ಪದ್ಮಪುರಂ ಸಸ್ಯೋದ್ಯಾನ

– .

ಆಂದ್ರ ಪ್ರದೇಶದ ಕರಾವಳಿ ನಗರ ವಿಶಾಕಪಟ್ಟಣಂ ನಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ಅರಕು ಬಸ್ ನಿಲ್ದಾಣವಿದೆ.  ಅರಕು ಬಸ್ ನಿಲ್ದಾಣದಿಂದ 2.5 ಕಿಲೋಮೀಟರ್ ಕ್ರಮಿಸಿದರೆ ಪದ್ಮಪುರಂ ಹಳ್ಳಿ ಎದುರಾಗುತ್ತದೆ. ಅಲ್ಲೊಂದು ಪ್ರಸಿದ್ದ ಸಸ್ಯೋದ್ಯಾನವಿದೆ (ಬಟಾನಿಕಲ್ ಗಾರ‍್ಡನ್), ಅದೇ ಪದ್ಮಾಪುರಂ ಸಸ್ಯೋದ್ಯಾನ.

ಅರಕು ಇರುವುದು ಪೂರ‍್ವ ಗಟ್ಟದ ಕಣಿವೆಯಲ್ಲಿ. ಇದನ್ನು ಆಂದ್ರ ಪ್ರದೇಶದ ‘ಊಟಿ’ ಎನ್ನುತ್ತಾರೆ. ಅಶ್ಟು ತಂಪಾದ ವಾತಾವರಣವನ್ನು ಇಲ್ಲಿ ಕಾಣಬಹುದು. ಪದ್ಮಪುರಂ ಸಸ್ಯೋದ್ಯಾನ ನೋಡಲು ಕಣ್ಣಿಗೆ ಹಬ್ಬ. ಈ ಸಸ್ಯೋದ್ಯಾನ ಪೂರ‍್ವ ಗಟ್ಟಗಳ ಮದ್ಯೆ ಆವರಿಸಿರುವ ಕನಸಿನ ತಾಣ. ಸುಂದರ ವರ‍್ಣರಂಜಿತ ಹೂವುಗಳು, ಸೊಗಸಾದ ಗುಲಾಬಿ ಉದ್ಯಾನವನ, ಟ್ರೀಟಾಪ್ ಗುಡಿಸಲುಗಳು, ಆಟಿಕೆ ರೈಲು, ನರ‍್ಸರಿಗಳಿಂದ ತುಂಬಿದ ಈ ಪ್ರದೇಶದ ಒಳ ಹೊಕ್ಕರೆ, ಬೇರೆಯದೇ ಗ್ರಹದಲ್ಲಿ ಕಾಲಿಟ್ಟಂತೆ ಆಗುತ್ತದೆ.

1942ರಲ್ಲಿಈ ಸಸ್ಯೋದ್ಯಾನವನ್ನು ನಿರ‍್ಮಿಸಲಾಯಿತು. ಇದರ ಮೂಲ ಉದ್ದೇಶ ಇದ್ದದು ಎರಡನೆಯ ಮಹಾಯುದ್ದದಲ್ಲಿ ಹೋರಾಡಿದ ಸೈನಿಕರಿಗೆ ಅವಶ್ಯವಿರುವ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ಪೂರೈಸಲು. ಯುದ್ದದ ನಂತರ ಇದನ್ನು ತೋಟಗಾರಿಕಾ ನರ‍್ಸರಿ ಹಾಗೂ ತರಬೇತಿ ಕೇಂದ್ರವಾಗಿ ಪರಿವರ‍್ತಿಸಲಾಯಿತು. ಮೂಲ ಉದ್ದೇಶದಿಂದ ಹೊರ ಬಂದ ನಂತರ ಇಲ್ಲಿ ಅನೇಕ ಅಪರೂಪದ ಹೂ ಗಿಡಗಳ ನೆಡುವಿಕೆ, ಹೂ ಗಿಡಗಳೊಂದಿಗೆ ನೀಲಗಿರಿ ಮರಗಳು, ಪೈನ್ ಮರಗಳನ್ನೂ ಸಹ ನೆಡಲಾಯಿತು. ಪ್ರವಾಸಿಗರನ್ನು ಆಕರ‍್ಶಿಸಲು ಇಲ್ಲಿ ಕುತೂಹಲಕಾರಿ ಕಲ್ಲಿನ ವಿಗ್ರಹಗಳನ್ನೂ ಸ್ತಾಪಿಸಲಾಯಿತು.

ಈ ಉದ್ಯಾನವನದಲ್ಲಿ ಮರಗಳ ಮೇಲೆ ನಿರ‍್ಮಿಸಿರುವ ಗುಡಿಸಲುಗಳನ್ನು ಕಾಣಬಹುದು. ಇಲ್ಲಿಗೆ ಬರುವವರು ‘ಟ್ರೀ ಟಾಪ್ ಹಟ್’ ಗಳನ್ನು ಕಾಯ್ದಿರಿಸಬಹುದು. ಟ್ರೀಟಾಪ್ ಗುಡಿಸಲುಗಳು ನೆಲದಿಂದ ಸರಿ ಸುಮಾರು ಹತ್ತು ಅಡಿ ಎತ್ತರದಲ್ಲಿವೆ. ಈ ಟ್ರೀ ಟಾಪ್ ಗುಡಿಸಲುಗಳನ್ನು ‘ನೇತಾಡುವ ಕುಟೀರಗಳು’ ಎಂದೂ ಸಹ ಕರೆಯುತ್ತಾರೆ. ಇಂತಹ ಗುಡಿಸಲುಗಳ ಒಳಹೊಕ್ಕು, ಅಲ್ಲಿಂದ ಪ್ರಕ್ರುತಿ ಸೌಂದರ‍್ಯವನ್ನು ಆಸ್ವಾದಿಸುವುದೇ ಅತ್ಯಂತ ರೋಚಕ ಅನುಬವ. ಅದರಲ್ಲೂ ಬಲವಾದ ಗಾಳಿ ಬೀಸಿದಾಗ ಮರದ ಕೊಂಬೆಗಳು ತೂಗಾಡಿದಾಗ ಅಪರೂಪದ ಹಾಗೂ ಬಹು ಕಾಲ ನೆನಪಿನಲ್ಲಿ ಉಳಿಯುವಂತಹ ಅನುಬವ ಪ್ರವಾಸಿಗರದ್ದಾಗುತ್ತದೆ.

ಪದ್ಮಪುರಂ ಉದ್ಯಾನವನದ ಮತ್ತೊಂದು ಪ್ರಮುಕ ವೈಶಿಶ್ಟ್ಯವೆಂದರೆ ಆಟಿಕೆ ರೈಲು. ಇದು ಮಕ್ಕಳಿಗಾಗಿ ಮಾತ್ರ ಇರುವುದಲ್ಲ. ಇದರಲ್ಲಿ ವಯಸ್ಕರೂ ಸಹ ಪ್ರಯಾಣ ಮಾಡಬಹುದು. ಬಹಳ ವಿಸ್ತಾರವಾದ ಪ್ರದೇಶದಲ್ಲಿ ಈ ಉದ್ಯಾನವನ ಹರಡಿರುವುದರಿಂದ, ಪ್ರವಾಸಿಗರಿಗೆ ಇಡೀ ಪ್ರದೇಶವನ್ನು ಸುತ್ತಿ, ಅಲ್ಲಿನ ಗಿಡ ಬಳ್ಳಿಗಳ ಸೌಂದರ‍್ಯವನ್ನು ಆಸ್ವಾದಿಸಲು ಈ ಟಾಯ್ ಟ್ರೈನ್ ಅನುಕೂಲ ಕಲ್ಪಿಸಿಕೊಡುತ್ತದೆ. ಟಾಯ್ ಟ್ರೈನ್ ಒಂದೇ ಅಲ್ಲದೆ ಸಣ್ಣ ಜಲಪಾತಗಳು, ಜರಿಗಳು, ಸುರಂಗಗಳು, ಸೇತುವೆಗಳೂ ಸಹ ಈ ಪ್ರದೇಶದ ಸೌಂದರ‍್ಯವನ್ನು ಇಮ್ಮಡಿಗೊಳಿಸಿವೆ. ಅರಕು ಕಣಿವೆಯನ್ನು ವೀಕ್ಶಿಸಲು ಬಂದ ಪ್ರವಾಸಿಗರಿಗೆ, ಈ ಸಸ್ಯೋದ್ಯಾನ ಅತ್ಯಂತ ಆಕರ‍್ಶಣೀಯ ತಾಣ.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org famousplacesinindia.in, vacationplan.in, hellotravel.com, trawell.in, nativeplanet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks