‘ಗೋಲ್ಡನ್ ರಾಕ್’ ಪಗೋಡ

– ಕೆ.ವಿ.ಶಶಿದರ.

ಬೌದ್ದ ದರ‍್ಮದವರಿಗೆ ಬರ‍್ಮಾ ದೇಶದಲ್ಲಿ ಅತಿ ಪವಿತ್ರವಾದ ಸ್ತಳ ಕೈಕ್ತೀಯೋ (Kyaiktiyo) ಗೋಲ್ಡನ್ ರಾಕ್ ಪಗೋಡ. ಬಗವಾನ್ ಬುದ್ದನ ಕೂದಲನ್ನು ಹೊಂದಿರುವ ಈ ಪಗೋಡ ದೊಡ್ಡ ಕಲ್ಲುಬಂಡೆಯೊಂದರ ಮೇಲಿದೆ. ಈ ಕಲ್ಲು ಬಂಡೆ, ಕಮರಿಯ ಮೇಲೆ ವಿಶಿಶ್ಟ ರೀತಿಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ನಿಂತಿದೆ. ಇದನ್ನು ಮೊದಲ ಬಾರಿ ಕಂಡವರಿಗೆ ಕಲ್ಲು ಬಂಡೆ ಯಾವುದೇ ಸಮಯದಲ್ಲಾದರೂ ಪ್ರಪಾತಕ್ಕೆ ಉರುಳಿ ಬೀಳಬಹುದೆಂಬ ಶಂಕೆ ಕಾಡುವುದು ನಿಶ್ಚಿತ!

ಈ ದೊಡ್ಡಗಾತ್ರದ ಗೋಲ್ಡನ್ ರಾಕ್ ಪಗೋಡ ಬರ‍್ಮಾದ ಯಾಂಗೊನ್‍ನ ಈಶಾನ್ಯ ದಿಕ್ಕಿನಲ್ಲಿರುವ ಪರ‍್ವತ ಶ್ರೇಣಿಯ ಕಡಿದಾದ ಬಂಡೆಯ ಮೇಲೆ ನೇತಾಡುತ್ತಿರುವಂತಿದೆ. ಪ್ರಕ್ರುತಿಯ ಹಸಿರು ತುಂಬಿದ ವಾತಾವರಣದಲ್ಲಿ ಇದರ ನೋಟವೇ ಅತ್ಯಂತ ಅದ್ಬುತ ಹಾಗೂ ನಯನ ಮನೋಹರ. ಅಂದಾಜು 7.5 ಮೀಟರ್ ಎತ್ತರವಿರುವ ‘ಗೋಲ್ಡನ್ ರಾಕ್’ ಚಿನ್ನದಂತೆ ಕಂಡರೂ ಚಿನ್ನದ ಲೇಪನೆ ಮಾಡಿದ ಗ್ರಾನೈಟ್ ಬಂಡೆ. ಬುದ್ದನ ಉಪಾಸಕರು ಬುದ್ದನಿಗೆ ಸಲ್ಲಿಸಿದ ಪುಟ್ಟ ಕಾಣಿಕೆ. ಈ ಕಲ್ಲು ಬಂಡೆಯ ಮೇಲೆ ಕೈಕ್ತೀಯೋ ಪಗೋಡವಿದೆ. ಬುದ್ದನ ಕೂದಲ ಸ್ಮರಣಿಕೆಯನ್ನು ಪ್ರತಿಶ್ಟಾಪಿಸಿರುವುದು ಇಲ್ಲಿನ ವಿಶೇಶ.

‘ಗೋಲ್ಡನ್ ರಾಕ್’ ಸುತ್ತಮುತ್ತ

ಪಗೋಡಾದ ಸುತ್ತಮುತ್ತಲಿನ ಪ್ರದೇಶದ ವಾತಾವರಣ ದೈವಿಕವಾಗಿದೆ. ಬೌದ್ದ ಅನುಯಾಯಿಗಳ ಬುದ್ದನ ಕುರಿತು ಮಾಡುತ್ತಿರುವ ನಿರಂತರ ಪಟಣ, ಹಚ್ಚಿರುವ ಮೇಣದಬತ್ತಿಗಳು, ಉರಿಯುತ್ತಿರುವ ದೂಪದ್ರವ್ಯದ ಪರಿಮಳಯುಕ್ತ ಸುವಾಸನೆ, ಗುಡಿಗೆ ಅರ‍್ಪಿಸಿರುವ ಕಾಣಿಕೆಗಳು ಈ ದೇವಲವನ್ನು ನಯನ ಮನೋಹರವಾಗಿಸಿವೆ. 2600 ವರ‍್ಶಗಳಿಂದ ಗೋಲ್ಟನ್ ರಾಕ್ ಪಗೋಡ ಬೌದ್ದರ ಪೂಜೆ ಪುನಸ್ಕಾರಗಳ ಕೇಂದ್ರವಾಗಿದೆ ಎನ್ನುತ್ತದೆ ಇತಿಹಾಸ. ಬೌದ್ದ ಯಾತ್ರಾರ‍್ತಿಗಳಿಗೆ ಇದು ಬರ‍್ಮಾದಲ್ಲಿನ ಅತಿ ಪೂಜ್ಯನೀಯ ಪಗೋಡವಾದ್ದರಿಂದ ಬಹಳಶ್ಟು ಬೌದ್ದ ಉಪಾಸಕರು ಹಾಗೂ ಬಕ್ತಾದಿಗಳು ಪ್ರತಿದಿನ ಇಲ್ಲಿಗೆ ಬಂದು ಬಕ್ತಿ ಪೂರ‍್ವಕ ನಮನಗಳನ್ನು ಸಲ್ಲಿಸಿ ಕ್ರುತಾರ‍್ತರಾಗುತ್ತಾರೆ.  ಕಲ್ಲು ಬಂಡೆಗೆ ಚಿನ್ನದ ಲೇಪನ ಇಲ್ಲಿಗೆ ಹರಿದು ಬರುವ ಬಕ್ತ ಸಮುದಾಯದ ಕೊಡುಗೆ. ಇದು ಸೇವೆಯ ಪ್ರತೀಕವೆಂದು ನಂಬಿ ಈ ಕೈಂಕರ‍್ಯವನ್ನು ಕೈಗೊಳ್ಳುತ್ತಾರೆ. ಸ್ತಳೀಯ ಸಂಪ್ರದಾಯದಂತೆ ಗಂಡಸರಿಗೆ ಮಾತ್ರ ಚಿನ್ನದ ಲೇಪನದ ಕಾರ‍್ಯ ಮಾಡಲು ಇಲ್ಲಿ ಅವಕಾಶವಿದೆ. ಮಹಿಳೆಯರಿಗೆ ಕಲ್ಲು ಬಂಡೆಯನ್ನು ಸ್ಪರ‍್ಶಿಸಲೂ ಸಹ ಅವಕಾಶವಿಲ್ಲ.

ಎಲ್ಲಾ ಹಿಂದೂ ದೇವಾಲಯಗಳಲ್ಲಿ ಇದ್ದಂತೆ ಇಲ್ಲೂ ಸಹ ಪಾದರಕ್ಶೆಗಳನ್ನು ದರಿಸಿ ಪ್ರವೇಶಿಸುವುದು ನಿಶಿದ್ದ. ಪಾದರಕ್ಶೆ, ಶೂ, ಸಾಕ್ಸ್‍ಗಳನ್ನು ಪ್ರವೇಶ ದ್ವಾರದಲ್ಲೇ ತೆಗೆದಿರಿಸಿ ಬರಿಗಾಲಿನಲ್ಲೇ ಪ್ರವೇಶಿಸಬೇಕು. ಸಿಂಹವನ್ನು ಹೋಲುವ ಬ್ರುಹತ್ ಪ್ರಾಣಿಗಳ ವಿಗ್ರಹ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿದೆ. ಇವನ್ನು  ದೇವಾಲಯದ ಪ್ರದೇಶವನ್ನು ರಕ್ಶಿಸಲು ಸ್ತಾಪಿಸಲಾಗಿದೆ ಎಂಬುದು ಸ್ತಳೀಯರ ನಂಬಿಕೆ. ಸುತ್ತ ಮುತ್ತಲ ಪ್ರದೇಶದ ಬೂ ದ್ರುಶ್ಯವನ್ನು ಆಸ್ವಾದಿಸಲು ಅಲ್ಲಲ್ಲೇ ವಿಕ್ಶಣಾ ವೇದಿಕೆಗಳು, ಬಹಳಶ್ಟು ಸಣ್ಣ ಸಣ್ಣ ಪಗೋಡಗಳು, ಬಗವಾನ್ ಬುದ್ದನ ಪ್ರತಿಮೆಗಳುಳ್ಳ ಅನೇಕ ದೇವಾಲಯಗಳು, ಬರ‍್ಮೀಯರ ಚೈತನ್ಯದ ದೇವಾಲಯಗಳು ಇಲ್ಲಿವೆ. ಇದರೊಡನೆ ಪ್ರವಾಸಿಗರಿಗಾಗಿ ರೆಸ್ಟೋರೆಂಟ್ ಗಳು ಮತ್ತು ಗೆಸ್ಟ್ ಹೌಸ್‍ಗಳು ಇವೆ.  ಸಂಜೆಗತ್ತಲು ಆವರಿಸುತ್ತಿದ್ದಂತೆ ಗೋಲ್ಡನ್ ರಾಕ್ ಪಗೋಡದ ದ್ರುಶ್ಯವೇ ಬದಲಾಗುತ್ತದೆ. ಉರಿಯತ್ತಿರುವ ಸಾವಿರಾರು ಮೇಣದಬತ್ತಿಗಳು ಮತ್ತು ಸುವಾಸನಾಯುಕ್ತ ದೂಪದ್ರವ್ಯಗಳಿಂದ ಅಲ್ಲಿ ದಾರ‍್ಮಿಕ ವಾತಾವರಣ ಸ್ರುಶ್ಟಿಯಾಗಿ ನಾಸ್ತಿಕರಲ್ಲೂ ಆಸ್ತಿಕ ಹಾಗೂ ಆದ್ಯಾತ್ಮಿಕ ಬಾವನೆಯನ್ನು ಕೆರಳಿಸುತ್ತದೆ.

‘ಗೋಲ್ಡನ್ ರಾಕ್’ ಹಿಂದಿರುವ ನಂಬಿಕೆ

ಇಲ್ಲಿನ  ನಂಬಿಕೆಯ ಪ್ರಕಾರ ಬಗವಾನ್ ಬುದ್ದ ಇಲ್ಲಿಗೆ ಬೇಟಿ ನೀಡಿದ ನೆನಪಿಗೆ, ತನ್ನ ಕೂದಲನ್ನು ಇಲ್ಲಿನ ಒಬ್ಬ ಸನ್ಯಾಸಿಗೆ ನೀಡಿದನಂತೆ. ಆ ಸನ್ಯಾಸಿ ಅಲ್ಲಿನ ರಾಜನನ್ನು ಕಂಡು ಬಗವಾನ್ ಬುದ್ದನ ಸ್ಮರಣಾರ‍್ತ ಈ ಕೂದಲನ್ನು ಸಂರಕ್ಶಿಸಲು ತಲೆ ಬುರುಡೆಯನ್ನು ಹೋಲುವ ಕಲ್ಲು ಬಂಡೆಯ ಮೇಲೆ ದೇವಾಲಯವನ್ನು ಕಟ್ಟಿಸಿಕೊಡುವಂತೆ ಕೋರುತ್ತಾನಂತೆ.  ದೈವ ಬಕ್ತನಾದ ರಾಜ ತನಗಿದ್ದ ಮಾಂತ್ರಿಕ ಶಕ್ತಿಯಿಂದ ಸಾಗರದ ಗರ‍್ಬದಲ್ಲಿದ್ದ ಅಡಗಿದ್ದ ತಲೆಯ ಆಕಾರದ ಬಂಡೆಯನ್ನು ಗುರುತಿಸುತ್ತಾನಂತೆ. ದೇವಾಲಯಕ್ಕೆ ಸೂಕ್ತವಾದ ಬಂಡೆ ಇದೇ ಎಂದು ಮನಗಂಡು ಅದನ್ನು ಕೈಕ್ತೀಯೋಗೆ ತಂದು ಈಗಿರುವ ಸ್ತಳದಲ್ಲಿ ಇಟ್ಟನಂತೆ. ಅದರ ಮೇಲೆ ಪಗೋಡ ನಿರ‍್ಮಿಸಿ ಅದರಲ್ಲಿ ಬುದ್ದನ ಕೂದಲನ್ನು ಪ್ರತಿಶ್ಟಾಪಿಸಿದನಂತೆ. ಬುದ್ದನ ಕೂದಲಿಗಿರುವ ದೈವಿಕ ಶಕ್ತಿಯ ಬಲ, ಆ ಬ್ರುಹತ್ ಬಂಡೆಯನ್ನು ಪ್ರಪಾತಕ್ಕೆ ಉರುಳದಂತೆ ಸಮತೋಲನದಿಂದ ಹಿಡಿದಿಟ್ಟಿದೆಯಂತೆ. ಈ ಬ್ರುಹತ್ ಬಂಡೆಯನ್ನು ಸಾಗರದ ತಳದಿಂದ ದಡಕ್ಕೆ ತರಲು ಬಳಸಿದ ದೋಣಿಯೂ ಸಹ ಸನಿಹದಲ್ಲೇ ಕಲ್ಲಾಗಿದೆಯಂತೆ. ಗೋಲ್ಡನ್ ರಾಕ್ ಸಮೀಪವೇ ಇರುವ ದೋಣಿಯಾಕಾರದ ಕಲ್ಲೇ ಅದಂತೆ. ಆ ಕಲ್ಲು ದೋಣಿಯ ಮೇಲೂ ಒಂದು ಸ್ತೂಪವಿದ್ದು ಅದನ್ನು ಕಯುಕ್ತನ್ಬನ್ ಪಗೋಡ ಎನ್ನುತ್ತಾರೆ.

ಅನೇಕ ಬಕ್ತಾದಿಗಳು ಚಿನ್ನ ಲೇಪಿಸಿದ ಕಂಚಿನ ಗಂಟೆಗಳನ್ನು ದೇವರಿಗೆ ಕಾಣಿಕೆಯಾಗಿ ಅರ‍್ಪಿಸುವುದುಂಟು. ಬಕ್ತರಿಂದ ಅರ‍್ಪಣೆಯಾದ ಸಾವಿರಾರು ಗಂಟೆಗಳ ದ್ರುಶ್ಯವೇ ಅನನ್ಯ. ಪ್ರವೇಶ ದ್ವಾರದಿಂದ ಪಗೋಡ ಸಾಕಶ್ಟು ದೂರ ಹಾಗೂ ಎತ್ತರದಲ್ಲಿದೆ. ಇಳಿ ವಯಸ್ಸಿನವರು, ಬೆಟ್ಟ ಹತ್ತಲು ಅಶಕ್ತರಾದವರು ಬಾಡಿಗೆ ಡೋಲಿಗಳ ಸಹಾಯದಿಂದ ಬೌದ್ದನ ಪಗೋಡ ದರ‍್ಶನ ಪಡೆಯಬಹುದು. 9000 ದೀಪಗಳ ಹಬ್ಬವನ್ನು ಪ್ರತಿವರ‍್ಶ ಮಾರ‍್ಚ್ ತಿಂಗಳಲ್ಲಿ ಗೋಲ್ಡನ್ ರಾಕ್ ಕೈಕ್ತಿಯೋ ಪಗೋಡದಲ್ಲಿ ಆಚರಿಸುತ್ತಾರೆ. ಮಾರ‍್ಚಿ ತಿಂಗಳಿನ ಪೌರ‍್ಣಮಿಯ ಬೆಳದಿಂಗಳ ರಾತ್ರಿಯಲ್ಲಿ 9000 ಕ್ಯಾಂಡಲ್ ದೀಪಗಳನ್ನು ಕಲ್ಲಿನ ಬಂಡೆಯ ಮೇಲೆ ಸುತ್ತಲೂ ಬೆಳಗಿಸುತ್ತಾರೆ. ಬುದ್ದನ ಅನುಯಾಯಿಗಳು, ಉಪಾಸಕರು, ಪ್ರವಾಸಿಗರು ಸಾವಿರಾರು ಸಂಕ್ಯೆಯಲ್ಲಿ ಅಂದು ಅಲ್ಲಿ ನೆರೆದು ಆದ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ದೀಪದ ಹಬ್ಬದಲ್ಲಿ ಪಾಲ್ಗೊಂಡು ಸಂಬ್ರಮಿಸುತ್ತಾರೆ.

( ಮಾಹಿತಿ ಸೆಲೆ: wikipedia )

( ಚಿತ್ರಸೆಲೆ: mundoteka.com, mustseehowto.blogspot.in, guiddoo.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: