ಬಸವಣ್ಣನ ವಚನಗಳ ಓದು

– ಸಿ.ಪಿ.ನಾಗರಾಜ.

ಬಸವಣ್ಣ,, Basavanna

——————————————————

ಹೆಸರು: ಬಸವಣ್ಣ

ಕಾಲ: ಕ್ರಿ.ಶ.1131

ಹುಟ್ಟಿದ ಊರು: ಬಾಗೇವಾಡಿ, ಬಿಜಾಪುರ ಜಿಲ್ಲೆ.

ತಂದೆ: ಮಾದರಸ

ತಾಯಿ: ಮಾದಲಾಂಬಿಕೆ

ಹೆಂಡತಿಯರು:  ಗಂಗಾಂಬಿಕೆ, ನೀಲಾಂಬಿಕೆ

ಗುರು: ಜಾತವೇದ ಮುನಿ

ವಿದ್ಯೆ: ಕೂಡಲ ಸಂಗಮ, ಹುನಗುಂದ ತಾಲ್ಲೂಕು. ಬಿಜಾಪುರ ಜಿಲ್ಲೆ.

ಕಸುಬು: 1) ಕರಣಿಕ (ಲೆಕ್ಕ ಬರೆಯುವವನು)

2) ಕಜಾನೆಯ/ಬಂಡಾರದ/ಹಣಕಾಸಿನ ಆಡಳಿತಗಾರ.

[ ಮಂಗಳವಾಡದಲ್ಲಿ (ಸೊಲ್ಲಾಪುರ ಜಿಲ್ಲೆ, ಮಹಾರಾಶ್ಟ್ರ ರಾಜ್ಯ) ಮಾಂಡಲಿಕನಾಗಿದ್ದ ಬಿಜ್ಜಳನ ಬಳಿಯಲ್ಲಿ ಬಸವಣ್ಣ ಮೊದಲು ಕರಣಿಕನಾಗಿ ಕೆಲಸ ಮಾಡಿದರು. ಅನಂತರ ರಾಜನಾದ ಬಿಜ್ಜಳನು ಕಲ್ಯಾಣವನ್ನು(ಬಸವ ಕಲ್ಯಾಣ, ಬೀದರ ಜಿಲ್ಲೆ) ತನ್ನ ರಾಜದಾನಿಯನ್ನಾಗಿ ಮಾಡಿಕೊಂಡಾಗ, ಅಲ್ಲಿ ಬಿಜ್ಜಳನ ಕಜಾನೆಯ/ಹಣಕಾಸಿನ ಆಡಳಿತಗಾರನಾಗಿ ಕೆಲಸ ಮಾಡಿದರು. ]

ದೊರೆತಿರುವ ವಚನಗಳು: 1406

ವಚನಗಳ ಅಂಕಿತನಾಮ: ಕೂಡಲಸಂಗಮದೇವ

——————————————————

ಕೊಂಬೆಯ ಮೇಲಣ ಮರ್ಕಟನಂತೆ
ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿರಿಸು ನಿಮ್ಮ ಧರ್ಮ.

ವ್ಯಕ್ತಿಯ ಮನದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಒಳಮಿಡಿತಗಳ ತೊಳಲಾಟವನ್ನು/ತುಯ್ದಾಟವನ್ನು ಈ ವಚನದಲ್ಲಿ ಹೇಳಲಾಗಿದೆ. ಇದು ಮೇಲು ನೋಟಕ್ಕೆ ಬಸವಣ್ಣನ ಮನದ ತೊಳಲಾಟದಂತೆ ಕಂಡುಬಂದರೂ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿಯೂ ಉಂಟಾಗುವ ಹೊಯ್ದಾಟವಾಗಿದೆ.

( ಕೊಂಬೆ=ರೆಂಬೆ/ಟೊಂಗೆ/ಮರದಲ್ಲಿ ಕವಲೊಡೆದು ಬೆಳೆದಿರುವ ಟಿಸಿಲು; ಮೇಲಣ=ಮೇಲಿರುವ/ತುದಿಯಲ್ಲಿರುವ; ಮರ್ಕಟನ+ಅಂತೆ; ಮರ್ಕಟ=ಕೋತಿ/ಮಂಗ/ಕಪಿ; ಅಂತೆ=ಹಾಗೆ/ಆ ರೀತಿ; ಲಂಘಿಸುವುದು+ಎನ್ನ; ಲಂಘನ=ಹಾರುವಿಕೆ/ಜಿಗಿತ/ನೆಗೆತ; ಲಂಘಿಸುವುದು=ಹಾರುವುದು/ನೆಗೆಯುವುದು/ಜಿಗಿಯುವುದು; ಎನ್ನ=ನನ್ನ; ಮನ=ಮನಸ್ಸು;

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು=ಮರದ ಕೊಂಬೆಯ ಮೇಲೆ ಕುಳಿತಿರುವ ಕೋತಿಯು ಒಂದು ಗಳಿಗೆಯಾದರೂ ತಾನಿದ್ದ ಕಡೆಯಲ್ಲಿ ಇರದೆ, ಮರದಲ್ಲಿರುವ ಹಲವಾರು ಕೊಂಬೆರೆಂಬೆಗಳ ಮೇಲೆ ಪದೇ ಪದೇ ನೆಗೆದಾಡುತ್ತಿರುವಂತೆ ನನ್ನ ಮನಸ್ಸು ಹತ್ತಾರು ಸಂಗತಿಗಳ ಕಡೆಗೆ ಆಸೆಯಿಂದ ಹಂಬಲಿಸುತ್ತ/ಚಿಂತಿಸುತ್ತ/ಕಳವಳಿಸುತ್ತ/ಹೆದರಿಕೆಯಿಂದ ತತ್ತರಿಸುತ್ತ/ಕೋಪದಿಂದ ಕೆರಳುತ್ತ/ಹಿಂಜರಿಕೆಯಿಂದ ನರಳುತ್ತ ನೂರಾರು ಬಗೆಯ ಒಳಮಿಡಿತಗಳಿಂದ ತುಡಿಯುತ್ತಿದೆ;

ನಿಂದ+ಅಲ್ಲಿ; ನಿಂದ=ನಿಂತುಕೊಂಡ; ಅಲ್ಲಿ=ಎಡೆ/ಜಾಗ/ನೆಲೆ; ನಿಂದಲ್ಲಿ=ನಿಂತಿರುವ ಎಡೆಯಲ್ಲಿ/ಇರುವ ನೆಲೆಯಲ್ಲಿ; ನಿಲ್+ಅಲ್+ಈಯದು+ಎನ್ನ; ನಿಲ್=ನಿಂತುಕೊಳ್ಳವುದು; ನಿಲಲ್=ನಿಂತುಕೊಂಡಿರಲು/ನಿಂತಿರಲು/ಇದ್ದ ಕಡೆಯಲ್ಲಿಯೇ ಇರಲು; ಈ=ಕೊಡು/ಅವಕಾಶವನ್ನು ನೀಡು; ಈಯದು=ಕೊಡುವುದಿಲ್ಲ/ಬಿಡುವುದಿಲ್ಲ;

ನಿಂದಲ್ಲಿ ನಿಲಲೀಯದೆನ್ನ ಮನವು=ಯಾವುದೇ ಸಂಗತಿಯನ್ನು/ವಿಚಾರವನ್ನು ಕುರಿತು ಒಂದು ತೀರ‍್ಮಾನ/ನಿಲುವು/ನಿರ‍್ಣಯಕ್ಕೆ ಬರಲಾಗದೆ ನನ್ನ ಮನಸ್ಸು ಇಬ್ಬಗೆಯ ಸೆಳೆತದಲ್ಲಿ ತುಯ್ದಾಡುತ್ತಿದೆ/ತೊಳಲಾಡುತ್ತಿದೆ;

ಹೊಂದಿದ+ಅಲ್ಲಿ; ಹೊಂದು=ಪಡೆ/ಗಳಿಸು/ಕೂಡು/ಸೇರು; ಹೊಂದಿದಲ್ಲಿ=ಪಡೆದುಕೊಂಡಿರುವುದರಲ್ಲಿ/ಗಳಿಸಿರುವುದರಲ್ಲಿ/ಕೂಡಿರುವ ಎಡೆಯಲ್ಲಿ; ಹೊಂದಲು+ಈಯದು+ಎನ್ನ; ಹೊಂದಲು=ಪಡೆಯಲು/ಸೇರಲು;

ಹೊಂದಿದಲ್ಲಿ ಹೊಂದಲೀಯದೆನ್ನ ಮನವು=ಬಾಳುತ್ತಿರುವ ನೆಲೆಯಲ್ಲಿ ನೆಮ್ಮದಿಯಿಂದ ಇರಲು ನನ್ನ ಮನಸ್ಸು ಅವಕಾಶವನ್ನು ನೀಡುತ್ತಿಲ್ಲ/ನನ್ನ ಮನಸ್ಸು ಬಿಡುತ್ತಿಲ್ಲ. ಬದುಕಿನ ಆಗುಹೋಗುಗಳಲ್ಲಿ ಒಂದಲ್ಲ ಒಂದು ಬಗೆಯ ಅರೆಕೊರೆಗಳನ್ನು ಕಾಣುತ್ತ, ಸದಾ ಕಾಲ ಒತ್ತಡ/ಆತಂಕ/ತಲ್ಲಣ/ಕೋಪ/ತಾಪಗಳಿಂದ ಮನಸ್ಸು ತತ್ತರಿಸುತ್ತಿದೆ.

ಕೂಡಲು=ಎರಡು ನದಿಗಳು ಜತೆಗೂಡುವ ಜಾಗ; ಸಂಗಮ=ಶಿವ/ಈಶ್ವರ; ಕೂಡಲ ಸಂಗಮ=ಬಿಜಾಪುರ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿರುವ ಒಂದು ಊರು. ಕ್ರಿಶ್ಣ ಮತ್ತು ಮಲಪ್ರಬಾ ಎಂಬ ಹೆಸರಿನ ಎರಡು ನದಿಗಳು ಇಲ್ಲಿ ಜತೆಗೂಡುತ್ತವೆ. ನದಿಗಳು ಕೂಡುವ ಜಾಗದ ದಂಡೆಯಲ್ಲಿ ಸಂಗಮೇಶ್ವರ ದೇವಾಲಯವಿದೆ. ಆದ್ದರಿಂದ ಈ ಊರಿಗೆ ಕೂಡಲ ಸಂಗಮ ಎಂಬ ಹೆಸರು ಬಂದಿದೆ. ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು ಮತ್ತು ಬಸವಣ್ಣನ ವಚನಗಳ ಅಂಕಿತನಾಮ;

ನಿಮ್ಮ=ದೇವರ/ಶಿವನ/ಈಶ್ವರನ; ಚರಣ=ಪಾದ/ಅಡಿ/ಕಾಲು; ಕಮಲ=ತಾವರೆ/ಒಂದು ಬಗೆಯ ಹೂವು; ಭ್ರಮರನ್+ಆಗಿ+ಇರಿಸು; ಭ್ರಮರ=ದುಂಬಿ/ತುಂಬಿ/ಬಂಡುಣಿ; ಇರಿಸು=ಇಡು/ಇರುವಂತೆ ಮಾಡು; ‘ ಚರಣಕಮಲ ’ ಮತ್ತು ‘ ಭ್ರಮರ ’ ಎಂಬ ಪದಗಳು ರೂಪಕಗಳಾಗಿ ಬಳಕೆಗೊಂಡಿವೆ; ಶಿವನ ಪಾದವನ್ನು ಕಮಲವೆಂದು ಮತ್ತು ಶಿವಶರಣನಾದ ವಚನಕಾರನು ತನ್ನನ್ನು ತಾನು ಭ್ರಮರವೆಂದು ಚಿತ್ರಿಸಿಕೊಂಡಿದ್ದಾನೆ; ಧರ್ಮ=ಕರುಣೆ/ದಯೆ/ಅನುಗ್ರಹ;

ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ=ದುಂಬಿಯು ಹೇಗೆ ತಾವರೆಯ ಹೂವಿನಲ್ಲಿರುವ ಮಕರಂದವನ್ನು ಹೀರಿಕೊಂಡು ಬಾಳುತ್ತದೆಯೋ ಅಂತೆಯೇ ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಪಡೆದುಕೊಂಡು ನೆಮ್ಮದಿಯಿಂದ ಬಾಳುವಂತೆ ನನ್ನ ಮನಸ್ಸಿಗೆ ಪ್ರೇರಣೆಯನ್ನು ನೀಡು ಎಂದು ಶಿವನಲ್ಲಿ/ದೇವರಲ್ಲಿ ವಚನಕಾರನು ಮೊರೆಯಿಡುತ್ತಿದ್ದಾನೆ.)

ಇನ್ನೇವೆನಿನ್ನೇವೆನಯ್ಯಾ
ಎನ್ನ ಮನವೆಂಬ ಮರ್ಕಟನ ದಾಳಿ
ಘನವಾಯಿತ್ತು
ಎನ್ನ ನಿಂದಲ್ಲಿ ನಿಲ್ಲಲೀಯದು
ಎನ್ನ ಕುಳಿತಲ್ಲಿ ಕುಳ್ಳಿರಲೀಯದು
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ
ಕೂಡಲಸಂಗಮದೇವಾ
ಈ ಮನವೆಂಬ ಮರ್ಕಟನ
ದಾಳಿಯನೆಂದಿಗೆ ನೀಗಿ
ಎಂದು ನಿಮ್ಮನೊಡಗೂಡುವೆನಯ್ಯಾ.

ನೂರೆಂಟು ಬಗೆಯ ಒಳಮಿಡಿತಗಳಿಂದ ಅತ್ತ/ಇತ್ತ/ಎತ್ತೆತ್ತಲೋ ತುಡಿಯುತ್ತಿರುವ ಮನಸ್ಸನ್ನು ವ್ಯಕ್ತಿಯು ತನ್ನ ಹತೋಟಿಗೆ ತಂದುಕೊಂಡು, ಅದನ್ನು ಒಳಿತಿನ ನಡೆನುಡಿಗಳಲ್ಲಿ ನೆಲೆಗೊಳಿಸಬೇಕೆಂಬ ಹಂಬಲದಿಂದ ಪರಿತಪಿಸುತ್ತಿರುವುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಇನ್ನು+ಏವೆನ್+ಇನ್ನು+ಏವೆನ್+ಅಯ್ಯಾ; ಇನ್ನು=ಮತ್ತೆ/ಬೇರೆ; ಏವೆನ್=ಏನು ಮಾಡಲಿ/ಏನು ತಾನೆ ಮಾಡುವೆನು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಎನ್ನ=ನನ್ನ; ಮನ+ಎಂಬ; ಮನ=ಮನಸ್ಸು; ಎಂಬ=ಎನ್ನುವ; ಮರ್ಕಟ=ಕೋತಿ/ಮಂಗ/ಕಪಿ; ದಾಳಿ=ಲಗ್ಗೆ/ಮುತ್ತಿಗೆ/ಆಕ್ರಮಣ/ಮಯ್ ಮೇಲೆ ಏರಿಬರುವುದು; ಘನ+ಆಯಿತ್ತು; ಘನ=ದೊಡ್ಡದು/ಹೆಚ್ಚಿನ ಕಸುವುಳ್ಳದ್ದು/ದಟ್ಟವಾದುದು; ಆಯಿತ್ತು=ಆಗಿರುವುದು;

ಇನ್ನೇವೆನಿನ್ನೇವೆನಯ್ಯಾ=ಇನ್ನು ಮುಂದೆ ನಾನು ಏನು ತಾನೆ ಮಾಡಲಿ/ಏನನ್ನು ಮಾಡಲಾಗದ ನೆಲೆಯಲ್ಲಿ ನಾನು ಸಿಲುಕಿ ಒದ್ದಾಡುತ್ತಿದ್ದೇನೆ;

ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು=ನನ್ನ ಮನಸ್ಸಿನಲ್ಲಿ ನೂರಾರು ಬಗೆಯ ಒಳಮಿಡಿತಗಳ ತಾಕಲಾಟ ಹೆಚ್ಚಾಗಿದೆ. ಒಲವು/ನಲಿವು/ಕೋಪ/ತಾಪ/ಹೆದರಿಕೆ/ನಿರಾಶೆ/ಹಿಂಜರಿಕೆ/ಸೇಡು/ಅಸೂಯೆ ಮುಂತಾದ ಬಗೆಬಗೆಯ ಒಳಮಿಡಿತಗಳು ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ನಿರಂತರವಾಗಿ ಮೂಡುತ್ತಿರುತ್ತವೆ. ಇವುಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದು ವ್ಯಕ್ತಿಯ ಪಾಲಿಗೆ ಬಹು ದೊಡ್ಡ ಸವಾಲಿನ ಕೆಲಸವಾಗಿರುತ್ತದೆ. ಒಂದು ಗಳಿಗೆಯಾದರೂ ಇದ್ದ ಕಡೆಯಲ್ಲಿ ಇರಲಾರದೆ ಅತ್ತಿತ್ತ ನೆಗೆದಾಡುತ್ತ, ಯಾವುದಾದರೊಂದು ಬಗೆಯ ಕ್ರಿಯೆಯಲ್ಲಿ ತೊಡಗಿರುವ ಕೋತಿಯ ವರ‍್ತನೆಯನ್ನು ಮಾನವ ಜೀವಿಯ ಮನಸ್ಸಿನ ತಾಕಲಾಟವನ್ನು ಸೂಚಿಸುವುದಕ್ಕೆ ಒಂದು ರೂಪಕವಾಗಿ ಚಿತ್ರಿಸಲಾಗಿದೆ;

ನಿಂದ+ಅಲ್ಲಿ; ನಿಂದ=ನಿಂತುಕೊಂಡ; ನಿಂದಲ್ಲಿ=ನಿಂತುಕೊಂಡಿರುವ ಎಡೆಯಲ್ಲಿ/ನೆಲೆಯಲ್ಲಿ/ಜಾಗದಲ್ಲಿ; ನಿಲ್+ಅಲ್+ಈಯದು; ನಿಲ್=ನಿಂತುಕೊಳ್ಳುವುದು; ನಿಲ್ಲಲ್=ನಿಂತುಕೊಳ್ಳಲು; ಈ=ಕೊಡು/ಅವಕಾಶವನ್ನು ನೀಡುವುದು; ಈಯದು=ಕೊಡುತ್ತಿಲ್ಲ/ಬಿಡುತ್ತಿಲ್ಲ; ಕುಳಿತ+ಅಲ್ಲಿ; ಕುಳ್=ಕುಳಿತುಕೊಳ್ಳುವುದು; ಕುಳಿತ=ಕುಂತಿರುವ; ಅಲ್ಲಿ=ಎಡೆಯಲ್ಲಿ/ಜಾಗದಲ್ಲಿ/ನೆಲೆಯಲ್ಲಿ; ಕುಳ್ಳಿರಲ್+ಈಯದು; ಕುಳ್ಳಿರಲ್=ಕುಳಿತುಕೊಂಡಿರಲು;

ಎನ್ನ ನಿಂದಲ್ಲಿ ನಿಲ್ಲಲೀಯದು ಎನ್ನ ಕುಳಿತಲ್ಲಿ ಕುಳ್ಳಿರಲೀಯದು=ಯಾವುದೇ ಒಳ್ಳೆಯ ಕೆಲಸದಲ್ಲಿ ತೊಡಗಲು ಬಿಡುತ್ತಿಲ್ಲ/ಮನದಲ್ಲಿ ಸದಾಕಾಲ ಒಂದಲ್ಲ ಒಂದು ಬಗೆಯ ಒತ್ತಡ/ಕಳವಳ/ಸಂಕಟ/ಹಿಂಜರಿಕೆಯ ಒಳಮಿಡಿತಗಳೇ ತುಂಬಿಕೊಂಡು ಒಳ್ಳೆಯ ಕೆಲಸವನ್ನು ಮಾಡಲು ಆಗುತ್ತಿಲ್ಲ;

ಕ್ಷಣ+ಅಲ್ಲಿ; ಕ್ಷಣ=ಗಳಿಗೆ/ಕಾಲದ ಚಿಕ್ಕ ಪ್ರಮಾಣ; ಕ್ಷಣದಲ್ಲಿ=ಗಳಿಗೆಯಲ್ಲಿ; ಪಾತಾಳ=ದೇವಲೋಕ/ಬೂಲೋಕ/ಪಾತಾಳ ಲೋಕ ಎಂಬ ಮೂರು ಲೋಕಗಳು ಇರುವುದಾಗಿಯೂ, ಬೂಲೋಕದ ಮೇಲುಗಡೆಯಲ್ಲಿ ದೇವಲೋಕವು ಮತ್ತು ಬೂಲೋಕದ ಕೆಳಗಡೆಯಲ್ಲಿ ಪಾತಾಳ ಲೋಕವಿದೆಯೆಂಬ ಕಲ್ಪನೆಯು ಜನಮನದಲ್ಲಿದೆ; ಐದುತ್ತ+ಇದೆ;

ಎಯ್ದು >ಐದು=ಬರು/ಸಮೀಪಿಸು; ಐದುತ್ತ=ಬರುತ್ತ/ಸಮೀಪಿಸುತ್ತ/ಬಳಿಸಾರುತ್ತ; ಇದೆ=ಇರುವುದು; ಆಕಾಶ=ಗಗನ/ಬಾನು/ಮುಗಿಲು; ದಿಕ್+ದೆಸೆ; ದಿಕ್ಕು=ದೇಶ/ಸೀಮೆ/ನೆಲೆ; ದೆಸೆ=ದಿಕ್ಕು ; ದಿಗ್ದೆಸೆಗೆ=ಎಲ್ಲಾ ಕಡೆಗೆ/ಜಾಗಕ್ಕೆ/ನೆಲೆಗೆ;

ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ=ಮನಸ್ಸಿನ ಒಳಮಿಡಿತಗಳಾದ ಒಲವು/ನೋವು/ನಲಿವು/ಕಾಮ/ಕೋಪ/ತಾಪ/ಅಂಜಿಕೆ/ಹಿಂಜರಿಕೆಗಳೆಲ್ಲವೂ ಹೇಗೆ ವೇಗವಾಗಿ ಒಂದು ಸಂಗತಿಯಿಂದ ಮತ್ತೊಂದು ಸಂಗತಿಯತ್ತ ತುಡಿಯುತ್ತಿರುತ್ತವೆ ಎಂಬುದನ್ನು ಪಾತಾಳ/ಆಕಾಶ/ದಿಕ್ಕುಗಳ ವಿಸ್ತಾರವಾದ ನೆಲೆಯಲ್ಲಿ ಹಾರಾಡುವ/ಪಯಣಿಸುವ/ಸಂಚರಿಸುವ ರೂಪಕದ ಮೂಲಕ ವಿವರಿಸಲಾಗಿದೆ. ವ್ಯಕ್ತಿಯ ಮನದೊಳಗೆ ಮೂಡುವ ಒಳಮಿಡಿತಗಳಿಗೆ ಯಾವುದೇ ಅಡೆತಡೆ/ಮಿತಿ/ಕೊನೆ ಎಂಬುದು ಇರುವುದಿಲ್ಲ. ಎಲ್ಲಿಂದ ಎಲ್ಲಿಗೆ ಬೇಕಾದರೂ ಅರೆಗಳಿಗೆಯಲ್ಲಿ ಹೋಗುವ ಮನಸ್ಸಿನ ವೇಗವನ್ನು ಈ ನುಡಿಗಳು ಸೂಚಿಸುತ್ತಿವೆ;

ಕೂಡಲಸಂಗಮದೇವ=ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ದಾಳಿ+ಅನ್+ಎಂದಿಗೆ; ದಾಳಿಯನ್=ಆಕ್ರಮಣವನ್ನು/ಮುತ್ತಿಗೆಯನ್ನು; ಎಂದಿಗೆ=ಯಾವಾಗ/ಯಾವ ಕಾಲಕ್ಕೆ; ನೀಗಿ=ಪರಿಹರಿಸಿ/ನಿವಾರಿಸಿ; ಎಂದು=ಯಾವ ದಿನ/ಯಾವ ಸಮಯ/ಯಾವ ಕಾಲ; ನಿಮ್ಮನ್+ಒಡಗೂಡುವೆನ್+ಅಯ್ಯಾ; ನಿಮ್ಮನ್ನು=ಶಿವನನ್ನು/ದೇವರನ್ನು/ಈಶ್ವರನನ್ನು ; ಒಡಗೂಡು=ಜತೆಸೇರು/ಒಂದಾಗು/ಬೆರೆಯುವುದು ; ಒಡಗೂಡುವೆನ್=ಜತೆಸೇರುವೆನು ;

ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ ಎಂದು ನಿಮ್ಮನೊಡಗೂಡುವೆನಯ್ಯಾ=ಅತ್ತಿತ್ತ ತುಯ್ದಾಡುವ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಮನದಲ್ಲಿ ಮೂಡುವ ಕೆಟ್ಟ ಒಳಮಿಡಿತಗಳನ್ನು ಹೋಗಲಾಡಿಸಿಕೊಂಡು, ಒಳ್ಳೆಯ ನಡೆನುಡಿಗಳ ಮೂಲಕ ಬಾಳಲು ವ್ಯಕ್ತಿಯ ಮನಸ್ಸು ಹಂಬಲಿಸುತ್ತಿದೆ. ಜೀವನದಲ್ಲಿ ಒಳ್ಳೆಯತನದಿಂದ ಬಾಳುವುದರ ಮೂಲಕ ದೇವರನ್ನು ಕಾಣಲು/ಕೂಡಲು ಬಯಸುತ್ತಿದ್ದ ಶಿವಶರಣಶರಣೆಯರ ನಿಲುವನ್ನು ಈ ನುಡಿಗಳು ಸೂಚಿಸುತ್ತಿವೆ.)

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *