ಯೋಚಿಸುವ ಮುನ್ನ…
“ಬಾವನೆ” ಎಂದರೆ ಏನು? ಮನಸಿನ ಸ್ತಿತಿ-ಗತಿಗಳನ್ನು ನಾವು ಬಾವನೆಗಳೆಂದು ಹೇಳಬಹುದೆ? ಬಯ, ಕೋಪ, ಬೇಸರ,ಪ್ರೀತಿ, ಅಸಹ್ಯ – ಇವೆಲ್ಲವು ನಮ್ಮೆಲ್ಲರಲ್ಲಿ ಮೂಡುವಂತಹ ಬಾವನೆಗಳು. ಹಾಗಾದರೆ ಈ ಎಲ್ಲಾ ಬಾವನೆಗಳು ಹುಟ್ಟುವ ನೆಲೆ ಯಾವುದು? ಮಾತಿನಲ್ಲಿ, ಕೈಯಲ್ಲಿ, ಕಾಲುಗಳಲ್ಲಿ ಅತವಾ ಉಸಿರಾಟದಲ್ಲಿ?ಎಲ್ಲಿ ಹುಟ್ಟುವುದು ಈ ಬಾವನೆ?.
ಉತ್ತರ ಹುಡುಕಲು ಒಂದು ಉಪಾಯ ಇದೆ. ಮನೆಯಲ್ಲಿ ಅತವಾ ಎಲ್ಲಿಯಾದರೂ, ಸೂಕ್ತವಾದ ನಿಶ್ಯಬ್ದವಾದ ಜಾಗವನ್ನು ಆಯ್ಕೆ ಮಾಡಿ, ಆ ಜಾಗದಲ್ಲಿ ಸ್ವಲ್ಪ ಸಮಯ ಶಾಂತವಾಗಿ ಕುಳಿತು ನಮ್ಮೊಳಗಿನ ಮಾತುಗಳನ್ನು ಹರಿಬಿಟ್ಟರೆ ಸ್ರುಶ್ಟಿಯಾಗುವ ವಿಚಾರಗಳನ್ನು ನಾವು ಬಾವನೆ ಎನಬಹುದು.
ನಾವು ನಮ್ಮ ಆಲೋಚನೆಗಳನ್ನು ಕೆಲವು ಬಾರಿ ಆಳವಾಗಿ ಪರಿಶೀಲಿಸಿ ದ್ರುಡವಾದ ತೀರ‍್ಮಾನವನ್ನು ತೆಗೆದುಕೊಳ್ಳುತ್ತೇವೆ. ಆದರೆ ತೀರ‍್ಮಾನವನ್ನು ತೆಗೆದುಕೊಳ್ಳುವ ಮುನ್ನ ಕೊಂಚ ಯೋಚಿಸುವುದು ಒಳ್ಳೆಯದು . ಉದಾಹರಣೆಗೆ, ನೀವು ತುಂಬಾ ನೊಂದುಕೊಂಡಿದ್ದೀರಿ ಎಂದುಕೊಂಡರೆ, ನೊಂದುಕೊಂಡಿದ್ದೇನೆ ಎಂಬ ಬಾವನೆ ನಿಮ್ಮನ್ನು ಕುಗ್ಗಿದ ಮನಸ್ತಿತಿಯ ವ್ಯಕ್ತಿಯನ್ನಾಗಿ ಮಾಡಿಬಿಡುವುದು, ಮಾಡುವ ಪ್ರತಿ ಚಟುವಟಿಕೆಗಳು ಅದೇ ಮನೋಬಾವದಲ್ಲಿ ನಿಮ್ಮನ್ನು ಮುಂದುವರೆಸುವವು.
ಮನೆಯವರಾಗಿರಲಿ ಅತವಾ ಹೊರಗಿನವರಾಗಿರಲಿ, ಯಾರ ಜೊತೆ ಮಾತನಾಡುವಾಗಲೂ ಕೂಡ ಮನದಲ್ಲಿ ಅದೇ ಬಾವನೆ ಇರಿಸಿಕೊಂಡು ನಾವು ಅವರ ಜೊತೆ ಮಾತನಾಡುತ್ತೇವೆ. ಕೆಲವು ಬಾರಿ ಸಂತಸದಿದ್ದಾಗ ಅತವಾ ಆ ರೀತಿಯ ಕ್ಶಣಗಳಿದ್ದಾಗ ನಮ್ಮ ಮನಸ್ಸಿನ ಬಾವನೆ, ನಮ್ಮ ಜೊತೆಯಿರುವ ವ್ಯಕ್ತಿಯ ಹತ್ತಿರ ಮಾತನಾಡುವ ರೀತಿ ಬೇರೆಯೇ ಆಗಿರುತ್ತದೆ. ಕೆಲಸ ಮಾಡಲು ಮನದಲ್ಲಿ ಅದೇನೊ ಒಂದು ತರಹದ ಹುಮ್ಮಸ್ಸು.
ಇಂತಹ ಕೆಲವು ಪ್ರಸಂಗಗಳು ನಮ್ಮೆಲ್ಲರೊಡನೆ ಹಲವಾರು ಬಾರಿ ಆಗಿವೆ, ಆಗುತ್ತಿವೆ, ಮುಂದೆ ಕೂಡ ಆಗುತ್ತವೆ. ನಿಮ್ಮ ಆಲೋಚನೆಗಳು ಹೇಗೆ ಇರುತ್ತವೆ ಹಾಗೆಯೆ ನಿಮ್ಮ ಮನಸ್ಸಿನ ಸ್ತಿತಿ-ಗತಿಗಳು ಬದಲಾಗುತ್ತಿರುತ್ತವೆ. ಜೀವನದಲ್ಲಿ ನೋವು ಬರುವುದು ಸಹಜ, ಅದರ ಬಗ್ಗೆ ಚಿಂತಿಸಿ ಪಲವಿಲ್ಲ ಎಂದು ನಾವೇ ನಮ್ಮ ಮನಸಿಗೆ ಹೇಳಿಕೊಂಡರೆ? ನಮ್ಮ ಮನಸ್ಸಿನಲ್ಲಿ ಮೂಡಿದ ಈ ಸಾಂತ್ವನದ ಮಾತುಗಳೇ ನಮ್ಮನ್ನು ನಿರುತ್ಸಾಹಿಗಳಾಗದಂತೆ ನೋಡಿಕೊಳ್ಳುತ್ತವೆ. ನಮ್ಮಲ್ಲಿ ಉಂಟಾಗುವ ಆಲೋಚನೆಗಳು ಮತ್ತು ಆಲೋಚಿಸಲು ಮೂಲ ಕಾರಣ, ನಾವು ಮನಸ್ಸಿನಲ್ಲಿ ಅಂದುಕೊಂಡಂತ ಮಾತುಗಳು.
ಅಯ್ಯೋ! ತುಂಬಾ ಸುಸ್ತಾಗಿದೆ.
ಯಾಕೋ ಬೇಜಾರಾಗುತ್ತಿದೆ.
ಈ ಕೆಲಸ ನನ್ನಿಂದ ಆಗದು.
ನಾನೊಬ್ಬ ದುರಾದ್ರುಶ್ಟ.
ಇಂತಹ ಕೆಲವು ಕುಗ್ಗಿಸುವ (Negative) ನುಡಿಗಳನ್ನು ನಾವು ನಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೆ, ಈ ಆಲೋಚನೆಗಳು ನಮ್ಮನ್ನು ಕುಗ್ಗಿಸುತ್ತವೆ. ಆದ್ದರಿಂದ, ಆದಶ್ಟೂ ಮನಸ್ಸನ್ನು ಹಾಗು ನಮ್ಮ ಹುಮ್ಮಸ್ಸನ್ನು ಕುಗ್ಗಿಸುವಂತಹ ನುಡಿಗಳನ್ನಾಡದೆ ಇರುವುದು ಒಳಿತು. ನಮಗೆ ಬೇಕಾದಶ್ಟು ಮಾತುಗಳನ್ನು ನಾವು ಹಲವು ವಿದವಾಗಿ ಹೇಳಬಹುದು. ನಮ್ಮ ಮಾತುಗಳನ್ನು ಬೇರೆ ಬೇರೆ ವರಸೆಯಲ್ಲಿ ಕೂಡ ನುಡಿಯಬಹುದು. ನುಡಿಯುವ ಮಾತುಗಳು ನಮ್ಮನ್ನು ಕುಗ್ಗಿಸದೇ ಮುನ್ನಡೆಸುವಂತಹ ಮಾತುಗಳು ಆಗಿರಬೇಕು ಹಾಗು ಪ್ರತಿಯೊಂದರ ಮೇಲೆ ಹಿಡಿತ ಕಾಯ್ದುಕೊಂಡಿರಬೇಕು.
ನಮ್ಮ ಮನದಲ್ಲಿ ಮೂಡಿದ ಬಾವನೆ ಒಳ್ಳೆಯದೇ ಆಗಿರಲಿ ಅತವಾ ಕೆಟ್ಟದ್ದೇ ಆಗಿರಲಿ, ಆ ಬಾವನೆಗಳನ್ನು ಒಂದೇ ಸಲ ಹಿಡಿದಿಡುವುದು ಸ್ವಲ್ಪ ಕಶ್ಟವೆ ಸರಿ. ಬಾವನೆಗಳನ್ನು ಒಮ್ಮೆಲೆ ಹಿಡಿದಿಡುವುದಕ್ಕಿಂತ, ನಿಮ್ಮಲ್ಲಿ ಮೂಡಿದ ಬಾವನೆಗಳನ್ನು ಮನದಲ್ಲಿ ಸ್ವಲ್ಪ ಸಹಜವಾಗಿ ಓಡಾಡಲು ಬಿಡಿ. ನಂತರ ಅವುಗಳನ್ನು ಆಳವಾಗಿ ಗಮನಿಸಿ, ಆಗ ನಿಮ್ಮ ಬಾವನೆಗಳು ಸರಿಯಾದ ಆಲೋಚನೆಗಳೇ? ಎಂಬುದನ್ನು ನೀವೇ ತಿಳಿಯುವಿರಿ. ನಿಮ್ಮ ಬಾವನೆಗಳನ್ನು ಪದೇ ಪದೇ ಗಮನಿಸಿ, ಸರಿಯಾಗಿ ನಿರ‍್ದಾರ ತೆಗೆದುಕೊಳ್ಳುವ ಮನಸ್ತಿತಿಯನ್ನು ನೀವು ಹೊಂದಿರಬೇಕು. ಹಾಗೆ ತೆಗೆದುಕೊಂಡ ನಿರ‍್ದಾರಗಳು ನಿಮ್ಮನ್ನು ಕೆಳಕ್ಕೆ ಎಳೆಯುವ ಮಾತುಗಳಿಂದ ಹೊರಬರುವಂತೆ ಇರಬೇಕು.ನಮ್ಮ ಆಲೋಚನೆಗಳು ಯಾವಾಗಲು ಒಳ್ಳೆಯ ಚಿಂತನೆಗಳನ್ನು ಹೊಮ್ಮಿಸುವ, ಗೆಲುವು ತರುವಂತಹ ಒಳಿತುಬಗೆತ (Positive) ಮನದ ಮಾತುಗಳಾಗಿರಲಿ.
( ಚಿತ್ರ ಸೆಲೆ: wikimedia )
ಇತ್ತೀಚಿನ ಅನಿಸಿಕೆಗಳು