ಮರೆಯಲಾಗದ ಬಂದುಗಳು

– ವೆಂಕಟೇಶ ಚಾಗಿ.

ನಾಯಿ, ಬೆಕ್ಕು, ಸಾಕುಪ್ರಾಣಿ,cat, dog, domestic

ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ ಕೇಳಿಬರುತ್ತಿತ್ತು. ಇಡೀ ರಾತ್ರಿ ಅದಾವುದೋ ಬೆಕ್ಕಿನ ಚೀರಾಟ, ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಬಯ. ಆದರೂ ದೈರ‍್ಯ ತಂದುಕೊಂಡು ಕೈಯಲ್ಲಿ ಟಾರ‍್ಚ್ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿದಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ದೈರ‍್ಯ ತಂದುಕೊಂಡು ನೂರು ಸಾರಿ ಮನೆ ದೇವರ ನೆನೆಯುತ್ತಾ ಕೈಯಲ್ಲಿ ಕೋಲನ್ನು ಬಿಗಿಯಾಗಿ ಹಿಡಿದುಕೊಂಡು ಶಬ್ದ ಬರುತ್ತಿದ್ದ ಕಡೆಗೆ ಬೆಳಕು ಹರಿಸಿದೆ.

ಅರೆ, ಆ ಬೆಕ್ಕು ನಮ್ದೇ. ನಮ್ಮ ಕುಟುಂಬದ ಸದಸ್ಯನಂತೆ ಇರುವ ಅದು ಎಲ್ಲರಿಗೂ ಅಚ್ಚು ಮೆಚ್ಚು. ನಿನ್ನೆಯಿಂದ ಅದೇಕೋ ಕಾಣೆಯಾಗಿತ್ತು. ಗರ‍್ಬವತಿಯಾಗಿದ್ದ ಅದು ಯಾವುದೋ ಸ್ತಳದಲ್ಲಿ ಮರಿ ಹಾಕಿರಬಹುದೆಂದು ಮನೆಯ ಸದಸ್ಯರೆಲ್ಲ ಅಂದುಕೊಂಡಿದ್ದೆವು. ಈ ಮೊದಲು ಅದು ಬೇರೆ ಕಡೆ ಮರಿ ಹಾಕಿದ್ದು ತುಂಬಾ ಕಡಿಮೆ. ಮರಿ ಹಾಕುವ ದಿನ ನಮ್ಮ ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಮನೆಯ ಹಿತ್ತಲಿನ ಗುಜರಿ ಸಾಮಾನುಗಳ ನಡುವೆ, ಒಂದು ಸುರಕ್ಶಿತ ಸ್ತಳದಲ್ಲಿ ಮರಿ ಹಾಕುತ್ತಿತ್ತು. ಮರಿ ಹಾಕಿದ ನಂತರ ನೇರವಾಗಿ ಮನೆಯೊಳಗೆ ಬಂದು ಮನೆಯವರ ಕಾಲು ಸವರುತ್ತಾ ಮಿಯಾಂವ್ ಮಿಯಾಂವ್ ಎನ್ನುತ್ತಾ ಅದೇನೋ ಹೇಳಲು ಪ್ರಯತ್ನಿಸುತ್ತಿತ್ತು. ಅದರ ಟೊಳ್ಳಾದ ಹೊಟ್ಟೆಯನ್ನು ನೋಡುತ್ತಿದ್ದಂತೆಯೇ ಮರಿ ಹಾಕಿದೆ ಎಂಬುದು ಮನೆಯವರಿಗೆಲ್ಲಾ ಅರ‍್ತವಾಗುತ್ತಿತ್ತು. ನಮ್ಮ ಅಮ್ಮನಿಗೆ ಆ ಬೆಕ್ಕಿನ ಮೇಲೆ ನಮಗಿಂತಲೂ ವಿಶೇಶ ಪ್ರೀತಿ. “ಪಾಪ ಬಾಣಂತಿ…” ಎನ್ನುತ್ತಾ ಒಂದು ಬಟ್ಟಲು ತುಂಬಾ ಹಾಲನ್ನು ಅದಕ್ಕೆ ಕುಡಿಯಲು ಕೊಡುತ್ತಿದ್ದಳು. ಮರಿ ಹಾಕುವ ಮುಂಚೆ ನಮಗೋ ತುಂಬಾ ಕುತೂಹಲ. ಅದರ ಹೊಟ್ಟೆ ಸವರುತ್ತಾ ಎಶ್ಟು ಮರಿ ಇರಬಹುದು ಎಂಬುದನ್ನು ಲೆಕ್ಕ ಹಾಕುತ್ತಿದ್ದೆವು. ಅದೂ ಕೂಡಾ ನಾವು ಏನೇ ಮಾಡಿದರೂ ಸುಮ್ಮನಿರುತ್ತಿತ್ತು. ಆಗಾಗ ಮೀಸೆ ಜಗ್ಗುವುದು, ಅದರ ನಿದ್ದೆ ಕೆಡಿಸುವ ತರ‍ಲೆ ಕೆಲಸಗಳನ್ನು ಮಾಡಿದರೂ ಪಾಪ ಮಿಯಾಂವ್ ಎನ್ನುತ್ತಿತ್ತೇ ಹೊರತು ಕಡಿಯುವುದಾಗಲೀ, ಪಂಜಿನಿಂದ ಹೊಡೆಯುವುದಾಗಲೀ ಮಾಡುತ್ತಿರಲಿಲ್ಲ. ಅದರ ಮರಿಗಳೊಂದಿಗೆ ನಾವು ಆಟ ಆಡುತ್ತಿದ್ದೆವು. ಬಾಣಂತಿಗೆ ತೊಂದರೆಯಾಗಬಾರದೆಂದು ಮರಿಗಳಿದ್ದ ಜಾಗದಲ್ಲಿ ಹಾಲು-ಅನ್ನ ಕಲಸಿ, ಒಂದು ಬಟ್ಟಲಲ್ಲಿ ಇಟ್ಟಾಗ ಅದು ಅಲ್ಲೆ ತಿಂದು ತನ್ನ ಮರಿಗಳೊಂದಿಗೆ ಇರುತ್ತಿತ್ತು. ಅದೇನು ತಾಯಿ ಹ್ರುದಯವೋ ನಾ ಕಾಣೆ! ತಾನು ಬೇಟೆಯಾಡಿ ತಂದ ಇಲಿಗಳನ್ನು ತನ್ನ ಮರಿಗಳಿಗೆ ತಿನ್ನಲು ತರುತ್ತಿತ್ತು. ಪಾಪ ಹಸುಳೆ ಮರಿಗಳು ಅವೇನು ತಿನ್ನತ್ತವೆ? ಬೆಕ್ಕು ಹೊರಗಡೆ ಹೋದಾಗ ನಾವೇ ಆ ಸತ್ತ ಇಲಿಯನ್ನು ಹೊರಗಡೆ ಬಿಸಾಕುತ್ತಿದ್ದೆವು. ಕೆಲವೊಮ್ಮೆ ಸಿಟ್ಟಿನಿಂದ ನಾಲ್ಕು ಬಾರಿಸಿದರೂ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಆದರೆ ನಿನ್ನೆಯಿಂದ ಅದು ಕಾಣೆಯಾಗಿತ್ತು. ಇಂದು ರಾತ್ರಿ ಆ ಗೋಡೆಯ ಮೂಲೆಯಲ್ಲಿ ಕುಳಿತು ಕೂಗುತ್ತಿತ್ತು.

ಪಕ್ಕದಲ್ಲೇ ಆ ನಾಯಿ. ಅದೂ ಬೇರೆ ಯಾರದೋ ನಾಯಿ ಅಲ್ಲ, ನಮ್ಮದೇನೆ. ನಾವು ಪ್ರೀತಿಯಿಂದ ಸಾಕಿದ ಹೆಣ್ಣು ನಾಯಿ. ಅದು ಕೂಡ ಬೆಕ್ಕಿನಂತೆ ಮನೆಯವರೊಂದಿಗೆ ತುಂಬಾ ಸಲಿಗೆಯಂದಿದ್ದ ನಾಯಿ. ಮಳೆ ಬರಲಿ, ಚಳಿ ಇರಲಿ ಮನೆಯ ಬಾಗಿಲ ಬಳಿ ಮಲಗಿರುತ್ತಿತ್ತು. ಕಡಕಲು ರೊಟ್ಟಿಯಾದರೂ ಸರಿ ಪ್ರೀತಿಯಿಂದ ಸ್ವೀಕರಿಸುತ್ತಿತ್ತು. ಬೆಕ್ಕು ಹಾಗೂ ನಾಯಿ ಅದೆಶ್ಟು ಅನ್ಯೋನ್ಯವಾಗಿದ್ದವೆಂದರೆ ಕೆಲವೊಮ್ಮೆ ಅಕ್ಕ ಪಕ್ಕದಲ್ಲೇ ಮಲಗಿರುತ್ತಿದ್ದವು. ಅವೆಂದೂ ಜಗಳವಾಡಿದ್ದು ನಾವು ಕಂಡಿಲ್ಲ. ಮರಿಗಳಿದ್ದಾಗಿನಿಂದ ಒಟ್ಟಾಗಿ ಬೆಳೆದಿದ್ದ ಅವುಗಳ ಮದ್ಯೆ ಒಂದು ಅನ್ಯೋನ್ಯ ಸಂಬಂದವಿತ್ತು. ನಾಯಿಗೆ ನಮ್ಮ ಕುಟುಂಬದ ಮೇಲೆ ಅದೆಂತಹ ಕ್ರುತಗ್ನತೆ ಇತ್ತೆಂದರೆ, ನಾವು ಯಾವುದೋ ಊರಿಗೆ ಹೋಗುವಾಗ ನಾವು ಬಸ್ ಏರುವವರೆಗೂ ನಮ್ಮ ಜೊತೆಗೆ ಬರುತ್ತಿತ್ತು. ಕೆಲವು ಸಾರಿ ಕಂಡಕ್ಟರ್ ನಮ್ಮ ನಾಯಿಯನ್ನು ಓಡಿಸಿದ ಉದಾಹರಣೆಗಳೂ ಇವೆ. ಒಮ್ಮೆ ಮನಕಲಕುವ ಸಂದರ‍್ಬವೇ ನಡೆಯಿದು. ಅದು ಮಳೆಗಾಲದ ದಿನ . ಮೂರು ನಾಲ್ಕು ದಿನಗಳ ಕಾಲ ನಿರಂತರ ಮಳೆ. ಮಳೆ ನಿಂತು, ಬೆಳಗ್ಗೆ ಕದ ತೆರೆಯುತ್ತಿಂತೆಯೇ ನಾಯಿ ತನ್ನ ಬಾಯಲ್ಲಿ ತನ್ನ ಮರಿಗಳನ್ನು ಹಿಡಿದುಕೊಂಡು ಬಂದು ಬಾಗಿಲ ಮುಂದೆ ಬಿಡುತ್ತಿತ್ತು. ಮಳೆಯಲ್ಲಿ ಕಣ್ಣು ಬಿಟ್ಟಿರದ ಮರಿಗಳು ನಡುಗುತ್ತಿರುವುದನ್ನು ಕಂಡು ಅಯ್ಯೋ ಎನಿಸಿತ್ತು. ತಕ್ಶಣ ಹಿತ್ತಲಿನ ಬೆಚ್ಚಗಿನ ಸ್ತಳದಲ್ಲಿ ಒಂದು ಗೋಣಿಚೀಲವನ್ನು ಹಾಕಿ ತಾಯಿ ಹಾಗೂ ಮರಿಗಳಿಗಳಿಗೆ ಇರಲು ವ್ಯವಸ್ತೆ ಕಲ್ಪಿಸಿಕೊಡಲಾಗಿತ್ತು. ಆ ಸಂದರ‍್ಬ ನಮ್ಮ ಕುಟುಂಬದ ಪ್ರತಿಯೊಬ್ಬರ ಮನಸ್ಸನ್ನು ಕಲಕಿತ್ತು.

ಈ ಎರಡೂ ಜೀವಿಗಳು ಈ ರಾತ್ರಿ ಅದೇಕೋ ಜಗಳವಾಡುತ್ತಿವೆಯಲ್ಲ ಎಂದೆನಿಸಿ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸಿ , ಮತ್ತೆ ಬಂದು ನಿದ್ದೆ ಹೋದೆ. ಒಂದೆರಡು ಗಂಟೆಗಳ ನಂತರ ಮತ್ತೆ ಅದೇ ಸದ್ದು. ಅವೆರಡನ್ನೂ ಎಲ್ಲಾದರೂ ದೂರ ಬಿಟ್ಟು ಬರಬೇಕು ಎನಿಸಿತ್ತು. ಆದರೂ ಮನೆಯವರೆಲ್ಲಾ ಸುಮ್ಮನೇ ನಿದ್ದೆ ಹೋದರು.

ಬೆಳಿಗ್ಗೆ ಎದ್ದು ಅದೇ ಸ್ತಳಕ್ಕೆ ಹೋದಾಗ ಅವೆರಡೂ ಅಲ್ಲೆ ಇದ್ದವು. ಇವಕ್ಕೇನೋ ತಲೆ ಕೆಟ್ಟಿರಬೇಕು ಎಂದು ಆ ಸ್ತಳದ ಹತ್ತಿರಕ್ಕೆ ಹೋಗಿ ನೋಡಿದರೆ, ಯಾವುದೋ ಜಾತಿಯ ಹಾವು ಅರೆ ಜೀವವಾಗಿ ಬಿದ್ದಿತು. ಈಗ ಮನೆಯವರಿಗೆಲ್ಲಾ ಆ ಎರಡೂ ಜೀವಿಗಳ ರಾತ್ರಿ ಇಡೀ ಹೋರಾಟದ ಕಾರಣ ಅರ‍್ತವಾಯಿತು. ಮನೆಯವರ ರಕ್ಶಣೆಗಾಗಿ ಬೆಕ್ಕು ಹಾಗೂ ನಾಯಿ ಸತತ ಎರಡು ದಿನಗಳ ಕಾಲ ಹೋರಾಟ ಮಾಡಿದ್ದವು. ಬೆಕ್ಕಿನ ಪಂಜಿನ ಹೊಡೆತಕ್ಕೆ ಹಾವು ಅರೆ ಜೀವವಾಗಿತ್ತು. ನಾಯಿ ಹಾವನ್ನು ಮನೆಯೊಳಗೆ ನುಸುಳದಂತೆ ತಡೆ ಹಿಡಿದಿತ್ತು. ಇವುಗಳ ಹೋರಾಟವನ್ನು ಕಂಡು ನಾನಂತೂ ಮೂಕವಿಸ್ಮಿತನಾದೆ. ಕೊನೆಗೆ ಆ ಹಾವಿಗೆ ನಾವೇ ಒಂದು ಗತಿ ಕಾಣಿಸಲೇಬೇಕಾಯಿತು. ಆಗ ಆ ಎರಡೂ ಜೀವಿಗಳ ಹೋರಾಟ ಕೊನೆಕಂಡಿತ್ತು.

ಮೂಕಪ್ರಾಣಿಗಳಲ್ಲಿ ಅದೆಂತಹ ಕ್ರುತಗ್ನತೆ ಇರುತ್ತದೆ ಎಂಬುದಕ್ಕೆ ಆ ಗಟನೆ ಸಾಕ್ಶಿಯಾಗಿತ್ತು. ಆದರೆ ಇಂದು ಆ ಎರಡೂ ಜೀವಿಗಳು ನಮ್ಮೊಂದಿಗಿಲ್ಲ‌. ಅವೆರಡೂ ನಮ್ಮಿಂದ ದೂರವಾಗಲು ಕೂಡಾ ಒಂದು ಮನಕಲಕುವ ಗಟನೆ ಇದೆ. ನಮ್ಮ ನಾಯಿ ಒಮ್ಮೆ ಹೊರಗಡೆ ಹೋದಾಗ ಯಾವುದೋ ಹುಚ್ಚು ನಾಯಿಯೊಂದಿಗೆ ಜಗಳವಾಡಿ, ಕಚ್ಚಿಸಿಕೊಂಡು ಬಂದಿತ್ತು. ಅದು ನಮಗೆ ಅರ‍್ತವಾಗಿದ್ದು ಅದಕ್ಕೆ ಹುಚ್ಚು ಹೆಚ್ಚಾದಾಗಲೇ. ಆದರೆ ಅದು ಮನೆಯವರಿಗೆ, ಜನರಿಗೆ ತೊಂದರೆ ಕೊಟ್ಟಿರಲಿಲ್ಲ. ಆದರೆ ಅಕ್ಕ ಪಕ್ಕದ ಬೀದಿ ನಾಯಿಗಳೊಂದಿಗೆ ಅದರ ಜಗಳ ಮಿತಿಮೀರಿ ಹೋಯಿತು‌. ಒಮ್ಮೆಯಂತೂ ತುಂಬಾ ಆತ್ಮೀಯತೆಯಿಂದ ಇದ್ದ ನಮ್ಮ ಬೆಕ್ಕಿನೊಂದಿಗೆ ಜಗಳವಾಡಿ ಬೆಕ್ಕಿಗೆ ಅಂತ್ಯ ಕಾಣಿಸಿತ್ತು. ಜನರ ಒತ್ತಡಕ್ಕೆ ಮಣಿದು ದೂರ ಬಿಟ್ಟು ಬಂದಾಗ. ಊರಿನ ಜನರು ಅದಕ್ಕೆ ಅಂತ್ಯ ಕಾಣಿಸಿದ್ದು ಆನಂತರ ತಿಳಿಯಿತು. ಒಂದೇ ದಿನ ಆ ಎರಡೂ ಜೀವಗಳೂ ನಮ್ಮ ಕುಟುಂಬದಿಂದ ದೂರವಾದವು. ಮನೆಯೊಳಗೆ ಅದೊಂದು ತರ ಸೂತಕದ ಚಾಯೆ ಆವರಿಸಿತ್ತು. ವಿದಿಯ ಆಟಕ್ಕೆ ಎರಡೂ ಜೀವಿಗಳು ಬಲಿಯಾಗಿದ್ದು ನಮ್ಮ ಕುಟುಂಬಕ್ಕೆ ತುಂಬಾ ನೋವುಂಟಾಗಿತ್ತು. ಅವುಗಳು ನಮ್ಮೊಂದಿಗೆ ಇದ್ದ ಪ್ರತಿ ಕ್ಶಣಗಳನ್ನು ಕುಟುಂಬದ ಸದಸ್ಯರು ಮೆಲುಕು ಹಾಕುತ್ತಿದ್ದರು. ಬದುಕಿಗಾಗಿ ಆ ಜೀವಿಗಳ ಹೋರಾಟ, ನಮ್ಮ ಕುಟುಂಬದ ರಕ್ಶಣೆಗೆ ಅವುಗಳ ತ್ಯಾಗ, ಅವುಗಳ ನಿಶ್ಟೆ, ಕ್ರುತಗ್ನತೆ, ಪ್ರೀತಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನಿಜ ಹೇಳಬೇಕೆಂದರೆ ಆ ಎರಡೂ ಜೀವಿಗಳು ನಮ್ಮ ಕುಟುಂಬವೆಂದೂ ಮರೆಯಲಾಗದ ಬಂದುಗಳು.

(ಚಿತ್ರ ಸೆಲೆ: pixabay.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.