ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆ ತಿಳಿಸುವ ವಿಶಯಗಳು
ಪೂರ‍್ಣಚಂದ್ರ ತೇಜಸ್ವಿಯವರ ‘ಸಹಜ ಕ್ರುಶಿ’ ಹೊತ್ತಗೆಯನ್ನು ಓದುತ್ತಾ ಕುಳಿತಿದ್ದೆ. ಪ್ರತಿ ವಾಕ್ಯದ ಪೂರ‍್ಣವಿರಾಮಕ್ಕೆ ಹೊಸದೊಂದು ಪ್ರಶ್ನೆ ಹುಟ್ಟುತ್ತಾ ಬರುತಿತ್ತು, ಪ್ರಶ್ನೆಗಳ ಜೊತೆ ಸ್ವಲ್ಪ ಗೊಂದಲಗಳೂ ಉಂಟಾಗುತ್ತಿದ್ದವು, ಗೊಂದಲಗಳ ಜೊತೆ ತೇಜಸ್ವಿಯರ ಉತ್ತರಗಳು ಮತ್ತು ಸಲಹೆಗಳು ನೂರಕ್ಕೆ ನೂರು ಸರಿ ಎಂದೆನಿಸುತ್ತಿದ್ದವು. ಇವೆಲ್ಲದರ ಜೊತೆ ನಾನು ಕ್ರುಶಿ ಕ್ಶೇತ್ರದ ಬಗ್ಗೆ ಕೇಳಿ-ನೋಡಿ-ಓದಿ ತಿಳಿದ ಕೆಲವು ತೊಡಕುಗಳನ್ನು ಸಹಜ ಕ್ರುಶಿ ವಿದಾನದಿಂದ ತಪ್ಪಿಸಬಹುದಾ? ಎಂದು ತಾಳೆ ಹಾಕಿ ಓದುತ್ತಿದ್ದೆ. ರೈತರ ಹಲವಾರು ತೊಡಕುಗಳನ್ನು ಈ ಸಹಜ ಕ್ರುಶಿ ವಿದಾನದಿಂದ ದೂರ ಮಾಡಬಹುದಾದರೂ, ಇದನ್ನು ಅನುಸರಿಸಲು ರೈತರು ಮುಂದೆ ಬರುತ್ತಾರೆಯೇ? ಈಗಿನ ಬಹಳಶ್ಟು ಜನ ರೈತರು ರಾಸಾಯನಿಕ ಕ್ರುಶಿ ಪದ್ದತಿಗೆ ಅಂಟಿಕೊಂಡಿರುವಾಗ, ಏನನ್ನೂ ಮಾಡದ(Do Nothing) ಬೇಸಾಯವನ್ನು ಅನುಸರಿಸಲು ಸಲಹೆ ನೀಡುವುದಾದರೂ ಹೇಗೆ?
ಕ್ರುಶಿಯನ್ನು ಕೇವಲ ಉತ್ಪಾದನಾ ವಿದಾನವೆಂದು ತಿಳಿದು, ಹೆಚ್ಚು ಬೆಳೆಯನ್ನು ಬೆಳೆದು, ಹೆಚ್ಚಿನ ಲಾಬ ಪಡೆದು, ಸುಕವಾಗಿ ಇರಬಲ್ಲೆನೆಂಬ ಬ್ರಾಂತಿಯಿಂದ ರೈತರನ್ನು ಹೊರ ತಂದಾಗ ಮಾತ್ರ ಸಹಜ ಕ್ರುಶಿಯ ಏಳಿಗೆಯಾಗಬಹುದೆನೋ! ಆದರೆ ಈಗಿನ ರೈತರ ಸ್ತಿತಿ ಗತಿಗಳನ್ನು ಗಮನಿಸಿದಾಗ ಲಾಬ ಪಡೆಯುವುದು ಅನಿವಾರ‍್ಯವಾಗಿದೆ. ತಾನು ಮಾಡಿದ ಸಾಲಗಳನ್ನು ಮರಳಿ ತೀರಿಸುವ ಕಾರಣಕ್ಕಾಗಿ, ರೈತ ಸ್ವಲ್ಪವಾದರು ಲಾಬ ಬರಲೆಂದು ಹಂಬಲಿಸುತ್ತಿರುತ್ತಾನೆ. ಇಂತಹ ಸಂದರ‍್ಬದಲ್ಲಿ ಅವನಿಗೆ ಸಹಜ ಕ್ರುಶಿಯ ವಿದಾನಗಳು ಸರಿ ಎನಿಸುವುದು ಸ್ವಲ್ಪ ಕಶ್ಟ. ಸಹಜ ಕ್ರುಶಿಯಲ್ಲಿ ಅತೀ ಹೆಚ್ಚು ಲಾಬ ದೊರೆಯುವುದಂತೂ ದಿಟ. ಆದರೆ ಈಗಿನ ರಾಸಾಯನಿಕ ಕ್ರುಶಿ ಪದ್ದತಿಗಳಿಗೆ ಹೊಂದಿಕೊಂಡಿರುವ ಬೂಮಿಯನ್ನು, ತಳಿಗಳನ್ನು ಅಶ್ಟು ಬೇಗ ಸಹಜ ಕ್ರುಶಿಗೆ ಹೊಂದಿಕೊಳ್ಳುವಂತೆ ಮಾರ‍್ಪಡಿಸುವುದು ಸುಲಬದ ಮಾತೇನಲ್ಲ.
ಸಹಜ ಕ್ರುಶಿ ಎಂಬುದು ಎಶ್ಟು ಸರಳ ಮತ್ತು ಕಡಿಮೆ ಕರ‍್ಚಿನ ಕ್ರುಶಿ ಎಂದರೆ ಇಲ್ಲಿ ರೈತ, ಬೂಮಿಯನ್ನು ನೇಗಿಲು ಹಿಡಿದು ಉಳುಮೆ ಮಾಡುವ ಅವಶ್ಯಕತೆಯಿಲ್ಲ. ನೆಲವನ್ನು ಕೆಸರು ಮಾಡಿ ನಾಟಿ ಮಾಡುವಂತಿಲ್ಲ. ಕೇವಲ ಬೀಜಗಳನ್ನು ಬೂಮಿಯ ಮೇಲೆ ಚೆಲ್ಲಿದರೆ ಸಾಕು, ಬೀಜಗಳೇ ಮೊಳಕೆ ಒಡೆದು ನೆಲದೊಳಗೆ ಬೇರೂರುತ್ತವೆ. ರಾಸಾಯನಿಕ ಮತ್ತು ಕೊಟ್ಟಿಗೆ ಗೊಬ್ಬರಗಳ ಬಳಕೆಯಿಲ್ಲ. ಬೆಳೆಗಳ ಜೊತೆಗೆ ಬೆಳೆದ ಕಳೆಗಳನ್ನು ತೆಗೆಯುವಂತಿಲ್ಲ, ಕ್ರಿಮಿನಾಶಕಗಳ ಸಿಂಪರಣೆಯಿಲ್ಲ. ಬೂಮಿಯ ಮೇಲೆ ಮಾನವ ಹುಟ್ಟುವುದಕ್ಕೂ ಮೊದಲು ರೂಪುಗೊಂಡ ಈ ಗಿಡ ಮರಗಳಿಗೆ ಮಾನವನ ಕ್ರುತಕ ಕ್ರುಶಿಯ ಅವಶ್ಯಕತೆಯಿಲ್ಲ. ಬೂಮಿ ತನ್ನಿಂದ ತಾನೇ ಸಾವಯುವ ವಸ್ತುವನ್ನು ಉತ್ಪತ್ತಿ ಮಾಡಿಕೊಳ್ಳಲು ಮಾತ್ರ ರೈತನು ಇಲ್ಲಿ ಸಹಾಯ ಮಾಡುತ್ತಾನೆಯೇ ಹೊರತು ಯಾವುದೇ ಸಾವಯುವ ಗೊಬ್ಬರಗಳನ್ನು ಬೆಳೆಗಳಿಗೆ ಹೊರಗಡೆಯಿಂದ ತಂದು ಹಾಕುವಂತಿಲ್ಲ. ಸಾವಯುವ ಕ್ರುಶಿಗೆ ಹಸುವಿನ ಗೊಬ್ಬರ, ಬೇವಿನ ರಸ ಮತ್ತು ಹಲವು ಆಯುರ‍್ವೇದದ ಔಶದಿಗಳ ಬಳಕೆಮಾಡುತ್ತಾರೆ ಆದರೆ ಸಹಜ ಕ್ರುಶಿಯಲ್ಲಿ ಇದ್ಯಾವುದರ ಬಳಕೆಯೇ ಇರುವುದಿಲ್ಲ.
ಸಹಜ ಕ್ರುಶಿಯ ಪರಿಚಯದೊಂದಿಗೆ ತೇಜಸ್ವಿಯವರು, ಬಾರತದ ರೈತನ ಬಡತನ ಮತ್ತು, ಬಾರತದಲ್ಲಿ ಕ್ರುಶಿಯ ಪರಿಸ್ತಿತಿಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ರಾಸಾಯನಿಕ ಕ್ರುಶಿಯ ಅನಾಹುತಗಳನ್ನು ತಿಳಿ ಹೇಳುವುದರೊಂದಿಗೆ, ಕ್ರುಶಿಯನ್ನು ಉತ್ಪಾದನಾ ಮಾರ‍್ಗ ಎನ್ನುವ ಪರಿಕಲ್ಪನೆಯಿಂದ ನೋಡದೆ, ಇದೊಂದು ಜೀವನ ಮಾರ‍್ಗ ಎಂದು ಎಲ್ಲರೂ ನೋಡಲಿ. ಗ್ರಾಮೀಣ ಬಾಗದ ಯುವಕರು ಕ್ರುಶಿಯತ್ತ ದಿಟ್ಟ ಹೆಜ್ಜೆಗಳನ್ನಿಡಲಿ, ಬಡತನದತ್ತ ಸಾಗುತ್ತಿರುವ ಗ್ರಾಮಗಳನ್ನು ಪುನರುಜ್ಜೀವನ ಮಾಡುವ ಕ್ರುಶಿಯ ತಂತ್ರಗ್ನಾನ ಹೊರಬರಲಿ ಎಂಬುದು ಅವರ ಅನಿಸಿಕೆ.
ಪ್ರಶ್ನೆ- ಉತ್ತರ, ಸಾದ್ಯ-ಅಸಾದ್ಯಗಳ ಚಿಂತನೆಯ ನಡುವೆ ಹೊತ್ತಗೆಯ ಓದು ಮುಗಿಯಿತು. ಸಹಜ ಕ್ರುಶಿಯೆಂಬ ಹೊಸ ಪದ್ದತಿಯನ್ನು ಕಂಡುಹಿಡಿದ “ಮಸಾನಬು ಪುಕೋಕಾ” ಅವರ ಪರಿಚಯವನ್ನು ತೇಜಸ್ವಿಯವರು ಹೊತ್ತಗೆಯ ಮೊದಲ ಬಾಗದಲ್ಲಿಯೇ ಮಾಡುವುದರ ಮೂಲಕ ಈ ಪದ್ದತಿಯ ಕ್ರುಶಿಯನ್ನು ಅನುಸರಿಸಲು ಕಾರಣಗಳೇನು ಎಂಬ ವಿವರಣೆಯನ್ನು ನೀಡಿದ್ದಾರೆ..
ಜಪಾನಿನ ದಕ್ಶಿಣ ಬಾಗದಲ್ಲಿರುವ ಶಿಕೊಕು ದ್ವೀಪದ ಹತ್ತಿರವಿರುವ ಒಂದು ಪುಟ್ಟ ಹಳ್ಳಿಯಲ್ಲಿ ಪುಕೋಕಾರವರು ನೈಸರ‍್ಗಿಕ (ಸಹಜ) ಕ್ರುಶಿಯ ಪದ್ದತಿಯನ್ನು ಅಳವಡಿಸಿಕೊಂಡು ಕ್ರುಶಿಯನ್ನು ಮಾಡುತ್ತಿದ್ದರು. ಆದುನಿಕ ಕ್ರುಶಿಯ ಯಾವುದೇ ಪದ್ದತಿಗಳನ್ನು ಪಾಲಿಸದೇ, ಯಾವುದೇ ಯಂತ್ರಗಳನ್ನು ಬಳಸದೇ, ಉಳುಮೆ ಮಾಡದೇ ಬೆಳೆಗಳನ್ನು ನೈಸರ‍್ಗಿಕವಾಗಿ ಬೆಳೆಯಲು ಬಿಟ್ಟರು. ರಾಸಾಯನಿಕ ಗೊಬ್ಬರಗಳನ್ನು ಹಾಕದೇ, ಗದ್ದೆಗಳಿಗೆ ನೀರು ಹಾಯಿಸುವ ಯಾವುದೇ ಚಟುವಟಿಕೆಗಳನ್ನು ಮಾಡದೆಯೇ ಕೇವಲ ಮಳೆಯಿಂದ ನೆನೆದ ಬೂಮಿಯಲ್ಲಿ ಕ್ರುಶಿ ಮಾಡಿ, ಸಹಜ ಕ್ರುಶಿಯನ್ನು ಅನುಸರಿಸುವುದರಿಂದ ಮಣ್ಣಿನ ಪಲವತ್ತತೆಯೂ ಕೂಡ ಹೆಚ್ಚಾಗುವುದು ಎಂದು ತೋರಿಸಿಕೊಡುವುದರ ಮೂಲಕ ಜಪಾನಿನ ಜನರಿಗೆ ಸಹಜ ಕ್ರುಶಿಯೆಂಬ ಸರಳ ಪದ್ದತಿಯ ಬಗ್ಗೆ ಅರಿವು ಮೂಡಿಸಿದರು.
ಪುಕೋಕಾರವರ ಜೀವನದ ಗುರಿ ಕಡಿಮೆ ಕ್ರಮದ ಕ್ರುಶಿಯ ಮೂಲಕ ಹೆಚ್ಚಿನ ಉತ್ಪಾದನೆ ಮಾಡುವುದಾಗಿರಲಿಲ್ಲ, ತಮ್ಮ ಸುತ್ತಲಿನ ಪರಿಸರದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜೀವನದಲ್ಲಿ ಸುಕ, ನೆಮ್ಮದಿಗಳೂ ಅತ್ಯಂತ ಮುಕ್ಯವಾದವು ಎಂದು ಅವರು ನಂಬಿದ್ದರು.
ರೈತರನ್ನು ಲಕ್ಶಾದಿಪತಿಗಳನ್ನಾಗಿ ಮಾಡುವುದು ಅಗತ್ಯವಾದುದಲ್ಲ,
ರೈತರನ್ನು ಸುಕ, ಸಂತೋಶ, ನೆಮ್ಮದಿಗಳಿಂದ ಬದುಕುವ ಹಾಗೆ ಮಾಡುವುದು ಅತ್ಯಂತ ಮುಕ್ಯವಾದುದು.
(ಚಿತ್ರ ಸೆಲೆ: flipkart.com)
ಇತ್ತೀಚಿನ ಅನಿಸಿಕೆಗಳು