‘ನನ್ನ ಪ್ರೀತಿಯ ತೆಂಗಿನಕಾಯಿ’
ನನಗೂ ತೆಂಗಿನಕಾಯಿಗೂ ಅವಿನಾಬಾವ ಸಂಬಂದವಿದೆ ಎಂದು ಕಾಣುತ್ತದೆ. ನನಗೆ ತೆಂಗಿನಕಾಯಿ ಬಗ್ಗೆ ಆಸಕ್ತಿ ಹುಟ್ಟಲು, ಅದು ನನ್ನ ಸುತ್ತಮುತ್ತಲೂ ಯಾವಾಗಲೂ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಲೇ ಇರುವುದು ಕಾರಣ. ಎಳನೀರಿನ ಕಾಯಿ (ಎಳೆಯ ಹಸಿರು ತೆಂಗಿನಕಾಯಿ ಎನ್ನಲಡ್ಡಿಯಿಲ್ಲ ಎಂದು ನನ್ನ ಅನಿಸಿಕೆ ), ಒಣಗಿದ ಕಂದು ತೆಂಗಿನಕಾಯಿ ಹಾಗೂ ಒಣಕೊಬ್ಬರಿ ಕಾಯಿ , ಹೀಗೆ. ನನಗೆ ತುಂಬಾ ಇಶ್ಟವಾಗಿರುವುದು ಹಸಿರು ತೆಂಗಿನಕಾಯಿಯಲ್ಲಿರುವ ತಂಪಾದ ಎಳೆನೀರು.
ಹಸಿರಾಗಿ ಇನ್ನೂ ಗೊಂಚಲಲ್ಲಿ ತೂಗಾಡುತ್ತಿರುವ ತುಂಬಿದ ಕಾಯಿಯನ್ನು ನೋಡಿದಾಗ ನನಗಾಗುವ ಸಂತಸ ಮಾತಿನಲ್ಲಿ ಹೇಳಲು ಸಾದ್ಯವಿಲ್ಲ. ಬಹುಶ ಹಿಂದೆ ನನಗೆ ಲೂಸ್ ಮೋಶನ್ ಆಗಿದ್ದು, ಆಗ ಎಳನೀರು ನನ್ನ ಸಹಾಯಕ್ಕೆ ಬಂದದ್ದು ಆ ಪ್ರೀತಿ ಉಕ್ಕಲು ಕಾರಣವಾಗಿರಬಹುದು. ವೈರಲ್ ಜ್ವರದಲ್ಲಿ ನರಳುವವರು ಎಳನೀರನ್ನು ಕುಡಿಯಲೇಬೇಕೆಂದು ನನ್ನ ಸ್ವಂತ ಅನುಬವದಿಂದ ಹೇಳುತ್ತೇನೆ. ಡಾಕ್ಟರರನ್ನು ನಂಬಿ, ಬಿಡಿ. ಅದು ನಿಮ್ಮಿಶ್ಟ.
ನನ್ನ ಮತ್ತು ತೆಂಗಿನ ಬೇಟಿಯಾದದ್ದು ನಾನು ಚಿಕ್ಕವನಿದ್ದಾಗ. ಶಾಲೆಯಲ್ಲಿನ ಕಾರ‍್ಯಕ್ರಮಗಳು ಮುಗಿದ ಮೇಲೆ ಅರಳು (ಮಂಡಕ್ಕಿ) ಹಾಗೂ ಹಸಿ ಕೊಬ್ಬರಿ ಚೂರುಗಳನ್ನು ಬೆರೆಸಿ ಕೊಡುತ್ತಿದ್ದರು. ಇದು ಉತ್ತರ ಕರ‍್ನಾಟಕದ ಕಡೆ ಬಹಳ ಪ್ರಸಿದ್ದ ಚೀಪ್ ಅಂಡ್ ಬೆಸ್ಟ್ ತಿಂಡಿ. ಏನು ಕೊಟ್ಟರು ಅಂತ ಮನೆಯಲ್ಲಿ ಕೇಳಿದರೆ, ನಾವು “ಒಣ ಅರಳು ಕೊಟ್ಟಿದ್ದಾರೆ” ಅಂತ ಮುಕ ಸಿಂಡರಿಸಿ ಹೇಳುತ್ತಿದ್ದೆವು. ಒಂದು ಸಲ ಪಪ್ಪ ನನ್ನ ಕೂದಲು ಕಟ್ ಮಾಡಿಸಲು ಶೆಡ್ಡಿನಿಂದ ಮಾಡಲ್ಪಟ್ಟ ಆದುನಿಕ ಹೇರ್ ಸಲೂನಿಗೆ ಕರೆದುಕೊಂಡು ಹೋಗಿದ್ದರು. ಆವತ್ತು ಶುಕ್ರವಾರ, ನನ್ನ ಕೂದಲು ಕತ್ತರಿಸುತ್ತಿದ್ದಾತ ಒಮ್ಮೆಗೆ ನಿಂತು ಬಿಟ್ಟ. ಏನಾಯಿತು ಅಂತ ತಲೆಯೆತ್ತಿ ನೋಡಿದೆ, ಅವನ ಅಸಿಸ್ಟಂಟ್ ಸಕ್ಕರೆಯೊಂದಿಗೆ ಹಸಿ ತೆಂಗಿನ ಚೂರು ಕಲಸಿ, ಬಟ್ಟಲಲ್ಲಿ ಹಿಡಿದುಕೊಂಡು ಬಂದಿದ್ದ. ನನಗೂ ಕೊಟ್ಟ. ಇದೇಕೆ ಅಂತ ನಾನು ಕೇಳಿದರೆ “ಇವತ್ತು ಲಕ್ಶ್ಮೀ ಪೂಜೆ” ಅಂದ. ಕೊಬ್ಬರಿ ಹೋಳುಗಳ ಮೇಲೆ ಸಕ್ಕರೆ ಉದುರಿಸಿಕೊಂಡು ತಿಂದರೆ ಎಂತಹ ರುಚಿ ಎಂದು ಮೊದಲ ಬಾರಿಗೆ ಗೊತ್ತಾಗಿದ್ದು ಅಂದೇ!
ಶಾಲೆಯಲ್ಲಿ ಓದುವಾಗಿನ ಒಂದು ನೆನಪು. ಸಂಸ್ಕ್ರುತ ಶಬ್ದಗಳ ಹಂಗಿಲ್ಲದೆ ಬರೆಯುತ್ತೇನೆ ಎಂದು ಬರೆದ ಆಂಡಯ್ಯನ ಒಂದು ಪದ್ಯವಿತ್ತು. ನನಗೆ ಪದ್ಯ ನೆನಪಿಲ್ಲ. ಆದರೆ ಪದ್ಯದ ಪಕ್ಕದಲ್ಲಿ ಕೋಡಂಗಿಗಳು ತೆಂಗಿನಮರಗಳನ್ನು ಏರಿ, ಹಸಿರು ತೆಂಗಿನಕಾಯಿಗಳನ್ನು ಮೇಲಿಂದ ಬೀಳಿಸುವ ಚಿತ್ರವೊಂದಿತ್ತು. ಆ ಚಿತ್ರ ಇನ್ನೂ ನನ್ನ ಕಣ್ಣಿನಲ್ಲಿ ಕಟ್ಟಿಕೊಂಡಂತಿದೆ. ಅವತ್ತು ಸ್ಕೂಲಿಂದ ಸೀದಾ ಮನೆಗೆ ಬಂದು, ಪಪ್ಪನಿಗೆ ನನಗೆ ಅಂತಹದ್ದೇ ಕಾಯಿ ಬೇಕೆಂದು ಪುಸ್ತಕ ತೋರಿಸಿ ಹೇಳಿದ್ದೆ. ರಾತ್ರಿ ಮನೆಗೆ ಬರುವಾಗ ಪಪ್ಪ ಎಳನೀರನ್ನು ತರುವುದನ್ನು ಮರೆತು, ದೇವರುಗಳಿಗೆ ಒಡೆಯುವ ಕಾಯಿಯನ್ನು ತಂದಿದ್ದರು. ಆದದ್ದಾಗಲಿ ಅಂತ ಅದನ್ನೇ ಸಕ್ಕರೆ ಬೆರೆಸಿಕೊಂಡು ಅರ‍್ದ ಬಟ್ಟಲು ತಿಂದುಬಿಟ್ಟಿದ್ದೆ. ಆಮೇಲೆ ಮೂಗು ಕಟ್ಟಿಕೊಂಡು, ನೆಗಡಿಯಾಗಿ ತಲೆನೋವು ಬಂದಿದ್ದು ಬೇರೆ ಮಾತು.
“ಆಡಿ ಬಾ ನನ ಕಂದ ನಿನ ಅಂಗಾಲ ತೊಳದೇನ, ತೆಂಗಿನಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮೋರೆ ತೊಳದೇನ” ಅಂತ ಜಾನಪದ ಹೆಂಗಸೊಬ್ಬಳು ಹಾಡಿ ತನ್ನ ಪುಟ್ಟ ಮಗನಿಗೆ ಹೇಳಿದಳು. ಅದು ಅಶ್ಟಕ್ಕೇ ನಿಲ್ಲಲಿಲ್ಲ. ಎಳೆನೀರಿನಲ್ಲಿ ಮುಕತೊಳೆಯಬೇಕು, ಅಕ್ಕಿ ನೆನೆಸಿದ ನೀರಿನಲ್ಲಿ ಮುಕ ತೊಳೆಯಬೇಕು ಅದರಿಂದ ಮುಕದ ಕಾಂತಿ ಹೆಚ್ಚಾಗುತ್ತೆ ಅನ್ನುತ್ತಾರೆ. ಕೆಲವರು ಹಾಗೆ ಎಳೆನೀರಿನಿಂದ ಮುಕ ತೊಳೆಯುವುದನ್ನು ನೋಡಿದ್ದೇನೆ. ತುಂಬಾ ಪಾಪ ಅನ್ನಿಸುತ್ತೆ, ಅದೇ ನೀರನ್ನು ಕುಡಿದರೆ ಸುಲಬವಾಗಿ ಮೈಕಾಂತಿ ಹೆಚ್ಚುತ್ತದೆ ಅಂತ ಅವರಿಗೆ ಯಾರು ಹೇಳಬೇಕು? ಹೇಗೆ ಹೇಳಬೇಕು? ಕೆಲವರು ತಿನ್ನುವ ಬೆಣ್ಣೆಯನ್ನೂ ಮುಕಕ್ಕೆ ಹಚ್ಚಿಕೊಳ್ಳುತ್ತಾರೆ. ಕಲ್ಲಂಗಡಿ, ಮಾವು, ನಿಂಬೆ ಹಣ್ಣುಗಳ ರಸವನ್ನೂ ಮುಕಕ್ಕೆ ಹಚ್ಚಿಕೊಳ್ಳುವವರೂ ಇದ್ದಾರೆ. ಮುಕಕ್ಕೆ ಹಚ್ಚಿಕೊಂಡು ಒಂದೈದು ನಿಮಿಶಗಳವರೆಗೆ ಜಗತ್ತಿನಲ್ಲಿ ನಾವೇ ಸುಂದರವಾಗುತ್ತೇವೆ ಅಂತ ಕುಶಿಪಡುವವರನ್ನು ನಾನು ಅಡ್ಡಿಪಡಿಸುವುದಿಲ್ಲ. ಚಿಕ್ಕಮಕ್ಕಳ ಕೈಗೆ ಏನೇ ಕೊಟ್ಟರೂ ಬಾಯಿಗೆ ಹಾಕಿಕೊಂಡು ಕಚ್ಚಿ ಕುಶಿಪಡುವಂತೆ ಈ “ದೊಡ್ಡ ಮಕ್ಕಳು” ಕೈಗೆ ಸಿಕ್ಕಿದ್ದನ್ನು ಮುಕಕ್ಕೆ ಹಚ್ಚಿಕೊಂಡು ಕುಶಿಪಡುತ್ತವೆ!
ತಮಿಳುನಾಡು, ಇಂಡೋನೇಶ್ಯಾ, ಶ್ರೀಲಂಕಾದಲ್ಲಿ ಸುನಾಮಿ ಬಂದಿದ್ದಾಗ ನೀರಿನ ಅಲೆಗಳಿಂದ ತಪ್ಪಿಸಿಕೊಳ್ಳಲು ಕೆಲವು ಜನ ತೆಂಗಿನ ಮರಗಳನ್ನು ಏರಿದ್ದರು. ಹಲವು ದಿನಗಳಾದ ಮೇಲೆ ಅವರನ್ನು ರಕ್ಶಿಸಲಾಯಿತು. ಅವರೆಲ್ಲರೂ ಅಶ್ಟು ದಿನ ಬದುಕಿದ್ದು ಎಳೆನೀರನ್ನು ಕುಡಿದು! ತುಂಬಾ ಬಡದೇಶಗಳಲ್ಲಿ ಗ್ಲುಕೋಸ್ ಸಿಗದಿದ್ದಾಗ ಅದರ ಬದಲಿಗೆ ಎಳನೀರನ್ನು ರೋಗಿಗೆ ಏರಿಸುತ್ತಾರೆ.
ಒಮ್ಮೆ ತೆಲಂಗಾಣದ (ಆಗ ಆಂದ್ರ) ಸಂಗಾರೆಡ್ಡಿಗೆ ಹೋಗಿದ್ದೆವು, ಒಂದು ಕಡೆ ಕಾರನ್ನು ನಿಲ್ಲಿಸಿದ್ದಾಗ ನನ್ನ ಗೆಳೆಯ ಎಲ್ಲಿಯೋ ಹೋಗಿ ಒಂದು ಬಾಟಲಿ ತುಂಬ ಬಿಳಿಯ ಬಣ್ಣದ ನೀರನ್ನು ತೆಗೆದುಕೊಂಡು ಬಂದ, ಬರ‍್ಜರಿಯಾಗಿ ಈಚಲ ಗಿಡಗಳಿಂದ ಕೂಡಿದ್ದ ಆ ಜಾಗದಲ್ಲಿ ಇವ ತಂದ ಸಾಮಾನು ನೋಡಿ ಗೊಂದಲವಾಯಿತು. “ಏನೋ ಇದು ?!” ಅಂತ ಕೇಳಿದರೆ, ನನ್ನ ಮುಕದ ಮುಂದೆ ಅದನ್ನು ಹಿಡಿದು “ದಮ್ ಇದ್ದರೆ ಇದನ್ನು ಕುಡಿದು ನೋಡು” ಅಂದ. ಕುಡಿಯಲು ದಮ್ ಬೇಕಾಗುವ ಅದನ್ನು ನಾನು ಬೇಡವೆಂದಾಗ, ಅವನು ಗಟಗಟನೆ ಕುಡಿದು ಅರ‍್ದ ಬಾಟಲಿ ಕಾಲಿ ಮಾಡಿ ನಗಲಾರಂಬಿಸಿದ. ನಮಗೆ ಚಿಂತೆಯಾಯ್ತು ಯಾಕೆಂದರೆ ಡ್ರೈವಿಂಗ್ ಬರುತ್ತಿದ್ದದ್ದು ಅವನೊಬ್ಬನಿಗೇ! ಅವನು ಆ ಬಿಳಿನೀರನ್ನು ತೆಗೆದುಕೊಂಡು ಬಂದಿದ್ದ ದಿಕ್ಕಿನ ಕಡೆಗೆ ನೋಡಿದಾಗ ಗೊತ್ತಾಯ್ತು, ಒಬ್ಬ ಎಳೆನೀರನ್ನು ತೆಗೆದು ಬಾಟಲಿಗಳಲ್ಲಿ ತುಂಬಿ ಮಾರುತ್ತಾ ಇದ್ದ. ನಮ್ಮವ ಮುಂಜಾನೆ ಏನೂ ನಾಶ್ಟಾ ಮಾಡಿರಲಿಲ್ಲ. ಕಾರು ಓಡಿಸುತ್ತಿದ್ದಾಗ ಕಣ್ಣು ಮಂಜಾಗುತ್ತಾ ಇದ್ದವು, ಅದಕ್ಕೆ ಕಾರು ನಿಲ್ಲಿಸಿ ಈ ಪ್ರ್ಯಾಂಕ್ ಮಾಡಿದ್ದ ನಮ್ಮ ಮೇಲೆ.
ಅಂಗಡಿಗಳಿಗೆ ಹೋಗಿ ತೆಂಗು ಕೊಳ್ಳುವಾಗ ಅಲುಗಾಡಿಸಿ ನೋಡುತ್ತಾರೆ, ನೀರಿನ ಸಪ್ಪಳ ಬಂದರೆ ಅದು ಸರಿ, ಇಲ್ಲವಾದರೆ ಅದರಲ್ಲಿ ಹೂವು ಬಂದಿರುತ್ತದೆ. ನಾನಂತೂ ಅಂಗಡಿಯವನಿಗೆ ಮೊದಲೇ ಹೇಳುತ್ತೇನೆ, ತುಂಬಾ ದೊಡ್ಡದೇ ಕೊಡಬೇಕೆಂದು, ಚಿಕ್ಕದಕ್ಕೂ ದೊಡ್ಡದಕ್ಕೂ ಒಂದೇ ಬೆಲೆ ಅದಕ್ಕೆ. ಆದರೆ ಅವನು ಎಲ್ಲ ಆರಿಸಿ, ಸೋಸಿ ಪರೀಕ್ಶಿಸಿದಂತೆ ದೊಂಬರಾಟ ಮಾಡಿ ಚಿಕ್ಕದೇ ಕೊಡುತ್ತಾನೆ. ನಾನು ಮೊದಲೇ ಹೇಳಿಬಿಡುತ್ತೇನೆ ಕೆಟ್ಟಿದ್ದು ಬಂದರೆ ಹಿಂದಕ್ಕೆ ಕೊಡುತ್ತೇನೆ ಅಂತ. ಒಬ್ಬ ಅಂಗಡಿಯವನಂತೂ “ನಾನು ಆರಿಸಿ ಕೊಟ್ಟರೆ ಕೆಟ್ಟಿದ್ದೇ ಬರುತ್ತೆ, ನನ್ನ ಕೈಯೇ ಅಂತಹದ್ದು. ಅದಕ್ಕೆ ನೀವೇ ಆರಿಸಿಕೊಳ್ಳಿ” ಅಂದಿದ್ದ. ನನ್ನ ಪ್ರತಿಬೆಯನ್ನು ತೋರಿಸುತ್ತಾ ಸುಂದರವಾದ ಕಾಯಿ ಒಂದನ್ನು ಆರಿಸಿ ತೆಗೆದುಕೊಂಡೆ ಮನೆಗೆ ತಂದು ಒಡೆದಾಗ ಒಳಗಿಂದ ಹುಳಗಳು, “ಬಾಹ್ಯ ಸೌಂದರ‍್ಯ ನಂಬಬಾರದು” ಅಂತ ಕೂಗಿ ಹೇಳಿದ್ದವು. ನಾನು ಅದನ್ನು ಅಂಗಡಿಯವನಿಗೆ ಹಿಂದಕ್ಕೆ ಕೊಟ್ಟು ಅಂತರಂಗ-ಬಹಿರಂಗ ಶುದ್ದಿ ಎರಡೂ ಇರುವಂತಹ ತೆಂಗನ್ನು ಕಾತ್ರಿಪಡಿಸಿಕೊಂಡು ತಂದೆ.
ಈಗ ಪ್ರತಿದಿನ ಎಳೆನೀರು ಕುಡಿಯುವುದನ್ನು ಅಬ್ಯಾಸ ಮಾಡಿಕೊಂಡಿದ್ದರಿಂದಲೇನೋ ನನಗೆ ಯಾವ ಪೋಶಕಾಂಶಗಳ ಹಂಗಿಲ್ಲ. ಆಸೆಯಿಲ್ಲ, ಬಗ್ನಪ್ರೇಮದ ನೆನಪುಗಳಿಲ್ಲ! ಎಳೆನೀರಲ್ಲಿ ಪೋಶಕಾಂಶ ಇದ್ದಿರಬಹುದು. ಇರಲಿ ಬಿಡಿ, ಆದರೆ ನಾನು ಕುಡಿಯುವುದು ಕೇವಲ ನನ್ನ ಆನಂದಕ್ಕಾಗಿ ಅಲ್ಲ. ನನಗೆ ಅದರ ಟೇಸ್ಟ್ ತುಂಬಾ ಹಿಡಿಸಿಬಿಟ್ಟಿದೆ. ಒಂದೊಂದು ಸಲ ಮೂರು ಮೂರು ಎಳನೀರನ್ನು ಸ್ಟ್ರಾ ಹಾಕಿ ಕಾಲಿಮಾಡಿದ್ದೇನೆ. ಎಳನೀರು ಮಾರುವವನು ಒಂದೊಂದು ಸಲ “ಅಶ್ಟು ಕುಡಿಬೇಡಿ” ಅನ್ನುತ್ತಾನೆ. ಅದಕ್ಕೆ ನಾನು “ನನ್ನ ಹಣದಿಂದ ಕುಡಿಯುತ್ತೇನೆ, ನಿನ್ನ ಹಣದಿಂದ ಕುಡಿಯುತ್ತೇನಾ?” ಅಂತ ದಬಾಯಿಸಿದ್ದೂ ಇದೆ.
ಒಣ ಕೊಬ್ಬರಿ ಬಗ್ಗೆ ನಾನು ಹೇಳಬೇಕೆಂದರೆ, ಅದು ನನಗೆ ಇಶ್ಟವಾಗುವುದು ಸುಟ್ಟ ಮೇಲೆಯೇ. ಅದೊಂದು ತರಹದ ಎಕ್ಸೊಟಿಕ್ ಟೇಸ್ಟ್! ಎಲ್ಲರಿಗೂ ಇಶ್ಟವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಯಾರಿಗೆ ಇಶ್ಟವಾಗುತ್ತೋ ಅವರಿಗೆ ತುಂಬಾನೇ ಇಶ್ಟವಾಗುತ್ತೆ. ಹೋಳಿಗೆಯ ಜೊತೆ ಮಾಡುವ ಸಾರಿನಲ್ಲಿ ಸುಟ್ಟ ಒಣಕೊಬ್ಬರಿ .ಹಾಕುತ್ತಾರೆ ಮನೆಯಲ್ಲಿ. ಅದು ಮಾಡುವಾಗ ನನಗಾಗಿ ಕೆಲವು ಚೂರುಗಳನ್ನು ತೆಗೆದಿಟ್ಟಿರುತ್ತಾರೆ, ನನ್ನ ಮೇಲಿನ ಪ್ರೀತಿಗಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಅವು ಮಿಕ್ಕಿರುತ್ತವೆ ಅಂತ ನಾನು ನಂಬಿಕೆಯಿಂದ ಹೇಳುತ್ತೇನೆ!
(ಚಿತ್ರ ಸೆಲೆ: wikimedia.org)
ಬರವಣಿಗೆ ತುಂಬಾ ಚನ್ನಾಗಿ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ. ವಿಷಯ ತುಂಬಾ ಚನ್ನಾಗಿ ಹೇಳಿದ್ದು ಒಂದು ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ .
ದನ್ಯವಾದ ಅನ್ನಪೂರ್ಣ ಅವರೇ