ಪೊಗದಸ್ತಾದ – ಸ್ಕೋಡಾ ಕೊಡಿಯಾಕ್

– ಜಯತೀರ‍್ತ ನಾಡಗವ್ಡ.

skoda kodiaq first look, ಸ್ಕೋಡಾ ಕೊಡಿಯಾಕ್ ನೋಟ

ಸ್ಕೋಡಾ -ಜೆಕ್ ಮೂಲದ ಬಲು ದೊಡ್ಡ ಕಾರು ತಯಾರಕ ಕೂಟ. ಕೆಲವು ವರುಶಗಳ ಹಿಂದೆ ವೋಕ್ಸ್‌ವ್ಯಾಗನ್ ಗುಂಪು ಸ್ಕೋಡಾ(Skoda) ಕೂಟವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ, ಸ್ಕೋಡಾ ಬ್ರ್ಯಾಂಡ್ ಅನ್ನು ಹಾಗೇ ಉಳಿಸಿಕೊಂಡು ಬಂದಿದೆ. ಬಾರತದಲ್ಲಿ ಸಿರಿಮೆ ಕಾರುಗಳನ್ನೇ ಮಾಡುತ್ತ ಬಂದಿರುವ ಸ್ಕೋಡಾ ಇದೀಗ ಸದ್ದಿಲ್ಲದಂತೆ ಹೊಚ್ಚ ಹೊಸ ಬಂಡಿಯೊಂದನ್ನು ಮಾರುಕಟ್ಟೆಗೆ ತಂದಿದೆ. ಸಿರಿಮೆಯ ವಿಶೇಶತೆ ಒಳಗೊಂಡಿರುವ ಈ ಹೊಸ ಕಾರೇ ಸ್ಕೋಡಾ ಕೊಡಿಯಾಕ್(Kodiaq).  ಕೊಡಿಯಾಕ್ ನೋಡಾಕ್, ಹೊಡಿಲಾಕ್ ಹೆಂಗದ ಅಂತ ನೋಡೋಣ ಬರ್ರಿ.

ಬಿಣಿಗೆ, ಸಾಗಣಿ ಮತ್ತು ಮಯ್ಲಿಯೋಟ (Engine, Transmission and Mileage)

ಸ್ಕೋಡಾ ಕೊಡಿಯಾಕ್ ಬಿಣಿಗೆ, ಸಾಗಣಿ, ಮಯ್ಲಿಯೋಟ Skoda Kodiaq Engine, Transmission, Mileage

ಕೊಡಿಯಾಕ್ ಬಂಡಿಗೆ ವೋಕ್ಸ್‌ವ್ಯಾಗನ್ ರವರ 2 ಲೀಟರ್‌ನ ಟಿಡಿಆಯ್‌(TDi) ಡೀಸೆಲ್ ಬಿಣಿಗೆ ಅಳವಡಿಸಲಾಗಿದೆ. ಈ ಬಿಣಿಗೆ 150 ಕುದುರೆಬಲ ಕಸುವು ನೀಡಿದರೆ, 340 ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ(Torque) ಉಂಟು ಮಾಡಲಿದೆ. ಈ ಬಿಣಿಗೆಗೆ ತನ್ನಿಡಿತದ 7 ವೇಗದ ಸಾಗಣಿಯನ್ನು(7-Speed Automatic Transmission) ಜೋಡಿಸಲಾಗಿದೆ. ಕೊಡಿಯಾಕ್ ಬಂಡಿಯ ಮಯ್ಲಿಯೋಟ ಒಯ್ಯಾಟದ ದಟ್ಟಣೆಯಿಂದ(Traffic) ಕೂಡಿರುವ ಊರಿನೊಳಗಡೆ ಸುಮಾರು 10 ಕಿ.ಮೀ.ಪ್ರತಿ ಲೀಟರ್ ಆಗಿದ್ದರೆ, ಹೆದ್ದಾರಿಗಳಲ್ಲಿ ಸುಮಾರು 15 ಕಿ.ಮೀ.ಪ್ರತಿ ಲೀಟರ್.

ಕೊಡಿಯಾಕ್ ಬಂಡಿಯ ಮೈಮಾಟ

Dimensions and other specification of skoda kodiaq, ಕೊಡಿಯಾಕ್ ಬಂದಿಯ ಆಯ ಮತ್ತು ಇತರೆ ವಿವರಗಳು

ಸ್ಕೋಡಾ ಬಂಡಿಗಳು ಮುಂಚೆಯಿಂದಲೂ ಯಾವುದರಲ್ಲೂ ಕೊರತೆಯಿರದ ಮೈಮಾಟ ಹೊಂದಿದಂತವು. ಕೊಡಿಯಾಕ್ ಕೂಡ ಇದಕ್ಕೆ ಹೊರತಾಗಿಲ್ಲ. ಬಂಡಿಯ ಒನಪು ಸ್ಕೋಡಾದವರ ಹಿರಿಮೆಯನ್ನು ಒತ್ತಿ ಹೇಳುತ್ತದೆ. ಹೊರ ನೋಟದಿಂದ ದೊಡ್ಡ ಎಸ್‌ಯುವಿಗೆ(SUV) ಬೇಕಿರುವ ಎಲ್ಲ ಲಕ್ಶಣಗಳು ಕೊಡಿಯಾಕ್ ನಲ್ಲಿ ಕಾಣುತ್ತವೆ. ಬಂಡಿಯ ಮುಂದೀಪ, ಹಿಂದೀಪಗಳು ಪೂರ‍್ತಿಯಾಗಿ LED ಮಯವಾಗಿವೆ.  ಮುಂದೀಪ ತೊಳೆಯಬಲ್ಲ ಏರ‍್ಪಾಟು(Head Lamp Washers) ಕೂಡ ಇದೆ. 4.7 ಮೀಟರ್ ಉದ್ದ, 1.665 ಮೀಟರ್ ಎತ್ತರ ಮತ್ತು 1.882 ಮೀಟರ್ ಅಗಲವಾಗಿದೆ ಕೊಡಿಯಾಕ್ ಬಂಡಿ. ನೆಲತೆರವು ಸುಮಾರು 188 ಮಿಲಿ ಮೀಟರ್‌ಗಳಿದ್ದು ಇನ್ನೂ ಹೆಚ್ಚಾಗಿರಬೇಕಿತ್ತು ಎಂದು ಕೆಲವು ಪಂಡಿತರ ಅಂಬೋಣ.

ಇಬ್ಬಗೆಯ ಬಣ್ಣಗಳಿಂದ(Dual Tone) ಕೂಡಿದ ಬಂಡಿಯ ಒಳನೋಟ ಯಾವ ಸಿರಿಮೆಯ ಕಾರಿಗೂ ಕಮ್ಮಿಯಿಲ್ಲ. ಓಡಿಸುಗನಿಗೆ ಹಿತವಾದ ಕೂರುಮಣೆ(Seat), ಎತ್ತರಕ್ಕೆ ತಕ್ಕಂತೆ ಜೋಡಿಸಿಕೊಳ್ಳಬಹುದಾದ ಮಿಂತಿಗುರಿ(Power Steering) ಇವುಗಳಿಗೆ ತಕ್ಕಂತೆ ಸೊಗಸಾದ ತೋರುಮಣೆ(Dashboard) ನೀಡಿ ಓಡಿಸುಗನೆಡೆ(Cockpit) ಅಚ್ಚುಕಟ್ಟಾಗಿ ಮಾಡಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಕಾರುಗಳಲ್ಲಿ ಕಂಡುಬರುವ ಅಡ್ಡನೆಯ(Horizontal) ಕುಳಿರ‍್ಗಾಳಿಯ ಕಿಂಡಿಗಳ(AC Vents) ಬದಲು ಕೊಡಿಯಾಕ್ ಬಂಡಿಯಲ್ಲಿ ನೆಟ್ಟಗೆ(Vertical) ಜೋಡಿಸಲಾದ ಕಿಂಡಿಗಳಿವೆ. ಇದರಿಂದ ಹೆಚ್ಚು ಗಾಳಿ ಹರಿದು ಬರಲಿದೆಯಂತೆ. ಬಂಡಿಯ ಎರಡನೇ ಸಾಲಿನ ಕೂರುಮಣೆಯೂ ಸಾಕಶ್ಟು ಅಗಲವೂ, ದೊಡ್ಡದು ಇರುವುದು ಹಿಂಬದಿಯ ಪಯಣಿಗರು ದಣಿವಿಲ್ಲದಂತೆ ದೂರದೂರಿಗೆ ಪಯಣಿಸಬಹುದು. ಕೊನೆಯ ಕೂರುಮಣೆಯ ಸಾಲು ಚೂರು ಚಿಕ್ಕದಾಗಿರುವುದರಿಂದ ದೊಡ್ಡವರು ಕೂರಲು ಕಶ್ಟವಾಗಬಹುದು, ಹೀಗಾಗಿ ಈ ಸಾಲು ಮಕ್ಕಳು ಕುಳಿತುಕೊಂಡು ಪಯಣಿಸಲು ತಕ್ಕುದಾಗಿದೆ.  ಸರಕುಚಾಚು(Boot Space) 270 ಲೀಟರ್‌ಗಳಶ್ಟಿದೆ. ಕೊನೆಯ ಕೂರುಮಣೆಯ ಸಾಲು ಮಡಚಿದರೆ, ಸರಕು ಚಾಚನ್ನು 630 ಲೀಟರ್‌ಗಳಾಗಿಸಬಹುದು. ಸರಕು ಚಾಚಿನಲ್ಲಿ ಕೊಕ್ಕೆ(hook), ಬಲೆ(net) ಮುಂತಾದವನ್ನು ನೀಡಲಾಗಿದ್ದು, ನಿಮಗಿಶ್ಟದಂತೆ ಸರಕು ಸರಂಜಾಮು ಸಾಗಿಸಲು ಬಳಸಿಕೊಳ್ಳಬಹುದು. ಬಂಡಿಯ ಬಾಗಿಲುಗಳಲ್ಲಿ ಕೊಡೆ ಸೇರಿಸಿಡಲು ಕೊಡೆ ಸೇರುವೆಗಳು(Umbrella Holder) ಕೊಡಿಯಾಕ್ ನಲ್ಲಿವೆ. ಇಕ್ಕಟ್ಟಿನ ಜಾಗಗಳಲ್ಲಿ ಬಂಡಿಯನ್ನು ನಿಲ್ಲಿಸಿ, ಬಂಡಿಯ ಬಾಗಿಲು ತೆಗೆದಾಗ ಪಕ್ಕದ ಬಂಡಿಗೆ ಇಲ್ಲವೇ ಕಂಬಕ್ಕೆ ಬಾಗಿಲು ತಾಗಿ, ಬಾಗಿಲ ಮೇಲೆ ಗೀರಿದ, ಪರಚಿದ ಗುರುತು ಮೂಡುವ ಸಾದ್ಯತೆ ಹೆಚ್ಚು. ಇದರಿಂದ ಹೊರಬರಲು ಬಾಗಿಲಿನ ತುದಿಗಳಿಗೆ ” Door Edge Protectors” ನೀಡಲಾಗಿದ್ದು ಹಲವರು ಈ ವಿಶೇಶ ಈಡುಗಾರಿಕೆಗೆ ಬೆನ್ನು ತಟ್ಟಿದ್ದಾರೆ. ಸಿರಿಮೆಯ ಕಾರುಗಳಲ್ಲಿ ಕಂಡುಬರುವ ಬೆಳಕಿಂಡಿ(Sun Roof) ಕೊಡಿಯಾಕ್ ಬಂಡಿಯಲ್ಲೂ ಕೊಡಮಾಡಲಾಗಿದೆ. ಬಂಡಿ ಕೊಡಚಾದ್ರಿ, ಚಿಕ್ಕಮಗಳೂರು, ಕೊಡಗು, ಕುದುರೆಮುಕ ಮುಂತಾದ ಬೆಟ್ಟದ ಸಾಲುಗಳಲ್ಲಿ ಸಾಗುತ್ತಿರಲು ಕಾರಿನ ಬೆಳಕಿಂಡಿಯಿಂದ ಹೊರಗಿಣುಕಿ ಈ ಮನ ತಣಿಸುವ ನೋಟ ನೋಡಲು ಬಲು ಅಂದ.

ಕೊಡಿಯಾಕ್‌ನಲ್ಲಿ ಅಳವಡಿಸಿರುವ ದೊಡ್ಡದಾದ 10 ಉಲಿಕಗಳ ಕ್ಯಾಂಟನ್ ಹಾಡುಗಾರಿಕೆ ಪೆಟ್ಟಿಗೆ(Canton 10-Speaker Music System) ಬಲು ಸೊಗಸಾದ ಯಾವುದೇ ಅಡೆತಡೆಯಿಲ್ಲದೇ ಹಾಡು, ಸಂಗೀತದ ಮಜಾ ನೀಡಲಿದೆ. ಇತರೆ ಬಂಡಿಗಳಲ್ಲಿ ಕಾಣಸಿಗುವ USB ಕಿಂಡಿ, Bluetooth ಕಿಂಡಿಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. 8 ಇಂಚಿನ  ಸೋಕು ತೆರೆಯ(Touch Screen) ತಿಳಿನಲಿ ಏರ‍್ಪಾಟು(Infotainment System) ಕೂಡ ಬಲು ಚೂಟಿಯಾಗಿದೆ. ಇದರ ತಲುಪುದಾರಿ ಏರ‍್ಪಾಟು(Navigation System) ಬಳಸುಗರಿಗೆ ಸುಳುವಾಗಿದೆ. ಬಂಡಿಯ ತಿಳಿನಲಿ ಏರ‍್ಪಾಟಿನೊಂದಿಗೆ ಅಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಗಳನ್ನು ಜೋಡಿಸಿಕೊಳ್ಳಬಹುದು. ಓಡಿಸುಗನ ಸರಕು ಗೂಡು,  ಓಡಿಸುಗನ ಪಕ್ಕದ ಸರಕು ಗೂಡು, ಬಾಟಲಿ, ಕಾಪಿ ಕಪ್ ಸೇರುವೆಗಳು(Bottle/Cup Holder) ಹೀಗೆ ಸರಕು ಸಾಗಿಸಲು ಯಾವುದೇ ಕೊರತೆ ಕಂಡುಬರುವುದಿಲ್ಲ.

ಕಾಪಿನ ವಿಶೇಶತೆಗಳು

ಜಗತ್ತಿನಲ್ಲಿ ಸುಮಾರು 20%  ಬಂಡಿ ಗುದ್ದಾಟಗಳು(Crash) ಓಡಿಸುಗರು ನಿದ್ದೆ ಮಂಪರಿನಲ್ಲಿರುವಾಗ ಸಂಬವಿಸುತ್ತವೆ. ಇದನ್ನರಿತು ಹಲವು ಬಂಡಿ ಕೂಟಗಳು ಸುಮಾರು ವರುಶಗಳಿಂದ ಓಡಿಸುಗನ ನಿದ್ದೆ, ದಣಿವು ತಿಳಿಯುವ ಏರ‍್ಪಾಟೊಂದನ್ನು (Driver Fatigue Alert) ಕಂಡುಹಿಡಿದಿವೆ. ಓಡಿಸುಗನ ಕಣ್ಣುಗಳ ಏರಿಳಿತ, ತಿಗುರಿ ಮೇಲಿನ ಹಿಡಿತ, ಓಣಿ ದಾಟುವಿಕೆ(Lane change) ಹೀಗೆ ಮುಂತಾದವನ್ನು ತಿಳಿಯುವ ಅರಿವುಕಗಳು(Sensors), ಓಡಿಸುಗನಿಗೆ ಎಚ್ಚರಿಕೆಗೊಳಿಸುವ/ಮುನ್ಸುಳಿವು ನೀಡುವ ಏರ‍್ಪಾಟನ್ನು ಶುರು ಮಾಡುತ್ತವೆ. ಇಂತಹ ಏರ‍್ಪಾಟು ಕೊಡಿಯಾಕ್ ಬಂಡಿಯಲ್ಲಿ ಜೋಡಿಸಲಾಗಿದೆ.

ತಿರುವುಗಳು, ಕಡಿದಾದ ಇಕ್ಕಟ್ಟಿನ ಜಾಗಗಳಲ್ಲಿ ರಾತ್ರಿ ಬಂಡಿಯೋಡಿಸುವುದು ಸುಲಬದ ಮಾತಲ್ಲ. ಸ್ವಲ್ಪ ಆಯ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅದಕ್ಕೆ ತಕ್ಕಂತೆ ಬಂಡಿಯ ಮುಂದೀಪಗಳು ಕೆಲಸ ಮಾಡಬೇಕು. ತಿರುವು, ಇಕ್ಕಟ್ಟಿಗೆ ತಕ್ಕಂತೆ ದೀಪಗಳು ತಿರುಗಿ ಓಡಿಸುಗನಿಗೆ ದಾರಿ ತೋರುತ್ತಿರಬೇಕು. ಇದನ್ನು Adapative Lighting System ಎನ್ನುತ್ತಾರೆ. ಇಂತಹ ಅಡಾಪ್ಟೀವ್ ಮುಂದೀಪಗಳನ್ನು ಕೊಡಿಯಾಕ್ ಬಂಡಿ ಹೊಂದಿರಲಿದೆ. ಇದಲ್ಲದೇ ಸಿಲುಕದ ತಡೆತದ ಏರ‍್ಪಾಟು(Antilock Brake System),  ಕನ್ನಡಿ ಮತ್ತು ಹಿಂಬಾಗದ ಗಾಜಿಗೆ ಮಂಜಿಳಕಗಳನ್ನು(DeFogger) ಕೊಡಿಯಾಕ್ ಅಳವಡಿಸಿಕೊಂಡಿದೆ. ಬಂಡಿಯ ಎಲ್ಲ ಪಯಣಿಗರ ಕಾಪಿಗೆ 9 ಗಾಳಿ ಚೀಲಗಳು, ಕೂರುಮಣೆ ಪಟ್ಟಿಗಳು(Seat Belts), ಹಲಗುದ್ದಾಟದ ತಡೆತ(Multi-Collision Prevention), ಟಾಯರ್‌ಗಳ ಗಾಳಿಯೊತ್ತಡ ತಿಳಿಸುವ ಏರ‍್ಪಾಟು (Tyre Monitoring System), ನಿಲುಗಡೆಗೆ ನೆರವಾಗುವ ಅರಿವಿಕ ಮತ್ತು ತಿಟ್ಟಕಗಳು(Parking Sensors and Camera) ಕೊಡಿಯಾಕ್ ಬಂಡಿಯ ಬಾಗವಾಗಿರಲಿವೆ. ಓಡಿಸುಗನಿಲ್ಲದೇ ತನ್ನಿಂದ ತಾನೇ ನಿಲುಗಡೆ ಮಾಡುವ ಏರ‍್ಪಾಟು(Hands Free Parking) ಕೂಡ ಈ ಸ್ಕೋಡಾ ಬಂಡಿಯ ಮತ್ತೊಂದು ಕಾಪಿನ ವಿಶೇಶತೆ.

‍ಬೆಲೆ:

ಸಿರಿಮೆಯ ಪೊಗದಸ್ತಾದ ಟಗರು ಕೊಡಿಯಾಕ್ ಬಂಡಿಯ ಮಾರಾಟದ ಬೆಲೆ 34,83, 995 ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ. ಇದರಲ್ಲಿ ರಸ್ತೆ ತೆರಿಗೆ, ಬಂಡಿಯ ತೆರಿಗೆ ಮತ್ತು ಇತರೆ ಬೆಲೆಗಳು ಸೇರಿರುವುದಿಲ್ಲ. ನೀಲಿ, ಕಪ್ಪು, ಬಿಳಿ ಹಾಗೂ ಬೆಳ್ಳಿ ಬಣ್ಣ ಹೀಗೆ ನಾಲ್ಕು ಆಯ್ಕೆಗಳಲ್ಲಿ ಕೊಡಿಯಾಕ್ ದೊರೆಯುತ್ತದೆ.

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.comskoda-auto.co.inOverdrive.inhdcarwallpapers.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: