ಕರುನಾಡಿನ ಹೆಮ್ಮೆಯ ‘ಮುದೋಳ ನಾಯಿ’

– ನಾಗರಾಜ್ ಬದ್ರಾ.

ಮುದೋಳ ನಾಯಿ Mudhol hound

ಜಗತ್ತಿನಾದ್ಯಂತ ಹಲವಾರು ತಳಿಯ ನಾಯಿಗಳಿದ್ದು, ಅವುಗಳಲ್ಲಿ ಲ್ಯಾಬ್ರಡಾರ್ (Labrador), ಜರ‍್ಮನ್ ಶೆಪರ‍್ಡ್ (German Shepherd), ಬೆಲ್ಜಿಯನ್ ಶೆಪರ‍್ಡ್ (Belgian Shepherd) ಮುಂತಾದ ಕೆಲವೇ ತಳಿಗಳು ಮಾತ್ರ ಬೇಟೆಗೆ ಹೆಸರುವಾಸಿ ಆಗಿವೆ. ಅಚ್ಚರಿಯ ವಿಶಯವೆಂದರೆ ಇಂಡಿಯಾದ, ಅದರಲ್ಲೂ ನಮ್ಮ ಕರುನಾಡಿನ ತಳಿಯಾದ ಮುದೋಳ ನಾಯಿ, ಬೇಟೆಯಲ್ಲಿ ಹೊರನಾಡಿನ ಹಲವಾರು ತಳಿಗಳನ್ನು ಮೀರಿಸುತ್ತಿದೆ.

ಮುದೋಳ ನಾಯಿಯ ಹಿನ್ನೆಲೆ

ಮುದೋಳ ನಾಯಿಯು ಜಗತ್ತಿನ ಅತ್ಯಂತ ಹಳೆಯ ತಳಿಗಳಲ್ಲಿ ಒಂದಾಗಿದ್ದು, ಮದ್ಯ ಏಶ್ಯಾ ಹಾಗೂ ಅರೇಬಿಯಾದಿಂದ ಇಂಡಿಯಾದ ಡೆಕ್ಕನ್ ಪ್ರಸ್ತಬೂಮಿಗೆ (Deccan Plateau) ಪರಿಚಯಿಸಲ್ಪಟ್ಟಿತು. ಇವು ಪರ‍್ಶಿಯಾದ ಸಲುಕಿ (Saluki) ಹಾಗೂ ಅಪ್ಗಾನಿಸ್ತಾನದ ತಾಜಿ (Tāzī) ನಾಯಿತಳಿಯ ಕುಲಕ್ಕೆ ಸೇರಿದ್ದವು ಎಂದು ನಂಬಲಾಗುತ್ತದೆ. ಈ ವಿಶೇಶ ತಳಿಯನ್ನು ಪಟಾಣರು, ಆಪ್ಗನರು, ಅರಬ್ಬರು ಹಾಗೂ ಪರ‍್ಶಿಯನರು ಕೈಬರ್ ಪಾಸ್ ಬೆಟ್ಟದ ಮೂಲಕ ಇಂಡಿಯಾಗೆ ತಂದರು.

ನಾನಾ ಸಾಹಿಬ್ Mudhol King

ನಾನಾ ಸಾಹಿಬ್

ಸುಮಾರು 1884 ರಿಂದ 1937 ರವರೆಗೆ ಈಗಿನ ಬಾಗಲಕೋಟೆ ಜಿಲ್ಲೆಯಲ್ಲಿರುವ ಮುದೋಳ ತಾಲ್ಲೂಕು ಆಗ ಬ್ರಿಟಿಶರ ಅಡಿಯಾಳಾಗಿದ್ದ ಒಂದು ಸಂಸ್ತಾನವಾಗಿತ್ತು. ಆ ಸಂಸ್ತಾನದ ಆಳ್ವಿಕೆಯನ್ನು ದೊರೆಯಾದ ಶ್ರೀಮಂತ್ ರಾಜೆಸಾಹೇಬ್ ಮಾಲೋಜಿರಾವ್ ವೆಂಕಟರಾವ್ ಗೋರ‍್ಪಡೆ (ಮತ್ತೊಂದು ಹೆಸರು – ನಾನಾ ಸಾಹಿಬ್) ಅವರು ನಡೆಸುತ್ತಿದ್ದರು. ಈ ದೊರೆಗಳ ಕಾಲದಲ್ಲಿ ಮುದೋಳ ನಾಯಿ ತಳಿಯು ಹೆಚ್ಚು ಮಂದಿಗೆ ಪರಿಚಯವಾಯಿತು. ಮಾಲೋಜಿರಾವ್ ಅವರು ಮುದೋಳ ನಾಯಿಯ ತೆಳುವಾದ ಮೈಮಾಟವನ್ನು ನೋಡಿ ಅವುಗಳನ್ನು ಬೇಟೆಗೆ ಬಳಸಲು ಆರಂಬಿಸಿದರು. ಬಳಿಕ ಇದು ಮುದೋಳ ನಾಯಿ ಎಂದೇ ಹೆಸರುವಾಸಿ ಆಯಿತು.

ಇದಕ್ಕೆ ಮುಂಚೆಯೇ ಈ ನಾಯಿಗಳನ್ನು ಮುದೋಳ ಸಂಸ್ತಾನದ ಬುಡಕಟ್ಟಿನ ಮಂದಿ ಬೇಟೆಯಾಡಲು ಬಳಸುತ್ತಿದ್ದರು. ಅವರು ಪ್ರೀತಿಯಿಂದ ಇವುಗಳಿಗೆ ಬೆದರ್ (Bedar – ಅಂಜಿಕೆ ಇಲ್ಲದ್ದು) ಹಾಗೂ ಬೆರಾಡ್ (Berad – ಅಳಲಾರದು) ಎಂದು ಕರೆಯುತ್ತಿದ್ದರು. ಬಳಿಕ ಮುದೋಳದ ದೊರೆಯು ಇವುಗಳಲ್ಲಿ ಕೆಲವೊಂದು ತಳಿಗಳನ್ನು ಆಯ್ಕೆ ಮಾಡಿಕೊಂಡು ಒಂದಾಗಿಸಿ ಹೊಸ ‘ರಾಯಲ್ ಮುದೋಳ ನಾಯಿತಳಿಯನ್ನು’ ಹುಟ್ಟುಹಾಕಿದರು. 1900 ರಲ್ಲಿ ಮಾಲೋಜಿರಾವ್ ಅವರು ಇಂಗ್ಲೆಂಡಿಗೆ ಬೇಟಿ ನೀಡಿದಾಗ ಅಲ್ಲಿನ ದೊರೆ ಕಿಂಗ್ ಜಾರ‍್ಜ್ V ಅವರಿಗೆ ಎರಡು ಜೋಡಿ ಮುದೋಳ ನಾಯಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಬಳಿಕ ಇವುಗಳು ಇಂಗ್ಲೆಂಡ್ ದೇಶಾದ್ಯಂತ ಮುದೋಳ ಬೇಟೆನಾಯಿಗಳು ಎಂದೇ ಹೆಸರುವಾಸಿಯಾದವು.

ಈಗ ಇದೇ ಮುದೋಳದಲ್ಲಿ ಸುಮಾರು 700 ಕ್ಕೂ ಹೆಚ್ಚಿನ ಕುಟುಂಬಗಳು ಈ ತಳಿಯ ನಾಯಿಮರಿಗಳನ್ನು ಸಾಕುವುದರ ಮೂಲಕ ಜೀವನ ಸಾಗಿಸುತ್ತಿವೆ.

ಮುದೋಳ ನಾಯಿಗಳ ಮೈಮಾಟ

ತೆಳುವಾದ ಹಾಗೂ ಗಾಳಿಯನ್ನು ಸೀಳಿ ಮುನ್ನುಗ್ಗಬಲ್ಲ ಮೈ ಬೇಟೆಯಾಡಲು ಹೇಳಿಮಾಡಿಸಿದಂತಿದೆ. ಇವು ಸಾಮಾನ್ಯವಾಗಿ 26 ರಿಂದ 28 ಇಂಚುಗಳಶ್ಟು ಉದ್ದವಾಗಿದ್ದು, ಸುಮಾರು 30 ಕಿಲೋದಶ್ಟು ತೂಕವಿರುತ್ತವೆ. ಮುದೋಳ ನಾಯಿಗಳಲ್ಲಿ ಎರಡು ಬಗೆಗಳಿವೆ, ಒಂದು ಸಂಪೂರ‍್ಣವಾಗಿ ನಯವಾದ ಮೈ ರಚನೆ ಹಾಗೂ ಇನ್ನೊಂದು ಕಿವಿ, ಕಾಲುಗಳು ಮತ್ತು ಬಾಲದ ಮೇಲೆ ತೆಳುವಾದ ಕೂದಲು ಹೊಂದಿರುತ್ತವೆ. ಸಾಮಾನ್ಯವಾಗಿ ತೆಳು ಹಾಗೂ ಮೈಗೆ ಬಿಗಿಯಾದ ತೊಗಲನ್ನು ಹೊಂದಿದ್ದು, ಅದರ ನರಕಟ್ಟುಗಳು ಬರಿಗಣ್ಣಿಗೆ ಕಾಣಿಸುವಂತಿರುತ್ತವೆ. ಇವುಗಳ ಎರಡು ಕಿವಿಗಳ ನಡುವೆ ಚಪ್ಪಟೆಯಾಕಾರದ ತಲೆಬುರುಡೆಯನ್ನು ಹೊಂದಿದ್ದು, ಮೇಲಿನಿಂದ ನೋಡಿದರೆ ಬೆಣೆ ಆಕಾರದಂತೆ ಕಾಣಿಸುತ್ತದೆ.

ಸಾಮಾನ್ಯವಾಗಿ ಮುದೋಳ ನಾಯಿಗಳು 10 ರಿಂದ 12 ವರ‍್ಶಗಳ ಕಾಲ ಬದುಕುತ್ತವೆ. ಇವು ಒಂದು ಬಾರಿಗೆ 3 ರಿಂದ 7 ಮರಿಗಳನ್ನು ಹಾಕುತ್ತವೆ.

ಹದ್ದಿನಂತಹ ಕಣ್ಣು ಹಾಗೂ ಚೂಪಾದ ಹಲ್ಲುಗಳು ಬೇಟೆಗೆ ಹೇಳಿಮಾಡಿಸಿದಂತಿವೆ

ಇವುಗಳ ಮೊಟ್ಟೆ ಆಕಾರದ ಕಣ್ಣುಗಳು ಬೇರೆ ತಳಿಯ ನಾಯಿಗಳಿಗಿಂತ ತುಂಬಾ ಮೊನಚಾದ ನೋಟವನ್ನು ಹೊಂದಿದ್ದು ಬೇಟೆಯಲ್ಲಿ ಮುಕ್ಯ ಪಾತ್ರವಹಿಸುತ್ತವೆ. ಮುದೋಳ ನಾಯಿಗಳ ತಲೆಬುರುಡೆಯು ಉದ್ದವಾಗಿರುವುದರಿಂದ ಅವು 270 ಡ್ರಿಗಿಯವರೆಗೆ ತಮ್ಮ ನೋಟವನ್ನು ಹೊಂದಿರುತ್ತವೆ. ಮುದೋಳ ನಾಯಿಗಳ ದವಡೆ ಹಲ್ಲುಗಳು ಬೇರೆ ತಳಿಯ ನಾಯಿಗಳಿಗೆ ಹೋಲಿಸಿದರೆ ತುಂಬಾ ಉದ್ದ ಹಾಗೂ ಗಟ್ಟಿಯಾಗಿರುತ್ತವೆ. ಇವು ಬೇಟೆಗೆ ನೆರವಾಗುತ್ತವೆ.

ಜಗತ್ತಿನ ಅತ್ಯಂತ ಆರೋಗ್ಯಕರ ತಳಿಗಳಲ್ಲಿ ಒಂದಾಗಿದೆ

ಮುದೋಳ ನಾಯಿಗಳು ಯಾವುದೇ ನಿರ‍್ದಿಶ್ಟವಾದ ರೋಗಕ್ಕೆ ಬೇಗನೆ ತುತ್ತಾಗುವುದಿಲ್ಲ. ಆದರೆ ಇವುಗಳ ಮೈಯಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಶೀತಕ್ಕೆ ಗುರಿಯಾಗುವ ಸಾದ್ಯತೆಗಳಿವೆ. ಹಾಗೆಯೇ ತೊಗಲಿಗೆ ಸಂಬಂದಿಸಿದ ಸಮಸ್ಯೆಗಳನ್ನು ಎದುರಿಸಬಹುದು.

ಸೇನೆಯಲ್ಲಿ ಸೇವೆ ಸಲ್ಲಿಸುವ ಇಂಡಿಯಾದ ಮೊದಲ ನಾಯಿತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ

ಮುದೋಳ ನಾಯಿ Mudhol Dog

ಇಶ್ಟು ದಿನಗಳವರೆಗೆ ನಮ್ಮ ಸೇನೆಯಲ್ಲಿ ಲ್ಯಾಬ್ರಡಾರ್, ಜರ‍್ಮನ್ ಶೆಪರ‍್ಡ್, ಬೆಲ್ಜಿಯನ್ ಶೆಪರ‍್ಡ್ ಗಳಂತ ಹೊರನಾಡಿನ ತಳಿಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆಯೇ ನಮ್ಮ ಮುದೋಳ ನಾಯಿಗಳು ಇವುಗಳನ್ನು ಮೀರಿಸಬಲ್ಲ ಅಳವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಮೀರತ್‍ನಲ್ಲಿರುವ ರೆಮೌಂಟ್ ವೆಟರ‍್ನರಿ ಕಾರ‍್ಪ್ಸ್ (Remount Veterinary Corps) ನಲ್ಲಿ 8 ಮುದೋಳ ನಾಯಿಗಳಿಗೆ ಸುಮಾರು 2 ವರುಶಗಳಿಂದ ವಿಶೇಶ ತರಬೇತಿ ನೀಡಲಾಗುತ್ತಿದೆ. ಹೇಳಿದಂತೆ ಕೇಳುವುದು (obedience), ಗಡಿ ಕಾವಲು ಕಾಯುವುದು, ಸಿಡಿಮದ್ದಿನ ಪತ್ತೆ ಹಚ್ಚುವಿಕೆ, ಅಪಾಯವನ್ನು ಅರಿಯುವುದು, ವೈರಿಗಳ ಮೇಲೆ ಆಕ್ರಮಣ ಮಾಡುವುದು, ಮುಂತಾದವುಗಳ ಕುರಿತು ಹಲವಾರು ಹಂತಗಳಲ್ಲಿ ವಿಶೇಶ ತರಬೇತಿ ನೀಡಲಾಗುತ್ತಿದೆ.

ತರಬೇತಿಯಲ್ಲಿ ಮುದೋಳ ನಾಯಿಗಳು ಬೇರೆ ತಳಿಯ ನಾಯಿಗಳನ್ನು ಹಿಂದಿಕ್ಕಿ ಎಲ್ಲರಿಗೂ ಅಚ್ಚರಿ ಮೂಡಿಸಿವೆ. ತರಬೇತುದಾರರ ಪ್ರಕಾರ, ಮುದೋಳ ನಾಯಿಯು ಒಂದು ಕೆಲಸವನ್ನು ಮುಗಿಸಲು 40 ಸೆಕೆಂಡುಗಳನ್ನು ತೆಗೆದುಕೊಂಡರೆ, ಲ್ಯಾಬ್ರಡಾರ್ ನಾಯಿಯು 90 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಮೀರತ್‍ನಲ್ಲಿ ತರಬೇತಿ ಪಡೆದ ಮುದೋಳ ನಾಯಿಗಳ ಕೆಲಸವನ್ನು ಪರೀಕ್ಶೆ ಮಾಡಲು ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಿಗೆ ಕಳುಹಿಸಲಾಗುವುದು ಎಂದು ತರಬೇತಿದಾರರು ಹೇಳುತ್ತಾರೆ.

ಇವುಗಳ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ

ಮುದೋಳ ನಾಯಿ ಸ್ಟಾಂಪ್ಇಂಡಿಯಾದಲ್ಲಿ ನಾಯಿಗಳ ಸಂತತಿಯು ಅತ್ಯಂತ ಹಳೆಯ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿ ಕಂಡುಬರುವ ನಾಲ್ಕು ವಿಶೇಶ ತಳಿಗಳ ಅಂಚೆಚೀಟಿಗಳನ್ನು ಕೇಂದ್ರ ಸರಕಾರ ಬಿಡುಗಡೆಮಾಡಲು ನಿರ‍್ದರಿಸಿತು. ಅದರಂತೆ ಜನವರಿ 9, 2005 ರಂದು ಕೇಂದ್ರ ಸರಕಾರವು ಹಿಮಾಲಯದಲ್ಲಿ ಕಂಡುಬರುವ ಶೀಪ್ ನಾಯಿ (Himalayan Sheep Dog), ಉತ್ತರ ಪ್ರದೇಶದ ರಾಮಪುರದಲ್ಲಿ ಕಂಡುಬರುವ ರಾಮಪುರ್ ನಾಯಿ (Rampur Hound), ರಾಜಪಲಾಯಂ (Rajapalayam) ಎಂಬ ತಳಿಯ ನಾಯಿ ಹಾಗೂ ನಮ್ಮ ಕರ‍್ನಾಟಕದ ಮುದೋಳ ನಾಯಿಯ ಐದು ರೂಪಾಯಿ ಮುಕಬೆಲೆಯ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿತು.

ಮುದೋಳ ನಾಯಿಗಳ ತಳಿಯನ್ನು ಕಾಪಾಡಲು ಹಾಗೂ ಅವುಗಳ ಬೆಳವಣಿಗೆಗಾಗಿ ಕರ‍್ನಾಟಕ ಸರಕಾರವು ಸೆಪ್ಟೆಂಬರ್ 24, 2009 ರಂದು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲ್ಲೂಕಿನ ತಿಮ್ಮಾಪುರದಲ್ಲಿ ಮುದೋಳ ಹೌಂಡ್ ಅರಕೆ ಮತ್ತು ಮಾಹಿತಿ ಕೇಂದ್ರವೊಂದನ್ನು ಸ್ತಾಪಿಸಿದೆ.

ನಮ್ಮ ನಾಡಿನ ನಾಯಿತಳಿ ಇನ್ನೂ ಚೆನ್ನಾಗಿ ಬೆಳೆದು ಜಗತ್ತಿನಾದ್ಯಂತ ಹೆಸರು ಗಳಿಸಲಿ.

(ಮಾಹಿತಿ ಸೆಲೆ: dogspots.in, petsworld.in, wiki, easypetmd.com, kvafsu.edu.in, k9rl.com, thehindu.com )
(ಚಿತ್ರ ಸೆಲೆ: wiki/mudhol_hound, wiki/mudhol_hound_bng, newskarnataka.com, k9rl.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: