ಮಕ್ಕಳ ಕವಿತೆ: ಚುಕ್ಕೆಗಳೊಂದಿಗೆ ಗೆಳೆತನ
ಚುಕ್ಕೆಗಳೆಲ್ಲ ನೆಲಕೆ ಇಳಿದು
ಗೆಳೆಯರಾಗಿ ಬಿಟ್ರೆ
ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ
ಕರೆಂಟು ಕೈ ಕೊಟ್ರೆ
ನಮ್ಮ ಜೊತೆಯಲಿ ದಿನವೂ ಬರಲಿ
ಶಾಲೆಯ ಯುನಿಪಾರ‍್ಮ ತೊಟ್ಟು
ಮನೆಮನೆಯಲ್ಲಿ ಉಳಿಸ್ಕೊತೀವಿ
ಪ್ರೀತಿ ಗೌರವ ಕೊಟ್ಟು
ಬೆನ್ನಿಗೆ ಬಾರದ ಚೀಲವ ಹೊತ್ತು
ಅರಿಯಲಿ ನಮ್ಮ ಕಶ್ಟ
ಕೂಡಿ ಆಡುತ ತೊರೆಯಲಿ ತಮ್ಮ
ತಾರಾಲೋಕದ ಪಟ್ಟ
ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮದ್ಯಾಹ್ನ ಊಟ
ಒರಟು ಕಲ್ಲಿನ ನೆಲದಲಿ ಕೂತು
ಕೇಳಲಿ ಮಾಸ್ತರ ಪಾಟ
ವಾರ‍್ಶಿಕ ಪರೀಕ್ಶೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಂಕ
ಸ್ಪರ‍್ದೆಯಿಂದ ಕಸಿದುಕೊಳ್ಳಲಿ
ಗೆಳೆಯರ ಮೊದಲನೆ ರ‍್ಯಾಂಕ
(ಚಿತ್ರ ಸೆಲೆ: ytimg.com)
ನನ್ನ ಮಗನಿಗೆ ತುಂಬ ಇಷ್ಟವಾಯ್ತು.