ಚೆನ್ನಬಸವಣ್ಣನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ಚೆನ್ನಬಸವಣ್ಣ, Chenna Basavanna

ತನು ಮನ ಬಳಲದೆ
ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು
ಗುರುಲಿಂಗಜಂಗಮಕ್ಕೆ ವೆಚ್ಚಿಸಿ
ದಾಸೋಹವ ಮಾಡಿ
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ

ಅದೇಕೆಂದರೆ
ಅವ ಪರಧನ ಚೋರಕ
ಅವ ಪಾಪಿ

ಅವಗೆ ವಿಚಾರಿಸದೆ ಉಪದೇಶವ ಕೊಟ್ಟ
ಗುರುವಿಂಗೆ ರೌರವ ನರಕ
ಅವನ ಕಾಯಕವ ವಿಚಾರಿಸದೆ
ಅವನ ಮನೆಯಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ
ಏಳನೆಯ ಪಾತಕ

ಇಂತಹರ ಬದುಕು
ಹುಲಿ ಕಪಿಲೆಯ ತಿಂದು
ಮಿಕ್ಕುದ ನರಿ ಬಂದು ತಿಂಬಂತೆ ಕಾಣಾ
ಕೂಡಲಚೆನ್ನಸಂಗಮದೇವಾ.

ವ್ಯಕ್ತಿಯು ತನ್ನ ಪಾಲಿನ ದುಡಿಮೆಯನ್ನು ಪ್ರಾಮಾಣಿಕವಾಗಿ ಮಾಡದೆ, ಜನರನ್ನು ವಂಚಿಸಿ ಲೂಟಿ ಹೊಡೆದು ಇಟ್ಟಿರುವ ಹಣದಿಂದ ಮಾಡಿದ ಅನ್ನದಾನ/ಗುರು ಸೇವೆ/ದೇವರ ಪೂಜೆಯು ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆದ ಕೆಲಸವಾಗಿದೆ ಮತ್ತು ಇಂತಹ ಕಳ್ಳ ಹಣವಂತರ ಜತೆ ಕಯ್ ಜೋಡಿಸಿದ ಗುರುಹಿರಿಯರು ನಯವಂಚಕರಾಗಿದ್ದಾರೆ ಎಂಬ ದಿಟ/ಸತ್ಯ/ವಾಸ್ತವದ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ತನು=ಮಯ್/ದೇಹ/ಶರೀರ; ಮನ=ಮನಸ್ಸು/ಚಿತ್ತ; ಬಳಲು=ದಣಿಯುವುದು/ಆಯಾಸಗೊಳ್ಳುವುದು/ದುಡಿಮೆಯನ್ನು ಮಾಡಿದಾಗ ಮಯ್ ಮನದ ಕಸುವು ಕುಗ್ಗುವುದು;

ತನು ಮನ ಬಳಲದೆ=ವ್ಯಕ್ತಿಯು ತನ್ನ ಪಾಲಿನ ಕೆಲಸದಲ್ಲಿ ಮಯ್ ಮನವನ್ನು ತಲ್ಲೀನತೆಯಿಂದ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ದುಡಿಯದೆ/ತನ್ನ ಪಾಲಿನ ಕೆಲಸವನ್ನು ಸರಿಯಾಗಿ/ಒಳ್ಳೆಯ ರೀತಿಯಲ್ಲಿ ಮಾಡುವುದಕ್ಕೆ ಮನಸ್ಸಿಲ್ಲದೆ/ತನ್ನ ಪಾಲಿನ ದುಡಿಮೆಯನ್ನು ಕಡೆಗಣಿಸಿ;

ಉದ್ದಂಡ+ವೃತ್ತಿ+ಅಲ್ಲಿ; ಉದ್ದಂಡ=ಹಿಂಸೆ/ತೊಂದರೆ/ಉಗ್ರ/ಪ್ರಚಂಡ; ವೃತ್ತಿ=ಕಸುಬು/ಕೆಲಸ/ಉದ್ಯೋಗ; ಉದ್ದಂಡವೃತ್ತಿ=ಇತರರಿಗೆ ಸಂಕಟ/ನೋವು/ಯಾತನೆ/ಹಿಂಸೆಯನ್ನು ನೀಡುವ ಕ್ರೂರತನದ ಕಸುಬು/ಕೆಲಸ/ದುಡಿಮೆ; ಧನ=ಹಣ/ಸಂಪತ್ತು/ಒಡವೆ/ವಸ್ತು; ಗಳಿಸು=ಸಂಪಾದಿಸುವುದು/ಪಡೆಯುವುದು/ಹೊಂದುವುದು;

ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ=ದುಡಿಯುವ ಜನರಿಗೆ ದೊರೆಯಬೇಕಾಗಿದ್ದ ಅನ್ನ/ಬಟ್ಟೆ/ವಸತಿ /ಆಸ್ತಿಪಾಸ್ತಿ/ಒಡವೆವಸ್ತುಗಳನ್ನು ವ್ಯಕ್ತಿಯು ವಂಚನೆ/ಕಪಟತನ/ಕ್ರೂರತನ/ದಬ್ಬಾಳಿಕೆ/ಅಟ್ಟಹಾಸದ ನಡೆನುಡಿಗಳಿಂದ ಸುಲಿಗೆ ಮಾಡಿ ಇಟ್ಟಿರುವ ಹಣ/ಸಂಪತ್ತು; ತಂದು=ಜನ ಸಮುದಾಯಕ್ಕೆ ದ್ರೋಹವನ್ನು ಬಗೆದು/ಸಮಾಜಕ್ಕೆ ಹಾನಿಯನ್ನು ಉಂಟುಮಾಡಿ ಗಳಿಸಿರುವ ಹಣವನ್ನು ತೆಗೆದುಕೊಂಡು ಬಂದು;

ಗುರು=ಗುಡ್ಡರಿಗೆ/ತನ್ನ ಬಳಿಬಂದವರಿಗೆ ಅರಿವನ್ನು/ತಿಳಿವಳಿಕೆಯನ್ನು ನೀಡಿ , ಅವರ ವ್ಯಕ್ತಿತ್ವವನ್ನು ಒಳ್ಳೆಯ ನಡೆನುಡಿಗಳಿಂದ ರೂಪಿಸುವ ವ್ಯಕ್ತಿ; ಲಿಂಗ=ಶಿವನ ಸಂಕೇತವಾಗಿರುವ ವಿಗ್ರಹ/ದೇವರು; ಜಂಗಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಲ್ಲಿ ಶಿವನನ್ನು ಕಾಣುವವನು ಮತ್ತು ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಜನರಲ್ಲಿ ಮೂಡಿಸುವವನು/ತಿಳಿಯ ಹೇಳುವವನು; ವೆಚ್ಚ=ವ್ಯಯ/ಕರ‍್ಚು/ವಿತರಣೆ/ಹಂಚುವಿಕೆ;

ಗುರುಲಿಂಗಜಂಗಮಕ್ಕೆ ವೆಚ್ಚಿಸಿ=ಗುರುಲಿಂಗಜಂಗಮರನ್ನು ಒಲವು ನಲಿವುಗಳಿಂದ ಪೂಜಿಸಿ ಮೆರೆಸಲೆಂದು ಹಣವನ್ನು ವಿನಿಯೋಗಿಸಿ/ಬಳಸಿ/ಹಂಚಿ;

ದಾಸೋಹ=ಜಂಗಮರಿಗೆ ಮತ್ತು ಹಸಿದು ಬಂದವರಿಗೆ ಅನ್ನವನ್ನು ನೀಡುವುದು; ಭಕ್ತರ್+ಆದೆವು+ಎಂಬ+ಅವರನ್+ಎನಗೆ; ಭಕ್ತ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು, ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು; ಆದೆವು=ಆಗಿದ್ದೇವೆ/ಆಗಿರುವೆವು; ಎಂಬ=ಎಂದು ಹೇಳುವ/ಎನ್ನುವ; ಅವರನ್=ಅವರನ್ನು/ಅಂತಹ ವ್ಯಕ್ತಿಗಳನ್ನು/ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಕೇಡನ್ನು ಬಗೆದವರನ್ನು; ಎನಗೆ=ನನಗೆ; ತೋರದಿರು+ಅಯ್ಯಾ; ತೋರು=ಕಾಣಿಸು/ಕಣ್ಣಿಗೆ ಬೀಳುವಂತೆ ಮಾಡು; ತೋರದಿರು=ತೋರಿಸಬೇಡ/ಕಾಣಿಸಬೇಡ/ಕಣ್ಣಿಗೆ ಬೀಳದಂತೆ ಮಾಡು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ=ಜನಸಮುದಾಯಕ್ಕೆ ಕೇಡನ್ನು ಬಗೆದು ಗಳಿಸಿದ ಹಣವನ್ನು ಗುರುಲಿಂಗಜಂಗಮದ ಸೇವೆಗೆ ಬಳಸಿ, ದೇವರಲ್ಲಿ/ಗುರುಹಿರಿಯರಲ್ಲಿ ಒಲವನ್ನು ಹೊಂದಿರುವ ವ್ಯಕ್ತಿಗಳು ತಾವೆಂದು ಹೇಳಿಕೊಂಡು ಮೆರೆಯುವ ವಂಚಕರನ್ನು/ನೀಚರನ್ನು/ಕೇಡಿಗಳನ್ನು ನನ್ನ ಮುಂದೆ ತೋರಿಸದಿರು/ಅಂತಹ ವ್ಯಕ್ತಿಗಳ ಜತೆಯಲ್ಲಿ ಯಾವುದೇ ಬಗೆಯ ಒಡನಾಟ/ವ್ಯವಹಾರ/ಸಂಪರ‍್ಕವಿಲ್ಲದಂತೆ ಮಾಡು;

ಅದು+ಏಕೆ+ಎಂದರೆ; ಏಕೆ=ಯಾವ ಕಾರಣಕ್ಕಾಗಿ/ಯಾವುದಕ್ಕಾಗಿ ; ಅವ=ಅವನು/ಅಂತಹವನು; ಪರ=ಇತರ/ಅನ್ಯ/ಬೇರೆಯ ; ಪರಧನ=ಬೇರೆಯವರ ಸಂಪತ್ತು/ಆಸ್ತಿಪಾಸ್ತಿ/ಒಡವೆವಸ್ತು/ಹಣಕಾಸು; ಚೋರ=ಕಳ್ಳ/ಕಳ್ಳತನವನ್ನು ಕಸುಬನ್ನಾಗಿ ಮಾಡಿಕೊಂಡಿರುವವನು; ಚೋರಕ=ಕಳ್ಳ; ಪಾಪಿ=ಕೆಟ್ಟ ನಡೆನುಡಿಗಳಿಂದ ಇತರರಿಗೆ ಹಾನಿ/ತೊಂದರೆ/ಸಂಕಟವನ್ನು ಉಂಟು ಮಾಡುವವನು;

ಅವಗೆ=ಅವನಿಗೆ/ಅಂತಹವನಿಗೆ; ವಿಚಾರಿಸು=ಯಾವುದು ಸರಿ/ಯಾವುದು ತಪ್ಪು—ಯಾವುದು ದಿಟ/ಯಾವುದು ಸಟೆ—ಯಾವುದು ನ್ಯಾಯ/ಯಾವುದು ಅನ್ಯಾಯ—ಯಾರು ಒಳ್ಳೆಯವರು/ಯಾರು ಕೆಟ್ಟವರು ಎಂಬ ಸಂಗತಿಗಳನ್ನು ಒರೆಹಚ್ಚಿ ನೋಡಿ ತಿಳಿಯುವುದು/ಅರಿಯುವುದು; ಉಪದೇಶ=ತಿಳಿವಳಿಕೆಯನ್ನು ಹೇಳುವುದು/ಅರಿವನ್ನು ಮೂಡಿಸುವ ನುಡಿಗಳನ್ನಾಡುವುದು/ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವುದಕ್ಕೆ ಅಗತ್ಯವಾದ ಹಿತನುಡಿಗಳನ್ನಾಡುವುದು; ಕೊಡು=ನೀಡು; ಕೊಟ್ಟ=ನೀಡಿದ; ಗುರುವಿಂಗೆ=ಗುರುವಿಗೆ; ರೌರವ=ಹೆಚ್ಚಿನ ಹಿಂಸೆ/ಸಂಕಟ/ಯಾತನೆ/ವೇದನೆ/ನೋವು;

ನರಕ=ಜನಸಮುದಾಯದ ಮನದಲ್ಲಿ ನೆಲೆಗೊಂಡಿರುವ ಮತ್ತೊಂದು ಲೋಕದಲ್ಲಿರುವ ಕಲ್ಪಿತ ಜಾಗ. ಇಲ್ಲಿ ಅಂದರೆ ನಾವು ಇರುವ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು, ಅನಂತರ ತಾನು ಮಾಡಿದ ಕೆಟ್ಟಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಕದಲ್ಲಿ ನರಳುತ್ತಾನೆ. ಜನರಿಗೆ ಕೇಡನ್ನು ಮಾಡಿದವರು ಸಂಕಟದ ನೆಲೆಯಾದ ನರಕಕ್ಕೆ, ಒಳಿತನ್ನು ಮಾಡಿದವರು ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿದೆ; ರೌರವ ನರಕ=ಹೆಚ್ಚಿನ ದಂಡನೆಯನ್ನು ನೀಡುವ ಒಂದು ನರಕದ ಹೆಸರು;

ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ ರೌರವ ನರಕ=ಗುರುವಾದವನು ತನ್ನ ಬಳಿಗೆ ಬಂದ ವ್ಯಕ್ತಿಗಳಲ್ಲಿ ಯಾರು ಒಳ್ಳೆಯವರು/ಯಾರು ಕೆಟ್ಟವರು ಎಂಬುದನ್ನು ತಿಳಿದಿರಬೇಕು. ಒಳ್ಳೆಯವರು ಎಂದರೆ “ಜನಸಮುದಾಯಕ್ಕೆ ಒಳಿತನ್ನು ಉಂಟುಮಾಡುವವರು”—ಕೆಟ್ಟವರು ಎಂದರೆ “ಜನಸಮುದಾಯಕ್ಕೆ ಕೇಡನ್ನು ಬಗೆಯುವವರು”. ಸಮಾಜದ್ರೋಹಿಗಳ ಜತೆಯಲ್ಲಿ ಗುರುವಾದವನು ಒಡನಾಟವನ್ನು/ವ್ಯವಹಾರವನ್ನು/ಸಂಪರ‍್ಕವನ್ನು ಇಟ್ಟುಕೊಳ್ಳಬಾರದು. ತನ್ನ ಬಳಿ ಉಪದೇಶವನ್ನು ಪಡೆಯಲು ಬಂದಿರುವ ವ್ಯಕ್ತಿಯು ಸಮಾಜಕ್ಕೆ/ಜನಸಮುದಾಯಕ್ಕೆ ಹಾನಿಯನ್ನುಂಟು ಮಾಡಿ ಹಣವಂತನಾಗಿರುವುದನ್ನು ಅರಿತಿದ್ದರೂ, ಅವನು ತನ್ನ ಜಾತಿಯವನು/ತನ್ನ ಮತದವನು/ತನ್ನ ಕುಲದವನು ಎಂಬ ಕಾರಣಕ್ಕಾಗಿ ಒಡನಾಟವನ್ನು ಇಟ್ಟುಕೊಂಡರೆ, ಅಂತಹ ವ್ಯಕ್ತಿಯು ಗುರು ಆಗುವುದಕ್ಕೆ/ಎನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ; ಅವನ=ಅಂತಹ ವ್ಯಕ್ತಿಯ/ಕೆಟ್ಟ ನಡೆನುಡಿಗಳುಳ್ಳ ವ್ಯಕ್ತಿಯ;

ಕಾಯಕ=ಕಸುಬು/ಕೆಲಸ; ಮನೆ+ಅಲ್ಲಿ; ಹೋಗು=ಒಳಸೇರು/ಪ್ರವೇಶಿಸು; ಹೊಕ್ಕು=ಒಳಕ್ಕೆ ಹೋಗಿ; ಲಿಂಗ+ಅರ್ಚನೆಯ; ಅರ್ಚನೆ=ಪೂಜೆ/ದೇವರನ್ನು ಪೂಜಿಸುವಾಗ ಮಾಡುವ ಆಚರಣೆಗಳು; ಪಾತಕ=ಕೆಟ್ಟ ಕೆಲಸ/ಪಾಪದ ನಡೆನುಡಿ; ಏಳನೆಯ ಪಾತಕ=ಕಳ್ಳತನ;

ಏಳು ಪಾತಕಗಳು=1) ಹಾದರ 2) ಜೂಜು 3) ಬೇಟೆ 4) ಕುಡಿತ 5) ಬಿರುನುಡಿ 6) ದಂಡನೆ 7) ಕಳ್ಳತನ ಎಂಬ ಈ ಏಳು ಬಗೆಯ ನಡೆನುಡಿಗಳನ್ನು “ಸಪ್ತ ಪಾತಕಗಳು” ಎಂದು ಜನಸಮುದಾಯ ಹೆಸರಿಸಿದೆ;

ಅವನ ಕಾಯಕವ ವಿಚಾರಿಸದೆ ಅವನ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ=ಶಿವನನ್ನು ಪೂಜಿಸಲು ಬಯಸುವ ಸಿರಿವಂತನಾದ ವ್ಯಕ್ತಿಯ ಮನೆಯಲ್ಲಿ ಲಿಂಗಪೂಜೆಯಲ್ಲಿ ತೊಡಗುವ ಜಂಗಮನು , ಅಲ್ಲಿಗೆ ಹೋಗುವುದಕ್ಕೆ ಮೊದಲೇ ಆ ಮನೆಯೊಡೆಯನು ಮಾಡುವ ಕಾಯಕವೇನೆಂಬುದನ್ನು ತಿಳಿದುಕೊಂಡಿರಬೇಕು. ಏಕೆಂದರೆ ಶಿವಶರಣಶರಣೆಯರ ಪಾಲಿಗೆ “ಕಾಯಕ” ಎನ್ನುವುದು ಕೇವಲ ಯಾವುದೋ ಒಂದು ಕಸುಬು/ಕೆಲಸ ಮಾತ್ರ ಆಗಿರಲಿಲ್ಲ. ಅವರ ಪಾಲಿಗೆ ಕಾಯಕವೆಂದರೆ “ವ್ಯಕ್ತಿಯು ಮಾಡುವ ಕಸುಬು/ಕೆಲಸವು ಅವನಿಗೆ ಮತ್ತು ಅವನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ತಂದುಕೊಡುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿದ್ದು , ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ”. ಸಿರಿವಂತನಾದ ವ್ಯಕ್ತಿಯು ಮಾಡುವ ಕಾಯಕದಿಂದ ಜನರಿಗೆ ಮತ್ತು ಸಮಾಜಕ್ಕೆ ಕೇಡಾಗುತ್ತಿದ್ದರೆ, ಅಂತಹವನ ಮನೆಯಲ್ಲಿ ಜಂಗಮನು ಪೂಜೆಯನ್ನು ಮಾಡಬಾರದು. ಹಾಗೆ ಮಾಡಿದ ಜಂಗಮನು ಕಳ್ಳ ಹಣಕ್ಕೆ ಕಯ್ ಒಡ್ಡಿದವನಾಗಿ ಕಳ್ಳತನವೆಂಬ ಏಳನೆಯ ಪಾತಕವನ್ನು ಮಾಡುತ್ತಾನೆ;

ಇಂತಹರ=ಈ ರೀತಿ ಸಮಾಜವನ್ನು/ಜನಸಮುದಾಯವನ್ನು ವಂಚಿಸಿ ಸಂಪತ್ತನ್ನು ಸಂಪಾದಿಸಿರುವ ಹಣವಂತ , ಇಂತಹ ಕಳ್ಳ ಹಣವಂತನೊಡನೆ ಒಡನಾಡುವ ಗುರು ಮತ್ತು ಜಂಗಮ-ಈ ಮೂವರು ವ್ಯಕ್ತಿಗಳ; ಬದುಕು=ಜೀವನ/ಬಾಳು ; ಹುಲಿ=ಜೀವಿಗಳನ್ನು ಕೊಂದು ತಿನ್ನುವ ಕಾಡು ಪ್ರಾಣಿ; ಕಪಿಲೆ=ಹಸು/ಕಂದು ಬಣ್ಣದ ದನ; ತಿನ್ನು=ಉಣ್ಣು/ಕಬಳಿಸು ; ಮಿಕ್ಕು=ಉಳಿಯುವುದು/ಉಳಿದುಕೊಂಡಿರುವುದು; ತಿಂದು ಮಿಕ್ಕುದ=ಕುಡಿದು/ಉಂಡು/ತಿಂದು/ಕಬಳಿಸಿದ ಬಳಿಕ ಉಳಿದಿರುವುದನ್ನು; ನರಿ=ಕಾಡು ಪ್ರಾಣಿ/ವ್ಯಕ್ತಿಯ ಕಪಟತನ ಮತ್ತು ಕುತಂತ್ರದ ನಡೆನುಡಿಗಳನ್ನು ಸೂಚಿಸಲು ನರಿಯ ಹೆಸರನ್ನು ಜನರು ಒಂದು ರೂಪಕವಾಗಿ ಬಳಸುತ್ತಾರೆ; ತಿಂಬ+ಅಂತೆ; ತಿಂಬ=ತಿನ್ನುವ; ಅಂತೆ=ಹಾಗೆ/ಆ ರೀತಿ; ಕಾಣ್=ನೋಡು/ತಿಳಿ; ಕಾಣಾ=ಕಂಡೆಯಾ/ತಿಳಿದಿರುವೆಯಾ ;

ಇಂತಹರ ಬದುಕು ಹುಲಿ ಕಪಿಲೆಯ ತಿಂದು ಮಿಕ್ಕುದ ನರಿ ಬಂದು ತಿಂಬಂತೆ ಕಾಣಾ=ಹುಲಿಯು ಹಸುವಿನ ನೆತ್ತರನ್ನು ಹೀರಿ, ಮಾಂಸವನ್ನು ಹೊಟ್ಟೆಯ ತುಂಬಾ ತಿಂದ ನಂತರ , ಅದು ಬಿಟ್ಟು ಹೋಗಿದ್ದ ಮಾಂಸವನ್ನು ತಿನ್ನುವುದಕ್ಕಾಗಿ ಹೊಂಚು ಹಾಕುತ್ತಿದ್ದ ನರಿಯು ಹಸುವಿನ ಮಾಂಸ/ಅಡಗು/ಬಾಡನ್ನು ತಿನ್ನುವ ಪ್ರಸಂಗವನ್ನು ಒಂದು ರೂಪಕವಾಗಿ ವಚನಕಾರನು ಚಿತ್ರಿಸಿದ್ದಾನೆ. ಜನಸಮುದಾಯವನ್ನು ವಂಚಿಸಿ ಸಂಪತ್ತಿಗೆ ಒಡೆಯನಾಗುವ ಹಣವಂತನು ಹುಲಿಯಂತೆ ಕ್ರೂರಿಯಾಗಿದ್ದಾನೆ. ಅಂದರೆ ಅವನಲ್ಲಿ ಸಹಮಾನವರ ಬಗ್ಗೆ ಯಾವುದೇ ಬಗೆಯ ಒಲವು/ಕರುಣೆ/ಕಾಳಜಿ ಇರುವುದಿಲ್ಲ. ಇಂತಹ ವ್ಯಕ್ತಿಯ ಹಣದಿಂದ ಪೂಜೆಗೊಳ್ಳುವ/ಸೇವೆಯನ್ನು ಪಡೆಯುವ/ಅನುಕೂಲಗಳನ್ನು ಹೊಂದುವ ಜಾತಿ ಜಗದ್ಗುರುಗಳು/ದೇವ ಮಾನವರು/ಗುರುಹಿರಿಯರು ನರಿಯಂತೆ ಅಂದರೆ ನಯವಂಚಕತನ/ಬೂಟಾಟಿಕೆ/ಸೋಗಲಾಡಿತನದ ವ್ಯಕ್ತಿಗಳಾಗಿರುವುದಲ್ಲದೆ, ಜನಸಮುದಾಯವನ್ನು/ಸಮಾಜವನ್ನು ಕೊಳ್ಳೆಹೊಡೆದ ಕಳ್ಳಸಂಪತ್ತಿನ ಪಾಲುದಾರರಾಗಿದ್ದಾರೆ ಎಂಬ ವಾಸ್ತವ/ದಿಟ/ಸತ್ಯವನ್ನು ಈ ರೂಪಕ ಸೂಚಿಸುತ್ತದೆ.

ಕೂಡಲಚೆನ್ನಸಂಗಮ+ದೇವಾ; ಕೂಡಲು=ಎರಡು ನದಿ/ಹೊಳೆ/ತೊರೆಗಳು ಜತೆಗೂಡುವ ಜಾಗ/ನೆಲೆ; ಚೆನ್ನ=ಸುಂದರ/ಸೊಗಸು/ಚೆಲುವು; ಸಂಗಮ=ಶಿವ/ಈಶ್ವರ; ಕೂಡಲಚೆನ್ನಸಂಗಮದೇವಾ=ಎರಡು ನದಿಗಳು ಜತೆಗೂಡುವ ನೆಲೆಯಲ್ಲಿರುವ ಶಿವಲಿಂಗ/ಈಶ್ವರ; ಕೂಡಲಚೆನ್ನಸಂಗಮದೇವ=ವಚನಕಾರ ಚೆನ್ನಬಸವಣ್ಣನ ವಚನಗಳ ಅಂಕಿತನಾಮ.)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: