ಶಾಂಗೈ ಸುತ್ತ ಒಂದು ಸುತ್ತು
ವೇಗವಾಗಿ ಬೆಳೆಯುತ್ತಿರುವ ಊರುಗಳ ಹೆಸರುಗಳಲ್ಲಿ ಚೀನಾ ದೇಶದ ಹಲವು ಊರುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ಶಾಂಗೈ ಕೂಡ ಒಂದು. ಚೀನಾದ ನೆಲೆವೀಡು ಬೀಜಿಂಗ್ ನಂತರ ಎರಡನೇ ದೊಡ್ಡ ಊರು ಶಾಂಗೈ. ಬೆಳೆಯುತ್ತಿರುವ ಹಲವು ಕೈಗಾರಿಕೆ, ಚೀನಿ ಕಲೆ, ಕಟ್ಟಡದರಿಮೆ ಮುಂತಾದವುಗಳಿಗೆ ಶಾಂಗೈ ಸಾಕ್ಶಿಯಾಗಿ ನಿಂತಿದೆ. ಶಾಂಗೈನಲ್ಲಿ ಒಂದು ದಿನದಲ್ಲಿ ಏನೆಲ್ಲ ನೋಡಬಹುದು ಎಂಬುದರ ಕಿರು ನೋಟ ನಿಮ್ಮ ಮುಂದಿಡುವೆ.
ಓರಿಯಂಟಲ್ ಪರ‍್ಲ್ ಟಿವಿ ಟವರ್(Oriental Pearl TV Tower)
ಈ ಪರ‍್ಲ್ ಟಿವಿ ಗೋಪುರ ಶಾಂಗೈದ ಎರಡನೇಯ ಬಲು ಎತ್ತರದ ಕಟ್ಟಡ. ಸುಮಾರು 1535 ಅಡಿಗಳಶ್ಟು(468 ಮೀಟರ್) ಎತ್ತರವಿರುವ ಈ ಗೋಪುರ, ಜಗತ್ತಿನ ಬಲು ಎತ್ತರದ ಕಟ್ಟಡಗಳಲ್ಲಿ ಒಂದು. ಟಿವಿ, ರೇಡಿಯೋ ಅರಿವುಕಗಳನ್ನು(Antennae) ಇಲ್ಲಿ ಜೋಡಿಸಿದ್ದರಿಂದ ಇದಕ್ಕೆ ಟಿವಿ ಟವರ್ ಹೆಸರು ಬಂದಿದೆ. ಮೂರು ಬಲಶಾಲಿ ದೊಡ್ಡ ಕಂಬಗಳ ಆದಾರ ಪಡೆದು ಇಶ್ಟುದ್ದದ ಗೋಪುರವೊಂದನ್ನು ಕಟ್ಟಲು ಶುರು ಮಾಡಿದ್ದು 1991ರಲ್ಲಿ. ಇದರ ಕಟ್ಟುವಿಕೆಗೆ ಸುಮಾರು 3 ವರುಶ ತಗುಲಿದೆ. ಈ ಗೋಪುರ ಒಟ್ಟು 11 ತೆರಳೆಗಳನ್ನು(Spheres) ಮತ್ತು 114 ಮಹಡಿಗಳನ್ನು ಹೊಂದಿದೆ. ಇಲ್ಲಿಗೆ ಬೇಟಿ ನೀಡುವ ಜನರು 863 ಅಡಿಗಳ ಎತ್ತರದಲ್ಲಿರುವ ಮಹಡಿಯ ಮೂಲಕ ಶಾಂಗೈ ಊರಿನ ನೋಟ ನೋಡಬಹುದು. ಇಶ್ಟು ಎತ್ತರದಲ್ಲಿ 1.5 ಇಂಚು ದಪ್ಪದ ಗಾಜಿನಿಂದ ತಯಾರಿಸಿದ ನೆಲದ(Glass floor) ಮೇಲೆ ಓಡಾಡುವ ಮುನ್ನ ಎಂತವರ ಗುಂಡಿಗೆಯಲ್ಲೂ ನಡುಕ ಶುರುವಾಗದೇ ಇರದು. 876 ಅಡಿಗಳ ಎತ್ತರದಲ್ಲಿ ದುಂಡನೇ ಸುತ್ತುವ ತಿಂಡಿ ಮನೆಯೂ(Restaurent) ಇದೆ. ಶಾಂಗೈ ಊರಿನತ್ತ ನೋಟ ಬೀರುತ್ತ ಊಟ ಸವಿಯಬಹುದು. ಇಲ್ಲಿಯೇ ಉಳಿದುಕೊಳ್ಳಬೇಕೆನ್ನುವವರಿಗೆ 20 ಕೋಣೆಗಳ ಹೋಟೆಲ್ ಕೂಡ ಉಂಟು.
ಸಂಜೆಯಾಗುತ್ತಿದ್ದಂತೆ ತರ ತರ ಬಣ್ಣದ ದೀಪಗಳಿಂದ ಈ ಗೋಪುರ ಮಿನುಗುತ್ತಿರುತ್ತದೆ. ಇದನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ. ತೈವಾನ್‌ನ ತೈಪೆ101, ಟೊರೆಂಟೋದ ಸಿಎನ್ ಟವರ್, ಕೌಲಾಲಂಪುರದ ಪೆಟ್ರೋನಾಸ್ ಟವರ್, ಟೋಕಿಯೋ ಟವರ್, ದುಬೈನ ಬುರ‍್ಜ್ ಕಲೀಪಾದಂತ ಎತ್ತರ ಕಟ್ಟಡಗಳಂತೆ ಶಾಂಗೈನ ಪರ‍್ಲ್ ಟಿವಿ ಟವರ್ ಕೂಡ ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿದೆ.
ಟಿವಿ ಟವರ್ ಪಕ್ಕದಲ್ಲಿಯೇ ಶಾಂಗೈ ಓಶಿಯನ್ ಅಕ್ವೇರಿಯಂ ಹೆಸರಿನ ಮೀನು ಮನೆ(Aquarium) ಇದೆ. ಬಗೆ ಬಗೆಯ ಕಡಲ್ ಮೀನುಗಳು, ಆಕ್ಟೋಪಸ್, ಡಾಲ್ಪಿನ್‌ಗಳು, ಪೆಂಗ್ವಿನ್‌ಗಳು, ಸೀಲ್, ಆಮೆಗಳನ್ನು ಇಲ್ಲಿ ನೋಡಬಹುದು. ದಿನವೂ ಇಲ್ಲಿ ಕೆಲವು ವಿಶೇಶ ತೋರ‍್ಪುಗಳು(Exhibition), ನೀರ್ ಉಸಿರಿಗಳ ಆಟದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಇದು ಮುದನೀಡುವುದು.
ದಿ ಬಂಡ್(The Bund):
ದಿ ಬಂಡ್ ಎನ್ನುವುದು ಶಾಂಗೈನ ಹೊಳೆ ತೀರ. ಹ್ಯುಆಂಗ್‌ಪು(HuangPu) ಹೊಳೆ ದಡದಲ್ಲಿ “ದಿ ಬಂಡ್” ಜಾಗ ಕಂಡು ಬರುತ್ತದೆ. ಜೊಂಗ್‌ಶಾನ್(Zhongshan) ಬೀದಿಯ 1.6 ಕಿ.ಮೀ. ಉದ್ದಕ್ಕೂ ಈ ಹೊಳೆ ದಡ ಹರವಿಕೊಂಡಿದೆ. ಶಾಂಗೈನ ಪಡುವಣ(West) ದಿಕ್ಕಿಗೆ ಜೊಂಗ್‌ಶಾನ್ ಬೀದಿಯುದ್ದಕ್ಕೂ ದಿ ಬಂಡ್ ನೆಲೆಸಿದ್ದರೆ, ಮೂಡಣಕ್ಕೆ ಶಾಂಗೈನ ಪುಡೊಂಗ್(Pudong) ತಾಣವನ್ನು ನೋಡಬಹುದು. ಇಲ್ಲಿಗೆ ದಿನ ನಿತ್ಯ ಓಡಾಡಲು, ನಡೆದಾಡಲು, ಚೊಕ್ಕ ಗಾಳಿ ಪಡೆಯಲು ಹಲವಾರು ಮಂದಿ ಬರುತ್ತಾರೆ. ಇಳಿ ಸಂಜೆ, ರಾತ್ರಿ ಹೊತ್ತು ಬಂಡ್ ಜಾಗಕ್ಕೆ ಬಂದರೆ ಮನೆಗೆ ಹೋಗುವುದೇ ಬೇಡ ಎನ್ನಿಸುತ್ತದೆ. ಹೌದು, ಬಂಡ್‌ಗೆ ಎದುರಾಗಿ ಪುಡೊಂಗ್‌ನಲ್ಲಿ ನೆಲೆಸಿರುವ ಸಾಲು ಸಾಲು ಮುಗಿಲಿಗೆ ಮುತ್ತಿಕ್ಕುವ ಕಟ್ಟಡಗಳು ಬಗೆ ಬಗೆಯ ಬಣ್ಣದ ದೀಪದಲ್ಲಿ ಮಿಂಚುವ ಸೊಬಗಿನ ನೋಟ ಅಚ್ಚರಿಗೊಳಿಸದೇ, ಮನಸೂರೆ ಮಾಡದೇ ಬಿಡದು.
ಓರಿಯಂಟಲ್ ಪರ‍್ಲ್ ಟಿವಿ ಟವರ್ ಕೂಡ ಪುಡೊಂಗ್ ನಲ್ಲಿರುವುದರಿಂದ, ದಿ ಬಂಡ್ ಮೇಲೆ ನಿಂತು ಅದರ ಅಂದ ಸೆರೆಹಿಡಿಯಬಹುದು. LED ದೀಪಗಳ ಜಗಮಗಿಸುವ ಬಣ್ಣದ ಓಕುಳಿ ನೋಡುತ್ತ ಮೈಮರೆತು ನಿಲ್ಲಬಹುದು. ಬಂಡ್ ಸುತ್ತಮುತ್ತಲೂ ಇತ್ತೀಚಿಗೆ ತೋಟ, ಸೇತುವೆ ಇತರೆ ಪ್ರವಾಸಿಗರ ಸೆಳೆಯುವ ತಾಣಗಳನ್ನು ಕಟ್ಟಿಸಿದ್ದರೂ, ಬಂಡ್ ತೀರದಲ್ಲಿ ಓಡಾಡುವ ನಲಿವೇ ಬೇರೆ. ದಿ ಬಂಡ್ ನೋಡುತ್ತಿದ್ದಂತೆ ಮುಂಬಯಿಗರಿಗೆ ಮರೀನ್ ಡ್ರೈವ್‌ನ ಪಟ ಕಣ್ಣ ಮುಂದೆ ಬಂದು ಹೋಗಬಹುದು. ಬಂಡ್ ಅನ್ನು ಇಲ್ಲಿನ ಸ್ತಳೀಯರು ವೈಟಾನ್(Waitan) ಅಂತಲೂ ಕರೆಯುತ್ತಾರೆ. ಪ್ರವಾಸಿಗರಿಗೆಂದೇ ಹ್ಯುಆಂಗ್‌ಪು ಹೊಳೆಯಲ್ಲಿ ದೋಣಿ ಪಯಣದ ಅವಕಾಶ ಮಾಡಿಕೊಡಲಾಗಿದೆ. ತಿಟ್ಟ ಕ್ಲಿಕ್ಕಿಸುತ್ತ ದೋಣಿ ಪಯಣದ ಮಜ ಅನುಬವಿಸಬಹುದು.
ಶಾಂಗೈನ ಇನ್ನಶ್ಟು ಜಾಗಗಳ ಬಗ್ಗೆ ಮಾಹಿತಿ, ಮುಂದಿನ ಬರಹದಲ್ಲಿ.
(ಮುಂದುವರೆಯುವುದು…)
(ಮಾಹಿತಿ ಮತ್ತು ಚಿತ್ರ ಸೆಲೆ: meet-in-shanghai.net, wikipedia.org, sh-soa.com. wikimedia.org, thousandwonders.net)
ಇತ್ತೀಚಿನ ಅನಿಸಿಕೆಗಳು