ಎಲ್ಲರ ಪ್ರೀತಿಯ ‘ಇಂಡಿಯನ್ ಸ್ಪಿಟ್ಜ್’

– ನಾಗರಾಜ್ ಬದ್ರಾ.

ಇಂಡಿಯನ್ ಸ್ಪಿಟ್ಜ್ Indian Spitz

ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಇಶ್ಟಪಡುವ ನಾಯಿ ಎಂದರೆ ಸ್ಪಿಟ್ಜ್ (Spitz) ತಳಿಯ ನಾಯಿ. ಇದೊಂದು ವಿಶೇಶ ಬಗೆಯ ತಳಿಯಾಗಿದ್ದು, ಇದನ್ನು ಪಳಗಿಸುವುದು ತುಂಬಾ ಸುಲಬ. ಸ್ಪಿಟ್ಜ್ ನಾಯಿ ತಳಿ ಮೊದಲು ಎಲ್ಲಿ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಈ ತಳಿಗಳಲ್ಲಿ ಹೆಚ್ಚಿನವು ಹುಟ್ಟಿಕೊಂಡಿದ್ದು ಆರ‍್ಕ್ಟಿಕ್ (Arctic) ಪ್ರದೇಶ ಅತವಾ ಸೈಬೀರಿಯಾದಲ್ಲಿ ಎಂದು ಹೇಳಲಾಗುತ್ತದೆ. ಸ್ವಿಟ್ಜರ‍್ಲೆಂಡ್‍ನಲ್ಲಿ ಸ್ಪಿಟ್ಜ್ ತಳಿ ನಾಯಿಗಳ ಎಲುಬುಗೂಡುಗಳು (Skeletal) ಪತ್ತೆಯಾಗಿದ್ದು, ಅವು ಸುಮಾರು 2,000 ವರುಶದಶ್ಟು ಹಳೆಯವು ಎಂದು ತಿಳಿದುಬಂದಿದೆ. ಸಾವಿರಾರು ವರುಶಗಳಿಂದ ಮದ್ಯ ಯುರೋಪಿನಲ್ಲಿ ಇವು ನೆಲೆಸಿವೆ ಎಂಬುದಕ್ಕೆ ಪುರಾವೆಗಳು ಕೂಡ ಸಿಕ್ಕಿವೆ. ಆದರೆ ಜಗತ್ತಿನ ಇತರೆ ದೇಶಗಳಿಗೆ ಪರಿಚಯವಾಗಿದ್ದು ತುಂಬಾ ತಡವಾಗಿ.

ಸ್ಪಿಟ್ಜ್ ತಳಿಯಲ್ಲಿ ಪಿನ್ನಿಶ್ ಸ್ಪಿಟ್ಜ್, ಜರ‍್ಮನ್ ಸ್ಪಿಟ್ಜ್, ಡ್ಯಾನಿಶ್ ಸ್ಪಿಟ್ಜ್, ಇಂಡಿಯನ್ ಸ್ಪಿಟ್ಜ್, ಜಪಾನೀಸ್ ಸ್ಪಿಟ್ಜ್, ಅಮೇರಿಕನ್ ಎಸ್ಕಿಮೊ ಡಾಗ್, ಚೀನಾದ ಚೌ ಚೌ ತಳಿ ಹೀಗೆ ಹಲವಾರು ಬಗೆಗಳಿವೆ. ಇವುಗಳಲ್ಲಿ ಹೆಚ್ಚಿನವು ಹುಟ್ಟಿಕೊಂಡಿದ್ದು ಜರ‍್ಮನ್ ಸ್ಪಿಟ್ಜ್ ತಳಿಯಿಂದ, ಆದ್ದರಿಂದ ಇದನ್ನು ಸ್ಪಿಟ್ಜ್ ನ ಮೂಲ ತಳಿ ಎಂದು ಕರೆಯುತ್ತಾರೆ.

ಇಂಡಿಯಾ ಜೊತೆಗಿನ ನಂಟು

ಸ್ಪಿಟ್ಜ್ ತಳಿಯನ್ನು ಇಂಡಿಯಾಕ್ಕೆ ಪರಿಚಯಿಸಿದ್ದು ಬ್ರಿಟೀಶರು. ಅವರು ಜರ‍್ಮನ್ ಸ್ಪಿಟ್ಜ್ ತಳಿ ನಾಯಿಯನ್ನು ಇಂಡಿಯಾದ ಸ್ತಳೀಯ ನಾಯಿಗಳೊಂದಿಗೆ ಒಂದಾಗಿಸಿ ಹೊಸ ಸ್ಪಿಟ್ಜ್ ತಳಿಯನ್ನು ಹುಟ್ಟು ಹಾಕುವ ಪ್ರಯತ್ನ ಆರಂಬಿಸಿದರು. ಹಲವಾರು ವರುಶಗಳ ಬಳಿಕ ಅವರಿಗೆ ಇಂಡಿಯಾದ ಗಾಳಿಪಾಡಿಗೆ ಸರಿಹೊಂದುವ ನಾಯಿ ತಳಿ ಸಿಕ್ಕಿತ್ತು, ಅದುವೇ ಇಂಡಿಯನ್ ಸ್ಪಿಟ್ಜ್.

ಇಂಡಿಯನ್ ಸ್ಪಿಟ್ಜ್ ಮೈಮಾಟ

ಈ ತಳಿಯ ನಾಯಿಗಳ ಮೈಮೇಲೆ ದಟ್ಟವಾದ ಕೂದಲಿದ್ದು, ನೋಡಲು ತುಂಬಾ ಚೆಲುವಾಗಿರುತ್ತವೆ. ಇಂಡಿಯನ್ ಸ್ಪಿಟ್ಜ್ ಗಳನ್ನು ಅವುಗಳ ಗಾತ್ರದ ಅನುಗುಣವಾಗಿ ಚಿಕ್ಕ ಹಾಗೂ ದೊಡ್ಡ ಗಾತ್ರದ ಸ್ಪಿಟ್ಜ್ ಗಳು ಎಂದು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಚಿಕ್ಕ ಗಾತ್ರದ ಸ್ಪಿಟ್ಜ್ ಗಳು ಸಾಮಾನ್ಯವಾಗಿ 20 ರಿಂದ 25 ಸೆಂಟಿಮೀಟರಿನಶ್ಟು ಉದ್ದ ಹಾಗೂ 5 ರಿಂದ 7 ಕೆ.ಜಿ ಯಶ್ಟು ತೂಕವಿದ್ದರೆ, ದೊಡ್ಡ ಗಾತ್ರದವು 35 ರಿಂದ 45 ಸೆಂಟಿಮೀಟರಿನಶ್ಟು ಉದ್ದ ಹಾಗೂ 12 ರಿಂದ 20 ಕೆ.ಜಿ ಯಶ್ಟು ತೂಕವಿರುತ್ತವೆ. ಸಾಮಾನ್ಯವಾಗಿ 10 ರಿಂದ 14 ವರುಶಗಳ ಕಾಲ ಇವು ಬದುಕುತ್ತವೆ.

ಪಳಗಿಸಲು ತುಂಬಾ ಸುಲಬ

ಇಂಡಿಯನ್ ಸ್ಪಿಟ್ಜ್ ಗಳು ಕಲಿಕೆಯಲ್ಲಿ ಚುರುಕಾಗಿದ್ದು, ಬೇಗನೆ ಪಳಗಿಸಬಹುದು. ತರಬೇತಿ ಸಮಯದಲ್ಲಿ ಹಲವಾರು ಬಗೆಯ ಜಾಣ್ಮೆಗಳನ್ನು ಕಡಿಮೆ ಹೊತ್ತಿನಲ್ಲಿ ಇವು ಕಲಿಯುತ್ತವೆ. ಸಾಕುವವರೊಡನೆ ಬೇಗನೆ ಬೆರೆಯುತ್ತವೆ. ಈ ವಿಶೇಶವಾದ ಅಳವಿನಿಂದ ಇವುಗಳನ್ನು 1970 ಮತ್ತು 1980 ರ ದಶಕಗಳಲ್ಲಿ ಇಂಡಿಯಾದ ಸರ‍್ಕಸ್‍ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು.

ಮನೆಯಲ್ಲಿನ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಜೊತೆಗೆ ತುಂಬಾ ಬೇಗನೆ ಬೆರೆತು, ಅವರೊಂದಿಗೆ ಆಟವಾಡಿ ನಲಿಯುತ್ತವೆ. ಇವು ಸಿಡುಕಿನ ನಾಯಿಗಳಲ್ಲ, ಸ್ನೇಹ ಜೀವಿಗಳಾಗಿದ್ದು ವಿಶೇಶವಾಗಿ ಚಿಕ್ಕ ಮಕ್ಕಳೊಂದಿಗೆ ಆಟವಾಡಲು ಇಶ್ಟಪಡುತ್ತವೆ. ನಮ್ಮ ಆಶಯ ಹಾಗೂ ಸೂಚನೆಗಳನ್ನು ಬೇಗನೆ ತಿಳಿದುಕೊಳ್ಳುವ ವಿಶೇಶವಾದ ಅಳವು ಹೊಂದಿದ್ದು, ಬೇಗನೆ ನಮ್ಮ ಜೀವನಶೈಲಿಗೆ ಹೊಂದಿಕೊಳ್ಳುತ್ತವೆ. ಚಿಕ್ಕ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಬಂಗಲೆಗಳಲ್ಲಿಯೂ ಸಹ ತಮ್ಮನ್ನು ಸಂಪೂರ‍್ಣವಾಗಿ ಹೊಂದಿಸಿಕೊಳ್ಳುತ್ತವೆ.

ಇಂಡಿಯನ್ ಸ್ಪಿಟ್ಜ್ Indian Spitz

ಇಂಡಿಯನ್ ಸ್ಪಿಟ್ಜ್ ಗಳಿಗೆ ಇಶ್ಟವಾದ ತಿನಿಸುಗಳೆಂದರೆ ಹಾಲು, ಮೊಸರು ಹಾಗೂ ಅನ್ನ, ಮನುಶ್ಯನಿಗೆ ಹತ್ತಿರವಾಗಲು ಇದು ಕೂಡ ಒಂದು ಮುಕ್ಯ ಕಾರಣವಾಗಿದೆ. ಜೊತೆಗೆ ಮನೆಯ ಕಾವಲುಗಾರರಂತೆಯೂ ಕೆಲಸಮಾಡುತ್ತವೆ. ಆದ್ದರಿಂದ ಮನೆಯ ಪ್ರತಿಯೊಬ್ಬ ಸದಸ್ಯನು ಇಶ್ಟಪಡುತ್ತಾನೆ. ಮನೆಯಲ್ಲಿನ ಇತರೆ ಸಾಕುಪ್ರಾಣಿಗಳೊಂದಿಗೂ ತುಂಬಾ ಸುಲಬವಾಗಿ ಹೊಂದಿಕೊಳ್ಳುತ್ತವೆ.

ಮೈ ಚೊಕ್ಕವಾಗಿದೆ, ಆದರೂ ಸೋಂಕುಗಳಿಗೇನು ಕಡಿಮೆಯಿಲ್ಲ

ಇವು ತುಂಬಾ ಚೊಕ್ಕವಾಗಿರುವ ಉಸಿರಿಗಳಾಗಿವೆ ಆದರೆ ಕೆಲವೊಂದು ಬಾರಿ ಮೈ ಮೇಲಿನ ಕೂದಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತವೆ. ದಟ್ಟವಾದ ಕೂದಲು ಹಲವಾರು ಸೋಂಕುಗಳಿಗೆ ದಾರಿ ಮಾಡಿಕೊಡುವ ಸಂಬವ ಇರುತ್ತದೆ. ಆದ್ದರಿಂದ ಅವುಗಳನ್ನು ನಿಯಮಿತವಾಗಿ ಬಾಚಣಿಗೆಯಿಂದ ಚೊಕ್ಕಗೊಳಿಸಬೇಕು. ಬೇಸಿಗೆಯಲ್ಲಿ ಪ್ರತಿದಿನವು ಕೂದಲಿನಲ್ಲಿ ತಗಣೆ ಅತವಾ ಸೋಂಕು ಹರಡಿಸುವ ಇತರೆ ಚಿಕ್ಕ ಕೀಟಗಳಿವೆಯೇ ಎಂದು ನೋಡುತ್ತಿರಬೇಕು. ಇವುಗಳಲ್ಲಿ ಕೂದಲು ಉದರುವಿಕೆ ಸಮಸ್ಯೆ ತುಂಬಾ ಇರುವುದರಿಂದ, ಅಗತ್ಯವಿದ್ದಾಗ ಮಾತ್ರ ಸ್ನಾನ ಮಾಡಿಸಬೇಕು.

ತೋಳಗಳಿಗೆ ಹೋಲುವ ಗುಣಗಳು

ಒಂದು ಅಚ್ಚರಿಯ ವಿಶಯವೆಂದರೆ ಇವುಗಳ ಹಲವಾರು ಗುಣಗಳು ತಕ್ಕಮಟ್ಟಿಗೆ ತೋಳಗಳಿಗೆ ಹೋಲುತ್ತವೆ. ವಿಶೇಶವಾಗಿ ಬೇಟೆಯಾಡುವ ಹೊತ್ತಿನಲ್ಲಿ ತಮ್ಮ ಮೊಣಕಾಲುಗಳ ಮೇಲೆ ಬಾಗಿ ಮೆಲ್ಲನೆ ಬೇಟೆ ಹತ್ತಿರ ನಡೆಯುವಂತಹ ಗುಣ.

ದಟ್ಟವಾದ ಬಿಳಿ ಕೂದಲುಗಳನ್ನು ಹೊಂದಿರುವ ಇಂಡಿಯನ್ ಸ್ಪಿಟ್ಜ್ ಹಲವರ ನೆಚ್ಚಿನ ನಾಯಿ. ಇಂಡಿಯಾದ ಹಲವು ಸಿನಿಮಾಗಳಲ್ಲಿಯೂ ಕಾಣಿಕೊಂಡು ಹಲವರ ಪ್ರೀತಿಗೆ ಪಾತ್ರವಾಗಿವೆ. ದಿನೇ ದಿನೇ ಇವನ್ನು ಸಾಕುವವರ ಎಣಿಕೆಯೂ ಹೆಚ್ಚುತ್ತಿದೆ. ಮನೆಯವರೆಲ್ಲರೊಂದಿಗೆ ಹೊಂದಿಕೊಳ್ಳುವ ಮುದ್ದಿನ ಸಾಕುನಾಯಿಯಾದ ಸ್ಪಿಟ್ಜ್, ಒಂದು ವಿಶೇಶವಾದ ತಳಿ ಎಂದರೆ ತಪ್ಪಾಗಲಾರದು.

(ಮಾಹಿತಿ ಸೆಲೆ: petsworld.in, wikipedia, dogbreedinfo.com)
(ಚಿತ್ರ ಸೆಲೆ: pixabay.com, wikimedia)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.