ಗಾಂಜಾದ ಅದ್ಬುತ ಬಾಟಲ್ ಹೌಸ್
– ಕೆ.ವಿ.ಶಶಿದರ.
ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ ಗಾಜಿನ ಬಾಟಲ್‍ಗಳಿಂದ ಕಟ್ಟಲಾದ ಕಟ್ಟಡ. ಇದರ ರೂವಾರಿ ಸ್ತಳೀಯ ವಾಸ್ತು ಶಿಲ್ಪಿ ಇಬ್ರಾಹಿಂ ಜಪರೋವ್.
ಸುಮಾರು 48,000 ಬಾಟಲ್‍ಗಳನ್ನು ಬಳಸಿ ಈ ಮನೆ ಕಟ್ಟಲಾಗಿದೆ
ಇಬ್ರಾಹಿಂ ಜಪರೋವ್ ಎರಡನೇ ಮಾಹಾಯುದ್ದದಲ್ಲಿ ಕಾಣೆಯಾದ ತನ್ನ ಕಿರಿಯ ಸಹೋದರ ಹಾಗೂ ಇತರರ ಸವಿನೆನಪಿಗಾಗಿ ಈ ಮನೆ ಕಟ್ಟಿರುವುದು ವಿಶೇಶ. ಈ ಮನೆ ಕಟ್ಟಲು ಆತ ಬಳಕೆ ಮಾಡಿಕೊಂಡಿದ್ದು ಒಟ್ಟಾರೆ 48,000 ಗಾಜಿನ ಬಾಟಲ್‍ಗಳನ್ನು. ವಿಶೇಶವಾದ ದ್ರಾವಣವೊಂದನ್ನು ಬಳಸಿ ಅಲ್ಲಾಡದಂತೆ ಬಾಟಲ್‍ಗಳನ್ನು ಒಂದರ ಮೇಲೊಂದು ಹಾಗೂ ಒಂದರ ಪಕ್ಕ ಒಂದು ಇಬ್ರಾಹಿಂ ಜೋಡಿಸಿದ. ಇಟ್ಟಿಗೆಯಂತೆ ಒಂದೇ ದಪ್ಪ ಮತ್ತು ಎತ್ತರದ ಗಾಜಿನ ಬಾಟಲ್‍ಗಳು ಸಿಗುವುದು ಕಶ್ಟ. ಆತನಿಗೆ ದೊರೆತ ವಿವಿದ ಸುತ್ತಳತೆ, ಉದ್ದ, ದಪ್ಪ ಹಾಗೂ ಬಣ್ಣದ ಬಾಟಲ್‍ಗಳನ್ನು, ಚಾಕಚಕ್ಯತೆಯಿಂದ ಮನೆ ಕಟ್ಟಲು ಬಳಸಿಕೊಂಡ. ಇದರ ಜೊತೆಗೆ ಒಡೆದ ಕನ್ನಡಿಯ ಚೂರು, ಗಾಜು, ಹರಳು, ಮೊಸಾಯಿಕ್ ತುಣುಕುಗಳು ಎಲ್ಲವನ್ನೂ ಆತ ಉಪಯೋಗಿಸಿಕೊಂಡ. ತನ್ನ ಕನಸಿನ ಮನೆ ಒಳ ಹೊಕ್ಕರೆ ಮೋಡಿಯಾಗುವಂತಹ ವಾತವರಣ ಸ್ರುಶ್ಟಿಯಾಗಬೇಕೆಂದು ಇಬ್ರಾಹಿಂ ಬಯಸಿದ್ದ.
ಮನೆಯ ಎದುರು ಬಾಗಿಲ ಮೇಲಿನ ಕಾಲಿ ಜಾಗವನ್ನು ತನ್ನೂರಿನ ಹೆಸರಿನಿಂದ ಅಲಂಕರಿಸಿದ್ದಾನೆ. ‘ಗಾಂಜಾ’ ಎಂಬ ಪದವನ್ನು ಅಲ್ಲಿ ಬರೆಯಲು ಆತ ಬಳಸಿದ್ದು ಬಾಟಲಿಗಳ ದಪ್ಪವಾದ ತಳಬಾಗವನ್ನು. ಮನೆಯ ಮೇಲ್ಚಾವಣಿಯಲ್ಲಿ ವಾಸ್ತು ಶಿಲ್ಪಿ ಇಬ್ರಾಹಿಂ, ತಾನು ರಚಿಸಿರುವ ಕ್ರುತಿಗಳ ಬಾವಚಿತ್ರಗಳನ್ನು ಅನಾವರಣಗೊಳಿಸಿದ್ದಾನೆ. ಇದರ ಮೂಲಕ ಇಬ್ರಾಹಿಂ 1945ರ ನಂತರದ ಹಾಗೂ ಮಾಸ್ಕೋ ಒಲಂಪಿಕ್ ನಡೆದ 1980ರ ಅವದಿಯವರಗೆ ದೇಶದ ಚರಿತ್ರೆ ಮತ್ತು ತನ್ನ ಕುಟುಂಬದ ಯಶೋಗಾತೆಯನ್ನು ಚಿತ್ರಿಸಿದ್ದಾನೆ. ತನಗೆ ಸಿಕ್ಕ ಎಲ್ಲಾ ವಸ್ತುಗಳನ್ನು ಅತ್ಯಂತ ಎಚ್ಚರಿಕೆಯಿಂದ ಹಾಗೂ ಜಾಣ್ಮೆಯಿಂದ ಉಪಯೋಗಿಸಿ ಅದ್ಬುತವಾದ ಕತೆಯನ್ನು ಹೇಳಿದ್ದಾನೆ. ಕಟ್ಟಡದ ಪ್ರತಿ ಇಂಚನ್ನೂ ಸಹ ಆತ ಸದ್ಬಳಕೆ ಮಾಡಿಕೊಂಡಿದ್ದಾನೆ.
ಇಂತಹ ಅದ್ಬುತ ಮನೆಯನ್ನು ಕಟ್ಟಲು ತೆಗೆದುಕೊಂಡ ಹೊತ್ತು ಕೇವಲ ಒಂದು ವರುಶ
ಇಬ್ರಾಹಿಂ ಇಪ್ಪತ್ತು ವರುಶಗಳ ಕಾಲ ಇಂತಹದೊಂದು ಮನೆ ಕಟ್ಟುವ ಯೋಜನೆಯನ್ನು ತನ್ನ ಮನಸಿನಲ್ಲೇ ಉಳಿಸಿಕೊಂಡಿದ್ದ. ಕಿರಿಯ ಸಹೋದರನ ನೆನಪಿಗಾಗಿ ಇದು ಕಾರ‍್ಯರೂಪಕ್ಕೆ ಬಂತು. ಈ ಬಾಟಲ್ ಹೌಸ್ ಕಟ್ಟುವ ಕೆಲಸ 1966ರಲ್ಲಿ ಆರಂಬವಾಗಿ 1967ರಲ್ಲಿ ಮುಗಿಯಿತು. ಇಂತಹದೊಂದು ಮನೆ ಕಟ್ಟುವುದರಿಂದ ಪ್ರಸಿದ್ದಿ ಪಡೆಯಬೇಕೆಂಬ ಹೆಬ್ಬಯಕೆಯೇನು ಆತನಿಗೆ ಇರಲಿಲ್ಲ. ಅತ ಬಯಸಿದ್ದು ಮನೆ ನೋಡಲು ವಿಶೇಶವಾಗಿ ಮತ್ತು ವಾಸಿಸಲು ಹಿತಕರವಾಗಿ ಸುಕಕರವಾಗಿ ಇರಬೇಕೆಂದು ಮಾತ್ರ.
ಮನೆ ಕಟ್ಟಲು ಉಪಯೋಗಿಸಿದ್ದ ಬಣ್ಣದ ಬಾಟಲ್‍ಗಳ ಮೇಲೆ ಸೂರ‍್ಯಕಿರಣಗಳು ಬಿದ್ದಾಗ ಪ್ರತಿಪಲಿಸುವುದು ನಿಸರ‍್ಗದತ್ತ ಗುಣ. ಇಲ್ಲಿ ಬಳಸಿರುವ ವಿವಿದ ಬಣ್ಣದ ಗಾಜಿನಿಂದ ಹೊರಹೊಮ್ಮುವ ಬಣ್ಣಗಳ ಮಿಳಿತವೇ ಅತ್ಯಂತ ಮನಮೋಹಕ ದ್ರುಶ್ಯ. ಈ ಸ್ರುಶ್ಟಿಯೇ ಕಣ್ಣಿಗೆ ಹಬ್ಬ. ಇದೇ ಮನೆಯ ಪ್ರಮುಕ ಆಕರ‍್ಶಣೆ. ಇದು ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುವುದಲ್ಲದೆ ಮನಸ್ಸನ್ನು ಸಹ ಸೋರೆಗೊಳ್ಳುತ್ತದೆ.
ಗಾಂಜಾದ ಬಾಟಲ್ ಹೌಸ್ ಪೂರ‍್ಣ ಕಾಸಗಿ ಸ್ವತ್ತು. ಹಾಗಾಗಿ ಇದಕ್ಕೆ ಸಂದರ‍್ಶನ ಸಮಯವನ್ನೂ, ಶುಲ್ಕವನ್ನೂ ಅವರುಗಳು ನಿಗದಿಪಡಿಸಿಲ್ಲ.
(ಮಾಹಿತಿ ಸೆಲೆ: atlasobscura.com, spacesarchives.org, revolvy.com)
(ಚಿತ್ರ ಸೆಲೆ: wiki 1, wiki2)
ಇತ್ತೀಚಿನ ಅನಿಸಿಕೆಗಳು