ಉದುರ(ರು) ಜುಣುಕ
– ಮಾನಸ ಎ.ಪಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಊಟಕ್ಕೆ ಜುಣುಕ ಮಾಡೇ ಮಾಡುತ್ತಾರೆ. ಹಲವಾರು ರೀತಿಯ ಜುಣಕ ಮಾಡುವುದಿದೆ – ತೆಳುವಾದ ಜುಣುಕ, ಗಟ್ಟಿ ಜುಣುಕ, ಜುಣುಕದ ವಡೆ ಹೀಗೆ. ಉತ್ತರ ಕರ್ನಾಟಕ ಮತ್ತು ಮಹಾರಾಶ್ಟ್ರದ ಕಡೆ ಮಾಡುವ ಉದುರ(ರು) ಜುಣಕ ಮಾಡುವ ಬಗೆಯನ್ನು ಈ ಬರಹದಲ್ಲಿ ತಿಳಿಸ ಬಯಸುತ್ತೇನೆ.
ಬೇಕಾಗುವ ಸಾಮಗ್ರಿಗಳು:
- 1 ಕಪ್ – ಕಡಲೇಬೇಳೆಯ ಹಿಟ್ಟು
- 4 – ಈರುಳ್ಳಿ
- 2-3 ಚಮಚ – ಅಚ್ಚಕಾರದ ಪುಡಿ
- 1 ಚಮಚ – ಜೀರಿಗೆ
- 1 ಚಮಚ – ಅಜವಾನ
- 1 ಹಿಡಿ – ಕರಿಬೇವು
- ಚಿಟಿಕೆ ಅರಿಶಿಣ
- ಉಪ್ಪು ರುಚಿಗೆ ತಕ್ಕಶ್ಟು
- ಕಾಲು ಚಮಚ ಸಕ್ಕರೆ (ಬೇಕಿದ್ದರೆ)
ಮಾಡುವ ಬಗೆ:
- ಕಡಲೇಬೇಳೆಯ ಹಿಟ್ಟು, ಅಚ್ಚಕಾರದಪುಡಿ, ಅರಿಶಿಣ, ಉಪ್ಪು, ಸಕ್ಕರೆ, ಅಜವಾನ ಒಂದು ಪಾತ್ರೆಗೆ ಹಾಕಿ, ಅದಕ್ಕೆ ತಕ್ಕಶ್ಟು ನೀರು ಬೆರಸಿ. ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
- ಗ್ಯಾಸ್ ಒಲೆ ಮೇಲೆ ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ. ಒಗ್ಗರಣೆಗೆ ಜೀರಿಗೆ ಮಾತ್ರ ಹಾಕಬೇಕು
- ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದು ಅದಕ್ಕೆ ಕರಿಬೇವು ಸೇರಿಸಿ
- ನಂತರ ಮೊದಲೇ ಕಲಿಸಿಟ್ಟ ಕಡಲೆಬೇಳೆಯ ಹಿಟ್ಟನ್ನು ಬಾಣಲೆಗೆ ಸುರಿದು ಹಿಟ್ಟಲ್ಲಿರುವ ನೀರು ಹೋಗುವವರೆಗೂ ಕೆದಕುತ್ತಿರಬೇಕು(ಸೌಟು/ಹುಟ್ಟಿನಿಂದ ತಿರುವುತ್ತಾ ಇರಬೇಕು)
- ಹಿಟ್ಟು ತಳ ಬಿಟ್ಟು ಉದುರಾಗುವವರೆಗೂ ಮುಂದುವರೆಸಿ
ಈಗ ರುಚಿಯಾದ ಉದುರು ಜುಣುಕ ಚಪಾತಿ, ಅನ್ನದ ಜೊತೆ ಸವಿಯಲು ಸಿದ್ದ. ಇದು ಎರಡು ಮೂರು ದಿನ ಇಟ್ಟರೂ ಕೆಡುವುದಿಲ್ಲ. ಊಟಕ್ಕೂ ಬಳಸಬಹುದು.
ಇತ್ತೀಚಿನ ಅನಿಸಿಕೆಗಳು