ಬಾಲಸಂಗಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

 

ಹೆಸರು: ಬಾಲಸಂಗಯ್ಯ

ಕಾಲ: ಬಾಲಸಂಗಯ್ಯ ವಚನಕಾರನ ಕಾಲ, ಹುಟ್ಟಿದ ಊರು ಮತ್ತು ಮಾಡುತ್ತಿದ್ದ ಕಸುಬಿನ ಬಗ್ಗೆ ಕನ್ನಡ ಸಾಹಿತ್ಯ ಚರಿತ್ರೆಕಾರರಿಗೆ ಯಾವೊಂದು ಮಾಹಿತಿಯೂ ತಿಳಿದುಬಂದಿಲ್ಲ. ಈತ ಹನ್ನೆರಡನೆಯ ಶತಮಾನದ ನಂತರ ಕಾಲಕ್ಕೆ ಸೇರಿದವನಾಗಿರಬೇಕೆಂದು ಊಹಿಸಿದ್ದಾರೆ.

ದೊರೆತಿರುವ ವಚನಗಳು: 920

ವಚನಗಳ ಅಂಕಿತನಾಮ: ಅಪ್ರಮಾಣ ಕೂಡಲಸಂಗಮದೇವಾ.

=================================================

ಕಲ್ಲದೇವರು ದೇವರಲ್ಲ
ಮಣ್ಣದೇವರು ದೇವರಲ್ಲ
ಮರದೇವರು ದೇವರಲ್ಲ
ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ
ಸೇತುರಾಮೇಶ್ವರ ಗೋಕರ್ಣ
ಕಾಶಿ ಕೇದಾರ ಮೊದಲಾಗಿ
ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ
ದೇವರು ದೇವರಲ್ಲ
ತನ್ನ ತಾನರಿದು
ತಾನಾರೆಂದು ತಿಳಿದಡೆ
ತಾನೇ ದೇವ ನೋಡಾ
ಅಪ್ರಮಾಣ ಕೂಡಲಸಂಗಮದೇವಾ.

ವ್ಯಕ್ತಿಯು ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಅರಿತುಕೊಂಡು, ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಾದರೆ, ಆತನೇ ದೇವರಾಗುತ್ತಾನೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ನಮ್ಮ ಜೀವನದಲ್ಲಿ ಬಂದ ಆಪತ್ತಿನ/ಕೇಡಿನ/ದುರಂತದ ಸಮಯದಲ್ಲಿ ನಮಗೆ ನೆರವನ್ನು ನೀಡಿ ಕಾಪಾಡುವ ವ್ಯಕ್ತಿಯನ್ನು, ‘ನೀವು ನಮ್ಮ ಪಾಲಿಗೆ ದೇವರಾಗಿ ಬಂದಿರಿ/ನೀವೇ ನಮ್ಮ ದೇವರು’ ಎಂಬ ಮಾತನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದಲ್ಲ ಒಂದು ಸಾರಿ ಆಡುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಒಳ್ಳೆಯ ನಡೆನುಡಿಗಳಿಂದ ಜನಸಮುದಾಯಕ್ಕೆ ಒಳಿತನ್ನು ಮಾಡುವ ವ್ಯಕ್ತಿಯನ್ನು ದೇವರಂತೆ ಕಾಣುವ ಜನಪದರ ನಂಬಿಕೆಯನ್ನು, ‘ತಾನೇ ದೇವ ನೋಡಾ’ ಎಂಬ ಮಾತುಗಳು ಸೂಚಿಸುತ್ತಿವೆ.

( ಕಲ್ಲ್+ಅ; ಕಲ್ಲು=ಬಂಡೆ/ಶಿಲೆ/ಅರೆ; ಕಲ್ಲ=ಕಲ್ಲಿನ/ಕಲ್ಲಿನಿಂದ ಮಾಡಿರುವ; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿ/ಶಕ್ತಿಯನ್ನು ‘ದೇವರು/ದೇವ’ ಎಂದು ಮಾನವ ಸಮುದಾಯ ನಂಬಿದೆ; ಕಲ್ಲದೇವರು=ಕಲ್ಲಿನಲ್ಲಿ ಶಿಲ್ಪಿಯು ಕಡೆದಿರುವ ದೇವರ ವಿಗ್ರಹ/ಶಿಲೆಯನ್ನು ಉಳಿ ಮತ್ತು ಸುತ್ತಿಗೆಯಿಂದ ಕೆತ್ತಿ ಕೊರೆದು ಮಾಡಿರುವ ದೇವರ ವಿಗ್ರಹ; ದೇವರ‍್+ಅಲ್ಲ; ಮಣ್ಣ್+ಅ; ಮಣ್ಣ=ಮಣ್ಣಿನಿಂದ ಮಾಡಿರುವ; ಮಣ್ಣದೇವರು=ಮಣ್ಣಿನಿಂದ ಮಾಡಿರುವ ದೇವರು/ಮಣ್ಣಿನ ಹಸಿಮುದ್ದೆಯನ್ನು ಮಿದ್ದಿ ತಿದ್ದಿ ತೀಡಿ ಮಾಡಿರುವ ದೇವರ ವಿಗ್ರಹ;

ಪಂಚ=ಅಯ್ದು; ಲೋಹ=ಕಬ್ಬಿಣ/ತಾಮ್ರ/ಚಿನ್ನ/ಕಂಚು/ಹಿತ್ತಾಳೆ ಮುಂತಾದ ವಸ್ತುಗಳು; ಪಂಚಲೋಹ=ತಾಮ್ರ, ಹಿತ್ತಾಳೆ, ತವರ, ಸೀಸ, ಕಬ್ಬಿಣ ಎಂಬ ಅಯ್ದು ಬಗೆಯ ಲೋಹಗಳು; ಪಂಚಲೋಹದಲ್ಲಿ ಮಾಡಿದ ದೇವರು=ಅಯ್ದು ಬಗೆಯ ಲೋಹಗಳನ್ನು ಕಾಯಿಸಿ/ಕುದಿಸಿ/ಕರಗಿಸಿ ಎರಕ ಹೊಯ್ದು ಮಾಡಿರುವ ದೇವರ ವಿಗ್ರಹ;

ಸೇತು=ನೀರಿನಿಂದ ತುಂಬಿ ಹರಿಯುತ್ತಿರುವ ನದಿ/ಹಳ್ಳ/ತೊರೆಗಳಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಹಾದುಹೋಗುವುದಕ್ಕಾಗಿ ಅವುಗಳ ಮೇಲೆ ಕಟ್ಟಿರುವ ಸೇತುವೆ; ರಾಮೇಶ್ವರ=ತಮಿಳುನಾಡು ರಾಜ್ಯದ ಪೂರ‍್ವ ತೀರದಲ್ಲಿ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳು ಕೂಡಿರುವ ನೆಲೆಯ ದಡದಲ್ಲಿರುವ ಒಂದು ಪಟ್ಟಣ. ಈ ಪಟ್ಟಣದ ದೇವಾಲಯದಲ್ಲಿರುವ ಶಿವಲಿಂಗವನ್ನು ‘ರಾಮಲಿಂಗ/ರಾಮೇಶ್ವರ’ ಎಂಬ ಹೆಸರಿನಿಂದ ಕರೆಯುತ್ತಾರೆ; ಸೇತುರಾಮೇಶ್ವರ=ಈ ಪಟ್ಟಣದ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿನ ಪ್ರಸಂಗವೊಂದು ಜನಮನದಲ್ಲಿ ನೆಲೆಸಿದೆ. ರಾವಣನ ಸೆರೆಯಲ್ಲಿದ್ದ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಗೆ ವಾನರಸೇನೆಯೊಡನೆ ರಾಮನು ಹೊರಡುವಾಗ, ಹಿಂದೂ ಮಹಾಸಾಗರವನ್ನು ದಾಟಲೆಂದು ಸೇತುವೆಯನ್ನು ಕಟ್ಟಲು ತನ್ನ ಬಿಲ್ಲಿನ ತುದಿಯಿಂದ ಇಲ್ಲಿ ಜಾಗವನ್ನು ಗುರುತುಹಾಕಿದನೆಂಬ ದಂತಕತೆಯು ಜನರ ಮಾತುಕತೆಯಲ್ಲಿ ಕಂಡುಬರುತ್ತದೆ. ಆದುದರಿಂದ ಈ ಊರಿಗೆ ‘ಸೇತುರಾಮೇಶ್ವರ’ ಎಂಬ ಹೆಸರು ಬಂದಿದೆ;

ಗೋಕರ್ಣ=ಕರ‍್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅರಬ್ಬೀ ಸಮುದ್ರದ ದಡದಲ್ಲಿರುವ ಒಂದು ಊರು. ಇಲ್ಲಿರುವ ಶಿವಲಿಂಗವನ್ನು ‘ಮಹಾಬಲೇಶ್ವರ/ಆತ್ಮಲಿಂಗ’ ಎಂಬ ಹೆಸರಿನಿಂದ ಕರೆಯುತ್ತಾರೆ;

ಕಾಶಿ=ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಜಿಲ್ಲೆಯಲ್ಲಿ ಗಂಗಾ ತಟದಲ್ಲಿರುವ ಪಟ್ಟಣ. ಈ ಪಟ್ಟಣಕ್ಕೆ ‘ವಾರಣಾಸಿ/ಬನಾರಸ್/ಕಾಶಿ’ ಎಂಬ ಮೂರು ಬಗೆಯ ಹೆಸರುಗಳಿವೆ. ಇಲ್ಲಿರುವ ಶಿವಲಿಂಗವನ್ನು’ವಿಶ್ವನಾತ’ ಎಂಬ ಹೆಸರಿನಿಂದ ಕರೆಯುತ್ತಾರೆ;

ಕೇದಾರ=ಹಿಮಾಲಯ ಪರ‍್ವತ ಶ್ರೇಣಿಯಲ್ಲಿರುವ ಉತ್ತರಕಾಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲೆ ನಿರ‍್ಮಾಣಗೊಂಡಿರುವ ಶಿವನ ದೇವಾಲಯವಿರುವ ನೆಲೆ. ಇಲ್ಲಿನ ಲಿಂಗವನ್ನು ‘ಕೇದಾರನಾತ’ ಎಂಬ ಹೆಸರಿನಿಂದ ಕರೆಯುತ್ತಾರೆ;

ಮೊದಲ್+ಆಗಿ; ಮೊದಲಾಗಿ=ಮೊದಲುಗೊಂಡು/ಎಲ್ಲವನ್ನೂ ಒಳಗೊಂಡು; ಅಷ್ಟ=ಎಂಟು; ಷಷ್ಠಿ=ಅರವತ್ತು; ಕೋಟಿ=ಒಂದು ನೂರು ಲಕ್ಶ; ಅಷ್ಟಾಷಷ್ಠಿಕೋಟಿ=ಅರವತ್ತೆಂಟು ಕೋಟಿ/ಎಣಿಕೆಗೆ ಸಿಗಲಾರದಶ್ಟು ಸಂಕೆಯಲ್ಲಿರುವುದು ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿರುವ ಪದ; ಪುಣ್ಯ+ಕ್ಷೇತ್ರಂಗಳ್+ಅಲ್ಲಿ+ಇಹ; ಪುಣ್ಯ=ಮಂಗಳಕರ/ಪವಿತ್ರ/ಪಾವನ; ಕ್ಷೇತ್ರ=ಪ್ರದೇಶ/ಪ್ರಾಂತ್ಯ/ನೆಲೆ/ಜಾಗ; ಪುಣ್ಯಕ್ಷೇತ್ರ=ದೇಗುಲಗಳನ್ನು ಕಟ್ಟಿ, ದೇವರಿಗೆ ಪ್ರತಿದಿನವೂ ಬಹುಬಗೆಯ ಪೂಜೆಯ ಆಚರಣೆಗಳು ನಡೆಯುತ್ತಿರುವ ನೆಲೆ, ಇಂತಹ ನೆಲೆಗೆ ಬಂದು ದೇವರ ದರ‍್ಶನ ಮತ್ತು ಪೂಜೆಗಳಲ್ಲಿ ತೊಡಗುವವರಿಗೆ ಜೀವನದಲ್ಲಿನ ಎಲ್ಲಾ ಬಗೆಯ ಎಡರು ತೊಡರುಗಳು ನಿವಾರಣೆಗೊಂಡು, ಅವರ ಬಯಕೆಗಳು ಈಡೇರಿ ಒಳಿತಾಗುವುದೆಂಬ ನಂಬಿಕೆಯು ಜನಮನದಲ್ಲಿದೆ; ಪುಣ್ಯಕ್ಷೇತ್ರಂಗಳಲ್ಲಿ=ಪುಣ್ಯಕ್ಶೇತ್ರಗಳಲ್ಲಿ; ಇಹ=ಇರುವ/ನೆಲೆಗೊಂಡಿರುವ;

ತನ್ನ=ತನ್ನನ್ನು ; ತಾನ್+ಅರಿದು; ತಾನು=ವ್ಯಕ್ತಿಯು; ಅರಿ=ತಿಳಿ/ಕಲಿ; ಅರಿದು=ತಿಳಿದುಕೊಂಡು; ತಾನ್+ಆರ‍್+ಎಂದು; ಆರ‍್=ಯಾರು; ತಾನಾರು=ತಾನು ಯಾರು; ತಿಳಿ=ಅರಿ/ಕಲಿ/ಗ್ರಹಿಸು; ತಿಳಿದಡೆ=ಮನದಟ್ಟು ಮಾಡಿಕೊಂಡರೆ/ಅರಿತುಕೊಂಡರೆ/ಗ್ರಹಿಸಿಕೊಂಡರೆ;

‘ತನ್ನ ತಾನರಿದು ತಾನಾರೆಂದು ತಿಳಿಯುವುದು’ ಎಂದರೆ ಪ್ರತಿಯೊಬ್ಬ ಮಾನವನು ತಾನು ಹುಟ್ಟಿ ಬೆಳೆದು ಬಾಳುವ ಪರಿಸರದಲ್ಲಿರುವ ನಿಸರ‍್ಗದಲ್ಲಿನ ಏರಿಳಿತಗಳಿಗೆ ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟು ವ್ಯವಹರಿಸುತ್ತಿರುತ್ತಾನೆ. ಇದರಿಂದಾಗಿ ಮಾನವ ಜೀವಿಯ ಮಯ್-ಮನಗಳು ಸದಾಕಾಲ ಒಳಿತು ಕೆಡುಕಿನ ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುತ್ತವೆ ಎಂಬ ವಾಸ್ತವವನ್ನು ಅರಿತುಕೊಂಡು, ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿ, ಒಳ್ಳೆಯ ನಡೆನುಡಿಗಳಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಅರಿವನ್ನು ಹೊಂದಿರುವುದು;

ತಾನೇ=ವ್ಯಕ್ತಿಯೇ/ಅವನೇ; ನೋಡು+ಆ; ನೋಡು=ಕಾಣು/ತಿಳಿ; ತಾನೇ ದೇವ ನೋಡಾ=ಒಳ್ಳೆಯ ನಡೆನುಡಿಗಳಿಂದ ಬಾಳುವವನೇ ದೇವರಾಗಿ ಕಂಡುಬರುತ್ತಾನೆ/ಗೋಚರಿಸುತ್ತಾನೆ;

ಅಪ್ರಮಾಣ=ದೊಡ್ಡದಾದ/ಅಳತೆಗೆ ನಿಲುಕದ; ಕೂಡಲ್/ಕೂಡಲು=ಸೇರುವಿಕೆ/ಜತೆಗೂಡುವುದು; ಸಂಗಮ=ಕೂಡಿಕೊಳ್ಳುವುದು/ಜತೆಗೂಡುವುದು; ಸಂಗಮ=ಬೇರೆ ಬೇರೆಯಾಗಿ ಹರಿಯುತ್ತಿರುವ ಎರಡು ನದಿಗಳು ಒಂದಾಗಿ ಜತೆಗೂಡುವ ಜಾಗ/ನೆಲೆ; ಕೂಡಲಸಂಗಮ=ಬಿಜಾಪುರ ಜಿಲ್ಲೆಯ ಹುನುಗುಂದ ತಾಲ್ಲೂಕಿಗೆ ಸೇರಿದ ಒಂದು ಊರು. ಇಲ್ಲಿ ಕ್ರಿಶ್ಣ ಮತ್ತು ಮಲಪ್ರಬಾ ನದಿಗಳು ಕೂಡುವುದರಿಂದ ಈ ಹೆಸರು ಬಂದಿದೆ. ಇಲ್ಲಿಯ ದೇವರನ್ನು ‘ಸಂಗಮೇಶ್ವರ/ಸಂಗಮನಾತ/ಕೂಡಲಸಂಗಮದೇವ’ ಎಂಬ ಹೆಸರಿನಿಂದ ಕರೆಯುತ್ತಾರೆ; ಅಪ್ರಮಾಣ ಕೂಡಲಸಂಗಮದೇವಾ=ವಚನಕಾರ ಬಾಲಸಂಗಯ್ಯನ ವಚನಗಳಲ್ಲಿ ಕಂಡುಬರುವ ಅಂಕಿತನಾಮ)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *