂಡೆವು; ಎಂಬರು=ಎನ್ನುವವರು/ಎಂದು ಹೇಳುವವರು; ಅರಿಯಲ್+ಆರರು; ಆರು=ಶಕ್ತಿಯುಳ್ಳವನಾಗು/ಕಸುವು ಉಳ್ಳವನಾಗು; ಆರರು=ಶಕ್ತಿಯಿಲ್ಲದವರು ; ಅರಿಯಲ್=ತಿಳಿಯಲು ; ಅರಿಯಲಾರರು=ತಿಳಿಯಲಾರರು/ತಿಳಿಯುವದಕ್ಕೆ ಆಗುವುದಿಲ್ಲ ; ನೋಡು+ಆ; “ಆದ್ಯರ ವೇದ್ಯರ ವಚನಗಳಿಂದ ಅರಿದೆವೆಂಬರು ಅರಿಯಲಾರರು ನೋಡಾ” ಎಂಬ ಈ ನುಡಿಗಳು ಯಾವುದೇ ಒಬ್ಬ ವ್ಯಕ್ತಿಯು ಇತರರು ಆಡಿರುವ ನುಡಿಗಳನ್ನು ಕೇಳಿದ ಮಾತ್ರಕ್ಕೆ ಇಲ್ಲವೇ ಬರೆದಿರುವ ವಿಚಾರಗಳನ್ನು ಓದಿದ ಮಾತ್ರಕ್ಕೆ ಅವನಲ್ಲಿರುವ ಕೆಟ್ಟಗುಣಗಳು ತೊಲಗುವುದಿಲ್ಲ. ಕೇಳುವುದರಿಂದ/ಓದುವುದರಿಂದ ಪಡೆದ ಅರಿವನ್ನು ವ್ಯಕ್ತಿಯು ತನ್ನ ನಿಜದ ಬದುಕಿನಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ವಚನಗಳನ್ನು ಅರಿತಂತಾಗುತ್ತದೆ ಎಂಬ ಇಂಗಿತವನ್ನು ಸೂಚಿಸುತ್ತಿವೆ;

ನಾನೆ=ನನ್ನಿಂದಲೇ/ನಾನು ಮಾಡುವ ಪ್ರಯತ್ನದಿಂದಲೇ/ನಾನು ಮಾಡುವ ಕಾಯಕದಿಂದಲೇ/ನಾನು ತೊಡುವ ಸಂಕಲ್ಪದಿಂದಲೇ/ನನ್ನ ಪರಿಶ್ರಮದಿಂದಲೇ/ನನ್ನ ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಆಡುವ ಮಾತು ಮತ್ತು ಕೆಲಸಗಳಿಂದಲೇ; ಅಂಗದಲ್ಲಿ+ಇಪ್ಪ; ಇಪ್ಪ=ಇರುವ/ನೆಲೆಗೊಂಡಿರುವ; ಮನದಲ್ಲಿ+ಇಪ್ಪ; ಕಳೆ=ಬಿಡು/ತೊರೆ/ತಳ್ಳು ; ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು=ಮನದಲ್ಲಿ ಯಾವಾಗಲೂ ತುಡಿಯುತ್ತಿರುವ ಬಯಕೆ/ಕಾಮನೆ/ವ್ಯಾಮೋಹವನ್ನು ಹತೋಟಿಯಲ್ಲಿಟ್ಟುಕೊಂಡು, ಕೆಟ್ಟ ಆಶೆಗಳನ್ನು ಅಂದರೆ ನನ್ನನ್ನು ಒಳಗೊಂಡಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟುಮಾಡುವಂತಹ ಒಳಮಿಡಿತಗಳನ್ನು ಬಿಡಬೇಕು/ತೊರೆಯಬೇಕು; ಕಳೆಯಬೇಕು=ಬಿಡಬೇಕು/ತೊರೆಯಬೇಕು/ಹೊರದೂಡಬೇಕು; ಅಮುಗೇಶ್ವರಲಿಂಗವ ಅರಿಯಬೇಕು=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳಬೇಕು.)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks