ಇದು ಹಾಲಲ್ಲ, ಹಾಲಾಹಲ!

– ಕೆ.ವಿ.ಶಶಿದರ.

Milk, ಹಾಲು

ಬಹಳ ವರುಶಗಳ ಹಿಂದಿನವರೆಗೆ ಹಾಲು ಎಂದರೆ ತಟ್ಟನೆ ಹೊಳೆಯುತ್ತಿದ್ದುದು ಹಸುವಿನ ಹಾಲು, ಎಮ್ಮೆ ಹಾಲು, ಮೇಕೆ ಹಾಲು ಇಲ್ಲವೇ ತಾಯಿಯ ಹಾಲು. ಇಂದು ಹೆಚ್ಚಾಗಿ ಬಳಕೆಯಲ್ಲಿರುವ ಪ್ಯಾಕೆಟ್, ಟೆಟ್ರಾ ಪ್ಯಾಕ್‌ಗಳು ಅಲ್ಲದೇ ತುರ‍್ತಾಗಿ ಬೇಕಾದಲ್ಲಿ ಹಾಲಿನ ಪುಡಿಯಿಂದ ಮನೆಯಲ್ಲೇ ತಯಾರಿಸಬಹುದಾದ ಕೆನೆರಹಿತ ಹಾಲು ಮನೆಮಾತಾಗಿವೆ. ಹಾಲು ಯಾವುದೇ ಆದರೂ ಇವುಗಳಿಗೆಲ್ಲ ಮೂಲ ಹಸು ಇಲ್ಲವೇ ಎಮ್ಮೆ ಎಂಬುದು ಸಾಮಾನ್ಯವಾಗಿ ಎಲ್ಲರ ತಿಳುವಳಿಕೆಯಲ್ಲಿರುವ ವಿಚಾರ.

ತಂತ್ರಗ್ನಾನ ಬೆಳೆಯುತ್ತಿದ್ದಂತೆ ಇಂದು ಹಲವು ಹೊಸ ಮಾಡುಗೆಗಳು ನಮ್ಮ ಮುಂದಿವೆ. ಇಂದು ಹಾಲು ಕೂಡ ಕಾರ‍್ಕಾನೆಯಲ್ಲಿ, ಬರೀ ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಾಗುವ ಮಟ್ಟಕ್ಕೆ ಬಂದು ನಿಂತಿದೆ ಎನ್ನುವುದು ದಿಟವಾಗಿಯೂ ಆತಂಕ ಹುಟ್ಟಿಸುವ ವಿಚಾರವೇ. ಬಟ್ಟೆ, ಪೇಪರ್, ಶೂ ಮುಂತಾದವುಗಳನ್ನು ತಯಾರಿಸುವಂತೆ ಸಂಪೂರ‍್ಣವಾಗಿ ಪ್ಯಾಕ್ಟರಿಯಲ್ಲೇ ಹಾಲನ್ನು ತಯಾರಿಸಲಾಗುತ್ತದೆ. ಇದರ ತಯಾರಿಕೆಗೆ ತಾಂತ್ರಿಕ ಪರಿಣತರೂ ಇದ್ದಾರೆ.

ಇದು ಕಲಬೆರಕೆ ಹಾಲು ಮಾತ್ರವಲ್ಲ, ಕ್ರುತಕ ಹಾಲು ಕೂಡ

ಹಾಲು ಕಲಬೆರಕೆಗೆ ಹೇಳಿ ಮಾಡಿಸಿದ ಪದಾರ‍್ತ. ಅತ್ಯಂತ ಸುಲಬವಾಗಿ ಹಾಲಿನೊಡನೆ ಬೆರೆಯಬಲ್ಲ ವಸ್ತು ನೀರು. ಹಾಲಿಗೆ ನೀರು ಕಲಬೆರಕೆ ಮಾಡಿ ಮಾರುವುದು ಹೊಸತೇನಲ್ಲ. ರಾಸಾಯನಿಕ ಹಾಲು ಕಲಬೆರೆಕೆ ಹಾಲಲ್ಲ. ಇದು ಅಪ್ಪಟ, ಕ್ರುತಕ ಹಾಲು. ಇಂತಹ ಹಾಲಿನಲ್ಲಿ ನೈಸರ‍್ಗಿಕ ಹಾಲಿನಲ್ಲಿರುವ ಯಾವೊಂದು ಪೋಶಕಾಂಶವೂ ಇರುವುದಿಲ್ಲ. ರಾಸಾಯನಿಕಗಳಿಂದ ತಯಾರಿಸಿದ ಹಾಲನ್ನು ಹಾಗೆಯೇ ಮಾರುವುದಿಲ್ಲ, ಬದಲಾಗಿ ಎಮ್ಮೆ-ಹಸುಗಳಿಂದ ಪಡೆಯುವ ನೈಸರ‍್ಗಿಕ ಹಾಲಿನ ಜೊತೆ ಬೆರೆಸಿ ಮಾರುಕಟ್ಟೆಯಲ್ಲಿ ವಿತರಿಸುತ್ತಾರೆ.

ರಾಸಾಯನಿಕ ಹಾಲಿನಲ್ಲಿ ಏನಿದೆ?

ರಾಸಾಯನಿಕ ಹಾಲಿನ ತಯಾರಿಕೆಯಲ್ಲಿ ಹಲವು ರಾಸಾಯನಿಕ ಪದಾರ‍್ತಗಳ ಬಳಕೆಯಾಗುತ್ತವೆ. ಯೂರಿಯಾ, ಕಾಸ್ಟಿಕ್ ಸೋಡಾ, ಮಾರ‍್ಜಕಗಳು (Detergent) ಮತ್ತು  ಅಗ್ಗದ ಅಡುಗೆ ಎಣ್ಣೆಗಳನ್ನು ನಿಗದಿತ ಪ್ರಮಾಣಗಳಲ್ಲಿ ಬೆರೆಸಿ ಹಾಲನ್ನು ತಯಾರಿಸಲಾಗುತ್ತದೆ. ಹಾಲಿನ ಕೊಬ್ಬಿನ ಬದಲಾಗಿ ಇದರಲ್ಲಿ ಅಗ್ಗದ ಅಡುಗೆ ಎಣ್ಣೆಯ ಬಳಕೆಯಾಗುತ್ತದೆ. ಹಾಲಿಗೆ ವಿಶಿಶ್ಟವಾದ ಬಿಳಿ ಬಣ್ಣ ತಂದುಕೊಡಲು ಮತ್ತು ಎಣ್ಣೆಯ ಜಿಡ್ಡಿನಂಶವು ಮೇಲೆ ತೇಲದೆ, ಕರಗುವಂತಾಗಲು ಮಾರ‍್ಜಕಗಳನ್ನು ಬೆರೆಸಲಾಗುತ್ತದೆ. ಹುಳಿಗಟ್ಟುವುದನ್ನು ತಡೆಯಲು ಅಡುಗೆ ಸೋಡಾ ಬೆರೆಸುತ್ತಾರೆ. ಇದು ಹಾಲು ಕೆಡದಂತೆ ನೋಡಿಕೊಳ್ಳುತ್ತದೆ. ಹಾಲಿನಂತೆ ಗಟ್ಟಿಯಾಗಿರಲು ಇದಕ್ಕೆ ಯೂರಿಯಾ ಸೇರಿಸುತ್ತಾರೆ.

ರಾಸಾಯನಿಕ ಹಾಲನ್ನು ಹೇಗೆ ತಯಾರಿಸುತ್ತಾರೆ?

ಅಪಾಯಕಾರಿ ರಾಸಾಯನಿಕ ಹಾಲನ್ನು ತಯಾರಿಸುವ ಬಗೆ ಬಹಳ ಅಚ್ಚುಕಟ್ಟು. ಅಗ್ಗದ ಅಡುಗೆ ಎಣ್ಣೆ ಮತ್ತು ಮಾರ‍್ಜಕಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ಕಲಸಿ, ಬಿಳಿಯ ದಪ್ಪಗಿನ ಪೇಸ್ಟ್ ತಯಾರಿಸಿಕೊಳ್ಳುತ್ತಾರೆ. ಇದಕ್ಕೆ ನಿದಾನವಾಗಿ ನೀರನ್ನು ಬೆರೆಸಿ, ಕಲಸುತ್ತಾ ಹಾಲಿನ ಸಾಂದ್ರತೆಗೆ ತರುತ್ತಾರೆ. ನಂತರ ಇದಕ್ಕೆ ಯೂರಿಯಾ, ಸೋಡಿಯಮ್ ಸಲ್ಪೇಟ್, ಗ್ಲೂಕೋಸ್, ಮಾಲ್ಟೋಸ್ ಇಲ್ಲವೇ ಸಾಮಾನ್ಯವಾಗಿ ಸಿಗುವ ಯಾವುದೇ ರಸಗೊಬ್ಬರವನ್ನು ಬಿಸಿ ನೀರಿನಲ್ಲಿ ಕರಗಿಸಿ ಸೇರಿಸಲಾಗುತ್ತದೆ. ಹಾಲು ಗಟ್ಟಿಯಾಗಿದ್ದಂತೆ, ದಪ್ಪಗೆ ಎಮ್ಮೆ ಹಾಲಿನಂತೆ ಕಾಣಲು ಬೇರೆ ಬೇರೆ ರೀತಿಯ ಪದಾರ‍್ತಗಳನ್ನು ಬಳಸುವುದುಂಟು. ಬ್ಲಾಟಿಂಗ್ ಕಾಗದ, ಹೈಡ್ರೋಜನ್ ಪೆರಾಕ್ಸೈಡ್, ಪಾರ‍್ಮಲಿನ್, ಗೋದಿ ಹಿಟ್ಟುಗಳನ್ನು ಈ ಉದ್ದೇಶಕ್ಕಾಗಿ ಬಳಸುತ್ತಾರೆ.

ಜೀವಕ್ಕೆ ಹಾನಿಯುಂಟುಮಾಡಬಲ್ಲ ರಾಸಾಯನಿಕಗಳು ಈ ಹಾಲಿನಲ್ಲಿವೆ

ರಾಸಾಯನಿಕಗಳಿಂದ ತಯಾರಾದ ಹಾಲನ್ನು ಬಳಸುವುದರಿಂದ ಕ್ಯಾನ್ಸರ್ ಬರುವ ಸಾದ್ಯತೆಗಳಿವೆ. ಇದರಲ್ಲಿ ಬೆರೆಸುವ ಯೂರಿಯಾ, ಕಾಸ್ಟಿಕ್ ಸೋಡಾಗಳು ಹ್ರುದಯ, ಲಿವರ್ ಹಾಗೂ ಕಿಡ್ನಿಗಳಿಗೆ ಹಾನಿಕಾರಕ. ಮದುಮೇಹ, ರಕ್ತದೊತ್ತಡದಂತಹ ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದು.

ರಾಸಾಯನಿಕ ಹಾಲಿನ ರುಚಿ ಹೇಗಿರುತ್ತದೆ?

ರಾಸಾಯನಿಕಗಳಿಂದ ತಯಾರಿಸಿದ ಹಾಲಿನ ರುಚಿ ಅಸಹ್ಯವಾಗಿರುತ್ತದೆ. ಹಾಗೇ, ಹಾಲಿನ ವಾಸನೆಯೂ ಕೂಡ. ಹಾಲಿನ ಅಸಹ್ಯ ವಾಸನೆಯನ್ನು ತಡೆಯಲು ಎಮ್ಮೆ, ಆಕಳು ಇಲ್ಲವೇ ಎರಡರ ಬೆರೆಕೆಯ ನೈಸರ‍್ಗಿಕ ಹಾಲಿನೊಡನೆ ಸೇರಿಸುತ್ತಾರೆ.

ಹಳ್ಳಿಗಳೇ ನಗರಗಳಿಗೆ ಹಾಲಿನ ಮೂಲ. ಹಾಲನ್ನು ಒಟ್ಟು ಮಾಡುವ ಸಂಗ ಸಂಸ್ತೆಗಳು ಹಾಲಿನ ಪರೀಕ್ಶೆಗೆ ಕನಿಶ್ಟ ಸೌಲಬ್ಯ ಮಾತ್ರ ಹೊಂದಿರುತ್ತವೆ. ಹಳ್ಳಿಗಳಲ್ಲಿ ಸಂಕೀರ‍್ಣ ಪ್ರಯೋಗಕ್ಕೆ ಸೂಕ್ತ ವ್ಯವಸ್ತೆಯಿಲ್ಲದ ಕಾರಣ ಕ್ರುತಕ ಹಾಲಿನ ಕಲಬೆರೆಕೆ ಕಂಡುಹಿಡಿಯುವುದು ಅಸಾದ್ಯವಾಗಿದೆ. ಕ್ರುತಕವಾಗಿ ತಯಾರಿಸುವ ಹಾಲಿನ ತಯಾರಿಕೆಗೆ ತಗಲುವ ವೆಚ್ಚ ಪ್ರತಿ ಲೀಟರಿಗೆ ಕೇವಲ 5 ರಿಂದ 6 ರೂಪಾಯಿ ಮಾತ್ರ. ಇಂದು ಮಾರುಕಟ್ಟೆಯಲ್ಲಿ ಲಬ್ಯವಿರುವ ಪ್ಯಾಕೆಟ್ ಡೇರಿ ಹಾಲಿನ ಬೆಲೆ ಲೀಟರಿಗೆ ಕಮ್ಮಿಯೆಂದರೂ 35 ರೂಪಾಯಿ ಇದೆ. ಸ್ತಳೀಯವಾಗಿ ಸಿಗುವ ನೀರು ಬೆರೆತ ಹಾಲಿನ ಬೆಲೆ ಲೀಟರಿಗೆ 30 ಕ್ಕೆ ಕಡಿಮೆಯಿಲ್ಲ.

ಇಂತಹ ಒಂದು ಹಾಲಿನ ಹುಟ್ಟಿಗೆ ಕಾರಣನಾದ ಆ ‘ಪುಣ್ಯಾತ್ಮ’ ಯಾರು? ಬೆರಳೆಣಿಕೆಯಶ್ಟು ಜನರ ಬದುಕನ್ನು ಹಸನು ಮಾಡಲು ಹೋಗಿ ಲಕ್ಶಾಂತರ ಜನರನ್ನು ಬಲಿ ತಗೆದುಕೊಳ್ಳುವಂತೆ ಮಾಡಿದ ಆ ಮಹಾ ವಿಗ್ನಾನಿ ಯಾರು? ಎನ್ನುವುದೊಂದು ಯಕ್ಶ ಪ್ರಶ್ನೆ. ಇದನ್ನು ಕಂಡು ಹಿಡಿದವ ಯಾರೇ ಆಗಿರಲಿ, ಅವನು ಮತ್ತು ಅವನೊಡನೆ ಕೈ ಜೋಡಿಸಿರುವವರು ಮಾನವೀಯತೆಯ ಎದುರಾಳಿಗಳು. ಇಂತಹವರಿಗೆ ಹಾಲು ಕುಡಿಯುವ ಕಂದಮ್ಮಗಳ ಜೀವಕ್ಕಿಂತ ಹಣದ ಮೇಲಿನ ವ್ಯಾಮೋಹವೇ ಹೆಚ್ಚು, ಅಲ್ಲವೇ?

(ಚಿತ್ರ ಸೆಲೆ: libreshot.com)
(ಮಾಹಿತಿ ಸೆಲೆ: bihartimes.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: