ಸ್ಕಾರಿಪಿಕೇಶನ್: ಆಪ್ರಿಕನ್ ಬುಡಕಟ್ಟಿನವರ ‘ಟ್ಯಾಟೂ’ ಸಂಸ್ಕ್ರುತಿ

– ಕೆ.ವಿ.ಶಶಿದರ.

ಕೊಯ್-ಗುರುತು-ಉಳಿಸಿಕೊಳ್ಳುವಿಕೆ, scarification

ಕೆಲವು ಆಪ್ರಿಕನ್ ಬುಡಕಟ್ಟು ಜನಾಂಗಗಳಲ್ಲಿ ಸ್ಕಾರಿಪಿಕೇಶನ್(Scarification)/ಕೊಯ್-ಗುರುತು-ಉಳಿಸಿಕೊಳ್ಳುವಿಕೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಗಂಡು ಬೇದವಿಲ್ಲದೆ ಸಾಮಾನ್ಯವಾಗಿ ದೇಹದ ಮೇಲೆ ಗಾಯದ ಕಲೆಯ ಗುರುತುಗಳನ್ನು ಮೂಡಿಸುವುದು ಅವರ ಪದ್ದತಿಯಾಗಿತ್ತು. ಗಾಯದ ಕಲೆಯ ಉಪಯೋಗ ಮಾತ್ರ ಅನನ್ಯ. ದೇಹದ ಮೇಲಿನ ವಿವಿದ ರೀತಿಯ ಗಾಯದ ಕಲೆ ಅನಾಯಾಸವಾಗಿ ಗುರುತಿಸುವ ಸಾದನ ಮಾತ್ರವಾಗಿರದೆ ಸಮಾಜದಲ್ಲಿ ಆಕೆ ಆತವಾ ಆತನ ಅಂತಸ್ತಿನ ದ್ಯೋತಕವೂ ಸಹ ಆಗಿತ್ತು. ಮೈಮೇಲಿನ ಈ ಕಲೆ ಸಮಾಜದಲ್ಲಿ ವ್ಯಕ್ತಿಯ ಅಂತಸ್ತಿನ ಜೊತೆ ಆತನ ಕುಟುಂಬ, ಕುಲ ಹಾಗೂ ಬುಡಕಟ್ಟನ್ನು ಸೂಚಿಸುವ ಚಿಹ್ನೆಯಾಗಿತ್ತು. ಒಂದು ರೀತಿಯಲ್ಲಿ ಇದು ಗುರುತಿನ ಚೀಟಿ ಸಹ ಆಗಿತ್ತು! ಹೆಣ್ಣಿಗಿದು ಸೌಂದರ‍್ಯ ಮತ್ತು ಶಕ್ತಿಯ ಸಂಕೇತವಾದರೆ ಗಂಡಸರಿಗೆ ಶೌರ‍್ಯದ ಸಂಕೇತ.

ಕೊಯ್-ಗುರುತು-ಉಳಿಸಿಕೊಳ್ಳುವಿಕೆ – ಆಪ್ರಿಕಾ ಬುಡಕಟ್ಟಿನವರಿಗೆ ಹೆಮ್ಮೆಯ ವಿಶಯ

ನಿಜ, ಕೆಲವರು ಇದನ್ನು ದ್ವೇಶಿಸಬಹುದು. ಆದರೂ ಆಪ್ರಿಕಾದ ಹಲವು ಬುಡಕಟ್ಟು ಜನಾಂಗದವರಿಗೆ ಇದು ಅವಮಾನವಲ್ಲ, ಹೆಮ್ಮೆಯ ವಿಶಯ. ವಿಶ್ವದಾದ್ಯಂತ ಲಬ್ಯವಿರುವ ಆಪ್ರಿಕನ್ ಸಂಸ್ಕ್ರುತಿಯ ವಸ್ತು ಸಂಗ್ರಹಾಲಯಗಳಲ್ಲಿನ ಶಿಲ್ಪ ಕಲೆಗಳನ್ನು ಕೂಲಂಕುಶವಾಗಿ ಗಮನಿಸಿದರೆ, ಈ ರೀತಿಯ ಮೈಮೇಲಿನ ಕಲೆ ಅವರ ಸಂಸ್ಕ್ರುತಿಯ ಹಾಗೂ ಸೌಂದರ‍್ಯದ ಪ್ರಮುಕ ಅಂಗವಾಗಿರುವುದು ಸ್ಪಶ್ಟವಾಗುತ್ತದೆ. ಶಿಲ್ಪಕಲೆಯ ಮೇಲಿನ ಚಿತ್ರದ ಮಾದರಿಗಳು ಸೌಂದರ‍್ಯದ ಗುರುತು ಮಾತ್ರವಲ್ಲದೆ ವಂಶಾವಳಿಯ ಗುರುತು ಸಹ ಆಗಿವೆ. ಕೆಲವೊಮ್ಮೆ ಅವು ದುಶ್ಟ ಶಕ್ತಿಯ ವಿರುದ್ದ ರಕ್ಶಣಾ ಕವಚವಾಗಿದೆ. ಆಪ್ರಿಕಾದ ಪಾಲಿನೇಶಿಯಾದಲ್ಲಿ ಮೈಮೇಲಿನ ಗಾಯದ ಕಲೆ ಕಪ್ಪು ಚರ‍್ಮದ ಮೇಲಿನ ಟ್ಯಾಟೂಗಿಂತ ಹೆಚ್ಚು ನಿಚ್ಚಳವಾಗಿ ಗೋಚರಿಸುವುದು ಸಹ ಇದರ ಹೆಚ್ಚಿನ ಉಪಯೋಗಕ್ಕೆ ಕಾರಣವಿರಬಹುದು.

ಸ್ಕಾರಿಪಿಕೇಶನ್ ಎಂದರೇನು?

ಯಾವುದಾದರೂ ಹರಿತವಾದ ಆಯುದದಿಂದ ಮೈಮೇಲಿನ ಚರ‍್ಮವನ್ನು ಚೇದಿಸಿ ಗಾಯ ಮಾಡಿ, ಗಾಯದ ಕಲೆ ಉಳಿಯುವಂತೆ ಮಾಡುವುದೇ ಸ್ಕಾರಿಪಿಕೇಶನ್. ಚೂರಿ, ಒಡೆದ ಗಾಜು, ಚೂಪಾದ ಕಲ್ಲು, ಅತವಾ ಹರಿತವಾದ ತೆಂಗಿನ ಕಾಯಿಯ ಚಿಪ್ಪು, ಇವು ಆಪ್ರಿಕನ್ ಬುಡಕಟ್ಟು ಜನಾಂಗದವರು ಮೈಚರ‍್ಮದ ಮೇಲೆ ಗಾಯ ಮಾಡಲು ಸಾಮಾನ್ಯವಾಗಿ ಬಳಸುವ ಸಾದನಗಳು, ಆಯುದಗಳು. ಇವುಗಳಲ್ಲಿ ಯಾವುದಾದರೂ ಒಂದರ ಉಪಯೋಗದಿಂದ ದೇಹದ ವಿವಿದ ಬಾಗದಲ್ಲಿ ಪೂರ‍್ವ ನಿರ‍್ದಾರಿತ ಆಕಾರದಂತೆ ಗಾಯ ಮಾಡಲು ಸಾದ್ಯ.

ಸ್ಕಾರಿಪಿಕೇಶನ್ ದೀರ‍್ಗವಾದ ಹಾಗೂ ನೋವಿನ ಪ್ರಕ್ರಿಯೆ. ದೇಹದ ಮೇಲಿನ ಚರ‍್ಮದ ಶಾಶ್ವತ ಮಾರ‍್ಪಾಡು. ಗುರುತಿನ ಮತ್ತು ಸಾಮಾಜಿಕ ಸ್ತಿತಿಯ ಸಂಕೀರ‍್ಣ ಸಂದೇಶವನ್ನು ಇದು ಹರಡುತ್ತದೆ. ದೇಹದ ಮೇಲಿನ ಶಾಶ್ವತ ಗುರುತುಗಳು ಸಾಮಾಜಿಕ, ರಾಜಕೀಯ ಮತ್ತು ದಾರ‍್ಮಿಕ ಪಾತ್ರಗಳನ್ನು ಒತ್ತಿ ಹೇಳುತ್ತವೆ. ಚರ‍್ಮದ ಮೇಲೆ ರಚನೆಯಾಗುವ ಸುಂದರ ಹಾಗೂ ಸಂಕೀರ‍್ಣವಾದ ವಿನ್ಯಾಸಗಳು ಅವಲಂಬಿತವಾಗಿರುವುದು ಕಲಾವಿದನ ಕೌಶಲ್ಯದ ಮೇಲೆ. ಅದಕ್ಕೆ ಮೈ ಒಡ್ಡುವ ವ್ಯಕ್ತಿಯ ನೋವಿನ ಸೈರಣೆಯ ಶಕ್ತಿ ಸಹ ಇಲ್ಲಿ ಬಹು ಮುಕ್ಯ.

ಜೀವನದ ಬೇರೆ ಬೇರೆ ಹಂತಗಳ ಗುರುತು – ಸ್ಕಾರಿಪಿಕೇಶನ್

ಪ್ರಾತಮಿಕವಾಗಿ ಪಶ್ಚಿಮ ಆಪ್ರಿಕಾದಲ್ಲಿ ಮುಕದ ಸ್ಕಾರಿಪಿಕೇಶನ್ ಅನ್ನು ಜನಾಂಗೀಯ ಗುಂಪುಗಳ, ಕುಟುಂಬಗಳ ಹಾಗೂ ವ್ಯಕ್ತಿಗಳ ಗುರುತಿಗಾಗಿ ಹಾಗೂ ಚರ‍್ಮದ ಸೌಂದರ‍್ಯವನ್ನು ವ್ಯಕ್ತಪಡಿಸಲು ಬಳಸಲಾಗುತ್ತಿತ್ತು. ಪ್ರೌಡಾವಸ್ತೆ, ವಿವಾಹ ಮುಂತಾದ ಹೆಣ್ಣಿನ ಜೀವನದ ವಿವಿದ ಹಂತಗಳನ್ನು ಗುರುತಿಸಲು ಸ್ಕಾರಿಪಿಕೇಶನ್ ಹೆಣ್ಣು ಮಕ್ಕಳ ಮೇಲೆ ಹೆಚ್ಚು ಪ್ರಯೋಗಿಸಲಾಗುತ್ತಿತ್ತು. ಪುರುಶರನ್ನು ಆಕರ‍್ಶಿಸಲು ಚರ‍್ಮದ ಮೇಲೆ ವಿವಿದ ಬಗೆಯ ಕಲೆಗಳನ್ನು ಮಹಿಳೆಯರು ಸ್ವಯಂ ಇಚ್ಚೆಯಿಂದ ಹಾಕಿಸಿಕೊಳ್ಳುತ್ತಿದ್ದರು. ಚರ‍್ಮದ ಮೇಲಿನ ಕಲೆ ನೋಡಲು ಹಾಗೂ ಸ್ಪರ‍್ಶಿಸಲು ಮೋಹಕವಾಗಿರುತ್ತದೆ ಹಾಗೂ ಹೆಣ್ಣಿನ ಸೌಂದರ‍್ಯವನ್ನು ಹೆಚ್ಚಿಸುತ್ತದೆ ಎಂಬುದು ಪುರುಶರ ಅನಿಸಿಕೆ. ಮಹಿಳೆ ಹೆರಿಗೆ ಸಮಯದಲ್ಲಿ ಅನುಬವಿಸುವ ಬಯಂಕರ ನೋವನ್ನು ತಡೆದುಕೊಳ್ಳಬಲ್ಲಳು ಎಂಬುದಕ್ಕೆ ಪುರಾವೆಯೇ ಸ್ಕಾರಿಪಿಕೇಶನ್ ಅಂತೆ. ಪಶ್ಚಿಮ ಕ್ಯಾಮರೂನ್ ಸೇರಿದಂತೆ ಅನೇಕ ದೇಶಗಳ ರಾಜಕುಮಾರಿಯರು ವಿಸ್ಮಯಕಾರಕ ಸುಂದರ ಮತ್ತು ಸಂಕೀರ‍್ಣವಾದ ಗುರುತುಗಳನ್ನು ಪ್ರದರ‍್ಶಿಸುತ್ತಿದ್ದುದು ಸಾಮಾನ್ಯ. ಬೆನಿನ್ ಸಾಮ್ರಾಜ್ಯದ ರಾಣಿ ‘ಇಡಿಯಾ’ ಹಣೆಯ ಮೇಲೆ ಎರೆಡು ಗುರುತುಗಳನ್ನು ಕೆತ್ತಿಸಿಕೊಂಡಿದ್ದಳು. ಇತಿಯೋಪಿಯಾದ ಕಾರೋ ಪುರುಶರು ಬೇರೆ ಬುಡಕಟ್ಟು ಜನಾಂಗದ ಶತ್ರುಗಳನ್ನು ಸಂಹರಿಸಿದರ ದ್ಯೋತಕವಾಗಿ ಎದೆಯ ಮೇಲೆ ಸ್ಕಾರಿಪಿಕೇಶನ್ ಮಾಡಿಸಿಕೊಳ್ಳುತ್ತಿದ್ದರು. ಅದು ಅವರ ದೈರ‍್ಯದ ಹಾಗೂ ಶಕ್ತಿಯ ಸಂಕೇತ.

  • ಇತಿಯೋಪಿಯಾದ ಬೋಡಿ ಬುಡಕಟ್ಟು ಜನಾಂಗದವರು ಸ್ಕಾರಿಪಿಕೇಶನ್‍ಗಾಗಿ ಚರ‍್ಮವನ್ನು ಗಾಯಗೊಳಿಸಲು ಉಪಯೋಗಿಸುವುದು ಲೋಹವನ್ನು. ಇವರ ಜನಾಂಗದ ಗುರುತಿಗಾಗಿ ಬಳಸುವ ವಿನ್ಯಾಸ ಬುಜದ ಸುತ್ತಾ ಸುರಳಿಯಾಕಾರದ್ದು.
  • ಕರ‍್ರೆಯ್ಯೂ ಬುಡಕಟ್ಟು ಜನಾಂಗದಲ್ಲಿಯೂ ಸ್ಕಾರಿಪಿಕೇಶನ್ ಆಚರಣೆ ಇದೆ. ಬೆಕ್ಕನ್ನು ಹೋಲುವ ವಿನ್ಯಾಸವನ್ನು ಇವರುಗಳು ಮುಕದ ಮೇಲೆ ಹೊಂದಿದರೆ, ಮೆನಿಟ್ ಜನಾಂಗದವರು ಹರಿತವಾದ ಕಲ್ಲಿನಿಂದ ಚರ‍್ಮವನ್ನು ಗಾಯಗೊಳಿಸಿ ಆಳವಾದ ಮಾಸಿದ ಗಾಯದ ಕಲೆ ಉಂಟು ಮಾಡಿಕೊಳ್ಳುತ್ತಾರೆ.
  • ಓಮೊರೇಟ್ ಹಳ್ಳಿಯ ಡಾಸನೆಕ್ ಮಹಿಳೆಯರು ಹೆಗಲಿನ ಮೇಲೆ ಗಾಯದ ಕಲೆಯನ್ನು ಮಾಡಿಕೊಂಡರೆ, ಮರ‍್ಸಿ ಬುಡಕಟ್ಟು ಜನಾಂಗದವರಿಗೆ ಗಾಯದ ಕಲೆ ಶಕ್ತಿಯ ಸಂಕೇತವಂತೆ.
  • ಇತಿಯೋಪಿಯಾದ ನೆರೆಯ ಸುಡಾನ್‍ನಲ್ಲಿನ ಪುರುಶರು ತಮ್ಮ ಎದೆಯ ಮೇಲೆ ಸಮಾನಾಂತರ ರೇಕೆಗಳನ್ನು ಗಾಯದ ಕಲೆಯಾಗಿ ಸ್ರುಶ್ಟಿಸಿಕೊಳ್ಳುವ ಸಂಪ್ರದಾಯ ಹೊಂದಿದ್ದಾರೆ.

ಟ್ಯಾಟೂ – ಕೊಯ್-ಗುರುತುಳಿಸಿಕೊಳ್ಳುವಿಕೆಯ ಮತ್ತೊಂದು ಬಗೆ

ಸ್ಕಾರಿಪಿಕೇಶನ್ ಕಲೆಯ ಪದ್ದತಿ ಈಗ ಆಪ್ರಿಕಾದಲ್ಲಿ ಬದಲಾಗಿದೆ. ಸ್ಕಾರಿಪಿಕೇಶನ್ ಅಲ್ಲಿನ ಹಿರಿಯರ ದೇಹದಲ್ಲಿ ಮಾತ್ರ ಕಾಣಬಹುದು. ಸ್ಕಾರಿಪಿಕೇಶನ್‍ಗೆ ಬಳಸುವ ಹರಿತವಾದ ಆಯುದಗಳ ಮೂಲಕ ಹೆಚ್‍ಐವಿಯಂತಹ ರಕ್ತದ ಮೂಲಕ ಹರಡುವ ಕಾಯಿಲೆಯ ಹೆದರಿಕೆ ಒಂದೆಡೆಯಾದರೆ ಆದುನಿಕ ಜಗತ್ತಿನಲ್ಲಿ ಈ ಗೊಡ್ಡು ಸಂಪ್ರದಾಯದಿಂದ ಆಗಬಹುದಾದ ಅವಮಾನ ಬಹಳಶ್ಟು ಯುವಕ ಯುವತಿಯರು ಈ ಅಮಾನುಶ ಪದ್ದತಿಯಿಂದ ಹಿಂದೆ ಸರಿಯಲು ಮೂಲ ಕಾರಣವಾಗಿದೆ. ಸ್ಕಾರಿಪಿಕೇಶನ್ ಸಂಸ್ಕ್ರುತಿಯನ್ನು ಆಪ್ರಿಕನ್ನರು ಬಹಳವಾಗಿ ಪ್ರೀತಿಸುತ್ತಿದ್ದರು. ಟ್ಯಾಟೂ ಮತ್ತು ಗುರುತಿನ ಚೀಟಿಯ ಅವಿಶ್ಕಾರದ ನಂತರ ಆಪ್ರಿಕಾ ಕಂಡದಲ್ಲಿ ಈ ಸಂಪ್ರದಾಯ ಕೊನೆಗೊಂಡಿದೆ ಎನ್ನಬಹುದು.

ಆದುನಿಕ ಜಗತ್ತಿನಲ್ಲಿ ದೇಹ ಸೌಂದರ‍್ಯ ವ್ರುದ್ದಿಗಾಗಿ ಹತ್ತು ಹಲವು ಮಜಲುಗಳು ತಲೆ ಎತ್ತಿವೆ. ಸ್ಕಾರಿಪಿಕೇಶನ್‍ಗೆ ಪರ‍್ಯಾಯವಾಗಿ ಬಣ್ಣ ಬಣ್ಣದ ಟ್ಯಾಟೂಗಳೂ ಮತ್ತು ಪ್ಲಾಸ್ಟಿಕ್ ಸರ‍್ಜರಿಯಂತಹ ಚಿಕಿತ್ಸೆಗಳನ್ನು ಕಾಣಬಹುದು. ಅಸಂಕ್ಯಾತ ಯುವಕ ಯುವತಿಯರು ಇವುಗಳಿಗೆ ಮೊರೆ ಹೋಗಿದ್ದಾರೆ. ಇವೆಲ್ಲಾ ಸ್ಕಾರಿಪಿಕೇಶನ್‍ನ ಮತ್ತೊಂದು ಮುಕವಲ್ಲವೆ?

( ಮಾಹಿತಿ ಸೆಲೆ: wikipedia )
( ಚಿತ್ರ ಸೆಲೆ: web.prm.ox.ac.uk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: