ಮತ್ತೆ ಮಗುವಾಗೋಣ
ಬಾಲ್ಯವೆ ನೀನೆಶ್ಟು ಸುಂದರ
ನೀನೊಂದು ಸವಿನೆನಪುಗಳ ಹಂದರ
ನೆನೆದಶ್ಟೂ, ಮೊಗೆದಶ್ಟೂ
ಮುಗಿಯದ, ಸವೆಯದ ಪಯಣ
ಕಾರಣವೇ ಇಲ್ಲದ ನಲಿವು
ಹಮ್ಮುಬಿಮ್ಮುಗಳಿರದ ಒಲವು
ಸಣ್ಣದಕ್ಕೂ ಸಂಬ್ರಮಿಸಿದ್ದೆ ಗೆಲುವು
ನೀನೊಂದು ಮುಗ್ದತೆಯ ಚೆಲುವು
ಬಾಳಪಯಣದಲಿ ಮುಂದಿದೆ ನಿನಗೆ
ಒದ್ದಾಟ, ಜಂಜಾಟ, ಬಡಿದಾಟ
ಅದಕ್ಕೆಂದೇ ಕರುಣಿಸಿದ್ದಾನೆ ದೇವ
ಬಾಲ್ಯದ ಸಗ್ಗದ ಸಿರಿಯ
ಅಂದು ಮಣ್ಣಿನೊಳಗಾಡುತ್ತಿದ್ದೆವು
ಅಜ್ಜಿಯ ಕತಾಲೋಕದಲ್ಲಿ ಸಂಬ್ರಮಿಸುತ್ತಿದ್ದೆವು
ಮಾನವೀಯತೆಯ ಪಾಟ ಕಲಿಯುತ್ತಿದ್ದೆವು
ಕಡುಕಶ್ಟದಲ್ಲೂ ಸಿರಿಯುಣ್ಣುತ್ತಿದ್ದೆವು
ಇಂದು ಸ್ಮಾರ‍್ಟ್‌ಪೋನ್‌ನೊಳಗೆ ಆಡುತ್ತಿದ್ದಾರೆ
ಪಿಜ್ಜಾ, ಬರ‍್ಗರ್, ಪಾನಿಪೂರಿ ಮೆಲ್ಲುತ್ತಿದ್ದಾರೆ
ನೂರಕ್ಕೆ ನೂರು ಅಂಕ ಗಳಿಸುತ್ತಿದ್ದಾರೆ
ಜೀವನದ ಪರೀಕ್ಶೆಯಲ್ಲಿ ಸೋಲುತ್ತಿದ್ದಾರೆ
ಓ ಸಗ್ಗದ ಸಿರಿಯೇ ಮತ್ತೆ ಬಂದುಬಿಡು
ಬಾಲ್ಯಕ್ಕೆ ಜಾರೋಣ, ಮತ್ತೆ ಮಗುವಾಗೋಣ
ಮಕ್ಕಳೊಂದಿಗೆ ಮಕ್ಕಳಾಗೋಣ
ಮತ್ತೆ ವಿಶ್ವಮಾನವರಾಗೋಣ
(ಚಿತ್ರ ಸೆಲೆ: maxpixel.net)
ಬಾಲ್ಯದ ತುಂಬಾ ಚೆನಾಗಿ ಬರೆದಿದಾರೆ.