ಕಣ್ಮರೆಯಾಗುತ್ತಿರುವ ಕಾಂಬೋಡಿಯಾದ ಬಿದಿರು ರೈಲುಗಳು
– ಕೆ.ವಿ.ಶಶಿದರ.
ಪ್ರೆಂಚ್ ಯುಗದಲ್ಲಿ ಹಾಕಿದ ಈ ರೈಲು ಮಾರ‍್ಗ ಕಾಂಬೋಡಿಯಾದ ಬಟಾಂಬಾಂಗ್ ಮತ್ತು ಪೊಯಿಪೆಟ್ ನಡುವೆ ಸಂಪರ‍್ಕ ಕಲ್ಪಿಸುತ್ತದೆ. ಈ ರೈಲ್ವೇ ಮಾರ‍್ಗವು ಬಹಳ ಹಳೆಯದಾದ ಹಾಗೂ ಹಣಕಾಸಿನ ಲಾಬ ತಂದುಕೊಡದ ಕಾರಣ ಸಾರ‍್ವಜನಿಕ ರೈಲು ಸಂಪರ‍್ಕವನ್ನು ಈ ಹಳಿಯಲ್ಲಿ ನಿಲ್ಲಿಸಲಾಗಿದೆ. ಆದರೂ ಈ ರೈಲ್ವೇ ಹಳಿಗಳಿಂದ ಸಂಪರ‍್ಕ ಸಾದಿಸಿದ್ದ ಹಲವು ಹಳ್ಳಿಗಳ ಜನ ತಮ್ಮ ಉಪಯೋಗಕ್ಕೆಂದು ಈ ಹಳಿಗಳ ಮೇಲೆ ತಮ್ಮದೇ ಆದ ಸಾರಿಗೆ ಏರ‍್ಪಾಟನ್ನು ಕಲ್ಪಿಸಿಕೊಂಡಿದ್ದಾರೆ. ಅದೇ ಬಿದಿರು ರೈಲು – ನೋರ‍್ರೀ.
ಈ ಬಿದಿರು ರೈಲಿಗೆ ಬೋಗಿಗಳಿಲ್ಲ, ರೈಲಿನ ಇಂಜಿನ್ ಕೂಡ ಇಲ್ಲ!
ಸ್ತಳೀಯ ಕಮೇರ್ ಬಾಶೆಯಲ್ಲಿ ನೋರ‍್ರೀ ಎನ್ನುವ ಈ ಬಿದಿರು ರೈಲಿನಲ್ಲಿ ಎಲ್ಲಾ ರೈಲಿನಂತೆ ಹತ್ತಾರು ಬೋಗಿಗಳು ಇಲ್ಲ, ಇಂಜಿನ್ ಇಲ್ಲ. ಟಿಕೇಟು ಪಡೆದು ರೈಲು ಬರುವ ಸಮಯಕ್ಕೆ ರೈಲ್ವೇ ನಿಲ್ದಾಣದಲ್ಲಿ ಕಾಯುವ ಅವಶ್ಯಕತೆಯಿಲ್ಲ. ಈ ರೈಲಿನಲ್ಲಿರುವುದು ನಾಲ್ಕು ಚಕ್ರಗಳ ಮೇಲೆ ಕುಳಿತ ಒಂದೇ ಒಂದು ಪುಟ್ಟ ಬಿದಿರಿನ ವೇದಿಕೆ. ಬಿಸಿಲು, ಮಳೆ, ಚಳಿಗೆ ಪೂರ‍್ಣವಾಗಿ ತನ್ನ ಮೈಯನ್ನು ಒಡ್ಡಿಕೊಂಡಿರುವ ಬಿದಿರಿನಿಂದ ತಯಾರಿಸಲ್ಪಟ್ಟ ವೇದಿಕೆ. ಹಾಗಾಗಿ ಇದಕ್ಕೆ ಬಿದಿರು ರೈಲು ಎಂಬ ಅಡ್ಡಹೆಸರು.
ಬಿದಿರಿನ ಈ ರೈಲಿನ ಚಾಲನೆಗೆ ಒಂದು ಸಣ್ಣ ಡೀಸಲ್ ಜನರೇಟರ್ ಅನ್ನು ಬಿದಿರಿನ ವೇದಿಕೆಯ ಮೇಲೆ ತಮ್ಮದೇ ಆದ ಶೈಲಿಯಲ್ಲಿ ಬಿಗಿದಿರುತ್ತಾರೆ. ಬಿದಿರು ರೈಲನ್ನು ಬೇಕಾದಲ್ಲಿ ನಿಲ್ಲಿಸಲು ಅವಶ್ಯವಿರುವ ಬ್ರೇಕಿಂಗ್ ವ್ಯವಸ್ತೆಯನ್ನು ಸಹ ಜನರೇಟರೊಂದಿಗೆ ಇದರಲ್ಲಿ ಅಳವಡಿಸಿಕೊಂಡಿರುತ್ತಾರೆ. ನಮ್ಮಲ್ಲಿಯ ಕಾಸಗಿ ಶಟಲ್ ಬಸ್ಸಿನ ತದ್ರೂಪ ಈ ರೈಲು. ಬೇಕೆಂದರಲ್ಲಿ ಹತ್ತಬಹುದು ಬೇಕೆಂದರಲ್ಲಿ ಇಳಿಯಬಹುದು. ಪ್ರಯಾಣ ದರದಲ್ಲೂ ಚೌಕಾಸಿಗೆ ಅವಕಾಶವಿದೆ. ಇಂತಹ ಹಲವಾರು ರೈಲುಗಳು ಈ ಹಳಿಗಳ ಮೇಲೆ ದಿನ ನಿತ್ಯವೂ ಓಡಾಡುತ್ತಿದ್ದವು.
ಒಂದೇ ಹಳಿಯ ಮೇಲೆ ಹಲವಾರು ಬಿದಿರು ರೈಲುಗಳು ಓಡಾಡುತ್ತವೆ
ಒಂದೇ ಹಳಿಯ ಮೇಲೆ ಇವುಗಳು ಚಲಿಸುವ ಕಾರಣ ಎರಡು ನೋರ‍್ರೀಗಳು ಎದರುಬದರು ಬಂದಲ್ಲಿ ಇದಕ್ಕೆ ತಮ್ಮದೇ ಆದ ಕಾನೂನನ್ನು ರೂಪಿಸಿಕೊಂಡಿದ್ದಾರೆ. ಯಾವುದರಲ್ಲಿ ಕಡಿಮೆ ಜನ ಮತ್ತು ಸರಕು ಸರಂಜಾಮುಗಳು ಇರುತ್ತವೋ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಆ ನೋರ‍್ರಿಯನ್ನು ಹಳಿಯಿಂದ ಕೆಳಗಿಳಿಸಿ ಮತ್ತೊಂದು ನೋರ‍್ರೀ ತನ್ನ ಪ್ರಯಾಣವನ್ನು ಮುಂದುವರೆಸಲು ಅನುವು ಮಾಡಿಕೊಡಬೇಕು. ಇದೇ ಇಲ್ಲಿ ಓಡಾಡುವ ನೋರ‍್ರೀಗಳ ನಡುವೆ ಇರುವ ಅಲಿಕಿತ ಕಾನೂನು.
ಈ ಶತಮಾನದ ಆದಿಯಲ್ಲಿ ಕಾಂಬೋಡಿಯದಲ್ಲಿನ ರೈಲ್ವೆ ಏರ‍್ಪಾಟು ತೀರ ಹದಗೆಟ್ಟಿತ್ತು. ರೈಲ್ವೇ ಮಾರ‍್ಗಗಳೂ ಸರಿಯಾದ ನಿರ‍್ವಹಣೆಯಿಲ್ಲದೆ ಸೊರಗಿತ್ತು. ಹಾಗಾಗಿ ನಿಜವಾದ ರೈಲುಗಳ ಸಂಚಾರ ಅತಿ ವಿರಳ ಹಾಗೂ ಅತಿ ನಿದಾನವಾಗಿ ಸಾರ‍್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನು ಮನಗಂಡ ಸರ‍್ಕಾರ 2009ರಲ್ಲಿ ಬಟಾಂಬಾಂಗ್ ಮತ್ತು ಪೊಯಿಪೆಟ್ ನಡುವೆ ಹಳಿಯಲ್ಲಿನ ಎಲ್ಲಾ ರೈಲುಗಳ ಸೇವೆಯನ್ನು ರದ್ದುಗೊಳಿಸಿತು. ಇದಕ್ಕೆ ಮೂಲ ಕಾರಣ ರೈಲ್ವೇ ಹಳಿಗಳ ಪುನರ್ ನಿರ‍್ಮಾಣ ಒಂದಾದರೆ, ಹಣಕಾಸಿನ ಮುಗ್ಗಟ್ಟು ಪ್ರಮುಕವಾದದ್ದು.
ರೈಲ್ವೆ ಸೇವೆ ರದ್ದಾದ ಹಿನ್ನಲೆಯಲ್ಲಿ ದೂರದ ಪ್ರಾಂತ್ಯಗಳಿಗೆ ಪ್ರಯಾಣಿಸುವವರಿಗೆ ಸಾರಿಗೆ ಸಮಸ್ಯೆ ಎದುರಾಯಿತು. ಸರಕು ಸರಂಜಾಮುಗಳನ್ನು ಔಶದಿಗಳನ್ನು ಹಳ್ಳಿಗಳಿಗೆ ತಲುಪಿಸಲು ಹಾಗೂ ಅಲ್ಲಿ ಬೆಳೆದ, ತಯಾರಿಸಿದ ಉತ್ಪನ್ನಗಳನ್ನು ವಸ್ತುಗಳನ್ನು ಸಾಗಿಸಿ ವ್ಯಾಪಾರ ವಹಿವಾಟು ನಡೆಸಲು ತೊಂದರೆಗಳು ಎದುರಾದವು. ನಿರುದ್ಯೋಗ ಸಮಸ್ಯೆಯೂ ತಲೆಯೆತ್ತಿತು. ಸಣ್ಣ ಸಾರಿಗೆ ವ್ಯವಸ್ತೆಗಳಾದ ಮೊಟಾರ್ ಬೈಕ್‍ಗಳಲ್ಲಿ ಪ್ರಯಾಣಿಸಬಹುದಾದರೂ ಅದರಲ್ಲಿ ಹೆಚ್ಚು ಸರಕು ಸರಂಜಾಮು ಸಾಗಾಣಿಕೆ ಸಾದ್ಯವಿರಲಿಲ್ಲ. ಕಾಂಬೋಡಿಯಾದ ಹದಗೆಟ್ಟ ರಸ್ತೆಗಳು ಹಾಗೂ ದುಬಾರಿ ಗ್ಯಾಸೋಲಿನ್ ಈ ರೀತಿಯ ಸಾಗಾಣಿಕೆಗೆ ಪೂರಕವಾಗಿರಲಿಲ್ಲ. ಈ ಜ್ವಲಂತ ಸಮಸ್ಯೆಗೆ ಪರಿಹಾರವಾಗಿ ಅಲ್ಲಿನ ಜನ ಕಂಡುಕೊಂಡು ಅತಿ ಸುಲಬ ಉಪಾಯವೇ ನೋರ‍್ರೀಗಳು.
ಗಂಟೆಗೆ ಸರಿಸುಮಾರು 40 ಕಿ.ಮೀ. ವೇಗದಲ್ಲಿ ಸಾಗಬಲ್ಲವು
ಕಾಂಬೋಡಿಯಾದ ಪ್ರವಾಸೋದ್ಯಮದ ಅದಿಕ್ರುತ ನಿಯತಕಾಲಿಕದ ಪ್ರಕಾರ ಈ ನೋರ‍್ರೀಗಳು ಗಂಟೆಗೆ ಸರಿಸುಮಾರು 40 ಕಿ.ಮೀ. ವೇಗದಲ್ಲಿ ಚಲಿಸುವ ಅಳವನ್ನು ಹೊಂದಿದ್ದು ಒಬ್ಬ ಪ್ರಯಾಣಿಕ, ಒಬ್ಬ ಡ್ರೈವರ್ ಮತ್ತು ಒಂದು ಮೋಟಾರ್ ಬೈಕ್ ಇದರಲ್ಲಿ ಸಾಗಿಸಬಹುದಾಗಿದೆ. ಆದರೂ ಕಾಂಬೋಡಿಯಾದ ಜನ ಇಂತಹ ನೋರ‍್ರೀಗಳಲ್ಲಿ ಜಾನುವಾರುಗಳು, ಸ್ತಳೀಯ ಉತ್ಪನ್ನಗಳ ಮೂಟೆಗಳು, ಮೋಟಾರ್ ಬೈಕ್ ಮುಂತಾದವುಗಳನ್ನು ತುರುಕಿ ತಮಗೆ ಕೂರಲು ಸ್ತಳಾಬಾವವಿದ್ದರೂ ನೋರ್ರೀಗಳಲ್ಲಿ ಒತ್ತೊತ್ತಾಗಿ ಕುಳಿತುಕೊಂಡು ಪ್ರಯಾಣಿಸುವುದೂ ಸಾಮಾನ್ಯ.
ಅಲ್ಲಲ್ಲೇ ಕಿತ್ತು ಹೋದ ರೈಲ್ವೇ ಹಳಿಗಳು, ಸ್ಲೀಪರ‍್ಗಳೇ ಕಾಣೆಯಾದ ಹಳಿಗಳು ಬಿದಿರು ರೈಲಿನ ಪ್ರಯಾಣವನ್ನು ಇನ್ನೂ ಹೆಚ್ಚಿಗೆ ರೋಮಾಂಚನಗೊಳಿಸುತ್ತವೆ. ಕೆಲವೊಮ್ಮೆ ಸಮತಟ್ಟಾಗಿರದ ಮೇಲ್ಮೈನ ಕಾರಣ ಮೇಲಕ್ಕೆ ಕೆಳಕ್ಕೆ ಹಾರಾಡುತ್ತಾ ಹಾಗೂ ನಡು ನಡುವೆ ಹಳಿಯಿಲ್ಲದ ಜಾಗದಲ್ಲಿ ದಡಾರನೆ ಕೆಳಕ್ಕೆ ಇಳಿದು ಅಶ್ಟೇ ರಬಸವಾಗಿ ಮೇಲಕ್ಕೆ ಹತ್ತಿ ಪ್ರಯಾಣ ಮುಂದುವರೆಸುವುದೂ ಅತಿ ರೋಚಕ ಅನುಬವ. ಪ್ರವಾಸಿಗರಿಗೆ ಇದು ಬಹಳ ತ್ರಾಸದಾಯಕ ಹಾಗೂ ಪ್ರಾಣವನ್ನು ಒತ್ತೆಯಿಟ್ಟು ನಡೆಸುವ ಪ್ರಯಾಣ ಎಂದೆನಿಸಿದರೂ ಕಾಂಬೋಡಿಯನ್ನಿನ ಈ ಪ್ರದೇಶದ ಜನರಿಗೆ ಇದು ದಿನನಿತ್ಯದ ತಪ್ಪದ ಬವಣೆ.
ಇಶ್ಟಾದರೂ ಸಹ ಕಾಂಬೋಡಿಯಾದಲ್ಲಿ ಬಿದಿರಿನ ರೈಲುಗಳು ಬಹಳ ಜನಪ್ರಿಯವಾಗಿದ್ದವು. ರೈಲ್ವೇ ಮಾರ‍್ಗ ಹೊಂದಿದ್ದ ಹಲವಾರು ಪ್ರಾಂತೀಯ ಪಟ್ಟಣಗಳಿಗೆ ಬಿದಿರಿನ ರೈಲುಗಳು ಜನಾಶೋತ್ತರಗಳನ್ನು ಈಡೇರಿಸಲು ಸಂಪರ‍್ಕ ಸಾದಿಸಿದ್ದವು. ನೋರ‍್ರೀಗಳ ಮೂಲಕ ಕಾಂಬೋಡಿಯಾದ ರಾಜದಾನಿ ನೋಮ್ ಪೆನ್‍ಗೆ ಸಹ ಹೋಗಬಹುದಾಗಿತ್ತು.
ಇನ್ನೇನು ಇತಿಹಾಸದ ಪುಟಗಳನ್ನು ಸೇರಲಿದೆ ಈ ಬಿದಿರು ರೈಲು
ಇತ್ತೀಚಿನ ದಿನಗಳಲ್ಲಿ ಕಾಂಬೋಡಿಯಾ ಸರ‍್ಕಾರವು ರೈಲು ಮಾರ‍್ಗಗಳನ್ನು ನವೀಕರಿಸುವ ಹಾಗೂ ಹಳೆಯ ಹಳಿಗಳನ್ನು ಕಿತ್ತೊಗೆಯುವ ಕಾರ‍್ಯಕ್ಕೆ ಕೈಹಾಕಿ ಆದುನೀಕತೆಯತ್ತ ದ್ರುಶ್ಟಿ ನೆಟ್ಟಿರುವ ಹಿನ್ನೆಲೆಯಲ್ಲಿ ನೋರ‍್ರೀ ಎಂಬ ಬಿದಿರು ರೈಲುಗಳ ಸಂಕ್ಯೆ ಗಣನೀಯವಾಗಿ ಇಳಿಮುಕವಾಗಿದೆ. ಮುಂದೊಂದು ದಿನ ಇದು ಇತಿಹಾಸದ ಪುಟಗಳನ್ನು ಸೇರುವುದು ನಿಶ್ಚಿತ.
ಹಾಲಿ ಕಾಂಬೋಡಿಯಾದ ಪುರ‍್ಸಾತ್ ಎಂಬಲ್ಲಿಂದ ಆಗ್ನೇಯ ದಿಕ್ಕಿನೆಡೆಗೆ ನೋರ‍್ರೀಗಳು ಈಗಲೂ ಚಾಲನೆಯಲ್ಲಿದೆ. ಬಿದಿರು ರೈಲಿನಲ್ಲಿ ಪ್ರಯಾಣಿಸುವವರ ನೋವು ನಲಿವುಗಳನ್ನು ಸ್ವತಹ ಅನುಬವಿಸಲು ಹಾಗೂ ಪ್ರಯಾಣದ ತನ್ನದೇ ಮಜಾ ಆಸ್ವಾದಿಸಲು ಈ ನೋರ‍್ರೀಗಳನ್ನು ಹತ್ತಬಹುದು. ಒಂದು ಗಂಟೆ ಪ್ರಯಾಣಕ್ಕೆ ಕೇವಲ ಐದು ಡಾಲರ್ ಶುಲ್ಕ ತೆರಬೇಕಾಗುತ್ತದಶ್ಟೆ.
(ಮಾಹಿತಿ ಸೆಲೆ: dailymail.co.uk, atlasobscura.com, amusingplanet.com, thehindu.com)
(ಚಿತ್ರ ಸೆಲೆ: wikimedia, wikimedia/bambootrain)
ಇತ್ತೀಚಿನ ಅನಿಸಿಕೆಗಳು