ಮಾರುಕಟ್ಟೆಗೆ ಮತ್ತೆ ಹೊಸದಾಗಿ ಬಂದ ಸ್ಯಾಮ್‍ಸಂಗ್

– ಆದರ‍್ಶ್ ಯು. ಎಂ.

ಸ್ಯಾಮ್‍ಸಂಗ್ M20

ಅದೊಂದು ಕಾಲವಿತ್ತು ಯಾರ ಕೈಯಲ್ಲಿ ನೋಡಿದರೂ ಸ್ಯಾಮ್‍ಸಂಗ್ ಮೊಬೈಲುಗಳೇ, ಆದರೆ ಬಳಿಕ ಸ್ಯಾಮ್‍ಸಂಗ್ ದುಬಾರಿ ಬೆಲೆಗೆ ಕಡಿಮೆ ಸೌಕರ‍್ಯಗಳನ್ನು ಕೊಡಲು ಶುರುಮಾಡಿದ ನಂತರ ಜನ ಸ್ಯಾಮ್‍ಸಂಗ್ ಮೊಬೈಲುಗಳಿಂದ ದೂರ ಸರಿಯಲು ಶುರು ಮಾಡಿದರು. ಅದಕ್ಕೆ ಸರಿಯಾಗಿ ಚೈನಾದ ಕಂಪನಿಗಳಾದ ರೆಡ್ಮಿ, ಅಸೂಸ್, ರಿಯಲ್ ಮೀ ಮುಂತಾದವುಗಳು ಒಳ್ಳೊಳ್ಳೆಯ ಸೌಕರ‍್ಯಗಳನ್ನು ಕಡಿಮೆ ಬೆಲೆಗೆ ನೀಡಿ ಎಲ್ಲರ ಕಣ್ಮಣಿಗಳಾದವು. ಆದರೆ ಈಗ ಸ್ಯಾಮ್‍ಸಂಗ್ ಮತ್ತೆ ಎಲ್ಲರಿಗೂ ನಿಬ್ಬೆರಗಾಗುವಂತಹ ಕಮ್ಮಿ ಬೆಲೆಯ ಮೊಬೈಲೊಂದನ್ನು ತಂದಿದೆ, ಅದುವೇ ಸ್ಯಾಮ್‍ಸಂಗ್ ಎಂ 20.

ಸ್ಯಾಮ್‍ಸಂಗ್ ಎಂ 20 ರಲ್ಲಿ ಹೊಸತೇನಿದೆ?

ಈ ಮೊಬೈಲ್ 6.3 ಇಂಚಿನ ಸ್ಪರ‍್ಶ ಪರದೆ ಹೊಂದಿದೆ. ಇದು ಟಿಎಪ್‍ಟಿ ಪರದೆಯನ್ನು ಹೊಂದಿದೆ, ಇತ್ತೀಚಿನ ಹೆಚ್ಚಿನ ಮೊಬೈಲುಗಳಲ್ಲಿ ಎಲ್‍ಸಿಡಿ ಅತವಾ ಸ್ಯಾಮ್‍ಸಂಗ್ ಮೊಬೈಲುಗಳಲ್ಲಿ ಅಮೋಲೆಡ್ ಪರದೆಯಿರುತ್ತೆ. ಇದರಲ್ಲಿರುವ ಪಿಕ್ಸೆಲ್‍ಗಳನ್ನು ಎಣಿಸುವುದಾದರೆ 409 ಪಿಕ್ಸೆಲ್ ಗಳಾಗುತ್ತವೆ. ಇದರ ವಿನ್ಯಾಸ ಗಮನಿಸುವುದಾದರೆ ಪರದೆಯ ಮೇಲೆ ಮಂಜಿನ ಹನಿ ಬಿದ್ದಂತಹ, ಇತ್ತೀಚೆಗೆ ಚಾಲ್ತಿಯಲ್ಲಿರುವ ವಿನ್ಯಾಸವಿದೆ. ಇದನ್ನೇ ರಿಯಲ್ ಮಿ, ಒನ್ ಪ್ಲಸ್ 6ಟಿ ಪೋನ್ ಗಳಲ್ಲೂ ಕಾಣಬಹುದು, ಇದನ್ನು ಸ್ಯಾಮ್‍ಸಂಗ್ ‘ಇನ್‍ಪಿನಿಟಿ ವಿ ಡಿಸ್‍ಪ್ಲೇ’ ಅಂತ ಕರೆದಿದೆ.

ಇನ್ನು ಗುಣಮಟ್ಟ ನೋಡೋದಾದರೆ ಪರದೆ ಗೀರುವಿಕೆಯ ತಡೆಗೆ ಗೋರಿಲ್ಲಾ ಗ್ಲಾಸ್ ಸುರಕ್ಶತೆಯಿಲ್ಲ. ಅದರ ಬದಲಿಗೆ ಅಸಾಹಿ ಡ್ರಾಗನ್ ಟೈಲ್ ಪ್ರೋ ಸುರಕ್ಶತೆ ನೀಡಲಾಗಿದೆ. ಮೊಬೈಲ್ ಹಿಂದೆ ಗಾಜು ಇಲ್ಲವೇ ಲೋಹದ ಹಿಂಬಾಗ ನೀಡಿಲ್ಲ, ಬದಲಿಗೆ ಪಾಲಿ ಕಾರ‍್ಬನೇಟ್ ಅಂದರೆ ಪ್ಲಾಸ್ಟಿಕ್ ನ ಹಿಂಬಾಗ ನೀಡಲಾಗಿದೆ. ಇದರಿಂದಾಗಿ ಮೊಬೈಲ್ ಮುಂದಿನಿಂದ ಕಾಣುವಶ್ಟು ಚಂದವಾಗಿ ಹಿಂದಿನಿಂದ ಕಾಣುವುದಿಲ್ಲ.

‌ಇದರಲ್ಲಿ ಇತ್ತೀಚಿನ ಹೆಚ್ಚಿನ ಮೊಬೈಲ್ ಗಳಂತೆ ಹಿಂಬದಿ ಎರಡು ಕ್ಯಾಮೆರಾಗಳಿವೆ. ಒಂದು ಹದಿಮೂರು ಮೆಗಾ ಪಿಕ್ಸೆಲ್ಲಿನದಾದರೆ ಇನ್ನೊಂದು ಐದು ಮೆಗಾ ಪಿಕ್ಸೆಲ್ಲಿನದು. ಈ ಐದು ಮೆಗಾ ಪಿಕ್ಸೆಲ್ ಕ್ಯಾಮೆರಾ 120 ಡಿಗ್ರಿ ಕೋನದಶ್ಟು ಅಗಲವಾದ ಪೋಟೋ ವನ್ನು ತೆಗೆಯಬಲ್ಲದಾಗಿದೆ. ಇದು ಈ ದರದಲ್ಲಿ ಸಿಗುತ್ತಿರುವುದು ಸ್ಯಾಮ್‍ಸಂಗ್ ಎಂ 20 ಮೊಬೈಲ್ ನಲ್ಲಿ ಮಾತ್ರ. ಮುಂಬದಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ನದ್ದಾಗಿದ್ದು, ಇದಕ್ಕೆ ಬೆಳಕು ನೀಡಲು ಬೇರೆಯಾದ ಪ್ಲಾಶ್ ಇಲ್ಲ, ಅದರ ಬದಲು ಪರದೆಯೇ ಆ ಸಮಯಕ್ಕೆ ಬಿಳಿಯಾಗಿ ಸೆಲ್ಪಿ ಪೋಟೋಗೆ ಬೆಳಕನ್ನು ನೀಡುತ್ತದೆ.

‌ಈ ಮೊಬೈಲಿನ ಮತ್ತೊಂದು ಒಳ್ಳೆಯ ವಿಚಾರ ಅಂದರೆ ಇದರ 5000 mah ನಶ್ಟು ಶಕ್ತಿಯಿರುವ ಬ್ಯಾಟರಿ ಹಾಗೂ ಇದನ್ನು ಬೇಗ ಚಾರ‍್ಜ್ ಮಾಡಬಲ್ಲ ‘ತ್ವರಿತ ಚಾರ‍್ಜಿಂಗ್’ ಅತವಾ ಕ್ವಿಕ್ ಚಾರ‍್ಜಿಂಗ್ ಇದರಲ್ಲಿದೆ. ಇದರ ಜೊತೆಗೆ ಸ್ಯಾಮ್‍ಸಂಗ್ 15 ವ್ಯಾಟ್ ಶಕ್ತಿಯ ಕ್ವಿಕ್ ಚಾರ‍್ಜ್ ಮಾಡಬಲ್ಲ ಚಾರ‍್ಜರ್ ಅನ್ನು ನೀಡುತ್ತಿದೆ. ಈ ಮೂರು ವಿಶಯಗಳಿಂದ ಸ್ಮಾಮ್‍ಸಂಗ್ ಈ ಕಡಿಮೆ ದರದ ಮೊಬೈಲಿನ ವಿಬಾಗದಲ್ಲಿ ಕಿಚ್ಚನ್ನೇ ಹಚ್ಚಿದೆ ಅನ್ನಬಹುದು.

‌ಈ ಮೊಬೈಲಿನಲ್ಲಿ ಎರಡು ಸಿಮ್ ಜೊತೆಗೆ ಮೆಮೋರಿ ಕಾರ‍್ಡ್ ಬಳಸಲು ಬೇರೆಯೇ ಆದ ಜಾಗ ನೀಡಲಾಗಿದೆ. ಇದು ಒಳ್ಳೆಯ ಅಂಶ, ಜೊತೆಗೆ ಎರಡು ಸಿಮ್ ಗಳಲ್ಲೂ ಒಂದೇ ಕಾಲಕ್ಕೆ 4ಜಿ ಸಿಮ್ ಅನ್ನು ಬಳಸಬಹುದಾಗಿದೆ. ಇದರಲ್ಲಿ 3.5 ಮಿಲಿ ಮೀಟರ್ ನ ದನಿಕಿಂಡಿ(audio jack) ಇರುವುದರಿಂದ ಯಾವ ಇಯರ್ ಪೋನನ್ನು ಬೇಕಿದ್ದರೂ ಬಳಸಬಹುದು.

ಇವನ್ನೆಲ್ಲಾ ಇನ್ನೂ ಚೆನ್ನಾಗಿ ಕೊಡಬಹುದಿತ್ತು?

ಇದರಲ್ಲಿ ಕೆಲಸ ಮಾಡುತ್ತಿರುವ ತಂತ್ರಾಂಶ android ಓರಿಯೋ ಆಗಿದ್ದು, 2019 ರ android ನ ಹೊಸ ತಂತ್ರಾಂಶ ‘ಪೈ’ ಕೊಡದಿರುವುದು ನಿರಾಸೆಯ ವಿಚಾರ. ಹಾಗೆಯೇ ಅದರ ಮೇಲೆ ಸ್ಯಾಮ್‍ಸಂಗ್ ತನ್ನ ಇತ್ತೀಚಿನ ‘One UI’ ತಂತ್ರಾಂಶ ನೀಡದೇ ತನ್ನ ಹಳೆಯ ‘Experience UI’ ಅನ್ನೇ ನೀಡಿರುವುದು ಕೂಡಾ ಸ್ವಲ್ಪ ಬೇಸರದ ಸಂಗತಿ. ಇದರಲ್ಲಿ ಬಳಸಿರುವ ‘Exynos 7904’ ಪ್ರೋಸೆಸರ್ ಕೂಡಾ ಗೇಮ್ ಗಳು ಮುಂತಾದ ಹೆಚ್ಚಿನ ಶಕ್ತಿ ಬೇಡುವ ಕೆಲಸಗಳಿಗೆ ಹೆಚ್ಚಾಗಿ ಹೊಂದಲಾರದು, ಇದಕ್ಕಿಂತ ಹೆಚ್ಚಿನ ಶಕ್ತಿ ಇರುವ ಪ್ರೋಸೆಸರ್ ಅನ್ನು ಸ್ಯಾಮ್ ಸಂಗ್ ಬಳಸಬಹುದಿತ್ತು.

ಇದರ ಬೆಲೆ 3 ಜಿಬಿ ರ‍್ಯಾಮ್, 32 ಜಿಬಿ ಮೆಮೋರಿ ಸಾಮರ‍್ತ್ಯ ದ ಮೊಬೈಲಿಗೆ 10,990 ರೂಪಾಯಿಗಳಾದರೆ, 4 ಜಿಬಿ-64 ಜಿಬಿ ಮೆಮೋರಿ ಯ ಮೊಬೈಲಿಗೆ 12,990 ರೂಪಾಯಿಗಳು. ಒಟ್ಟಾರೆಯಾಗಿ ಈ ಮೊಬೈಲಿನಲ್ಲಿ ಕಡಿಮೆ ದರದ ಮೊಬೈಲಿನಲ್ಲಿ ಇರಬೇಕಾದ ಹೆಚ್ಚಿನ ವಿಚಾರಗಳಿವೆ. ಇದರ ಜೊತೆಗೆ ಉಳಿದ ಮೊಬೈಲ್ ಕಂಪನಿಗಳು ಹೀಗೆಯೇ ಜಿದ್ದಿಗೆ ಬಿದ್ದು ಈ ರೀತಿಯ ಒಳ್ಳೆ ಅಂಶಗಳನ್ನು ಕೊಡಲು ಮುಂದಾದರೆ ಗ್ರಾಹಕನಿಗೆ ಎಲ್ಲಾ ರೀತಿಯಲ್ಲೂ ಒಳ್ಳೆಯ ದಿನಗಳೇ ಮುಂದೆ ಕಾದಿದೆ.

(ಚಿತ್ರ ಸೆಲೆ: techeology.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.