ಕತೆ: ನಡುಗಡ್ಡೆ

ಪ್ರಶಾಂತ ಎಲೆಮನೆ.

ಶಾಂತ ನೀರವ ನಡುಗಡ್ಡೆ(island) ಅದು, ಅದರಂತೆ ಇನ್ನೊಂದು ಇರಲಿಕ್ಕಿಲ್ಲ. ಪುಟ್ಟ ದೋಣಿಯೊಂದು ತೇಲಿ ಆ ನಡುಗಡ್ಡೆ ಸೇರಿತ್ತು. ಅವನನ್ನ ದಡ ಸೇರಿಸಿದರೂ ಅವನಿಗೆ ಎಚ್ಚರವಿಲ್ಲ. ನೀರ ಅಲೆ ಮುಕಕ್ಕೆ ತಾಗಿ ಎಚ್ಚರಗೊಂಡ. ತಾನಿಲ್ಲಿಗೆ ಹೇಗೆ ಬಂದೆ? ಮುಂದೆ ಹೇಗೆ? ಇದು ಯಾವ ಜಾಗ? ಎಲ್ಲಾ ಪ್ರಶ್ನೆಗಳಿಗೆ ಅಲ್ಲಿದ್ದ ಉತ್ತರ, ಗೊತ್ತಿಲ್ಲ!. ಅವನ ಹತ್ತಿರವೋ ಏನೂ ಇಲ್ಲ. ಮೊಬೈಲ್, ಕೈಗಡಿಯಾರ ಬೇರೆ ಮಾತು. ಬಂದ ದೋಣಿಯನ್ನ ದಡಕ್ಕೆ ಎಳೆದ .ಇಳಿದು ಮರಳ ದಡದ ಕಡೆ ನೆಡೆದ. ಕಡಲ ನೀರು ಅವನ ಕಾಲು ತೋಯಿಸಿತ್ತು.

ದೊಡ್ಡದಾಗಿ ಬಾಯ್ಬಿಟ್ಟು ಕೇಳಿದ “ಇಲ್ಲಿ ಯಾರು ಇಲ್ವಾ?”

ಮರಳ ತೀರ ದಾಟಿ ಹತ್ತು ಹೆಜ್ಜೆ ಹಾಕಿದರೆ ಒಂದಶ್ಟು ಹಸಿರ ಹುಲ್ಲು ಜಾಗ, ಆಮೇಲೆ ದಟ್ಟ ಕಾಡು. ಮೇಲೆ ಹತ್ತಿ ಹೋದರೆ ಮೊದಲ ಗುಡ್ಡ. ಅದರ ಮೇಲೆ ಕಡಿದಾದ ಇನ್ನೊಂದು ಗುಡ್ಡ. ಇವನು ಇನ್ನೇನು ಗುಡ್ಡ ಹತ್ತಬೇಕು ಅಶ್ಟರಲ್ಲಿ ಒಂದು ಜಿಂಕೆ ಎದುರು ಬಂದು ನಿಂತಿತ್ತು. ಹತ್ತಿರ ಹೋದ. ಎಗರಿ ಓಡಿ ಕಾಡಲ್ಲೆಲ್ಲೋ ಮರೆಯಾಯ್ತು. ಗುಡ್ಡ ಹತ್ತಿ, ಕಾಡು ದಾಟಿ ಮೊದಲ ಗುಡ್ಡದ ತುದಿಗೆ ಬಂದ. ಅಲ್ಲೊಂದು ಪುಟ್ಟ ಕೊಳ, ಹೆಚ್ಚೇನು ನೀರಿಲ್ಲ. ಒಂದು ಪುಟ್ಟ ಗುಹೆ. ಎಲ್ಲಾ ಕಡೆ ಯಾರೋ ಇದ್ದ ಕುರುಹು. ಗುಹೆಯ ಮೇಲೆ ಚಿತ್ರ ವಿಚಿತ್ರ ಬರಹಗಳು, ಸುಟ್ಟ ನೆಲ, ಸವೆದ ದಾರಿ ಹೀಗೆ. ಆದರೆ ಅವರೆಲ್ಲ ಈಗ ಎಲ್ಲಿ, ಯಾರಾದರೂ ವಾಪಾಸ್ ಬಂದಾರ! ಗೊತ್ತಿಲ್ಲ . ಈಗಂತೂ ಇರೋದು ಸುಳ್ಳು ಅಂತ ಕಾತ್ರಿ.

ಕೆಳಗಿನ ಗುಡ್ಡಕ್ಕಿಂತ ಮೇಲಿನ ಗುಡ್ಡ ಹೆಚ್ಚು ಚೆಂದ, ರವಿಯ ಚಲನೆಯ ಒಂದೊಂದು ಗಳಿಗೆಯೂ ಶಿಕರಕ್ಕೆ ಹೊಸ ಹೊಸ ಬಣ್ಣ ಮತ್ತು ಆಕಾರ. ಸಂಜೆಯ ನಸು ಗೆಂಪು ಮೇಲಿನ ಗುಡ್ಡದ ಮೇಲೆ ಬಿದ್ದರಂತೂ ಕೇಳಲೇಬೇಡಿ, ಹೊಸ ಲೋಕಕ್ಕೇನೆ ಬಂದ ಆನಂದ. ಮುಂಜಾವ ಬೆಳಗು ಬಿದ್ದಾಗಲಂತೂ ರವಿಯೆ ಬಂಗಾರದ ಎರಕ ಹೊಯ್ದು ಹೋದನೊ ಹೇಗೆ ಅಂತ ಅನಿಸುವಶ್ಟು ಚೆಂದ. ತೆಳು ಮೋಡಗಳು ಮುತ್ತಿಕೊಂಡರಂತೂ ಮೇಲಿನ ಶಿಕರ ಬೇರೆಯೆ ಆಗಿ ತೋರುತಿತ್ತು. ಅದರ ನೋಟದಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳುವುದು ಕಶ್ಟವೆ.

ಈ ನಡುಗಡ್ಡೆಗೆ ಬಂದ ಮೇಲೆ ಅವನ ಜೀವನ ಪೂರಾ ಬದಲಾಗಿತ್ತು. ಈಗ ಅವನಿಗೆ ಹಸಿವೆ, ಬಾಯಾರಿಕೆ ಕಡಿಮೆಯಾಗಿತ್ತು, ದಣಿವಿಲ್ಲ. ಹಳೆಯ ನೆನಪುಗಳೆಲ್ಲ ಮಾಸಲು ಮಾಸಲು. ತನ್ನ ಹೆಸರು “ಸರೂ” ಅಂತ ಬಿಟ್ಟರೆ ಅವನಿಗೆ ವಿಶೇಶವಾಗಿ ಏನು ನೆನಪಾಗುತ್ತಿಲ್ಲ. ತಾನು ಯಾವೊದೋ ಪಟ್ಟಣದವನು, ನನಗೊಂದು ಸಂಸಾರ ಇದೆ ಅನ್ನೋದಶ್ಟೆ ಅವನಿಗೆ ನೆನಪು. ತನಗೇನೋ ಆಗಿದೆ ಅಂತ ಅವನ ಅನಿಸಿಕೆ. ಮನಸೀಗ ತುಂಬಾ ಹಗುರ, ನಗರದ ಗೌಜು-ಗದ್ದಲವಿಲ್ಲ, ಯಾವುದೂ ಬೇಕು ಅಂತ ಇಲ್ಲ. ಏನು ಇಲ್ಲದೆಯೂ ಎಲ್ಲಾ ಇದೆ ಅನ್ನೋ ಕುಶಿ, ಎಲ್ಲ ಹೊಸತು.

ಮರುದಿನದಿಂದ ಅವನ ದಿನಚರಿ ಬೇರೆಯೇ ಆಗಿತ್ತು.ಬೆಳಿಗ್ಗೆ ರವಿಯ ಕಿರಣ ಇನ್ನೇನು ಬೀಳಬೇಕು ಅನ್ನೋದರಲ್ಲೇ ಬೆಟ್ಟ ಇಳಿದು ದಡಕ್ಕೆ ಬರುತ್ತಿದ್ದ. ರವಿಯನ್ನ ಸ್ವಾಗತಿಸಿ ಹಾಗೆ ದಿಟ್ಟಿಸುತ್ತಾ ನಿಂತು ಬಿಡುತ್ತಿದ್ದ. ಕಾಲ ಕೆಳಗಿನ ಮರಳು ನಿದಾನವಾಗಿ ಕುಸಿದರೂ ಅವನಿಗದರ ಅರಿವಿಲ್ಲ. ಬಿಸಿಲು ಜೋರಾದ ಮೇಲೆ ಅಲ್ಲಿಂದ ಹೊರಟು ಅಲ್ಲೇ ಕಾಡಲ್ಲಿ ಸುತ್ತಾಡಿ ಮಂಗನಿಗೋ, ಜಿಂಕೆಗೋ ಸಲಾಮು ಹೊಡೆದು ಮೇಲೆ ಬರುತ್ತಿದ್ದ. ಮೇಲೆ ಕೊಳದಲ್ಲಿದ್ದ ಮೀನಿನೊಂದಿಗೆ ಹರಟಿ, ಅದಕ್ಕೆ ಏನಾರು ಕಾಳು ಸಿಗಬಹುದಾ ಅಂತ ಅಲೆದು, ತಂದು ಹಾಕುತ್ತಿದ್ದ. ಕಾಡಲ್ಲೆ ಸಿಕ್ಕಿದ ನಾಲ್ಕಾರು ಹಣ್ಣುಗಳೊ, ಗೆಡ್ಡೆಯೊ ಅವನ ಆಹಾರ. ಸಂಜೆಯಾಗುತ್ತಿದಂತೆ ಮೇಲಿನ ಬೆಟ್ಟ ಹತ್ತಿ ಸೂರ‍್ಯನ ಮುಳುಗುವ ಕ್ಶಣವನ್ನ ದಿಟ್ಟಿಸುತ್ತಾ, ನೀರವ ಕಡಲು, ತಿಳಿ ಕೆಂಪಿನ ಬಾನು, ನಿಶ್ಚಲ ಕಡಲ ತೀರ, ದಟ್ಟ ಕಾಡು, ಕಾಡಲ್ಲೆಲ್ಲೋ ಅಲೆಯುವ ಮಂಗ, ಇವ ನೋಡಿದ ಒಂಟಿ ಜಿಂಕೆ, ಶಾಂತ ಕೊಳದಲ್ಲಿ ಗಿರಕಿ ಹೊಡೆಯುವ ಪುಟ್ಟ ಮೀನುಗಳು – ಹೀಗೆ ಎಲ್ಲವನ್ನ ಒಂದೇ ಹಾಳೆಯಲ್ಲಿ ಚಿತ್ರಿಸುವ ಕೆಲಸಕ್ಕೆ ತೊಡಗುತ್ತಿದ್ದ. ಬರಿಯ ಹಾಳೆಯಲ್ಲ, ಮನದ ಗಾಳಿಪಟ ಅದು. ಅದಕ್ಕೆ ದಿನದೆಲ್ಲ ಚಿತ್ರ ಅಂಟಿಸಿ ಹಾರಿಸುತ್ತಿದ್ದ. ಬೆಳದಿಂಗಳ ರಾತ್ರಿಯಲ್ಲಿ ಚಂದ್ರನೊಂದಿಗೆ ಹರಟಿದರೆ, ಅಮಾವಾಸ್ಯೆಯ ಕತ್ತಲಲ್ಲಿ ತಾರೆಯರೊಂದಿಗೆ. ಮೋಡ ಮುಚ್ಚಿದ್ದರೆ ಮೋಡದ ಮರೆಯ ತಾರೆ, ಚಂದಿರನೊಂದಿಗೆ. ಕಡೆಗೆ ಮೋಡವಾದರೂ ಸರಿಯೆ!

ಅವನ ದಿನಚರಿಯೇ ಹಾಗಿತ್ತು. ಬೆಳಿಗ್ಗೆ ಕಡಲ ತೀರಕ್ಕೆ ಹೋಗುವುದು, ಆಮೇಲೆ ಕಾಡು ಸುತ್ತುವುದು, ಮೀನಿನೊಂದಿಗೆ ಮಾತನಾಡುವುದು, ಸಂಜೆಯಾದಂತೆ ತಿಳಿ ಸಂಜೆಯ ಬೆಳಕಲ್ಲಿ ಮನಸಿಗೆ ರಂಗು ತುಂಬುವುದು, ಹಾಡು ಗುನುಗುನಿಸುತ್ತ ಕತ್ತಲೆಗೆ ಗುಹೆಯತ್ತ ಬರುವುದು. ಅದೆಶ್ಟು ದಿನಗಳು ಹೀಗೆ ಕಳೆದವೇನೊ. ತನ್ನ ಹಿಂದಿನ, ಮುಂದಿನ ಎರಡರ ಪರಿವು ಅವನಿಗಿಲ್ಲ. ಅಲ್ಲಿ ಸಮಯದ ಪರಿವೆ ಇಲ್ಲ, ಚಿಂತೆಗಿಳಿಸುವ ಸಂತೆಗಳಿಲ್ಲ. ಇರುವುದೆಲ್ಲವೂ ಸತ್ಯ ಅನುಬವಕ್ಕೆ, ಕೂಡಿಡಲಿಕ್ಕಲ್ಲ . ಇರುವುದೆಲ್ಲ ಇಂದಿಗೆ ನಾಳೆಗೇನಿಲ್ಲ, ಮತ್ತೆ ಎಲ್ಲ ಹೊಸತು ನಾಳೆಗೆ.

ಹೀಗೊಂದು ದಿನ ಸಮುದ್ರದ ತೀರಕ್ಕೆ ಹೋದಾಗ ಚಪ್ಪಲಿಯೊಂದು ತೇಲಿ ಅವನ ಕಾಲು ತಾಕಿತ್ತು. ಇದು ಎಲ್ಲಿಂದ ಬಂತು ಅಂತ ಗೊಂದಲವಾಯಿತು ಅವನಿಗೆ. ಅಲ್ಲಿಯೇ ಅದನ್ನ ಬಿಡೋಕೆ ಮನಸಾಗದೆ ಅದನ್ನ ಎತ್ತಿಕೊಂಡು ಮೇಲೆ ಗುಹೆಯತ್ತ ಬಂದುಬಿಟ್ಟ.

ಆ ಚಪ್ಪಲಿಯೊಂದಿಗೆ ಯಾಕೋ ಸೆಳೆತ ಬಂದು ಬಿಟ್ಟಿತ್ತು ಅವನಿಗೆ. ಹಾಗಂತ ಅದೇನು ಹೊಸತಲ್ಲ, ಅದು ಇವನದೂ ಅಲ್ಲ, ಆದರೆ ಯಾರದೊ ಹಡಗಿನ ಕೆಲಸದವನದ್ದೋ ಇಲ್ಲಾ ಯಾರೊ ಹಡಗಿನ ಪ್ರಯಾಣಿಕನಿದ್ದಿರಬಹುದೆಂದು ಅವನ ಎಣಿಕೆ. ಅದು ಹಳೆಯ ಸಾವಿರ ನೆನಪನ್ನು ಹುಡುಕಿ, ಹೊರಗಡೆ ನೂಕಿತ್ತು. ಮನೆ, ಮಕ್ಕಳು, ಸಾಲಗಾರರ ಕಾಟ ಹೀಗೆ. ನೆನಪಿನ ಬುಟ್ಟಿಯ ಬಾರ ತಲೆಯ ಮೇಲೆ ಬಿದ್ದಂತೆ ಹೊಸ ಹೊಸ ಆಲೋಚನೆಗಳು ಹೊರಬಿದ್ದವು.

ನಗರದ ಗೌಜಿನಲ್ಲೆ ಬದುಕ ಕಂಡುಕೊಂಡವನು ಅವನು. ಪ್ರೀತಿಸಿ ಮದುವೆಯಾಗಿ ಈಗ ಎರಡು ಮಕ್ಕಳ ತಂದೆ. ದುಡಿಮೆಯೇನೋ ಜೀವನ ಸಾಗಿಸಲಾಗುವಂತಿತ್ತು. ಆದರೆ, ಬೇಕುಗಳ ಬಾರ ಅವನ ದುಡಿಮೆಯನ್ನ ಮೀರಿಸಿತ್ತು. ಜೊತೆಗೆ ಹೊರಗೆಡೆಯ ಸೆಳೆತಗಳು ಬೇರೆ. ಮನೆಗೆಂದು, ಜೂಜಿಗೆಂದು, ಮಕ್ಕಳಿಗೆಂದು ಹೀಗೆ ಅಗತ್ಯಗಳಿಗೆ ಬೆಳೆಯುತ್ತ ಸಾಗಿತ್ತು ಸಾಲ. ಹೆಂಡತಿಯೊಂದಿಗೆ ದಿನ ಬೆಳಗಾದರೆ ಜಗಳ. ಸಾಲಗಾರರು ಬೆನ್ನು ಬಿಡುವ ಸೂಚನೆಯೂ ದೂರದ ಮಾತು. ಮನೆಬಿಡೋದೊಂದೆ ದಾರಿ ಅಂತ ಮನಸ್ಸು ಗಟ್ಟಿ ಮಾಡಿತ್ತು. ಎಲ್ಲಿಯಾದರೂ ಹೋಗಿ, ದುಡಿದು ಬರೋಣ ಅಂತ ಯೋಚಿಸಿ ರಾತ್ರೋ ರಾತ್ರಿ ಮನೆಬಿಟ್ಟು ಹೊರಟ. ಆದರೆ ಸಾಲಗಾರರು ಮನೆ ಕಾಯ್ತಾ ಇದಾರೆ ಅಂತ ಅವನಿಗೆ ಗೊತ್ತಿಲ್ಲ.

ಹೊರಟನೋ ಸರಿ ಎಲ್ಲ ಬೆನ್ನತ್ತಿ ಬಂದರು. ಇವನೋ ಓಡೋಕೆ ಶುರು ಮಾಡ್ದ, ಓಡ್ತಾನೆ, ಓಡ್ತಾನೆ ಅವರು ಬೆನ್ನು ಬಿಡೋ ಸೂಚನೆ ಮಾತ್ರ ಕಾಣೆ. ಪಟ್ಟಂತ ಎಚ್ಚರ ಆಯ್ತು ಅವನಿಗೆ, ಸೂರ‍್ಯನ ಬಿರು ಬಿಸಿಲು. ತಾನೇಕೆ ಹೀಗೆ ಮಲಗಿಬಿಟ್ನಲ್ಲ ಅಂತ ಅನಿಸ್ತು ಅವನಿಗೆ ಅಶ್ಟರಲ್ಲೇ ಶುರುವಾಗಿತ್ತು ವಿಪರೀತ ಹಸಿವು.

ಹಸಿವೆಂದರೆ ಅದು ಅಂತಿಂತದ್ದಲ್ಲ. ಸತ್ತೇ ಹೋಗ್ತೀನೇನೋ ಅನ್ನೋ ಹಸಿವು. ಏನು ತಿನ್ಬೇಕು ಅನ್ನೋ ಸಮಸ್ಯೆ. ಕಾಡಲ್ಲೆಲ್ಲ ಸುತ್ತಿ ಆ ಹಣ್ಣು, ಈ ಹಣ್ಣು ಅಂತ ಕಿತ್ತು ತಂದ. ಒಂದೆರಡು ದಿನವೇನೊ ಸರಿ, ಆದರೆ ಅವನ ಹೊಟ್ಟೆ ತುಂಬುವಶ್ಟು ದಿನವೂ ಸಿಗುವುದು ಕಶ್ಟವೇ ಆಗಿತ್ತು. ಅವನಿಗೆ ತಿನ್ನುವುದೂ ಕೂಡ. ಪಟ್ಟಂತ ಅವನಿಗೆ ಜಿಂಕೆಯ ನೆನಪಾಯಿತು. ಆದರೆ ಅದನ್ನ ಹಿಡಿಯೋದು ಇನ್ನೊಂದು ಸಮಸ್ಯೆ, ಮುರಿದ ಮರದ ಕೊಂಬೆಯನ್ನ ತಂದ. ಅದನ್ನೇ ಕಲ್ಲಿಗೆ ಉಜ್ಜಿ, ಉಜ್ಜಿ ಸ್ವಲ್ಪ ಮಟ್ಟಿಗೆ ಹರಿತ ಮಾಡ್ದ. ಜಿಂಕೆಯ ಬೇಟೆಗೆ ಹೊರಟ.

ಅಂತೂ ಕಾದು ಕಾದು ಮೂರೂ ದಿನವಾದ ಮೇಲೆ ಸಮಯ ಸಾದಿಸಿ ಜಿಂಕೆಯತ್ತ ಬೀಸಿದ, ಗಾಯಕ್ಕೆ ಕುಸಿದಿತ್ತು ಜಿಂಕೆ, ಅದರ ಮೇಲೆರೆಗಿ ಜಜ್ಜಿ ಕೊಂದ ಅದನ್ನ. ಅವನು ಸಸ್ಯಾಹಾರಿ, ಮಾಂಸ ತಿಂದವನಲ್ಲ, ಎಲ್ಲಿತ್ತೋ ಆ ರೋಶ ಗೊತ್ತಿಲ್ಲ. ದಪ್ಪ ಕೊಂಬೆಗೆ ಸತ್ತ ಜಿಂಕೆಯನ್ನ ಬಳ್ಳಿಯಿಂದ ಬಿಗಿದು ಮೇಲೆ ತಂದ. ಅಲ್ಲೇ ಸಿಕ್ಕಿದ ಬೆಣಚು ಕಲ್ಲನ್ನ ಉಜ್ಜಿ ಉಜ್ಜಿ ಬೆಂಕಿ ಹಚ್ಚಿಸಿದ. ಜಿಂಕೆಯ ತೊಗಲು ಅವನ ಚಳಿಗೆ. ಒಂದೆರಡು ದಿನಕ್ಕೆ ಹೇಗೋ ನಡೀತು, ಹೊಟ್ಟೆ ಮತ್ತೆ ಸದ್ದು ಮಾಡೋಕೆ ಶುರುಮಾಡ್ತು. ಮೀನು ಹಿಡಿದರೆ ಹೇಗೆ? ಎಂಬ ಯೋಚನೆ. ಅಂಗಿ ಹರಿದು, ಬಲೆಯಂತೆ ಕೋಲಿಗೆ ಕಟ್ಟಿ, ಮೀನು ಹಿಡಿಯೋ ಸಾಹಸಕ್ಕೂ ಕೈ ಹಾಕಿದ.

ಹಸಿವು, ನಿದ್ದೆ, ಸಂಸಾರದ ಹೊರತಾಗಿ ಬೇರೇನೂ ಯೋಚಿಸೊ ಸ್ತಿತಿಯಲ್ಲಿರಲಿಲ್ಲ ಅವನು. ತಾನಿಲ್ಲೆ ಇದ್ದರೆ ಬದುಕಲ್ಲ ಅಂತ ಅವನಿಗೆ ಗಟ್ಟಿಯಾಗಿತ್ತು. ಬೇಟೆ ಸಿಗೋ ಯಾವ ಸೂಚನೇನು ಇಲ್ಲ. ಹಾಗಂತ ಒಂದೆರಡು ದಿನದ ಈಚೆಗೆ ದೂರದಲ್ಲೆಲ್ಲೋ ಹಡಗಿನ ಸದ್ದು ಇವನ ಕಿವಿಗೆ ಬಿದ್ದಿತ್ತು. ಹೇಗಾದರೂ ಸರಿಯೇ ಇಲ್ಲಿಂದ ಹೊರಡಬೇಕು ಅಂತ ಗಟ್ಟಿಮಾಡಿಕೊಂಡ. ಆದರೆ ಹೋಗೋದ್ ಹೇಗೆ?

ಮರುದಿನ ಸಮುದ್ರ ತೀರಕ್ಕೆ ಬಂದಾಗ ತಾನು ಬಂದ ಪುಟ್ಟ ದೋಣಿ ಅವನಿಗೆ ಕಾಣಿಸ್ತು. “ಅರೆ! ಇಶ್ಟು ದಿನ ಎಲ್ಲಿತ್ತು ಇದು?”, ಯಕ್ಶ ಪ್ರಶ್ನೆ ಅವನ ತಲೇಲಿ ಬಂತು. ಆದರೆ ಈ ಪುಟ್ಟ ದೋಣಿಯಲ್ಲಿ ತಾನು ದಡ ಮುಟ್ಟಬಹುದಾ?, ಬಂದಿದ್ದು ಇದರಲ್ಲೇ ಆದರೂ ಈಗ ಗುಂಡಿಗೆ ಸಾಲುತ್ತಿಲ್ಲ. ಅಲ್ಲಲ್ಲಿ ಇದ್ದ ಬಿದುರಿನ ರಾಶಿಯಲ್ಲಿ ಒಂದಶ್ಟು ಒಣ ಬಿದಿರನ್ನು ಮುರಿದು, ಕಿತ್ತು ಅಡ್ಡಡ್ಡ, ಉದ್ದುದ್ದ ಸೀಳಿ, ಜೋಡಿಸಿದ. ಉಗನಿ ಬಳ್ಳಿಗಳನ್ನ ಕಿತ್ತು ಬಿದಿರನ್ನ ಬಿಗಿದ. ಅದನ್ನ ಅದೇ ಬಳ್ಳಿಯಿಂದ ತನ್ನ ದೋಣಿಗೆ ಬಿಗಿದ. ಅಲ್ಲಲ್ಲಿ ಸಿಕ್ಕಿದ ಒಂದಶ್ಟು ಹಣ್ಣು ಹಂಪಲನ್ನು ತಂದು ಶೇಕರಿಸಿದ. ಅದ್ರುಶ್ಟ ಇದ್ದರೆ ಯಾವುದಾದರೂ ಹಡಗು ಸಿಗಬಹುದು. ನೋಡೇ ಬಿಡೋಣ ಅಂತ, ದೋಣಿ ತಳ್ಳಿ ಹತ್ತಿ ಕೂತೇ ಬಿಟ್ಟ. ಹುಟ್ಟು ಹಾಕೋಕೆ ಶುರು ಮಾಡ್ದ, ಕಡಲೇ ಅವನನ್ನ ತಳ್ಳಿಕೊಂಡು ಹೋಗೋ ತರ ಅನಿಸ್ತಿತ್ತು ಅವನಿಗೆ.

ಶಾಂತ ಸಾಗರದ ಆ ನಡುಗಡ್ಡೆಗೆ ಬೆನ್ನು ಹಾಕಿದ್ದ, ಮತ್ತೆ ತಿರುಗಿ ನೋಡುವ ಮನಸಾಗಲಿಲ್ಲ. ಶಾಂತ ಸಾಗರದ ಆ ಶಾಂತ ದ್ವೀಪ ಅವನ ಹಿಂದುಗಡೆ ಹಾಗೇ ಮರೆಯಾಯ್ತು.

(ಚಿತ್ರ ಸೆಲೆ:  geograf.info)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: