ಹುಟ್ಯಾನ ಕ್ರಿಸ್ತ ಗೋದಾಲಿಯಾಗ…

– ಅಜಯ್ ರಾಜ್.

ಕ್ರಿಸ್ಮಸ್ ಸಂಬ್ರಮ ಸಡಗರದ ಹಬ್ಬ. ಕ್ರಿಸ್ತ ಹುಟ್ಟಿದ ಈ ಸುದಿನದಂದು ಪ್ರಪಂಚದಾದ್ಯಂತ ಸಂಬ್ರಮದ ವಾತಾವರಣ ಮೂಡುತ್ತದೆ. ಶುಬಾಶಯಗಳು, ಪರಸ್ಪರ ಉಡುಗೊರೆ ವಿನಿಮಯ, ಕೇಕ್, ಚಾಕೊಲೆಟ್‍ಗಳನ್ನು ಸವಿಯುವುದಲ್ಲದೆ, ಹಲವು ಬಗೆಯ ಸಿಹಿ ಕಾದ್ಯಗಳನ್ನು ಇತರರಿಗೆ ಹಂಚುವುದು ಸಾದಾರಣವಾಗಿ ಕಂಡು ಬರುವ ದ್ರುಶ್ಯಗಳು. ನಮ್ಮ ಮನೆಯೂ ಇದಕ್ಕೆ ಹೊರತಲ್ಲ. ಆದರೂ ಕೆಲವೊಮ್ಮೆ ನನಗೆ ಒಂದು ರೀತಿಯಲ್ಲಿ ಕ್ರಿಸ್ಮಸ್ ಪರಿಪೂರ‍್ಣವೆನಿಸುವುದಿಲ್ಲ. ಇರುವವರೇನೋ ಅತ್ಯಂತ ವಿಜ್ರುಂಬಣೆಯಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ ಆದರೆ ಇಲ್ಲದವರ ಪಾಡು? ಅನಾತಾಶ್ರಮ, ದೀನ ನಿಲಯ, ವ್ರುದ್ದಾಶ್ರಮಗಳಲ್ಲಿರುವವರು ಹೇಗೆ ಕ್ರಿಸ್ಮಸ್ ಹಬ್ಬದ ಸಂಬ್ರಮವನ್ನು ಸವಿಯಲು ಸಾದ್ಯ? ಎಲ್ಲಿಯೂ, ಎಂದಿಗೂ ಕ್ರಿಸ್ತ ವಿಜ್ರುಂಬಣೆಯನ್ನು ಒಪ್ಪಿದವನೇ ಅಲ್ಲ. ಅರ‍್ತಾತ್ ಆತ ಹುಟ್ಟಿದ್ದೇ ದನದ ಕೊಟ್ಟಿಗೆಯಲ್ಲಿ. ಬರಿ ಸಂಬ್ರಮದ ಅಮಲಲ್ಲಿ ತೇಲಾಡಿ, ಅಂತರಗದಲ್ಲಿ ಬರೀ ಗಾಡಾಂದಕಾರವನ್ನೇ ತುಂಬಿಕೊಂಡಿರುವ ಮನುಜರ ಕ್ರಿಸ್ಮಸ್ ಆಚರಣೆಯನ್ನು ಕ್ರಿಸ್ತ ಕಂಡಿತ ಒಪ್ಪುವುದಿಲ್ಲ.

ಪರಸ್ಪರ ಹಂಚಿಕೊಂಡು ಬಾಳುವುದು ಕ್ರಿಸ್ಮಸ್ ಹಬ್ಬದ ವಿಶೇಶತೆ. ನಮ್ಮ ಸಂತೋಶವನ್ನು ಇತರರಲ್ಲೂ ಹಂಚಿಕೊಳ್ಳಬೇಕೆಂಬ ಕ್ರಿಸ್ಮಸ್ ವಾಣಿಯಂತೆ ಬದುಕನ್ನು ರೂಪಿಸಿಕೊಳ್ಳಬೇಕೆಂಬುದು ಇದರ ಆಶಯ. ಮೂನ್ನೆಯಶ್ಟೇ ಒಂದು ಅನಾತಾಶ್ರಮಕ್ಕೆ ಬೇಟಿಕೊಟ್ಟಾಗ, ಅಲ್ಲಿರುವ ಆ ಮಕ್ಕಳ ಬಗ್ಗೆ, ಸಿಬ್ಬಂದಿಯ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಹಲವಾರು ಅನಾತಾಶ್ರಮಗಳಿಗೆ ಪ್ರತಿವರ‍್ಶ ಕ್ರಿಸ್ಮಸ್ ಹಬ್ಬದ ಸಲುವಾಗಿ ಬೇಟಿಕೊಟ್ಟು ನನ್ನ ಸಂತೋಶವನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದೇನೆ ಆದರೆ ಈ ವರ‍್ಶ ಬೇಟಿ ಮಾಡಿದ ಈ ಅನಾತಾಶ್ರಮ ಬಹಳ ವಿಬಿನ್ನ. ಇಲ್ಲಿನ ಮಕ್ಕಳು ಹಾಗು ಸಿಬ್ಬಂದಿ ಇತರರ ಸಹಾಯಕ್ಕಾಗಿ ಕಾದು ಕುಳಿತುಕೊಳ್ಳದೆ ತಮ್ಮ ಕೈಲಾದಶ್ಟು ದುಡಿಯುತ್ತಿದ್ದಾರೆ. ಹಲವಾರು ಮನೆಗಳಲ್ಲಿ ಬಿಸಾಡುವ ಪತ್ರಿಕೆಗಳು, ಪ್ಲಾಸ್ಟಿಕ್ ಡಬ್ಬಿಗಳು, ಇತರ ಕಚ್ಚಾವಸ್ತುಗಳನ್ನು ತಂದು, ಕೂಡಿಟ್ಟುಕೊಂಡು, ಅವುಗಳ ಮಾರಾಟದಿಂದ ಬರುವ ಅಲ್ಪ ಮೊತ್ತದಲ್ಲಿ ತಮ್ಮ ಜೀವನಸಾಗಿಸುತ್ತಿದ್ದಾರೆ. ಮಾತು ಬರದ ಮೂಕ ಮಕ್ಕಳ ಕೈಸನ್ನೆಯಲ್ಲಿ, ಅವರ ನಿಶ್ಕಲ್ಮಶ ನಗುವಿನಲ್ಲಿ ಕ್ರಿಸ್ತ ಹುಟ್ಟುತ್ತಾನೆ. ಹೆಣ್ಣು ಮಕ್ಕಳ ನೋವಲ್ಲಿ ಸಾಂತ್ವನದ ಚಿಲುಮೆಯಾಗಿ ಕ್ರಿಸ್ತ ಹುಟ್ಟುತ್ತಾನೆ. ಆ ದೀನ ನಿಲಯದ ಸಿಬ್ಬಂದಿಯ ನಿಸ್ವಾರ‍್ತ ಸೇವೆಯಲ್ಲಿ ಕ್ರಿಸ್ತ ಜನಿಸುತ್ತಾನೆ.

ನಿಜವಾದ ಕ್ರಿಸ್ಮಸ್ ಆಚರಣೆ ಪರರ ನೋವುಗಳಿಗೆ ಸ್ಪಂದಿಸುವುದಾಗಿದೆಯೇ ಹೊರತು, ಚಿನ್ನ ರನ್ನ ವೈಡೂರ‍್ಯಗಳ ವಿಜ್ರುಂಬಣೆಯ ಆಚರಣೆಯಲ್ಲ… ಈ ನಿಟ್ಟಿನಲ್ಲಿ ಯೋಚಿಸುತ್ತಾ ಹೋದಂತೆಲ್ಲ ನನ್ನ ಮನಸ್ಸನ್ನು ಕಾಡುವುದು ದಿವಂಗತ ಪಾದರ್ ಚಸರಾರವರ ಗೀತೆಯ ಸಾಲುಗಳು…

ಹುಟ್ಯಾನ ಕ್ರಿಸ್ತ ಗೋದಾಲಿಯಾಗ
ಬಂಗಾರ ಯಾಕ ತಂದಿರೋ…?
ಇದ್ದಾನ ಕ್ರಿಸ್ತ ತೊಟ್ಟಿಲ ಒಳಗಾ
ಚಿನ್ನದ ಮನಸ ತನ್ನಿರೋ….

(ಚಿತ್ರ ಸೆಲೆ: biblestudytools.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vinayak Khavasi says:

    ಮನಸ್ಸಿಗೆ ನಾಟುವಂತಹ ವಿಚಾರಗಳು

ಅನಿಸಿಕೆ ಬರೆಯಿರಿ:

%d bloggers like this: