ಶಾಲೆಗೆ ನಾನು ಹೋಗಬೇಕು

– ವೆಂಕಟೇಶ ಚಾಗಿ.

ಶಾಲೆಗೆ ತಪ್ಪದೆ ಹೋಗಬೇಕು
ಅಕ್ಶರ ನಾನು ಕಲಿಯಬೇಕು
ಗುರುಗಳು ಕಲಿಸಿದ ಪಾಟವನೆಲ್ಲ
ಮರೆಯದೆ ನಾನು ಕಲಿಯಬೇಕು

ಅಆಇಈ ಓದಬೇಕು
ಅಲ್ಲಿ ಇಲ್ಲಿ ನೆಗೆಯಬೇಕು
ತಪ್ಪದೆ ಪಾಟವ ಓದುವ ಬರೆವ
ಜಾಣ ಮಗುವು ನಾನಾಗಬೇಕು

ಪಟಪಟ ಮಗ್ಗಿಯ ಹೇಳಬೇಕು
ಲೆಕ್ಕವ ಸರಸರ ಮಾಡಬೇಕು
ಗುರುಗಳು ಕೇಳಿದ ಪ್ರಶ್ನೆಗೆ ಉತ್ತರ
ನಾನೇ ಮೊದಲು ಹೇಳಬೇಕು

ಸಸ್ಯದ ಬಗ್ಗೆ ತಿಳಿಯಬೇಕು
ಪರಿಸರ ರಕ್ಶಣೆ ಮಾಡಬೇಕು
ಸ್ವಚ್ಚತೆ ಪಾಟವ ಮರೆಯದೆ ಎಂದೂ
ನಿರೋಗಿಯಾಗಿ ಬಾಳಬೇಕು

ಗೆಳೆಯರ ಜೊತೆಗೆ ಆಡಬೇಕು
ಸ್ಪರ‍್ದೆಗಳಲ್ಲಿ ನಾನಿರಬೇಕು
ಒಳ್ಳೆಯ ಮಗುವು ನಾನಾಗಲೆಂದು
ಶಾಲೆಗೆ ನಾನು ಹೋಗಬೇಕು

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: