ಮೆರ‍್ರಿ ಸೆಮಿಟ್ರಿ – ಸಮಾದಿಯ ಮೇಲೆ ಕೆತ್ತಿರುವ ಬದುಕಿನ ಚಿತ್ರಗಳು
– ಕೆ.ವಿ.ಶಶಿದರ.
ರೊಮೇನಿಯಾದ ಸಪಾಂತ ಎಂಬ ಪಟ್ಟಣದಲ್ಲಿ ‘ಸಿಮಿಟಿರುಲ್ ವೆಸಲ್’ ಅತವಾ ‘ಮೆರ‍್ರಿ ಸೆಮಿಟ್ರಿ’ ಇದೆ. ಈ ಸ್ಮಶಾನದಲ್ಲಿ ಸರಿ ಸುಮಾರು 600 ಮರದ ಶಿಲುಬೆಗಳಿವೆ. ಶಿಲುಬೆಗಳ ಮೇಲೆ ಸತ್ತು ಸಮಾದಿಯಾದವರ ಜೀವನದ ಕತೆಗಳು ಹಾಗೂ ಅವರ ಜೀವನದ ಕೊನೆಯ ಕ್ಶಣಗಳ ವಿವರಗಳನ್ನು ಕೆತ್ತಲಾಗಿದೆ. ಸಪಾಂತದ ಪಟ್ಟಣದಲ್ಲಿ ಅಸುನೀಗಿದ ಪ್ರತಿಯೊಬ್ಬರ ವಿವರವನ್ನು ಕಣ್ಮನ ಸೆಳೆಯುವ ಬಣ್ಣಗಳಲ್ಲಿ ಚಿತ್ರಿಸಲಾಗಿದೆ.
ಶಿಲುಬೆಯ ಮೇಲೆ ವಿವರಿಸಲಾದ ವಿಶಯಗಳಲ್ಲಿ ಸೈನಿಕರ ಶಿರಚ್ಚೇದವಾಗಿದ್ದು, ಊರಿನ ಪ್ರಜೆಯೊಬ್ಬ ರಸ್ತೆ ಅಪಗಾತದಲ್ಲಿ ಸಾವನ್ನಪ್ಪಿದ್ದು ಸಹಾ ಸೇರಿವೆ. ಆಶ್ಚರ‍್ಯವೆಂದರೆ ಕೆಲವೊಂದು ಶಿಲುಬೆಯ ಮೇಲಿರುವ ವಿವರಗಳು ಸತ್ಯಕ್ಕೆ ಬಹಳಶ್ಟು ಹತ್ತಿರವಾದವು!!!
ಸ್ಟ್ಯಾನ್ ಇಯೋನ್ ಪಟ್ರಾಸ್ ತನ್ನ ಹದಿನಾಲ್ಕನೇ ವಯಸ್ಸಿಗೆ ಬರುವಶ್ಟರಲ್ಲಿ ಸ್ತಳೀಯ ಸ್ಮಶಾನದ ಶಿಲುಬೆಗಳ ಮೇಲೆ ಶಿಲ್ಪಕಲೆಯನ್ನು ಕೆತ್ತುವುದನ್ನು ಪ್ರಾರಂಬಿಸಿ ಬಿಟ್ಟಿದ್ದ. ಈತ ಹುಟ್ಟಿದ್ದು ಸಪಾಂತದಲ್ಲೇ, ಆದ್ದರಿಂದ ಈ ವಿದ್ಯೆ ಆತನಿಗೆ ಸುಲಬವಾಗಿ ಒಲಿಯಿತು. ತನ್ನ 27ನೇ ವಯಸ್ಸಿಗೆ ಆತ ಸತ್ತವರ ಶಿಲುಬೆಗಳ ಮೇಲೆ ಚತುರತೆಯಿಂದ ಕೂಡಿದ ಹಾಗೂ ವಿಡಂಬನಾತ್ಮಕ ಪದ್ಯಗಳನ್ನು ಸ್ತಳೀಯ ಆಡುಬಾಶೆಯಲ್ಲಿ ಕೆತ್ತನೆ ಮಾಡುವುದನ್ನು ರೂಡಿಸಿಕೊಂಡಿದ್ದ. ಇದರೊಂದಿಗೆ ಆತ ಸತ್ತವರ ಚಿತ್ರದ ಜೊತೆಗೆ ಅವರು ಹೇಗೆ ಸತ್ತರು ಎಂಬುದನ್ನು ಸಹ ಅದರಲ್ಲಿ ಬಿಡಿಸುವುದನ್ನೂ ಕರಗತ ಮಾಡಿಕೊಂಡಿದ್ದ.
ಶಿಲುಬೆಯಲ್ಲಿರುವ ಚಿತ್ರದ ಬಣ್ಣಗಳೂ ಕತೆಯನ್ನು ಹೇಳುತ್ತವೆ!
ತಾನು ರಚಿಸುತ್ತಿದ್ದ ಶಿಲುಬೆಗಳಲ್ಲಿ ಪೆಟ್ರಾಸ್ ಕೆಲವೊಂದು ಬಣ್ಣಗಳನ್ನು ಸಂಕೇತವಾಗಿಸಿ ಅಬಿವ್ರುದ್ದಿಪಡಿಸಿದ. ಹಸಿರು ಬಣ್ಣ ಜೀವನವನ್ನು, ಹಳದಿ ಬಣ್ಣ ಪಲವತ್ತತೆಯನ್ನು, ಕೆಂಪು ಉತ್ಸಾಹವನ್ನು ಅತವಾ ಬಾವೋದ್ರೇಕವನ್ನು, ಕಪ್ಪು ಸಾವಿನ ಕರಾಳ ಮುಕವನ್ನು ತೋರುವಂತೆ ಸಂಕೇತಿಸಿದ. ಈ ಎಲ್ಲಾ ಬಣ್ಣಗಳನ್ನು ಗಾಡವಾದ ನೀಲಿ ಹಿನ್ನೆಲೆ ಬಣ್ಣಕ್ಕೆ ವಿರುದ್ದವಾಗಿ ಹೊಂದಿಸಿದ. ನೀಲಿ ಬಣ್ಣವನ್ನು ‘ಸಪಾಂತ ನೀಲಿ’ ಎಂದು ಗುರುತಿಸಿದ. ಈ ನೀಲಿ ಬಣ್ಣ ಸ್ವಾತಂತ್ರ್ಯ ಮತ್ತು ಆಕಾಶದಂತೆ ಶುಬ್ರತೆಯನ್ನು ಪ್ರತಿನಿದಿಸುತ್ತದೆ ಎಂದು ಆತ ನಂಬಿದ್ದ.
ಬಿಳಿ ಪಾರಿವಾಳಗಳು ಆತ್ಮದ, ಹಾಗೂ ಬ್ಲ್ಯಾಕ್ ಬರ‍್ಡ್ ದುರಂತ ಅತವಾ ಅನುಮಾನಾಸ್ಪದ ಸಾವಿನ ಸಂಕೇತವಾಗಿ ಶಿಲುಬೆಗಳಲ್ಲಿ ರಾರಾಜಿಸಿದವು. ಪಟ್ರಾಸ್‍ನ ಗಾಡ ಹಾಸ್ಯಪ್ರಜ್ನೆ ಸಹ ಶಿಲುಬೆಯಲ್ಲಿ ಪ್ರತಿಬಿಂಬಿಸಿದವು.
ಸತ್ತವರ ಜೀವನದಲ್ಲಿ ಸುಪ್ತವಾಗಿದ್ದ ವಿವರಗಳು ಶಿಲಬೆಯ ಕೆತ್ತನೆಯಲ್ಲಿ ಜಾಗ ಪಡೆದಿವೆ!
ಇಯಾನ್ ತೊಡೆರೂ ಎಂಬಾತನ ಶಿಲುಬೆಯಲ್ಲಿನ ಹೀಗಿದೆ. “ಇಯಾನ್ ತೊಡೆರೂ ಕುದುರೆಗಳನ್ನು ಪ್ರೀತಿಸುತ್ತಿದ್ದ. ಆತ ಅದಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದುದು ಬಾರಿನ ಟೇಬಲ್ ಮುಂದೆ ಕೂರುವುದು. ಅದೂ ಬೇರೊಬ್ಬರ ಹೆಂಡತಿಯ ಬಳಿ.”
ಊರಿನ ಮತ್ತೊಬ್ಬ ಕುಡುಕನ ಸಮಾದಿಯ ಶಿಲುಬೆ ಮೇಲಿನ ಚಿತ್ರಣದಲ್ಲಿ ಆತ ಕುಡಿತಕ್ಕೆ ಎಶ್ಟು ದಾಸನಾಗಿದ್ದ ಎಂಬುದನ್ನು ಸೂಚ್ಯವಾಗಿ ಚಿತ್ರಿಸಿದ್ದಾನೆ. ಕಪ್ಪು ಅಸ್ತಿಪಂಜರ ಆತನನ್ನು ಎಳೆದುಕೊಂಡು ಹೋಗುತ್ತಿದ್ದರೂ ಆತ ತನ್ನ ಪ್ರಿಯವಾದ ಹೆಂಡವನ್ನು ಬಾಟಲಿಯಿಂದ ಗುಟುಕರಿಸುತ್ತಿರುವಂತೆ ಇದೆ ಆ ಚಿತ್ರ. ಕುಡುಕನ ಸಮಾದಿಯ ಚರಮ ವಾಕ್ಯದಲ್ಲಿ ‘ರಿಯಲ್ ಪಾಯ್‍ಸನ್’ ಎಂದು ಬರೆದಿರುವುದು ಎಶ್ಟು ಸಮಂಜಸವಲ್ಲವೆ?
800 ಕ್ಕೂ ಹೆಚ್ಚು ಶಿಲುಬೆಗಳ ಮೇಲೆ ಚಿತ್ರವನ್ನು ಕೆತ್ತಿದ್ದಾನೆ ಪಟ್ರಾಸ್!
ಪಟ್ರಾಸ್, 40 ವರ‍್ಶಗಳ ಅವದಿಯಲ್ಲಿ 800 ಕ್ಕೂ ಹೆಚ್ಚು ಸಮಾದಿ ಶಿಲುಬೆಗಳ ಮೇಲೆ ಕೆತ್ತಿದ್ದಾನೆ. ಪದ್ಯಗಳನ್ನು ಬರೆದಿದ್ದಾನೆ, ಅನೇಕ ಜಾನಪದ ಮೇರು ಕ್ರುತಿಗಳನ್ನು ರಚಿಸಿದ್ದಾನೆ. 70 ರ ದಶಕದವರೆಗೂ ಅಜ್ನಾತವಾಗಿದ್ದ ಈ ಮೆರ‍್ರಿ ಸ್ಮಶಾನವನ್ನು ಪ್ರೆಂಚ್ ಪತ್ರಕರ‍್ತ ಪತ್ತೆ ಹಚ್ಚಿದ. ನಂತರವೇ ಇದು ಹೊರ ಜಗತ್ತಿಗೆ ಗೋಚರಿಸಿದ್ದು. ಆ ವೇಳೆಗಾಗಲೇ ಪಟ್ರಾಸ್ ತನ್ನ ಜೀವನದ ಕೊನೆ ಹಂತವನ್ನು, ಅಂತ್ಯವನ್ನು ಸಮೀಪಿಸಿದ್ದ.
ಸ್ಟ್ಯಾನ್ ಇಯೋನ್ ಪಟ್ರಾಸ್ 1977ರಲ್ಲಿ ನಿದನ ಹೊಂದಿದ. ತನ್ನ ಸಾವು ಸಮೀಪಿಸುತ್ತದೆ ಎಂದು ಅರಿತಿದ್ದ ಆತ ತನ್ನ ಶಿಲುಬೆಯನ್ನು ತಾನೇ ಕತ್ತಿಕೊಂಡಿದ್ದಲ್ಲದೆ ತನ್ನ ಮನೆ ಮತ್ತು ಕೆಲಸವನ್ನು ಅತ್ಯಂತ ಪ್ರತಿಬಾವಂತ ಶಿಶ್ಯ ಡುಮಿಟ್ರು ಪಾಪ್‍ಗೆ ವಹಿಸಿದ. ಪಾಪ್ ಕಳೆದ ಮೂರು ದಶಕಗಳಿಂದ ಈ ಕಸುಬನ್ನು ಮುಂದುವರೆಸಿಕೊಂಡು ಬಂದಿದ್ದಲ್ಲದೆ, ಪಟ್ರಾಸ್ ಮನೆಯನ್ನು ಕಾರ‍್ಯಾಗಾರ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದ. ಹೊರ ಜಗತ್ತಿಗೆ ಪಟ್ರಾಸ್‍ನ ಪ್ರತಿಬೆಯನ್ನು ತೋರಿಸಿದ.
ಪಟ್ರಾಸ್ ಕೆತ್ತಿರುವ ಶಿಲುಬೆಗಳಲ್ಲಿ ಅತ್ಯಂತ ಪ್ರಸಿದ್ದವಾದ ಚರಮ ವಾಕ್ಯ ಹೀಗಿದೆ.
ಈ ಬಾರವಾದ ಶಿಲುಬೆಯ ಅಡಿಯಲ್ಲಿ ನನಗೆ ಹೆಣ್ಣುಕೊಟ್ಟ ಪಾಪದ ಅತ್ತೆ ಇದ್ದಾಳೆ!
ಆಕೆ ಮೂರು ದಿನ ಹೆಚ್ಚಿಗೆ ಜೀವಿಸಿದ್ದರೆ ನಾನು ಒಳಗೆ ಇರುತ್ತಿದ್ದೆ, ಆಕೆ ಇದನ್ನು ಓದುತ್ತಿದ್ದಳು
ಹತ್ತಿರ ಸುಳಿದಾಡುವವರೇ, ಅವಳನ್ನು ಎಬ್ಬಿಸಲು ಪ್ರಯತ್ನಿಸದಿರಿ
ಅವಳು ಮನೆಗೆ ಹಿಂದಿರುಗಿದರೆ ಆಕೆ ನನ್ನ ತಲೆಯನ್ನು ಕಚ್ಚಿ ಹಾಕುತ್ತಾಳೆ
ಆದರೆ ನನ್ನ ನಟನೆ ಹೇಗಿರುತ್ತದೆಂದರೆ ಆಕೆ ಕಂಡಿತಾ ಹಿಂದಿರುಗುವುದಿಲ್ಲ!
ನೀನಿಲ್ಲೇ ಇರು ನನ್ನ ಪ್ರಿಯ ಅತ್ತೆ.
ಸಾಂದರ‍್ಬಿಕವಾಗಿ ಹಲವು ಗಾಡ ಹಾಸ್ಯದ ಸಾಲುಗಳನ್ನು ಶಿಲುಬೆಗಳ ಮೇಲೆ ಕೆತ್ತಿದ್ದರೂ ಅದರ ಬಗ್ಗೆ ಯಾರಿಂದಲೂ ಆಕ್ಶೇಪಣೆ ಇಲ್ಲ ಎನ್ನುತ್ತಾನೆ ಪಾಪ್. ‘ಇದು ವ್ಯಕ್ತಿಯ ನಿಜವಾದ ಜೀವನ. ಕುಡುಕನನ್ನು ಕುಡುಕ ಎಂದು, ಕೆಲಸ ಮಾಡುವವನನ್ನು ಕರ‍್ಮಿ ಎಂದು ಹೇಳಲು ಅಂಜಿಕೆ ಏಕೆ? ಈ ಒಂದು ಸಣ್ಣ ಪಟ್ಟಣದಲ್ಲಿ ಯಾವುದಕ್ಕೂ ಮುಚ್ಚುಮರೆಯಿಲ್ಲ. ಸತ್ತವನ ಕುಟುಂಬದವರು ವ್ಯಕ್ತಿಯ ನಿಜವಾದ ಚಿತ್ರಣ ಶಿಲುಬೆಯಲ್ಲಿರಬೇಕೆಂದು ಬಯಸುತ್ತಾರೆ. ಒಂದೇ ತೆರನಾದವರ ಶಿಲುಬೆಯಲ್ಲಿನ ಚರಮ ವಾಕ್ಯ ಒಂದೇ ತೆರನಾಗಿರುವುದನ್ನು ಜನ ಒಪ್ಪುವುದಿಲ್ಲ. ಬೇರೆ ಬೇರೆಯೇ ಇರಬೇಕೆಂದು ಬಯಸುತ್ತಾರೆ’ ಎನ್ನುತ್ತಾನೆ ಪಾಪ್.
(ಮಾಹಿತಿ ಸೆಲೆ: romaniatourism.com, atlasobscura.com, peterkayafas.com, unusualplaces.org)
(ಚಿತ್ರ ಸೆಲೆ: wiki)
ಇತ್ತೀಚಿನ ಅನಿಸಿಕೆಗಳು