ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

– ನಾಗರಾಜ್ ಬದ್ರಾ.

ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ ಬೇಟೆಗೆ ಹೆಸರಾಗಿದೆ. ಆ ಹುಳವೇ ಕೊಡತಿ ಹುಳ (Dragonflies)! ಇದನ್ನು ತೂಕದ ಹುಳ, ಮಳೆಹುಳ, ಮುದ್ದೆಕೋಲು, ಬೀರಬಿಕ್ಕಿ, ಹಾರುಹುಳ ಹೀಗೆ ಮುಂತಾದ ಹೆಸರುಗಳಿಂದ ಕೂಡ ಕರೆಯುತ್ತಾರೆ. ಕೊಡತಿ ಹುಳವು ಸಾಮಾನ್ಯವಾಗಿ ಸೊಳ್ಳೆ, ನೊಣ, ಚಿಟ್ಟೆ, ದೀಪದ ಹುಳ, ಜೀರುಂಡೆ, ಜೇನುನೊಣ ಮುಂತಾದವುಗಳನ್ನು ಬೇಟೆಯಾಡುತ್ತದೆ.

ಬೇಟೆಯಲ್ಲಿ ತುಂಬಾ ನಿಪುಣ!

ಕೊಡತಿ ಹುಳವು ಬೇಟೆಯಲ್ಲಿ ಗುರಿತಪ್ಪುವುದು ತುಂಬಾ ಕಡಿಮೆ. 100ರಲ್ಲಿ ಸುಮಾರು 95 ಬೇಟೆಗಳಲ್ಲಿ ಇದು ಗೆಲುವನ್ನು ಕಾಣುತ್ತದೆ. ಇತರೆ ಹುಳಗಳಂತೆ ಬೇಟೆಯನ್ನು ಕಂಡಕೂಡಲೇ ಅದನ್ನು ಅಟ್ಟಿಸಿಕೊಂಡು ಹೋಗುವುದಿಲ್ಲ. ಬದಲಿಗೆ ದೂರದಿಂದಲೇ ಬೇಟೆಯ ದೂರ, ಹಾರಾಟದ ಬಿರುಸು ಹಾಗೂ ದಿಕ್ಕನ್ನು ಲೆಕ್ಕಹಾಕಿ ಹೊಂಚುಹಾಕುತ್ತದೆ. ಬಳಿಕ ತನ್ನ ಬೇಟೆಯ ಮೇಲೆ ಎರಗಲು ಬೇಕಾದ ಹಾರಾಟವನ್ನು ಹೊಂದಿಸಿಕೊಂಡು ಎರಗುತ್ತದೆ. ಹಾರಾಡುತ್ತಿರುವ ನೂರಾರು ಹುಳಗಳ ನಡುವೆ ತನಗೆ ಬೇಕಾದ ಒಂದು ಹುಳದ ಮೇಲೆ ಕಣ್ಣಿಟ್ಟು ಇದು ಎರಗಬಲ್ಲದು.

ಇದರ ಬಾಯಿಯಿಂದ ತಪ್ಪಿಸಿಕೊಳ್ಳುವುದು ತುಂಬಾ ಕಶ್ಟ

ಒಡೊನಾಟಾ (Odonata) ಎಂಬ ಗುಂಪಿಗೆ ಕೊಡತಿ ಹುಳಗಳು ಸೇರಿದ್ದು, ಇದು ಹಲ್ಲುಗಳಿರುವ ಹುಳಗಳ ಒಂದು ಗುಂಪಾಗಿದೆ. ಗರಗಸದಂತೆ ಚೂಪಾದ, ಸಾಲಾಗಿರುವ ಕೆಳದವಡೆ ಹಲ್ಲುಗಳನ್ನು ಇದು ಹೊಂದಿದೆ. ಮೊದಲಿಗೆ ಕಾಲುಗಳ ನೆರವಿನಿಂದ ಬೇಟೆಯನ್ನು ಹಿಡಿಯುವ ಹುಳವು, ಕೂಡಲೇ ತನ್ನ ಚೂಪಾದ ಹಲ್ಲುಗಳಿಂದ ಅದು ಹಿಡಿದ ಹುಳದ ರೆಕ್ಕೆಗಳನ್ನು ಕತ್ತರಿಸುತ್ತದೆ. ರೆಕ್ಕೆಗಳನ್ನು ಕಳೆದುಕೊಂಡ ಬೇಟೆಯು ತಪ್ಪಿಸಿಕೊಳ್ಳಲಾಗದೇ ನೆಲಕ್ಕೆ ಬಿದ್ದು ಕೊಡತಿ ಹುಳವಿಗೆ ಊಟವಾಗುತ್ತದೆ. ಹೀಗಾಗಿ ಬೇಟೆಯು ಇದರ ಕೈಯಿಂದ ಸಲೀಸಾಗಿ ತಪ್ಪಿಸಿಕೊಳ್ಳಲು ಸಾದ್ಯವಿಲ್ಲ.

ಹೇಗೆ ಬೇಕಾದರೂ ಹಾರಬಲ್ಲವು!

ಕೊಡತಿ ಹುಳವು ಎರಡು ಜೊತೆ ರೆಕ್ಕೆಗಳನ್ನು ಹೊಂದಿದ್ದು, ಅವು ಹೊಟ್ಟೆಯಲ್ಲಿರುವ ನರಕಟ್ಟುಗಳೊಂದಿಗೆ ಕೂಡಿಕೊಂಡಿವೆ. ಈ ರೆಕ್ಕೆಗಳು ಸ್ವತಂತ್ರವಾಗಿ ಕೆಲಸಮಾಡಬಲ್ಲವು, ಹಾಗಾಗಿ ಇವು ಹಾರುವಾಗ ಹಿಂದೆ, ಮುಂದೆ, ಎಡ, ಬಲ ಹೀಗೆ ಯಾವ ಕಡೆಗೆ ಬೇಕಾದರೂ ಕೂಡಲೇ ದಿಕ್ಕನ್ನು ಬದಲಿಸಿ ಹಾರಬಲ್ಲವು. ಒಂದೇ ಜಾಗದಲ್ಲಿ ಒಂದು ನಿಮಿಶ ಅತವಾ ಅದಕ್ಕಿಂತ ಹೆಚ್ಚಿನ ಹೊತ್ತಿನವರೆಗೂ ರೆಕ್ಕೆಬಡಿಯುತ್ತಾ ಗಾಳಿಯಲ್ಲಿ ನಿಲ್ಲಬಲ್ಲವು. ಇದರಿಂದಾಗಿ ಕೊಡತಿ ಹುಳವು ಬೇಟೆಗೆ ಯಾಮಾರಿಸಿ ಯಾವ ದಿಕ್ಕಿನಿಂದ ಬೇಕಾದರೂ ಹಲ್ಲೆ ಮಾಡುತ್ತವೆ. ಬೇಟೆಯಲ್ಲಿ ಇದರ ಗೆಲುವಿಗೆ ಈ ವಿಶೇಶ ಅಳವು ಕೂಡ ಒಂದು ಪ್ರಮುಕ ಕಾರಣವಾಗಿದೆ.

ಹಾರಾಟದಲ್ಲಿ ತುಂಬಾ ಬಿರುಸು

ಬೇಟೆಯಲ್ಲಿ ತುಂಬಾ ಚುರುಕಲ್ಲದೇ ಇವು ಬಿರುಸಾದ ಹಾರಾಟವನ್ನು ಕೂಡ ಮಾಡುತ್ತವೆ. ಕೆಲವೊಂದು ಜಾತಿಯ ಕೊಡತಿ ಹುಳಗಳು ಗಂಟೆಗೆ ಸುಮಾರು 18 ಮೈಲುಗಳಶ್ಟು ಬಿರುಸಾಗಿ ಹಾರಾಟ ಮಾಡಬಲ್ಲವು. ಇವಕ್ಕೆ ಸಾಹಸ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಗ್ಲೋಬ್ ಸ್ಕಿಮ್ಮರ್, ಪಂಟಾಲಾ ಪ್ಲಾವೆಸ್ಸೆನ್ಸ್ (globe skimmer, Pantala flavescens) ಎಂದು ಕರೆಯಲ್ಪಡುವ ಕೊಡತಿ ಹುಳವು ವಲಸೆ ಹೋಗುವಾಗ ಕಡಲನ್ನು ದಾಟಿ ಸುಮಾರು 11000 ಮೈಲಿಗಳಶ್ಟು ದೂರದವರೆಗೂ ಹಾರಿಹೋಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ವಿಶ್ವದ ಅತಿ ಉದ್ದದ ಹುಳವಿನ ವಲಸೆ ಎಂದು ಕರೆಯಲಾಗುತ್ತದೆ. ಕೊಡತಿ ಹುಳದ ಬೇಟೆಯಾಡುವ ಬಿರುಸು, ಚಲಿಸುವ ದೂರ ಹಾಗೂ ಬೇಟೆಗೆ ಹೊಂದಿಕೊಳ್ಳುವ ಗುಣಕ್ಕೆ ಸರಿಸಾಟಿಯಾಗಿ ಬೇರಾವ ಹುಳ ಈ ಜಗತ್ತಿನಲ್ಲಿಲ್ಲ ಎಂದು ಹೇಳಲಾಗುತ್ತದೆ.

ಇವುಗಳದ್ದು ಮನುಶ್ಯನನ್ನು ಮೀರಿಸುವಂತಹ ನೋಟ!

ಕೊಡತಿ ಹುಳದ ತಲೆಯ ಬಾಗವು ಎರಡು ದೊಡ್ಡದಾದ ಕಣ್ಣುಗಳನ್ನು ಒಳಗೊಂಡಿದೆ. ಈ ಕಣ್ಣುಗಳು ಸುಮಾರು 30,000 ಕೂಡುಗಣ್ಣುಗಳನ್ನು (facets) ಹೊಂದಿದ್ದು, ಪ್ರತಿಯೊಂದು ಕೂಡುಗಣ್ಣು ಸುತ್ತಮುತ್ತಲಿನ ಹುಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದಲ್ಲದೇ ಹೆಚ್ಚು-ಕಡಿಮೆ 360 ಡಿಗ್ರಿ ಕೋನದಶ್ಟು ನೋಟವನ್ನು ಇವು ನೋಡಬಲ್ಲವು. ಈ ಅಸಾಮಾನ್ಯ ನೋಟವೇ ಹಿಂಡುಹಿಂಡಾಗಿ ಬರುತ್ತಿರುವ ಹುಳಗಳ ನಡುವೆ ತನ್ನ ಬೇಟೆಯನ್ನು ಗುರುತಿಸಿ, ಹಿಂಡಿನಲ್ಲಿರುವ ಇತರೆ ಹುಳಗಳಿಗೆ ಡಿಕ್ಕಿ ಹೊಡೆಯದೆ ಬೇಟೆಯ ಮೇಲೆ ಹಲ್ಲೆ ಮಾಡಲು ನೆರವಾಗುತ್ತದೆ.

ಇವು ಅಸಾಮಾನ್ಯ ನೋಟವನ್ನು ಮಾತ್ರ ಹೊಂದಿಲ್ಲ, ನಾವು ಊಹಿಸಲಾಗದಂತ ಬಣ್ಣಗಳಲ್ಲಿ ಪ್ರಪಂಚವನ್ನು ನೋಡಬಲ್ಲವು. ನಾವು ಮೂರು ಬಣ್ಣದ ನೋಟವನ್ನು (tri-chromatic vision) ಹೊಂದಿದ್ದು, ಅದರಂತೆ ಕೆಂಪು, ನೀಲಿ ಹಾಗೂ ಹಸಿರು ಬಣ್ಣಗಳ ಒಂದುಗೆಯಲ್ಲಿ (combination) ಬಣ್ಣಗಳನ್ನು ಗುರುತಿಸುತ್ತೇವೆ. ಅರಕೆಕಾರರು 12 ಬೇರೆ ಬೇರೆ ಜಾತಿಯ ಕೊಡತಿ ಹುಳಗಳನ್ನು ಆಯ್ಕೆ ಮಾಡಿ ಅವುಗಳ ನೋಟದ ಮೇಲೆ ಅರಕೆಯೊಂದನ್ನು ಮಾಡಿದ್ದರು. ಅದರಲ್ಲಿ ಪ್ರತಿಯೊಂದು ಜಾತಿಯ ಕೊಡತಿ ಹುಳವು 11 ಕ್ಕಿಂತ ಕಡಿಮೆ ಬಣ್ಣದ ನೋಟವನ್ನು ಹೊಂದಿಲ್ಲ ಎಂದು ತಿಳಿದುಬಂದಿದ್ದು, ಇನ್ನು ಕೆಲವೊಂದು ಜಾತಿಯವು ಸುಮಾರು 30 ಬಣ್ಣದ ನೋಟನ್ನು ಕೂಡ ಹೊಂದಿವೆ ಎಂದು ಹೇಳಲಾಗುತ್ತದೆ.

ನೀರಿನಲ್ಲೂ ಬದುಕುತ್ತವೆ!

ನೆಲದ ಮೇಲಲ್ಲದೇ ನೀರಿನಲ್ಲಿಯೂ ಕೊಡತಿ ಹುಳಗಳು ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳಗಳು ಸುಮಾರು 2 ವರುಶಗಳವರೆಗೆ ನೀರೊಳಗೆ ಬದುಕುತ್ತವೆ. ಕೆಲವೊಂದು ಜಾತಿಯವು 6 ವರುಶಗಳವರೆಗೂ ನೀರಿನಲ್ಲಿ ಬದುಕುತ್ತವೆ. ಈ ಹಂತದಲ್ಲಿ ನೀರಿನಲ್ಲಿಯೂ ಮೀನು ಹಾಗೂ ಜಂತುಹುಳಗಳನ್ನು ಬೇಟೆಯಾಡಿ ತಿನ್ನಬಲ್ಲವು.

ಕೊಡತಿ ಹುಳುಗಳ ಸಲಹುವೆಡೆ (sanctuary) ಕೂಡ ಇದ್ದಾವೆ!

2009 ರಲ್ಲಿ ಯುನೈಟೆಡ್ ಕಿಂಗ್ಡಮ್ ನ ಕೇಂಬ್ರಿಜ್‍ಶೈರ್ (Cambridgeshire) ನಲ್ಲಿ ಪ್ರಕ್ರುತಿಗಾಗಿ ಮೀಸಲಿಟ್ಟಿರುವ ವಿಕನ್ ಪೆನ್ (Wicken Fen) ಎಂಬ ಪ್ರದೇಶದಲ್ಲಿ ಜಗತ್ತಿನ ಮೊಟ್ಟಮೊದಲ ಕೊಡತಿ ಹುಳಗಳ ಸಲಹುವೆಡೆಯನ್ನು ಆರಂಬಿಸಲಾಯಿತು. ಯುನೈಟೆಡ್ ಕಿಂಗ್ಡಮ್ ನಲ್ಲಿ ಅಳಿವಿನ ಅಂಚಿನಲ್ಲಿರುವ 42 ಜಾತಿಯ ಕೊಡತಿ ಹುಳಗಳಿಗೆ ಅಲ್ಲಿ ನೆಲೆಯನ್ನು ನೀಡಲಾಗಿದೆ.

ನ್ಯೂ ಮೆಕ್ಸಿಕೋದ ಅಲ್ಬುಕರ‍್ಕ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ನ ಮೊದಲ ಕೊಡತಿ ಹುಳಗಳ ನೆಲೆಯನ್ನು ಆರಂಬಿಸಲಾಗಿದ್ದು, ಅಲ್ಲಿ ಅವುಗಳಿಗೆ ಬದುಕಲು ಅನುಕೂಲಕರವಾದ ಪರಿಸರವನ್ನು ನಿರ‍್ಮಿಸಿ ಹಲವಾರು ಜಾತಿಯ ಕೊಡತಿ ಹುಳಗಳನ್ನು ಕಾಪಾಡಲಾಗುತ್ತಿದೆ. ಹಾಗೆಯೇ ಜಪಾನ್ ದೇಶದಲ್ಲಿಯು ಕೂಡ ಇವುಗಳ ಸಂತತಿಯನ್ನು ಕಾಪಾಡಲು ಹಲವಾರು ನೆಲೆಗಳನ್ನು ಆರಂಬಿಸಲಾಗಿದೆ.

ಜಗತ್ತಿನಾದ್ಯಂತ ಸುಮಾರು 3000 ಜಾತಿಯ ಕೊಡತಿ ಹುಳಗಳಿದ್ದು, ಸುಮಾರು 300 ಮಿಲಿಯನ್ ವರ‍್ಶಗಳ ಹಿಂದಿನಿಂದಲೂ ಇವು ಬದುಕುತ್ತಿವೆ. ಈ ನೆಲದ ಮೇಲೆ ಮೊಟ್ಟಮೊದಲ ಬಾರಿಗೆ ವಾಸಿಸಲು ಆರಂಬಿಸಿದ ರೆಕ್ಕೆಗಳಿರುವ ಹುಳಗಳಲ್ಲಿ ಇದು ಒಂದಾಗಿದೆ. ಇವುಗಳಲ್ಲಿ ಹೆಚ್ಚಿನವು ನಮ್ಮ ತೊಗಲಿಗೆ ಹಾನಿ ಮಾಡಬಹುದಾದ ಚೂಪಾದ ಹಲ್ಲುಗಳನ್ನು ಹೊಂದಿಲ್ಲ. ಕೇವಲ ಬೆರಳೆಣಿಕೆಯಶ್ಟು ಜಾತಿಯ ಹುಳಗಳು ಮಾತ್ರ ನಮಗೆ ಹಾನಿ ಮಾಡಬಹುದಾಗಿದ್ದು, ಅದು ತನ್ನನ್ನು ತಾನು ಕಾಪಾಡಿಕೊಳ್ಳಲು ಬಳಸುವ ತಂತ್ರ ಮಾತ್ರವಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ನೀವು ಕೊಡತಿ ಹುಳಗಳ ನೆಲೆಗಳಲ್ಲಿ ಸುತ್ತಾಡುವಾಗ ಚಿಂತೆ ಮಾಡಬೇಕಾಗಿಲ್ಲ.

(ಮಾಹಿತಿ ಸೆಲೆ: mnn.comdragonflywebsite.com )
(ಚಿತ್ರ ಸೆಲೆ: wiki, pixabay.com, pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: