ಅಚ್ಚರಿಯ ಆಕ್ಟೋಪಸ್ ಮರ

– ಕೆ.ವಿ. ಶಶಿದರ.

Octopus, tree, ಅಕ್ಟೋಪಸ್ ಮರ

ಬೂಮಿಯ ಮೇಲೆ ಬೆಳೆಯುವ ಮರಗಳು ಮಾನವನಿಗೆ ಸಹಕಾರಿ ಎಂಬ ವಿಚಾರ ನಮಗೆಲ್ಲ ಗೊತ್ತು. ಆಕ್ಟೋಪಸ್ ವಿಚಾರವೂ ಸಹ ಅಲ್ಪ ಸ್ವಲ್ಪ ಗೊತ್ತು. ಸದಾ ನೀರಿಲ್ಲಿರುವ ಅಕ್ಟೋಪಸ್ ಲಕ್ಶಾಂತರ ಜಲಚರಗಳಲ್ಲಿ ಒಂದು ಎಂಬ ವಿಚಾರ ಗೊತ್ತಿದೆ. ಜಲಚರ ಅಕ್ಟೋಪಸ್‍ಗೂ, ಮರಕ್ಕೂ ಎಲ್ಲಿಗೆಲ್ಲಿಯ ಸಂಬಂದ. ಕಂಡಿತಾ ಅವೆರಡಕ್ಕೂ ನೇರ ಸಂಬಂದ ಇಲ್ಲ. ಬೂಮಿಯ ಮೇಲಿರುವ ಈ ಮರ ಜಲಚರ ಅಕ್ಟೋಪಸ್ ತಲೆಕೆಳಾಗಾದಂತೆ ಕಾಣುತ್ತದೆ. ಇಶ್ಟೇ, ಅದಕ್ಕೂ ಇದಕ್ಕೂ ಇರುವ ಸಂಬಂದ. ಈ ಕಾರಣಕ್ಕೆ ಈ ಮರಕ್ಕೆ ಅಕ್ಟೋಪಸ್ ಮರ ಎಂಬ ಅನ್ವರ‍್ತನಾಮ.

ಅಕ್ಟೋಪಸ್ ಮರ ಇರುವುದು ಅಮೇರಿಕಾದ ಒರೆಗಾನ್ ಕರಾವಳಿಯಲ್ಲಿ. ಕೇಪ್ ಮೀಯರ್ಸ್ ಲೈಟ್ ಹೌಸ್ ನಿಂದ ಕೆಲವು ನೂರು ಮೀಟರ್ ಅಡಿಗಳಶ್ಟು ದೂರದಲ್ಲಿರುವ ಈ ಮರ ಸಿಟ್ಕಾ ಸ್ಪೂಸ್ ಜಾತಿಗೆ ಸೇರಿದ್ದು. ಇದರ ವಿಶೇಶತೆಯೆಂದರೆ, ವರ‍್ಶದ ಎಲ್ಲಾ ಕಾಲದಲ್ಲೂ ಇದು ಹಸಿರಿನಿಂದ ಕೂಡಿರುವುದು.

ಈ ಮರದ ಕಾಂಡದ ಸುತ್ತಳತೆಯು ನಲವತ್ತಾರು ಅಡಿಗಳಿಗಿಂತ ಹೆಚ್ಚಿದ್ದು, ಇದು ನೆಲದಿಂದ ಮೇಲೆ ಕಂಡು ಬರುವುದಿಲ್ಲ. ಅಲ್ಲಿಂದಲೇ ಇದರ ಆರು ಕೊಂಬೆಗಳು ವಿವಿದ ದಿಕ್ಕಿನಲ್ಲಿ ಕವಲೊಡೆದಿದ್ದು, ಮೇಲ್ಮುಕವಾಗಿ ತಿರುಗುವ ಮುನ್ನ ಹದಿನಾರು ಅಡಿಗಳಶ್ಟು ನೆಲಕ್ಕೆ ಸಮಾಂತರವಾಗಿ ಹಬ್ಬಿದೆ. ಅಲ್ಲಿಂದ ಮುಂದೆ ಅದು ಮೇಲ್ಮುಕವಾಗಿ ತಿರುಗಿ ಬೇರೆಲ್ಲಾ ಮರದ ಕೊಂಬೆಯಂತೆ ಎತ್ತರಕ್ಕೆ ಬೆಳೆದಿದೆ. ಇದರ ಬಗ್ಗೆ ವಿಶ್ಲೇಶಿಸುತ್ತಾ ಸ್ತಳೀಯ ಇತಿಹಾಸಕಾರರು ಮತ್ತು ತಿಲ್ಲಮುಕ್ ಬುಡಕಟ್ಟು ವಂಶಸ್ತರು, ಈ ಮರದ ವಿಚಿತ್ರ ಆಕಾರವು ಬಯಂಕರ ಗಾಳಿಗೆ ಸಿಕ್ಕು ಹರಡಿರಬಹುದು ಇಲ್ಲವೇ ಮಾನವ ನಿರ‍್ಮಿತವಾಗಿರಬಹುದು. ಮೊದಲ ಸಿದ್ದಾಂತದ ಸಾದ್ಯತೆ ಅತಿ ಕಡಿಮೆ.

ಈ ಮರ ಸುಮಾರು ಇನ್ನೂರರಿಂದ ಮುನ್ನೂರು ವರ‍್ಶಗಳಶ್ಟು ಹಳೆಯದು ಎಂದು ನಂಬಲಾಗಿದೆ. ಈ ಮರ ಹಬ್ಬಲು ಮೂಲ ಕಾರಣ ಅಮೆರಿಕನ್-ಇಂಡಿಯನ್ಸ್. ಹರಡಿದ ಕೊಂಬೆಗಳಲ್ಲಿ ತಮ್ಮ ಅಪರ ಕರ‍್ಮಗಳ ದಾರ‍್ಮಿಕ ವಸ್ತುಗಳನ್ನು ಹಾಗೂ ಸಣ್ಣ ದೋಣಿಯಾಕಾರದಲ್ಲಿ ಸತ್ತವರ ಕಳೇಬರವನ್ನು ಇಡಲು ಸ್ತಳೀಯರು ಬಳಸುತ್ತಿದ್ದರು ಎಂಬ ಒಂದು ಸಿದ್ದಾಂತ ಚಾಲ್ತಿಯಲ್ಲಿದೆ. ಆರೆ ಈ ಕುರಿತ ಪುರಾವೆಗಳಿಲ್ಲ.

ಒರೆಗಾನ್ ಕರಾವಳಿಯ ಕಾರ‍್ಯಕರ‍್ತರು ಗಮನಿಸಿದಂತೆ, ಕರಾವಳಿಯಲ್ಲಿರುವ ಅನೇಕ ಮರಗಳನ್ನು ಅಲ್ಲಿನ ಸ್ತಳೀಯ ಬಾರತೀಯ ಸಂಜಾತರು ತಮ್ಮ ವ್ರತಾಚರಣಗೆ ಗುರುತಿಸಿಕೊಂಡಿದ್ದರು. ಈ ಅಕ್ಟೋಪಸ್ ಮರವು ಅದರ ವಿಲಕ್ಶಣ ಹರಡುವಿಕೆಯಿಂದ ಪೂಜ್ಯನೀಯವಾಗಿದ್ದ ಕಾರಣ ಅಲ್ಲಿನ ತಿಲ್ಲಮುಕ್ ಬುಡಕಟ್ಟು ವಂಶಸ್ತರು ಇದರ ಬಳಿ ಸೇರಿ ಕರ‍್ಮಗಳನ್ನು ಆಚರಿಸುತ್ತಿದ್ದರು.

ಈ ಆಕ್ಟೋಪಸ್ ಮರ ಸಣ್ಣದಿರುವಾಗಲೇ, ಕೊಂಬೆಗಳು ಬಳಕು ಸ್ತಿತಿಯಲ್ಲಿದ್ದಾಗಲೇ ಅದನ್ನು ನೆಲಕ್ಕೆ ಸಮಾನಾಂತರವಾಗಿ ವಿಸ್ತರಿಸುವಂತೆ ಬಲಪ್ರಯೋಗ ಮಾಡಿದ್ದಿರಬೇಕು. ಸುಮಾರು ಹದಿನಾರು ಅಡಿ ಹರಡಿದ ನಂತರ ಅವುಗಳ ಮೇಲೆ ಹೇರಿದ್ದ ಬಲಪ್ರಯೋಗವನ್ನು ತೆರವುಗೊಳಿಸಿ, ಊದ್ರ್ವಮುಕವಾಗಿ ಬೆಳೆಯಲು ಅವಕಾಶ ಕಲ್ಪಿಸಿರಬೇಕು. ಹಾಗಾಗಿ ನಂತರದ ದಿನಗಳಲ್ಲಿ ಕೊಂಬೆಗಳು ಲಂಬವಾಗಿ ಬೆಳೆದು ನೂರು ಅಡಿಗಳ ಗಡಿ ಮುಟ್ಟಿರಬೇಕು. ಇದರಿಂದ ಈ ಮರಕ್ಕೆ ಈ ವಿಶಿಶ್ಟ, ವಿಲಕ್ಶಣ ಆಕಾರ ಬಂದಿದೆ.

ಈ ಮರದ ಅಡಿಯಲ್ಲಿ ಒಂದು ಬೋರ‍್ಡ್ ಇದೆ. ಅದರಲ್ಲಿ “ಈ ವಿಶಿಶ್ಟವಾದ ಸಿಟ್ಕಾ ಸ್ಪ್ರೂಸ್ ಮರದ ಆಕಾರದ ಬಗ್ಗೆ ಹಲವಾರು ವರ‍್ಶಗಳಿಂದ ಸಾಕಶ್ಟು ಚರ‍್ಚೆಗಳಾಗಿವೆ. ಇದಕ್ಕೆ ಕಾರಣ ನೈಸರ‍್ಗಿಕ ವಿದ್ಯಮಾನಗಳೇ ಅತವಾ ಸ್ತಳೀಯ ಸಂಜಾತರು ಕಾರಣವೇ ಎಂಬುದು ಇನ್ನೂ ನಿಗೂಡವಾಗಯೇ ಉಳಿದಿದೆ. ಈ ವ್ರುಕ್ಶದ ಸುತ್ತಳತೆ ನಲವತ್ತಾರು ಅಡಿಗಳಿಗಿಂತಾ ಹೆಚ್ಚಿದ್ದು, ಇದಕ್ಕೆ ಯಾವುದೇ ಮೂಲ ಕೇಂದ್ರ ಕಾಂಡ ಇಲ್ಲ. ಇದರ ಕೊಂಬೆಗಳು ನೆಲಕ್ಕೆ ಸಮಾನಾಂತವಾಗಿ ಹದಿನಾರು ಅಡಿಗಳಶ್ಟು ವಿಸ್ತರಿಸಿದ್ದು ನಂತರ ನೂರಾ ಐದು ಅಡಿಗಳಶ್ಟು ಎತ್ತರಕ್ಕೆ ಬೆಳೆದಿವೆ. ಇದು ಅಂದಾಜು 250 ರಿಂದ 300 ವರ‍್ಶಗಳಶ್ಟು ಹಳೆಯದು ಎಂದು ಅಂದಾಜಿಸಲಾಗಿದೆ” ಎಂದಿದೆ.

ಆದುನಿಕ ಅದ್ಬುತಗಳಲ್ಲಿ ಒಂದಾದ ಈ ಮರವನ್ನು ಇನ್ನೂ ಅನೇಕ ಹೆಸರುಗಳಿಂದ. ಮಾನ್ಸ್ಟ್ರೋಸಿಟಿ ಟ್ರೀ, ಕ್ಯಾಂಡೆಲಬ್ರಾ ಟ್ರೀ ಇವೆ ಮುಂತಾದವುಗಳಿಂದ ಗುರುತಿಸಲಾಗುತ್ತದೆ. ಕೌನ್ಸಿಲ್ ಮರ ಎಂದೂ ಸಹ ಕರೆಯಲಾಗುತ್ತದೆ. ಏಕೆಂದರೆ ಜನಾಂಗದ ಹಿರಿಯರು ಇದರ ಅಡಿಯಲ್ಲಿ ಕುಳಿತು ಅನೇಕ ನಿರ‍್ದಾರಗಳನ್ನು ತೆಗೆದುಕೊಳ್ಳುತ್ತಿದ್ದ ಹಾಗೂ ಅನೇಕ ಸಮಾರಂಬಗಳನ್ನು ನಡೆಸುತ್ತಿದ್ದ ಕಾರಣದಿಂದ.

ಆಕ್ಟೋಪಸ್ ಮರ ಈ ದಿನಗಳಲ್ಲಿ ಕೇವಲ ಪ್ರವಾಸಿ ತಾಣವಾಗಿ ಮಾತ್ರ ಉಳಿದಿಲ್ಲ, ಸಸ್ಯವಿಜ್ನಾನದ ಆಶ್ಚರ‍್ಯಕರ ತಾಣವೂ ಇದಾಗಿದೆ. ಪ್ರವಾಸಿ ಸಂದರ‍್ಶಕರಿಗೆ ಹಾಗೂ ತಿಲ್ಲಮುಕ್ ಕೌಂಟಿಯವರಿಗೆ ಅತ್ಯಂತ ಆಕರ‍್ಶಣೀಯ ಸ್ತಳವಾಗಿದೆ. ಅಕ್ಟೋಪಸ್ ಮರದ ಹಿನ್ನಲೆ, ಅದರ ನಿಜವಾದ ವಯಸ್ಸು, ರಹಸ್ಯ ಪೂರ‍್ವದ ಇತಿಹಾಸ, ಅದು ವಿಸ್ತಾರವಾಗಿ ಹರಡಿರುವುದಕ್ಕೆ ಕಾರಣ ಏನೇ ಇರಲಿ, ಅದರ ಬೇಟಿ ನಿರ‍್ವಿವಾದವಾಗಿಯೂ ಆಹ್ಲಾದಕರ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, friendsofcapemeareslighthouse.com, onlyinyourstate.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: