ಅಲ್ಲಮನ ವಚನಗಳ ಓದು – 12ನೆಯ ಕಂತು

– ಸಿ.ಪಿ.ನಾಗರಾಜ.

ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ
ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ
ಏನ ಮಾತನಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ
ದಿಟದಿಂದ ತನ್ನ ತಾ ಕಾಣಬೇಕು
ದಿಟದಿಂದ ತನ್ನ ತಾ ಕೇಳಬೇಕು
ದಿಟದಿಂದ ತನ್ನ ತಾ ಮಾತಾಡಬೇಕು
ಇದೆ ತನ್ನ ನೆಲೆ ಸ್ವಭೂಮಿ ಸ್ವಸ್ವರೂಪು ಕಾಣಾ ಗುಹೇಶ್ವರಾ.

ವ್ಯಕ್ತಿಯು ಲೋಕದಲ್ಲಿ ಕಂಡು ಕೇಳಿ ಮಾತನಾಡಿ ಪಡೆದುಕೊಂಡ ತಿಳುವಳಿಕೆಯ ಜೊತೆಜೊತೆಗೆ, ಮಾನವನ ಬದುಕಿನ ಆಗುಹೋಗುಗಳಿಗೆ ಕಾರಣವಾಗಿರುವ ವಾಸ್ತವದ ಸಂಗತಿಗಳನ್ನು ಅರಿತುಕೊಂಡು, ನಿಜದ ನಡೆನುಡಿಗಳಿಂದ ಕೂಡಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದ ಅಗತ್ಯವನ್ನು ಈ ವಚನದಲ್ಲಿ ಹೇಳಲಾಗಿದೆ. “ ನಿಜದ ನಡೆನುಡಿಗಳು “ ಎಂದರೆ ತನಗೆ ಒಳಿತನ್ನು ಬಯಸುವಂತೆಯೇ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ಸಾಮಾಜಿಕ ವರ‍್ತನೆ.

( ಏನ್+ಅ; ಏನ್=ಯಾವುದು; ಏನ=ಯಾವುದನ್ನು/ಏನನ್ನು; ಕಂಡಡೆ+ಏನ್+ಅಯ್ಯಾ; ಕಂಡಡೆ=ನೋಡಿದರೆ; ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ; ಏನ ಕಂಡಡೇನು=ವ್ಯಕ್ತಿಯು ತನ್ನ ಜೀವನದಲ್ಲಿ ಬಹುಬಗೆಯ ವಸ್ತುಗಳನ್ನು/ಜೀವಿಗಳನ್ನು/ಪ್ರಸಂಗಗಳನ್ನು ನೋಡಿ, ಅವುಗಳ ಒಳಿತು ಕೆಡುಕಿನ ಅಂಶಗಳನ್ನು ಅರಿತುಕೊಂಡಿದ್ದರೆ ತಾನೇ ಏನು ಪ್ರಯೋಜನ?; ತನ್ನ=ತನ್ನನ್ನು; ಕಾಣದ+ಆತ; ಕಾಣ್=ನೋಡು; ಕಾಣದ=ನೋಡದ/ತಿಳಿಯದ/ಅರಿಯದ; ಆತ=ಅವನು; ಕುರುಡ=ಕಣ್ಣಿಲ್ಲದವನು/ಕಣ್ಣಿನ ದಿಟ್ಟಿಯಿಲ್ಲದವನು/ಏನನ್ನು ನೋಡಲಾರದವನು; ತನ್ನ ಕಾಣದಾತ ಕುರುಡ=ತನ್ನ ನಡೆನುಡಿಯಲ್ಲಿನ ತಪ್ಪುಗಳನ್ನು ನೋಡಿಕೊಂಡು, ಅವನ್ನು ತಿದ್ದಿ ಸರಿಪಡಿಸಿಕೊಂಡು ಬಾಳದವನು, ಕಣ್ಣಿದ್ದು ಕುರುಡನಂತಾಗುತ್ತಾನೆ ಎಂಬ ನಾಣ್ಣುಡಿಯ ತಿರುಳಿನಲ್ಲಿ ಬಳಕೆಯಾಗಿರುವ ವಾಕ್ಯ;

ಕೇಳಿದಡೆ+ಏನ್+ಅಯ್ಯಾ; ಕೇಳು=ಆಲಿಸು/ಕಿವಿಗೊಡು; ಕೇಳಿದಡೆ=ಕೇಳಿದರೆ/ಕೇಳಿಸಿಕೊಂಡರೆ ; ಏನ ಕೇಳಿದಡೇನು=ಇತರರು ಹೇಳಿದ ನೀತಿ/ನಿಯಮ/ಸತ್ಯ/ವಾಸ್ತವದ ನುಡಿಗಳನ್ನು ಆಲಿಸಿ ಮನಗಂಡಿದ್ದರೆ ತಾನೇ ಏನು ಪ್ರಯೋಜನ; ಕೇಳದ+ಆತ; ಕೇಳದ=ಕೇಳಿಸಿಕೊಳ್ಳದ/ಆಲಿಸಿಕೊಳ್ಳದ/ಕಿವಿಗೊಡದ; ಕಿವುಡ=ಕಿವಿ ಕೇಳಿಸದವನು/ಕೆಪ್ಪ; ತನ್ನ ಕೇಳದಾತ ಕಿವುಡ=ವ್ಯಕ್ತಿಯು ಆಡಿದ ಮಾತುಗಳು ಬೇರೆಯವರಿಗೆ ಕೇಳಿಸುವಂತೆಯೇ ತನಗೂ ಕೇಳಿಸುತ್ತಿರುವುದರಿಂದ, ತಾನಾಡಿದ ನುಡಿಗಳು ಕೇಳುಗರ ಮನಸ್ಸಿಗೆ ಮುದವನ್ನುಂಟುಮಾಡಿದವೊ ಇಲ್ಲವೇ ನೋವನ್ನುಂಟುಮಾಡಿದವೋ ಎಂಬುದರ ಬಗ್ಗೆ ಎಚ್ಚರವಿಲ್ಲದವನು/ಗಮನಿಸಿದವನು/ಲೆಕ್ಕಿಸದವನು ;

ಮಾತು+ಆಡಿದಡೆ+ಏನ್+ಅಯ್ಯಾ; ಆಡಿದಡೆ=ಆಡಿದರೆ/ನುಡಿದರೆ; ಮಾತಾಡಿದಡೆ=ಮಾತನ್ನಾಡಿದರೆ; ಏನ ಮಾತನಾಡಿದಡೇನು=ನೀತಿ/ನಿಯಮ/ಸತ್ಯ/ಆದರ‍್ಶದ ಸಂಗತಿಗಳನ್ನು ಕುರಿತು ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ ತಾನೇ ಏನು ಪ್ರಯೋಜನ; ಮಾತು+ಆಡದ+ಆತ; ಮೂಕ=ಮಾತು ಬಾರದವನು/ಮಾತನಾಡಲಾಗದವನು ; ತನ್ನ ಮಾತಾಡದಾತ ಮೂಕ=ತನಗೆ ತಿಳಿದಿರುವ ದಿಟ/ಸತ್ಯ/ವಾಸ್ತವವನ್ನು ಕುರಿತು ಮಾತನಾಡದವನು ;

ದಿಟ+ಇಂದ; ದಿಟ=ಸತ್ಯ/ವಾಸ್ತವ/ನಿಜ; ತಾ=ತಾನು ; ದಿಟದಿಂದ ತನ್ನ ತಾ ಕಾಣಬೇಕು/ಕೇಳಬೇಕು/ಮಾತಾಡಬೇಕು=ವಾಸ್ತವದ ನೆಲೆಗಟ್ಟಿನಲ್ಲಿ ವ್ಯಕ್ತಿಯು ತನ್ನ ನಡೆನುಡಿಗಳು ರೂಪುಗೊಳ್ಳುವುದಕ್ಕೆ ಕಾರಣವಾಗಿರುವ ನಿಸರ‍್ಗದಲ್ಲಿ ನಡೆಯುವ ಸಂಗತಿಗಳನ್ನು ಮತ್ತು ಸಮಾಜದ ಕಟ್ಟುಪಾಡು , ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ಚಿಂತಿಸಬೇಕು. ಅವುಗಳಲ್ಲಿ ಕಂಡು/ಕೇಳಿ ಬರುವ ಒಳ್ಳೆಯ/ಕೆಟ್ಟ ಸಂಗತಿಗಳನ್ನು ಒರೆಹಚ್ಚಿ ನೋಡಬೇಕು. ನಿಸರ‍್ಗ ಮತ್ತು ಸಮಾಜದ ನಡುವೆ ಸಿಲುಕಿ ತನ್ನ ಮಯ್ ಮನಗಳಲ್ಲಿ ಉಂಟಾಗುತ್ತಿರುವ ತುಡಿತಗಳನ್ನು ತಿಳಿದುಕೊಂಡು , ತನ್ನ ಒಳಿತಿಗಾಗಿ ಹಂಬಲಿಸುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುವಂತಹ ದಿಟದ/ವಾಸ್ತವದ/ಸತ್ಯದ ನಡೆನುಡಿಗಳನ್ನು ರೂಪಿಸಿಕೊಳ್ಳಬೇಕೆಂಬ ತಿರುಳನ್ನು ಈ ವಾಕ್ಯಗಳು ಹೊಂದಿವೆ;

ಇದೆ=ಈ ರೀತಿಯಲ್ಲಿ ಚಿಂತಿಸುವುದೆ/ಆಲೋಚಿಸುವುದೆ; ನೆಲೆ=ಗುರಿ/ಉದ್ದೇಶ/ನಿಲುವು; ಸ್ವ=ಸ್ವಂತ/ವ್ಯಕ್ತಿಗೆ ಸೇರಿದ/ತನ್ನದೇ ಆದ ; ಭೂಮಿ=ಜಾಗ/ನೆಲ ; ಸ್ವರೂಪು=ನಿಜವಾದ ರೂಪ/ಸಹಜವಾದ ಗುಣ/ಇರುವಿಕೆ ; ಕಾಣ್+ಆ; ಕಾಣಾ=ತಿಳಿದು ನೋಡು/ಅರಿತು ನೋಡು; ಇದೆ ತನ್ನ ನೆಲೆ ಸ್ವಭೂಮಿ ಸ್ವಸ್ವರೂಪು=ವಾಸ್ತವದ ಸಂಗತಿಗಳನ್ನು ಅರಿತುಕೊಂಡು ಒಳ್ಳೆಯ ರೀತಿಯಲ್ಲಿ ಬಾಳುವುದೇ ವ್ಯಕ್ತಿಯ ಜೀವನದ ಗುರಿಯಾಗಿರಬೇಕು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಳು)

 

ನಾನೆಂಬಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು
ಜ್ಞಾನಜ್ಯೋತಿ ಕೆಡಲೊಡನೆ
ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.

ಎಲ್ಲ ರೀತಿಯಿಂದಲೂ ಇತರರಿಗಿಂತ ನಾನೇ ದೊಡ್ಡವನೆಂಬ / ನನ್ನಿಂದಲೇ ಎಲ್ಲವೂ ನಡೆಯುತ್ತಿದೆಯೆಂಬ / ನಾನಿಲ್ಲದೇ ಈ ಜಗತ್ತೇ ಇಲ್ಲವೆಂಬ ಅಹಂಕಾರದ ತುತ್ತತುದಿಯಲ್ಲಿ ಮೆರೆಯತೊಡಗುವ ವ್ಯಕ್ತಿಗಳು ಅರಿವನ್ನು ಕಳೆದುಕೊಂಡು ಹೇಗೆ ನೆಲಕಚ್ಚುತ್ತಾರೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ನಾನ್+ಎಂಬ+ಅಹಂಕಾರ; ನಾನ್=ನಾನು; ಎಂಬ=ಎನ್ನುವ; ಅಹಂಕಾರ=ನಾನೇ ದೊಡ್ಡವನು/ಒಳ್ಳೆಯವನು/ತಿಳಿದವನು/ಕಸುವುಳ್ಳವನು ಎಂಬ ಸೊಕ್ಕಿನ/ಗರ‍್ವದ/ಹಮ್ಮಿನ ನಡೆನುಡಿ; ತಲೆ+ತೋರಿದ+ಅಲ್ಲಿ; ತೋರು=ಕಂಡುಬರು/ಉಂಟಾಗು/ಗೋಚರಿಸು; ತಲೆ+ತೋರು=ತಲೆದೋರು=ಉಂಟಾಗುವುದು/ಕಂಡುಬರುವುದು/ಗೋಚರಿಸುವುದು ಎಂಬ ತಿರುಳಿನ ಒಂದು ನುಡಿಗಟ್ಟು. ಬೇರೆ ಬೇರೆ ತಿರುಳುಳ್ಳ ಎರಡು ಪದಗಳು ಜತೆಗೂಡಿ ಹೊಸಬಗೆಯ ತಿರುಳನ್ನು ಸೂಚಿಸುವ ಪದರೂಪಕ್ಕೆ ನುಡಿಗಟ್ಟು ಎಂದು ಹೆಸರು;  ಅಟಮಟ=ಸುಳ್ಳು/ದಿಟವಲ್ಲದ್ದು; ಕುಟಿಲ=ವಂಚನೆ/ಕಪಟ/ಕುತಂತ್ರ/ಮೋಸ; ಕುಹಕ+ಎಂಬ; ಕುಹಕ=ಮಾಯೆ/ಮಾಟ/ಕಣ್ಕಟ್ಟು/ಇಂದ್ರಜಾಲ; ಬಿರುಗಾಳಿ=ಬಿರುಸಾಗಿ/ಜೋರಾಗಿ ಬೀಸುವ ಗಾಳಿ; ಹುಟ್ಟಿ+ಇತ್ತು; ಹುಟ್ಟು=ಮೂಡು/ಜನಿಸು/ಉಂಟಾಗು ; ಹುಟ್ಟಿತ್ತು=ಮೂಡಿಬಂದಿತ್ತು; ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು=ನಾನೇ ಎಲ್ಲರಿಗಿಂತಲೂ ದೊಡ್ಡವನು / ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ನಾನತ್ವದ ಒಳಮಿಡಿತವು ವ್ಯಕ್ತಿಯ ಮನದಲ್ಲಿ ಹುಟ್ಟಿದಾಗ , ಆತನ ಸಾಮಾಜಿಕ ನಡೆನುಡಿಯಲ್ಲಿ ದೊಡ್ಡ ಬದಲಾವಣೆ ಉಂಟಾಗುತ್ತದೆ. ಅಹಂಕಾರಿಯಾಗಿ ಮೆರೆಯುವುದಕ್ಕಾಗಿ ಮತ್ತು ಅದನ್ನೇ ಉಳಿಸಿಕೊಳ್ಳುವುದಕ್ಕಾಗಿ ಬಗೆಬಗೆಯ ಸುಳ್ಳು/ಬೂಟಾಟಿಕೆ/ತಟವಟ/ವಂಚನೆ/ಮೋಸ/ಕಣ್ಕಟ್ಟಿನ ಅಂದರೆ ಇಲ್ಲದ್ದನ್ನು ಇದೆಯೆಂದು ಇರುವುದನ್ನು ಇಲ್ಲವೆಂದು ನಂಬಿಸುವಂತೆ ಮಾಡುವ ಮಾತುಗಳು / ಕ್ರೂರತನದ ನಡೆನುಡಿಗಳು ಅಹಂಕಾರಗೊಂಡ ವ್ಯಕ್ತಿಯಲ್ಲಿ ಕಂಡುಬರುತ್ತವೆ ಎಂಬ ರೂಪಕದ ತಿರುಳಿನಲ್ಲಿ ಈ ವಾಕ್ಯ ಬಳಕೆಯಾಗಿದೆ;

ಹುಟ್ಟಲ್+ಒಡನೆ; ಒಡನೆ=ಕೂಡಲೇ/ಆ ಗಳಿಗೆಯಲ್ಲೇ; ಹುಟ್ಟಲೊಡನೆ=ಮೂಡುತ್ತಿದ್ದಂತೆಯೇ/ಗೋಚರಿಸುತ್ತಿದ್ದಂತೆಯೇ ; ಆ ಬಿರುಗಾಳಿ ಹುಟ್ಟಲೊಡನೆ= ಅಹಂಕಾರಿಯಾದ ವ್ಯಕ್ತಿಯ ದುರುಳತನದ ನಡೆನುಡಿಗಳಿಂದಾಗಿ; ಜ್ಞಾನ=ಅರಿವು/ತಿಳುವಳಿಕೆ/ಒಳಿತು ಕೆಡುಕುಗಳನ್ನು ವಿಂಗಡಿಸಿ ನೋಡುವ ವಿವೇಕ; ಜ್ಯೋತಿ=ಬೆಳಕು/ಕಾಂತಿ/ತೇಜಸ್ಸು/ಪ್ರಕಾಶ/ದೀವಿಗೆ; ಜ್ಞಾನಜ್ಯೋತಿ=ವ್ಯಕ್ತಿಯನ್ನು ಒಳಿತಿನ ಕಡೆಗೆ ಅಡಿಯಿಡುವಂತೆ/ನಡೆಯುವಂತೆ ಮಾಡುವ ಅರಿವು/ತಿಳಿವು/ವಿವೇಕದ ಒಳಮಿಡಿತ; ಕೆಟ್ಟು+ಇತ್ತು; ಕೆಟ್ಟಿತ್ತು=ನಂದಿ ಹೋಯಿತು/ಆರಿ ಹೋಯಿತು/ಇಲ್ಲವಾಯಿತು; ಕೆಡಲ್+ಒಡನೆ; ಕೆಡು=ಅಳಿ/ನಾಶವಾಗು/ಇಲ್ಲವಾಗು/ಹಾಳಾಗುವುದು; ಕೆಡಲೊಡನೆ=ಇಲ್ಲವಾಗುತ್ತಿದ್ದಂತೆಯೇ/ಹಾಳಾಗುತ್ತಿದ್ದಂತೆಯೇ/ನಾಶವಾದ ಗಳಿಗೆಯಲ್ಲೇ; ನಾ=ನಾನು; ಬಲ್ಲ್+ಎ; ಬಲ್ಲ=ತಿಳಿದ/ಅರಿತ; ಬಲ್ಲೆ=ತಿಳಿದಿದ್ದೇನೆ/ಅರಿತಿದ್ದೇನೆ; ಬಲ್ಲಿದ+ಅರ‍್+ಎಂಬ; ಬಲ್ಲಿದ=ಕಸುವುಳ್ಳವನು/ಶಕ್ತನಾದವನು/ತಿಳಿದವನು/ಅರಿತವನು; ಅರುಹಿರಿಯರು+ಎಲ್ಲರು; ಬಲ್ಲಿದರು=ತಿಳಿದವರು/ಅರಿತವರು; ಅರುಹಿರಿಯರು=ವಿದ್ಯೆಯನ್ನು ಗಳಿಸಿದವರು ಮತ್ತು ವಯಸ್ಸಿನಲ್ಲಿ ದೊಡ್ಡವರು ; ತಾಮಸಕ್ಕೆ+ಒಳಗೆ+ಆಗಿ; ತಾಮಸ=ತಿಳಿಗೇಡಿತನ/ಅರಿವನ್ನು ಕಳೆದುಕೊಳ್ಳುವಿಕೆ ; ಒಳಗಾಗಿ=ಗುರಿಯಾಗಿ/ಸಿಲುಕಿ/ಈಡಾಗಿ/ವಶವಾಗಿ; ಸೀಮೆ+ತಪ್ಪು+ಇ; ಸೀಮೆ=ಎಲ್ಲೆ/ಮೇರೆ/ಗಡಿ; ಸೀಮೆದಪ್ಪು=ಎಲ್ಲೆ ಮೀರುವುದು/ಮಿತಿಯನ್ನು ದಾಟುವುದು/ದಾರಿ ತಪ್ಪುವುದು ಎಂಬ ತಿರುಳಿನ ನುಡಿಗಟ್ಟು; ಕೆಟ್ಟರು=ಹಾಳಾದರು/ನಾಶವಾದರು; ಸೀಮೆದಪ್ಪಿ ಕೆಟ್ಟರು=ಒಳ್ಳೆಯ ನಡೆನುಡಿಗಳನ್ನು ತೊರೆದು , ಕೆಟ್ಟ ನಡೆನುಡಿಗಳಿಗೆ ಒಳಗಾಗಿ ಹಾಳಾದರು ; ಕಾಣ್+ಆ; ಕಾಣ್=ನೋಡು/ತಿಳಿ; ಕಾಣಾ=ಅರಿತು ನೋಡು/ತಿಳಿದು ನೋಡು)

 

ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ
ಅನ್ನ ಉದಕ ಹೊನ್ನು ವಸ್ತ್ರವುಳ್ಳ ದೊರೆಯ ಬಾಗಿಲಲ್ಲಿ
ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು
ಗುಹೇಶ್ವರಾ ನಿಮ್ಮ ಶರಣರು ಆಶಾಪಾಶವಿರಹಿತರು.

ಸಿರಿವಂತಿಕೆ ಮತ್ತು ಆಡಳಿತದ ದೊಡ್ಡ ಗದ್ದುಗೆಯಲ್ಲಿರುವವರನ್ನು ಹಾಡಿಹೊಗಳುತ್ತಾ , ತಮ್ಮತನವನ್ನು ಕಳೆದುಕೊಂಡು ಬಾಳುತ್ತಿರುವ ವ್ಯಕ್ತಿಗಳ ನಡೆನುಡಿಗಳನ್ನು ಈ ವಚನದಲ್ಲಿ ಹೇಳಲಾಗಿದೆ.
“ ತಮ್ಮತನ/ತನ್ನತನ “ ಎಂದರೆ ವ್ಯಕ್ತಿಯು ತಾನಿರುವ/ತಾನು ದುಡಿಯುತ್ತಿರುವ ನೆಲೆಯಲ್ಲಿನ ಒಡೆಯರ/ಉಳ್ಳವರ ನಡೆನುಡಿಯಲ್ಲಿ ತಪ್ಪುಗಳು ಕಂಡುಬಂದಾಗ , ಅವನ್ನು ತಿದ್ದಿಕೊಳ್ಳುವಂತೆ ತಿಳಿಯ ಹೇಳುವ ಎದೆಗಾರಿಕೆ ; ತನ್ನ ಮಾತುಗಳಿಗೆ ಮನ್ನಣೆ ದೊರೆಯದಿದ್ದಾಗ , ಒಡೆಯರ/ಉಳ್ಳವರ ಎಡೆಯಿಂದ ದೂರ ಸರಿಯುವ ದಿಟ್ಟತನ. ಸುಳ್ಳು ನುಡಿ ಇಲ್ಲವೇ ಚಾಡಿ ಮಾತುಗಳಿಂದ ಒಡೆಯರನ್ನು/ಉಳ್ಳವರನ್ನು ಒಲಿಸಿಕೊಂಡು , ತಮಗೆ ಬೇಕಾದುದೆಲ್ಲವನ್ನೂ ಪಡೆದುಕೊಳ್ಳಬೇಕೆಂಬ ಕಪಟತನವಿಲ್ಲದಿರುವುದು; ಅತಿ ವಿನಯವನ್ನು ತೋರಿಸುತ್ತ ಮಯ್ ಮನಗಳನ್ನು ಕುಗ್ಗಿಸಿಕೊಳ್ಳದಿರುವುದು.

( ಮುಸುರೆ=ಅಕ್ಕಿಯನ್ನು ಬೇಯಿಸಿ ಅನ್ನವನ್ನು ಮಾಡಿದ ಇಲ್ಲವೇ ಮುದ್ದೆ ಮಾಡಲೆಂದು ರಾಗಿ ಹಿಟ್ಟನ್ನು ಬೇಯಿಸಿ , ಓನಿಸಿದ ಮಡಕೆಯ ಒಳಗಡೆ ಒರೆದುಕೊಂಡಿರುವ ಅನ್ನದ/ಹಿಟ್ಟಿನ ಕರಿ–ಅಡುಗೆ ಮಾಡಿದ ಮಡಕೆ/ಪಾತ್ರೆಯೊಳಗೆ ಅಂಟಿಕೊಂಡಿರುವ ಆಹಾರದ ಕಣಗಳು; ಮಡಕೆ=ನೀರನ್ನು ತುಂಬಿಡಲು ಇಲ್ಲವೇ ಅಡುಗೆಯನ್ನು ಮಾಡಲು ಬಳಸುವ ಮಣ್ಣಿನಿಂದ ಮಾಡಿರುವ ಪಾತ್ರೆ; ಮುಸುರೆಯ ಮಡಕೆಯ=ಮುಸುರೆಯಿಂದ ಕೂಡಿದ ಮಡಕೆಯನ್ನು ; ನೊಣ=ಮನೆಗಳಲ್ಲಿ/ಕಸಕಡ್ಡಿಗಳಿರುವ ಎಡೆಯಲ್ಲಿ/ಕೊಳಕಿನ ವಸ್ತುಗಳಿರುವ ಜಾಗದಲ್ಲಿ ಹಾರಾಡುವ ಕೀಟ/ಕ್ರಿಮಿ; ಮುತ್ತಿಕೊಂಡು+ಇಪ್ಪ+ಅಂತೆ; ಮುತ್ತು=ಮೇಲೆ ಬೀಳು/ಸುತ್ತುವರಿ/ಆವರಿಸು/ಕವಿದುಕೊಳ್ಳು; ಇಪ್ಪ=ಇರುವ; ಅಂತೆ=ಹಾಗೆ; ಇಪ್ಪಂತೆ=ಇರುವ ರೀತಿಯಲ್ಲಿ;
ಕಸ+ಉಳ್ಳ; ಕಸ=ಹೊಲಗದ್ದೆತೋಟಗಳಲ್ಲಿ ಬೆಳೆಯ ನಡುವೆ ತಾನಾಗಿ ಬೆಳೆದು ನಿಂತಿರುವ ಸಸಿ/ಗಿಡಗಳು/ಕಳೆಗಿಡಗಳು; ಉಳ್ಳ=ಇರುವ; ಹೊಲ+ಅಲ್ಲಿ; ಹೊಲ=ಜಮೀನು/ಬೆಳೆಗಳನ್ನು ಬೆಳೆಯುವ ಪ್ರದೇಶ; ಕಸವುಳ್ಳ ಹೊಲದಲ್ಲಿ=ಬೆಳೆಗಿಂತ ಕಳೆಯೇ ಹೆಚ್ಚಾಗಿ ಬೆಳೆದು ನಿಂತಿರುವ ಹೊಲದಲ್ಲಿ ; ಪಶು=ಹಸು/ಗೋವು/ದನ; ನೆರೆದು+ಇಪ್ಪ+ಅಂತೆ; ನೆರೆ=ಗುಂಪುಗೂಡು/ಒಟ್ಟಾಗಿ ಸೇರು/ಜತೆಗೂಡು; ನೆರೆದು=ಜತೆಗೂಡಿ/ಗುಂಪಾಗಿ/ಒಟ್ಟಾಗಿ;

ಅನ್ನ=ಆಹಾರ/ಉಣಿಸು/ತಿನಸು; ಉದಕ=ಅನ್ನ/ಹಿಟ್ಟು ಮುಂತಾದುವನ್ನು ಉಣ್ಣುವಾಗ , ಅದರೊಡನೆ ಬೆರೆಸಿಕೊಳ್ಳುವ ಸಾರು/ಎಸರು/ಹುಳಿ/ಸಾಂಬಾರು; ಹೊನ್ನು=ಚಿನ್ನ/ಬಂಗಾರ/ಸಂಪತ್ತು; ವಸ್ತ್ರ+ಉಳ್ಳ; ವಸ್ತ್ರ=ಬಟ್ಟೆ/ಅರಿವೆ; ದೊರೆ=ರಾಜ/ಅರಸ/ಒಡೆಯ; ಬಾಗಿಲು+ಅಲ್ಲಿ; ದೊರೆಯ ಬಾಗಿಲಲ್ಲಿ=ಸಿರಿವಂತರ/ಗದ್ದುಗೆಯನ್ನೇರಿದವರ ಮನೆಯ ಮುಂದೆ/ಸಮೀಪದಲ್ಲಿ/ಬಳಿಯಲ್ಲಿ/ಹತ್ತಿರದಲ್ಲಿ/ಕಾಲ ಬುಡದಲ್ಲಿ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ;

ಬಹು=ಅನೇಕ/ಹಲವು/ಬಗೆಬಗೆಯ; ಹಿರಿಯರು=ವಯಸ್ಸಿನಲ್ಲಿ ಮತ್ತು ಅರಿವಿನಲ್ಲಿ ದೊಡ್ಡವರು; ಬಹುಭಾಷೆಯ ಹಿರಿಯರು=ಎರಡು ಇಲ್ಲವೇ ಎರಡಕ್ಕಿಂತ ಹೆಚ್ಚಿನ ನುಡಿಗಳ ಕಲಿಕೆ ಮತ್ತು ಬಳಕೆಯಲ್ಲಿ ಚೆನ್ನಾಗಿ ಪರಿಣತರಾದವರು/ಕವಿಗಳು/ವಿದ್ವಾಂಸರು/ಕಲಾವಿದರು/ಮಾತಿನ ಚತುರರು/ಗಮಕಿಗಳು/ಹಾಸ್ಯಪಟುಗಳು; ನೆರೆದು+ಕೊಂಡು+ಇಪ್ಪರು; ಇಪ್ಪರು=ಇರುವರು; ಶರಣ=ಶಿವನ ಬಗ್ಗೆ ಒಲವುಳ್ಳವನು/ಒಳ್ಳೆಯ ನಡೆನುಡಿಗಳಲ್ಲೇ ಶಿವನನ್ನು ಕಾಣುವಂತಹವನು; ಆಶಾ+ಪಾಶ+ವಿರಹಿತರು; ಆಶಾ=ಆಸೆ/ಬಯಕೆ/ಹಂಬಲ; ಪಾಶ=ಹಗ್ಗ/ಬಲೆ/ಜಾಲ/ಕೊರಳಿಗೆ ಹಾಕಿ ಎಳೆಯುವ ನೇಣಿನ ಕುಣಿಕೆ; ವಿರಹಿತ=ಇಲ್ಲದಿರುವವನು/ಬಿಟ್ಟವನು/ತೊರೆದವನು; ಆಶಾಪಾಶವಿರಹಿತರು=ಹೆಚ್ಚಿನ ಬಯಕೆಗೆ/ ಕೆಟ್ಟ ಆಸೆಗಳಿಗೆ ಒಳಗಾಗದವರು/ಬಲಿಯಾಗದವರು/ಈಡಾಗದವರು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: