ಕಲಬುರಗಿ: ಮಳೆ ಬರಲೆಂದು ನಡೆಸುವ ಬುಟ್ಟಿ ಜಾತ್ರೆ
ನಮ್ಮೂರು ಯಳವಂತಗಿ(ಬಿ), ಕಲಬುರಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ನಮ್ಮ ಬಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ತುಂಬಾ ಹಿಂದಿನಿಂದಲೂ ಒಳ್ಳೆಯ ಮಳೆಗಾಗಿ ದೇವರಿಗೆ ಪೂಜೆ ಮಾಡುವುದು ಮತ್ತು ಜಾತ್ರೆ ಮಾಡುವುದು ನಡೆದುಕೊಂಡು ಬಂದ ಪದ್ದತಿ. ಇಂತಹ ಒಂದು ಜಾತ್ರೆಯೇ ಬುಟ್ಟಿ ಜಾತ್ರೆ. ಊರಿನಿಂದ ಬರೋಬ್ಬರಿ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ರಾಣಸಿಪಿರ್ ಗುಡ್ಡದಲ್ಲಿ ಈ ಜಾತ್ರೆಯನ್ನು ನಡೆಸಲಾಗುವುದು. ಬುಟ್ಟಿ ಜಾತ್ರೆ ಮುಗಿದ ನಂತರ ಒಳ್ಳೆಯ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಪ್ರತಿ ವರ‍್ಶವೂ ಈ ಜಾತ್ರೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಯಾವುದೇ ಜಾತಿ-ದರ‍್ಮದ ಬೇದವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಅಚ್ಚುಕಟ್ಟಾಗಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಊರಿನ ಹಿರಿಯರು ಜಾತ್ರೆ ದಿನವನ್ನು ಗೊತ್ತುಮಾಡಿ, ಅದನ್ನು ಊರಲ್ಲಿ ಡಂಗುರ ಸಾರಿಸುತ್ತಾರೆ. ಬುಟ್ಟಿ ಜಾತ್ರೆಯನ್ನು ಯಾವಾಗಲೂ ಗುರುವಾರದಂದು ಮಾಡುವುದು ವಾಡಿಕೆ. ಜಾತ್ರೆಯ ದಿನ ದಪ್ಪಟ್ಟಿ (ಕಾರ ರೊಟ್ಟಿ), ಚಜ ರೊಟ್ಟಿ (ಸಜ್ಜೆ ರೊಟ್ಟಿ), ಮಾಲದಿ(ಮಾದಲಿ), ಪಾಣ್ಯಕೋಟ ಅನ್ನ(ಚಿತ್ರನ್ನಾ) ಮತ್ತು ಅನೇಕ ರೀತಿಯ ತಿನಿಸುಗಳನ್ನು ತಯಾರಿಸಿ ತಾಸ ಬುಟ್ಟಿಯಲ್ಲಿ (ರೋಟಿ ಇಡುವ ಬುಟ್ಟಿ) ಇಟ್ಟುಕೊಂಡು ಜಾತ್ರೆಗೆ ತೆರಳುವರು ಮಂದಿ. ಊರ ಬಾವಿಯಿಂದ ನೀರು ತುಂಬಿಕೊಂಡು. ಎತ್ತಿನ ಗಾಡಿಯಲ್ಲಿ ರಾಣಸಿಪಿರ್ ಗುಡಕ್ಕೆ ತೆರಳುತ್ತಾರೆ. ಈ ನೀರಿನಿಂದ ದೇವರನ್ನು ತೊಳೆದು, ಸುಣ್ಣ, ಜಾಜ (ಚಾಕೊಲೇಟ್ ತರಹದ ಬಣ್ಣ, ಇದುನ್ನು ಮಣ್ಣಿನ ಗುಡಿಯನ್ನು ಅಲಂಕರಿಸುವುದಕ್ಕೂ ಬಳಸುತ್ತಾರೆ), ಹಸಿರು ಬಟ್ಟೆ ಮತ್ತು ಹೂವಿನಿಂದ ಅಲಂಕರಿಸುತ್ತಾರೆ. ಬಳಿಕ ದೇವರಿಗೆ ಪೂಜೆ ಸಲ್ಲಿಸಿ, ಮನೆಯಿಂದ ತಂದ ಅಡುಗೆಯಲ್ಲಿ ನೈವೇದ್ಯ ಮಾಡುವರು.
ದೇವರ ಪೂಜೆಯಾದ ಬಳಿಕ, ಎಲ್ಲರೂ ಒಂದೆಡೆ ಕೂತು ಮನೆಯಿಂದ ತಂದ ಊಟವನ್ನು ಹಂಚಿಕೊಂಡು ತಿನ್ನುವರು. ಊಟದ ನಂತರ ಮಕ್ಕಳು ಕಬಡ್ಡಿ, ಲಗೋರಿ, ಕಣ್ಣಾಮುಚ್ಚಾಲೇ, ದಪ್ಪನ-ದುಪ್ಪಿ(ಚೆಂಡಿನ ಆಟ), ಆಣೆಕಲ್ಲು, ಕುಂಟೆ-ಪಿಲ್ಲಿ ಮುಂತಾದ ಆಟಗಳನ್ನು ಆಡುವರು. ಈ ಬೆಟ್ಟದಲ್ಲಿ ರಂಗೋಲಿ ಕಲ್ಲುಗಳೂ ಸಿಗುವುದರಿಂದ, ಅವುಗಳನ್ನು ಹುಡುಕಿ ಪುಡಿ ಮಾಡಿ, ಪುಡಿಯನ್ನು ಸೋಸಿ ರಂಗೋಲಿಯನ್ನು ಮಾಡುವರು.
ಬುಟ್ಟಿ ಜಾತ್ರೆ ದಿನವೇ ಒಮ್ಮೊಮ್ಮೆ ಸಣ್ಣದಾಗಿಯಾದರೂ ಮಳೆಯಾಗುತ್ತದೆ!
ಸೂರ‍್ಯ ಮುಳುಗುವ ಹೊತ್ತಿಗೆ, ದೇವರಿಗೆ ಜೈಕಾರ ಹೇಳುತ್ತಾ ಜನರು ಊರಿನ ಕಡೆ ತೆರಳುವರು (ಬುಟ್ಟಿ ಜಾತ್ರೆ ದಿನವೇ ಒಮ್ಮೊಮ್ಮೆ ಸಣ್ಣದಾಗಿಯಾದರೂ ಮಳೆಯಾಗುತ್ತದೆ, ಆಗ ಮಳೆಯಲಿ ತೋಯಿಸಿಕೊಂಡೇ ಮನೆಗೆ ಬರಬೇಕು). ಊರಿಗೆ ಬಂದು, ಊರ ಬಾವಿಯಿಂದ ನೀರು ತೆಗೆದುಕೊಂಡು ಹೋಗಿ ಊರಿನ ದೇವರುಗಳನ್ನು ಆ ನೀರಿನಿಂದ ತೊಳೆದು ದೇವರುಗಳನ್ನು ಪೂಜಿಸುತ್ತಾರೆ (ದೇವರನ್ನು ನೀರಿನಲ್ಲಿ ತೋಯಿಸಿದರೆ, ದೇವರು ನಮ್ಮನ್ನೂ ನೀರಿನಲ್ಲಿ ತೋಯಿಸುವನು – ಅಂದರೆ ಮಳೆ ಬರುವ ಹಾಗೆ ಮಾಡುವನು ಎನ್ನುವುದು ಇಲ್ಲಿನ ನಂಬಿಕೆ).
ಮರುದಿನ ಮದ್ಯಾಹ್ನ ಕಪ್ಪೆಗಳ ಮದುವೆ ಮಾಡಿ, ಊರಲ್ಲಿ ಮೆರವಣಿಗೆ ನಡೆಸುತ್ತಾರೆ. ಊರಿನ ಪ್ರತಿ ಮನೆ-ಮನೆಗೂ ಹೋಗಿ ಕಪ್ಪೆಗಳನ್ನು ನೀರಲ್ಲಿ ತೋಯಿಸಿಕೊಂಡು ಬರುತ್ತಾರೆ. ಈ ಸಂಪ್ರದಾಯದೊಂದಿಗೆ ಬುಟ್ಟಿ ಜಾತ್ರೆಯ ಆಚರಣೆಗೆ ತೆರೆಬೀಳುವುದು.
(ಚಿತ್ರ ಸೆಲೆ: kannada.eenaduindia.com )
ಮರೆಯಾಗುತ್ತಿರುವ, ಮೀಡಿಯಾಗಳು ನೋಡದ ಇಂತ ಬರಹಗಳು ಮತ್ತಶ್ಟು ಬರಲಿ.ನಮ್ಮ ಆಚರಣೆಗಳು ಉಳಿದವರಿಗೂ ಹರಡಲಿ.