ಕುಶಿಯ ತಂದಿತು ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ.

ಹಸಿರು ಪೈರಿನ ತೆನೆಯು ತೂಗಿತು
ನೆಲದ ಬಂಡನು ಸವಿಯುತ
ಪ್ರಾಣಿ ಪಕ್ಶಿಗಳುಂಡು ತಣಿದವು
ತಾಯಿ ಪ್ರೀತಿಯ ನೆನೆಯುತ

ಚಳಿಯದು ಕರಗಿ ಸರಿಯಿತು
ಸೂಸು ಬಿಸಿಲನು ಚೆಲ್ಲುತ
ರವಿಯ ಕುಡಿಗಳು ಚಾಚಿ ಮೆರೆದವು
ಬಿಸಿಲ ಬೇಗೆಯ ಉಸುರುತ

ಬರಡು ಬಾವದಿ ಚಿಮ್ಮಿ ಚೇತನ
ಕಾವ್ಯ ಹೊನಲನು ಹರಿಸಿತು
ಕವಿತೆ ಸೊಗಸದು ಲಯದಿ ಹೊಮ್ಮುತ
ರುಚಿಯ ಮೊಗ್ಗನು ಮೆರೆಸಿತು

ಹಾಡು ಹಕ್ಕಿಯ ಮದುರ ಗಾನವು
ಬರೆದು ಬಿಟ್ಟಿತು ಮುನ್ನುಡಿ
ಎಳ್ಳು ಬೆಲ್ಲದ ಸವಿಯು ಹರಡಿತು
ತಾಯಿ ಒಲುಮೆಯ ಜೇನ್ನುಡಿ

ಹಳತು ಹೊಸತನು ಬೆಸೆವ ಹಬ್ಬವು
ಕುಶಿಯ ತಂದಿತು ನಾಡಿಗೆ
ಮಕರ ಸಂಕ್ರಮಣ ಒಲವು ಹಬ್ಬಿತು
ಮನುಜ ಹ್ರುದಯದ ಬೀಡಿಗೆ

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *