ದೇಹವೆಂದರೆ ಓ ಮನುಜ…
– ವೆಂಕಟೇಶ ಚಾಗಿ.
ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ. ಇದೊಂದೆ ನಿಜ ಅಶ್ಟೇ. ಹುಟ್ಟುವಾಗ ನಾವೇನು ತರಲಿಲ್ಲ. ನಗ,ನಾಣ್ಯ ಹೆಸರು,ಆಸ್ತಿ? ಊಹೂಂ, ಏನೂ ಇಲ್ಲ, ದೇಹ ಎನ್ನುವ ಗುರುತು ಮಾತ್ರ. ಸಾಯೋವರೆಗೂ ಇದೊಂದೆ ನಮ್ಮ ಜೊತೆ ಇರುವುದು. ಯಾರೋ ಹೆಸರಿಟ್ಟಾಗಲೇ ಈ ದೇಹಕ್ಕೊಂದು ಹೆಸರು ಬರುವುದು.
ದೇಹ ತುಂಬಾ ಸೂಕ್ಶ್ಮ. ಅದು ಕಲ್ಲಿನಂತಲ್ಲ. ನಾನು ಕಲ್ಲಿನ ಹಾಗೆ ಇದ್ದೇನೆ ಎಂದು ಅಂದುಕೊಂಡರೆ ಅದು ನಮ್ಮ ಬ್ರಮೆ ಅಶ್ಟೇ. ಹದಿ ವಯಸ್ಸಿನಲ್ಲಿ ದೇಹ ನಮ್ಮ ಮಾತನ್ನೇ ಕೇಳುತ್ತದೆ ಎನ್ನುವ ಹಾಗೆ ವರ‍್ತಿಸುತ್ತೇವೆ. ವಿಪರೀತ ದುಡಿತ, ವಿಶ್ರಾಂತಿ ರಹಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ದೇಹದ ಸಣ್ಣಪುಟ್ಟ ತೊಂದರೆಗಳನ್ನು ಅಲಕ್ಶಿಸುವುದು, ಕ್ರಮಬದ್ದವಾದ ಜೀವನಶೈಲಿ ಹೊಂದಿಲ್ಲದಿರುವುದು – ಇವೆಲ್ಲಾ ನಾವು ದೇಹಕ್ಕೆ ಮಾಡುವ ಅನ್ಯಾಯ. ಈ ಅನ್ಯಾಯಕ್ಕೆ ದೇಹ ಒಂದಲ್ಲಾ ಒಂದು ದಿನ ಪ್ರತಿಕಾರ ತೆಗೆದುಕೊಳ್ಳದೆ ಬಿಡಲ್ಲ. ಒಂದು ಹಂತದ ವರೆಗೆ ಅದು ನಮ್ಮ ಮಾತನ್ನು ಚಾಚೂ ತಪ್ಪದೆ ಕೇಳುತ್ತದೆ. ಆ ಹಂತ ಮೀರಿದಾಗ ದೇಹಕ್ಕೆ ನಾವು ಶರಣಾಗಲೇಬೇಕಾಗುತ್ತದೆ!
ದೇಹದ ಪ್ರತಿಯೊಂದು ಅಂಗಗಳೂ ಅತ್ಯಮೂಲ್ಯ ಆಸ್ತಿ ಇದ್ದಹಾಗೆ. ಒಂದೇ ಒಂದು ಅಂಗ ಇಲ್ಲದೇ ಹೋದರೆ ದೇಹ ಸರಿಯಾಗಿ ಕೆಲಸ ನಿರ‍್ವಹಿಸಲು ಸಾದ್ಯವಿಲ್ಲ. ಕೋಟಿ ಕೋಟಿ ಕೊಟ್ಟರೂ ಮೊದಲಿನಂತಾಗಲು ಸಾದ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮನುಶ್ಯನ ಆಯಸ್ಸು ಕಡಿಮೆಯಾಗುತ್ತಿರುವುದು, ಮನುಶ್ಯ ಅಕಾಲಿಕ ಮರಣ ಹೊಂದುತ್ತಿರುವುದು – ಇಂತಾ ಹಲವು ಸಂಗತಿಗಳಿಗೆ ಆರೋಗ್ಯದ ಬಗೆಗಿನ ನಿರ‍್ಲಕ್ಶ್ಯ, ಕೆಲಸದ ಒತ್ತಡ, ಆದುನಿಕ ಜೀವನ ಶೈಲಿ, ಲಾಬದ ಆಸೆ, ಮಾಲಿನ್ಯ – ಹೀಗೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಕೆಲಸದ ಒತ್ತಡದಿಂದ ದೇಹದ ಸ್ತಿತಿಯ ಬಗ್ಗೆ ಗಮನ ಕೊಡದೇ ಇರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು. ಇದೆಲ್ಲಾ ನಮಗೆ ಗೊತ್ತಿಲ್ಲ ಎಂದಲ್ಲ, ಗೊತ್ತಿದ್ದೂ ಹಲವಾರು ರೀತಿಯಲ್ಲಿ ನಮ್ಮ ದೇಹಕ್ಕೆ ನಾವೇ ಅನ್ಯಾಯ ಎಸಗುತ್ತಿದ್ದೇವೆ.
ಹುಟ್ಟಿದ ಮನುಶ್ಯ ಸಾಯಲೇ ಬೇಕು. ನಿಜ . ಆದರೆ ಈ ಬದುಕು ಅತ್ಯಮೂಲ್ಯ. ಜೀವನದ ಪ್ರತಿಯೊಂದು ಹಂತಗಳನ್ನು ದಾಟಿ ಕೊನೆಗೆ ಈ ದೇಹ ಮಣ್ಣಾಗಬೇಕು. ಆಗ ಮಾತ್ರ ಹುಟ್ಟಿದ್ದಕ್ಕೂ ಸಾರ‍್ತಕವಾಗುತ್ತದೆ. ನಮ್ಮ ದೇಹಕ್ಕೆ ಏನೇನು ಹಿತವೋ ಅದನ್ನು ನಾವು ಒದಗಿಸುತ್ತಾ ಹೋದಾಗ ಬದುಕಿನ ಅವದಿ ಹೆಚ್ಚುತ್ತದೆ. ಬದುಕಿನಲ್ಲಿ ಪರಿಪೂರ‍್ಣತೆ ಕಾಣಲು ಆಗ ಮಾತ್ರ ಸಾದ್ಯ. ಇಲ್ಲಿಯವರೆಗೆ ಅದೆಶ್ಟೋ ಕೋಟ್ಯಾನುಕೋಟಿ ಜನ ಬದುಕಿ ಕಣ್ಮರೆಯಾಗಿದ್ದಾರೆ. ಮತ್ತೆ ಅವರಾರೂ ಹುಟ್ಟಿ ಮರಳಿ ಬಂದಿಲ್ಲ. ಹಾಗಾದರೇ ಈ ಬದುಕೇ ಮೊದಲು ಮತ್ತು ಈ ಬದುಕೇ ಕಡೆ ಅಲ್ಲವೇ?
ಆದ್ದರಿಂದ ಮೊದಲು ನಾವು ಸರಿಯಾದ ರೀತಿಯಲ್ಲಿ ಬದುಕುವುದನ್ನು ಕಲಿಯಬೇಕಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಳ್ಳಬೇಕಿದೆ. ಸದ್ರುಡ ದೇಹದಲ್ಲಿ ಸದ್ರುಡ ಮನಸ್ಸಿರುತ್ತದೆ ಎನ್ನುವುದನ್ನು ಮನಗಾಣಬೇಕಿದೆ. ಸದ್ರುಡ ದೇಹ-ಮನಸ್ಸಿದ್ದರೆ ಅಂದುಕೊಂಡ ಗುರಿಯನ್ನು ಮುಟ್ಟುವುದು ಸಲೀಸು!
( ಚಿತ್ರ ಸೆಲೆ: wikipedia )
ಉತ್ತಮ ಲೇಖನ.