ಬಸವಣ್ಣನ ವಚನಗಳ ಓದು – 3ನೆಯ ಕಂತು
– ಸಿ.ಪಿ.ನಾಗರಾಜ.
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದುಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆಇನ್ನಾರಿಗೆ ದೂರುವೆ
ಕೂಡಲಸಂಗಮದೇವಾ.
ವ್ಯಕ್ತಿಯು ತಾನು ಕಾಪಾಡಬೇಕಾಗಿರುವುದನ್ನು ತಾನೇ ಹಾಳುಮಾಡಲು/ನಾಶಪಡಿಸಲು/ಇಲ್ಲವಾಗಿಸಲು ತೊಡಗಿದಾಗ , ಅದನ್ನು ತಡೆಗಟ್ಟಲು ಯಾರಿಂದಲೂ ಆಗುವುದಿಲ್ಲವೆಂಬ ವಾಸ್ತವ/ದಿಟ/ಸತ್ಯವನ್ನು ರೂಪಕಗಳ ಮೂಲಕ ಈ ವಚನದಲ್ಲಿ ಹೇಳಲಾಗಿದೆ.
( ಒಲೆ=ಅಡುಗೆಯನ್ನು ಮಾಡಲು/ನೀರನ್ನು ಕಾಯಿಸಲು/ವಸ್ತುಗಳನ್ನು ಬೇಯಿಸಲು ಬೇಕಾದ ಬೆಂಕಿಯನ್ನು ಉರಿಸಲು ಕಟ್ಟಿರುವ ಗೂಡು/ಉಪಕರಣ/ಸಲಕರಣೆ; ಹತ್ತು=ಬೆಂಕಿಯು ಹೊತ್ತಿಕೊಳ್ಳುವುದು/ಬೆಂಕಿಯ ಜಳ ಹರಡಿಕೊಳ್ಳುವುದು; ಉರಿ=ಬೆಂಕಿಯ ತಾಪ/ಸುಡುವಿಕೆ; ಉರಿದಡೆ=ದಗದಗನೆ ಉರಿಯತೊಡಗಿದರೆ/ಬೆಂಕಿಯ ಕೆನ್ನಾಲಿಗೆಯು ಹರಡಿಕೊಂಡರೆ; ನಿಲಬಹುದು+ಅಲ್ಲದೆ; ನಿಲ್=ನಿಂತುಕೊಳ್ಳುವುದು; ಬಹುದು=ಆಗುವುದು; ಅಲ್ಲದೆ=ಅದನ್ನು ಬಿಟ್ಟು/ಹೊರತುಪಡಿಸಿ; ಧರೆ=ಬೂಮಂಡಲ/ಇಡೀ ಜಗತ್ತು; ನಿಲಲು=ನಿಂತುಕೊಳ್ಳಲು; ಬಾರದು=ಆಗುವುದಿಲ್ಲ;
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು=ಒಲೆಯಲ್ಲಿ ಉರಿಯುತ್ತಿದ್ದ ಬೆಂಕಿಯು ಇದ್ದಕ್ಕಿದ್ದಂತೆಯೇ ‘ದಗ್’ ಎಂದು ಹತ್ತಿಕೊಂಡು, ಉರಿಯ ಕೆನ್ನಾಲಿಗೆಯನ್ನು ಚಾಚುತ್ತ ಸುತ್ತಮುತ್ತ ಹಬ್ಬಲುತೊಡಗಿದಾಗ, ಒಲೆಯ ಬೆಂಕಿಯ ಜಳದಿಂದ ದೂರ ಸರಿದು ನಿಂತು ಪಾರಾಗಬಹುದು. ಆದರೆ ಇಡೀ ಜಗತ್ತೆಲ್ಲವೂ ಹತ್ತಿಕೊಂಡು ಉರಿಯತೊಡಗಿದಾಗ, ಬೆಂಕಿಯ ತಾಪದಿಂದ ಪಾರಾಗಿ ನಿಲ್ಲಲು ಯಾವೊಂದು ಎಡೆಯೂ ಇರುವುದಿಲ್ಲ. ಅಂದರೆ ಬೆಂಕಿಯ ತಾಪದಿಂದ ಸುಟ್ಟು ಕರಕಲಾಗಬೇಕಾಗುತ್ತದೆ;
ಏರಿ=ಮಳೆ ನೀರನ್ನು ಇಲ್ಲವೇ ನದಿ/ಹೊಳೆ/ತೊರೆಗಳಲ್ಲಿ ಹರಿದು ಹೋಗುತ್ತಿರುವ ನೀರನ್ನು ಒಂದೆಡೆ ಕೂಡಿಹಾಕಲೆಂದು/ಸಂಗ್ರಹಿಸಲೆಂದು ಕಟ್ಟಿರುವ ಅಣೆ/ಕಟ್ಟೆ; ನೀರ್+ಉಂಬಡೆ; ಉಣ್=ಕುಡಿ/ಹೀರು; ಉಂಬಡೆ=ಹೀರಿಕೊಂಡರೆ/ಕುಡಿದರೆ;
ಏರಿ ನೀರುಂಬಡೆ=ಬೇಸಾಯಕ್ಕೆ ಬಳಸಲೆಂದು/ಕುಡಿಯುವ ನೀರಿನ ಅಗತ್ಯವನ್ನು ಪೂರಯಿಸಿಕೊಳ್ಳುವುದಕ್ಕಾಗಿ ಹರಿಯುತ್ತಿದ್ದ ನೀರನ್ನು ಒಂದಡೆ ನಿಲ್ಲಿಸಲೆಂದು ಕಟ್ಟಿರುವ ಏರಿಯೇ ನೀರೆಲ್ಲವನ್ನೂ ಹೀರಿಕೊಂಡರೆ;ಬೇಲಿ=ಹೊಲ/ಗದ್ದೆ/ತೋಟದಲ್ಲಿ ಒಡ್ಡಿರುವ ಬೆಳೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಜಮೀನಿನ ಸುತ್ತಲೂ ಹಾಕಿರುವ ಮುಳ್ಳಿನ ಗಿಡಗಳ ಪೊದೆ/ಲೋಹದ ತಂತಿಯ ಆವರಣ/ಎಲ್ಲೆಕಟ್ಟು; ಕೆಯ್=ಹೊಲ/ಗದ್ದೆ/ತೋಟ/ಜಮೀನು; ಕೆಯ್ಯ=ಹೊಲ/ಗದ್ದೆ/ತೋಟದಲ್ಲಿರುವ ಬೆಳೆಯನ್ನು; ಮೇ/ಮೆಯ್=ತಿನ್ನು/ಕಬಳಿಸು; ಮೇವಡೆ=ತಿಂದರೆ/ಕಬಳಿಸಿದರೆ; ಬೇಲಿ ಕೆಯ್ಯ ಮೇವಡೆ=ಬೆಳೆಯನ್ನು ಬೇಲಿಯೇ ತಿಂದುಕೊಂಡರೆ/ಮೇಯ ತೊಡಗಿದರೆ;
ನಾರಿ=ಹೆಣ್ಣು/ಹೆಂಗಸು; ತನ್ನ=ತನಗೆ ಸೇರಿದ; ಮನೆ+ಅಲ್ಲಿ; ಮನೆ=ವಾಸದ ನೆಲೆ; ಕಳ್=ಒಡವೆ ವಸ್ತುಗಳನ್ನು ಅಪಹರಿಸುವುದು/ದೋಚುವುದು/ಎತ್ತಿಕೊಳ್ಳುವುದು/ಎಗರಿಸುವುದು; ಕಳುವಡೆ=ಕಳವು ಮಾಡಲು ತೊಡಗಿದರೆ; ನಾರಿ ತನ್ನ ಮನೆಯಲ್ಲಿ ಕಳುವಡೆ=ಮನೆಯೊಡತಿಯು ತನ್ನ ಮನೆಯ ಒಡವೆ ವಸ್ತುಗಳನ್ನು ತಾನೇ ಕದಿಯತೊಡಗಿದರೆ/ಅಪಹರಿಸಿದರೆ;
ತಾಯ್=ಮಗುವನ್ನು ಹಡೆದವಳು/ಮಗುವನ್ನು ಹೆತ್ತ ಹೆಂಗಸು; ಮೊಲೆ+ಪಾಲು; ಮೊಲೆ=ಎದೆ/ಕುಚ; ಪಾಲು=ಹಾಲು; ನಂಜು+ಆಗಿ; ನಂಜು=ಸೇವಿಸಿದವರಿಗೆ ಸಾವನ್ನುಂಟು ಮಾಡುವ ವಸ್ತು/ಗರಳ/ವಿಶ; ಕೊಲ್=ಜೀವ ತೆಗೆ/ಸಾಯಿಸು; ಕೊಲುವಡೆ=ಸಾಯಿಸಿದರೆ/ಜೀವ ತೆಗೆದರೆ;
ತಾಯ ಮೊಲೆವಾಲು ನಂಜಾಗಿ ಕೊಲುವಡೆ=ಹೆತ್ತ ತಾಯಿಯ ಎದೆ ಹಾಲು ಮಗುವಿನ ಪಾಲಿಗೆ ನಂಜಾಗಿ, ಮಗುವಿನ ಸಾವಿಗೆ/ಮರಣಕ್ಕೆ ಕಾರಣವಾದರೆ;
ಇನ್ನು+ಆರಿಗೆ; ಇನ್ನು=ಮತ್ತೆ/ಬೇರೆ; ಆರ್=ಯಾರು/ಯಾವ ವ್ಯಕ್ತಿ; ಆರಿಗೆ=ಯಾರಿಗೆ/ಯಾವ ವ್ಯಕ್ತಿಗೆ; ದೂರು=ವ್ಯಕ್ತಿಯ ಸಂಕಟಕ್ಕೆ/ನೋವಿಗೆ/ಸಾವಿಗೆ ಕಾರಣರಾದವರ ಮೇಲೆ ಆಪಾದನೆಯನ್ನು ಹೊರಿಸುವುದು/ಇತರರಿಂದ ಒದಗಿಬಂದಿರುವ ಆಪತ್ತಿನಿಂದ ಪಾರುಮಾಡುವಂತೆ ಆಡಳಿತದ ಹೊಣೆಹೊತ್ತವರಿಗೆ/ಗದ್ದುಗೆಯಲ್ಲಿರುವವರಿಗೆ ಮೊರೆಯಿಡುವುದು;
ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ=ಯಾರ ಮುಂದೆ ನನ್ನ ಸಂಕಟವನ್ನು ಹೇಳಿಕೊಳ್ಳಲಿ.)
ಇಡೀ ಜಗತ್ತಿಗೆ ಬೆಂಕಿಯು ಹರಡಿಕೊಂಡು ಉರಿಯತೊಡಗುವ/ಏರಿಯೇ ಕೆರೆಯ ನೀರೆಲ್ಲವನ್ನೂ ಹೀರಿಕೊಳ್ಳುವ/ಬೇಲಿಯೇ ಬೆಳೆಯೆಲ್ಲವನ್ನೂ ಮೇಯುವ/ಮನೆಯೊಡತಿಯೇ ತನ್ನ ಮನೆಯ ಒಡವೆ ವಸ್ತುಗಳನ್ನು ಕದಿಯುವ/ತಾಯಿಯ ಎದೆಹಾಲೇ ಮಗುವಿನ ಸಾವಿಗೆ ಕಾರಣವಾಗುವ- ಈ ಅಯ್ದು ರೂಪಕಗಳ ಮೂಲಕ ವಚನಕಾರನು ಸಾಮಾಜಿಕ ಒಕ್ಕೂಟಗಳ ನಡುವೆ ಸಿಲುಕಿ ತೊಳಲಾಡುವ ವ್ಯಕ್ತಿಯ ಮೂಕವೇದನೆಯನ್ನು ಚಿತ್ರಿಸಿದ್ದಾನೆ.
ಜನಸಮುದಾಯದ ಒಳಿತಿಗೆಂದು ಮಾನವರೇ ಕಟ್ಟಿಕೊಂಡಿರುವ ಜಾತಿ/ಮತ/ಕುಟುಂಬ/ವಿದ್ಯೆ/ಆರೋಗ್ಯ/ನ್ಯಾಯ/ಆಡಳಿತದ ನೆಲೆಗಳನ್ನು ಸಾಮಾಜಿಕ ಒಕ್ಕೂಟಗಳೆಂದು ಕರೆಯುತ್ತಾರೆ. ಇವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತಿರುವ/ಒಕ್ಕೂಟಗಳ ಗದ್ದುಗೆಯಲ್ಲಿರುವ ವ್ಯಕ್ತಿಗಳು ನೀಚರಾಗಿ/ಕ್ರೂರಿಗಳಾಗಿ/ವಂಚಕರಾಗಿ ನಡೆದುಕೊಳ್ಳತೊಡಗಿದಾಗ ವ್ಯಕ್ತಿಯ/ಜನಸಮುದಾಯದ ಬದುಕು ನೂರೆಂಟು ಬಗೆಯ ಸಂಕಟಗಳಿಗೆ ಗುರಿಯಾಗಿ ನರಳತೊಡಗುತ್ತದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ.
ಓದುಗರಿಗೆ/ಕೇಳುಗರಿಗೆ ಚೆನ್ನಾಗಿ ಮನದಟ್ಟಾಗುವಂತೆ ತಿಳಿಸಬೇಕೆಂಬ ಉದ್ದೇಶದಿಂದ ಕವಿಯು ತಾನು ಹೇಳಬೇಕಾದ ಸಂಗತಿಯನ್ನು ಮತ್ತೊಂದು ಸಂಗತಿಯೊಡನೆ ಜತೆಗೂಡಿಸಿ ಬಣ್ಣಿಸುವ ನುಡಿರಚನೆಯನ್ನು ‘ರೂಪಕ/ಶಬ್ದಚಿತ್ರ’ ಎಂದು ಕರೆಯುತ್ತಾರೆ.
ಏನಿ ಬಂದಿರಿ
ಹದುಳಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿ ಹೋಹುದೆ
ಒಡನೆ ನುಡಿದರೆ
ಸಿರ ಹೊಟ್ಟೆಯೊಡೆವುದೆ
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ
ಕೂಡಲಸಂಗಮದೇವಯ್ಯ.
ತನ್ನ ಬಳಿಗೆ ನೆರವು/ಸಹಾಯ/ಆಸರೆಯನ್ನು ಬೇಡಿ ಬಂದವರನ್ನು ವ್ಯಕ್ತಿಯು ಹೇಗೆ ಕಾಣಬೇಕು/ಅವರೊಡನೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.
( ಏನ್=ಯಾವುದು; ಏನಿ=ಏನ್ರಿ/ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ “ ಏನ್ರಿ “ ಎಂಬ ಬಹುವಚನರೂಪದ ಪದವನ್ನು ಬಳಸಲಾಗುತ್ತದೆ/ಮಾತಿನ ಸನ್ನಿವೇಶದಲ್ಲಿ ಉಚ್ಚಾರಣೆಗೊಳ್ಳುವಾಗ ‘ಏನ್ರಿ’ ಎಂಬುದು ‘ಏನಿ’ ಎಂದಾಗಿದೆ; ಬಂದಿರಿ=ಬಂದಿದ್ದೀರಿ; ಏನಿ ಬಂದಿರಿ=ಯಾತಕ್ಕಾಗಿ ಬಂದಿರಿ/ನಿಮ್ಮ ಬರುವಿಕೆಯ ಉದ್ದೇಶವೇನು?;
ಹದುಳ+ಇದ್ದಿರೆ; ಹದುಳ=ನೆಮ್ಮದಿ/ನಲಿವು/ಆರೋಗ್ಯ/ಒಳಿತು/ಆನಂದ; ಇದ್ದಿರೆ=ಇದ್ದೀರಾ/ಇರುವಿರಾ?; ಹದುಳಿದ್ದಿರೆ=ಚೆನ್ನಾಗಿದ್ದೀರಾ/ಆರೋಗ್ಯವಾಗಿದ್ದೀರಾ; ಎಂದಡೆ=ಎಂದರೆ/ಎಂದು ಕೇಳಿದರೆ/ವಿಚಾರಿಸಿಕೊಂಡರೆ; ನಿಮ್ಮ+ಐಸಿರಿ; ಐಶ್ವರ‍್ಯ>ಐಸಿರಿ; ಐಸಿರಿ=ಸಿರಿವಂತಿಕೆ/ಸಂಪತ್ತು/ಒಡವೆ ವಸ್ತು/ಆಸ್ತಿಪಾಸ್ತಿ/ಗದ್ದುಗೆ; ನಿಮ್ಮೈಸಿರಿ=ನಿಮ್ಮ ಬಳಿಯಿರುವ/ನಿಮ್ಮದಾಗಿರುವ ಸಂಪತ್ತು/ಸಿರಿವಂತಿಕೆ/ಆಸ್ತಿಪಾಸ್ತಿ/ಒಡವೆ ವಸ್ತು/ಗದ್ದುಗೆ; ಹಾರು=ಜಿಗಿ/ಎಗರು/ಇಲ್ಲವಾಗು/ಕಳೆದುಹೋಗು/ಹಾಳಾಗು; ಹೋಹುದೆ=ಹೋಗುವುದೆ; ಹಾರಿ ಹೋಹುದೆ=ಹಾಳಾಗುವುದೇ/ಇಲ್ಲವಾಗುವುದೇ/ಕಳೆದು ಹೋಗುವುದೇ;
ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮೈಸಿರಿ ಹಾರಿ ಹೋಹುದೆ=ಇತರರು ತಮ್ಮ ಜೀವನದ ಸಂಕಟ/ನೋವು/ವೇದನೆಗಳನ್ನು ನಿಮ್ಮೊಡನೆ ಹೇಳಿಕೊಂಡು, ತಮ್ಮ ಯಾತನೆಯ ನಿವಾರಣೆಗೆ ನಿಮ್ಮಿಂದ ಪರಿಹಾರವನ್ನು ಪಡೆಯಲೆಂದು/ಏನನ್ನಾದರೂ ಯಾಚಿಸಲೆಂದು ನಿಮ್ಮ ಬಳಿಗೆ ಬಂದಾಗ, ಅವರನ್ನು ‘ಏನು ಬಂದಿರಿ, ಚೆನ್ನಾಗಿದ್ದೀರಾ’ ಎಂದು ಒಲವಿನಿಂದ ಮಾತನಾಡಿಸಿದ ಮಾತ್ರಕ್ಕೆ, ನಿಮ್ಮ ಸಿರಿವಂತಿಕೆಯೆಲ್ಲವೂ ಹಾಳಾಗಿ ಹೋಗುತ್ತದೆಯೇ/ಕಣ್ಮರೆಯಾಗುವುದೇ/ನಿಮ್ಮ ಕಯ್ ತಪ್ಪಿ ಅವರ ಪಾಲಾಗುತ್ತದೆಯೇ;
ಕುಳ್ಳಿರಿ+ಎಂದಡೆ; ಕುಳ್=ಕುಳಿತುಕೊಳ್ಳುವುದು; ಕುಳ್ಳಿರಿ=ಕುಳಿತುಕೊಳ್ಳಿ; ನೆಲ=ಜಾಗ/ಎಡೆ; ಕುಳಿ=ಗುಣಿ/ತಗ್ಗು/ಹಳ್ಳ; ಕುಳ್ಳಿರೆಂದಡೆ ನೆಲ ಕುಳಿಹೋಹುದೆ=ಕುಳಿತುಕೊಳ್ಳಿ ಎಂದು ಹೇಳಿದರೆ, ಅವರು ಕುಳಿತುಕೊಳ್ಳುವ ಜಾಗದಲ್ಲಿ ಗುಳಿ ಬೀಳುವುದೆ/ನೆಲ ಕುಸಿಯುವುದೆ;
ಒಡನೆ=ಕೂಡಲೇ/ಬೇಗನೆ/ಮರುಗಳಿಗೆಯಲ್ಲೇ; ನುಡಿ=ಮಾತು/ಸೊಲ್ಲು; ಒಡನೆ ನುಡಿದರೆ=ಅವರು ನಿಮ್ಮ ಬಳಿಗೆ ಬರುತ್ತಿದ್ದಂತೆಯೇ/ಅವರನ್ನು ಕಂಡಕೂಡಲೇ ಅವರನ್ನು ಮಾತನಾಡಿಸಿದರೆ; ಶಿರ>ಸಿರ; ಸಿರ=ತಲೆ/ಬುಂಡೆ; ಹೊಟ್ಟೆ+ಒಡೆವುದೆ; ಹೊಟ್ಟೆ=ಒಡಲು/ಉದರ; ಒಡೆ=ಸೀಳು/ಬಿರಿ/ಚೂರುಚೂರಾಗು/ಹೋಳಾಗು; ಒಡನೆ ನುಡಿದರೆ ಸಿರ ಹೊಟ್ಟೆಯೊಡೆವುದೆ=ಅವರು ನಿಮ್ಮ ಬಳಿಗೆ ಬರುತ್ತಿದ್ದಂತೆಯೇ/ ಅವರನ್ನು ಕಂಡ ಕೂಡಲೇ ಮಾತನಾಡಿಸಿದರೆ, ನಿಮ್ಮ ತಲೆಯೊಡೆದು ಹೊಟ್ಟೆ ಹೋಳಾಗುವುದೆ/ನಿಮ್ಮ ಜೀವ ಹೋಗುವುದೆ;
ಕೊಡಲ್+ಇಲ್ಲದೆ+ಇದ್ದಡೆ+ಒಂದು; ಕೊಡು=ನೀಡು/ದಾನಮಾಡು; ಇದ್ದಡೆ=ಇದ್ದರೆ; ಇಲ್ಲದಿದ್ದಡೆ=ಇಲ್ಲದಿದ್ದರೆ/ಇಲ್ಲದೇ ಹೋದರೆ; ಗುಣ+ಇಲ್ಲದೆ+ಇದ್ದಡೆ; ಗುಣ=ಒಳ್ಳೆಯತನ/ಸಜ್ಜನಿಕೆ/ನಡತೆ; ಒಂದು ಗುಣ=ಬಳಿ ಬಂದವರ ಮನಸ್ಸನ್ನು ನೋಯಿಸದೆ/ಅವರನ್ನು ಕಡೆಗಣಿಸದೆ , ಅವರನ್ನು ಒಲವು ನಲಿವಿನಿಂದ/ಕರುಣೆಯಿಂದ ಕಂಡು ಮಾತನಾಡಿಸುವ ಗುಣ;
ಮೂಗು=ಉಸಿರಾಡಲು ಬಳಸುವ ಮತ್ತು ವಾಸನೆಯನ್ನು ಗ್ರಹಿಸುವ ಅಂಗ; ಮೂಗ=ಮೂಗನ್ನು; ಕೊಯ್=ಕತ್ತರಿಸು/ಸೀಳು; ಕೊಯ್ವುದ=ಕೊಯ್ಯುವುದನ್ನು/ಕತ್ತರಿಸುವುದನ್ನು; ಮೂಗ ಕೊಯ್ವುದ=ಮೂಗು ಕೊಯ್ಯುವುದನ್ನು; ಮಾಣ್=ಬಿಡು/ತ್ಯಜಿಸು; ಮಾಣ್ಬನೆ>ಮಾಬನೆ; ಮಾಬನೆ=ಮಾಡದೆ ಬಿಡುತ್ತಾನೆಯೇ; ಮೂಗ ಕೊಯ್ವುದ ಮಾಬನೆ=ಮೂಗನ್ನು ತುಂಡರಿಸದೆ/ಕತ್ತರಿಸದೆ ಬಿಡುತ್ತಾನೆಯೇ; ಮೂಗು ಕೊಯ್ಯುವುದು=ಇದು ಒಂದು ನುಡಿಗಟ್ಟು. ವ್ಯಕ್ತಿಯನ್ನು ಅಪಮಾನಗೊಳಿಸುವುದು/ವ್ಯಕ್ತಿಯ ನಡೆನುಡಿಯಲ್ಲಿರುವ ಸೊಕ್ಕು/ಮದ/ಅಹಂಕಾರವನ್ನು ಅಡಗಿಸುವುದು ಎಂಬ ತಿರುಳಿನಲ್ಲಿ ಬಳಕೆಯಾಗಿದೆ;
ಕೂಡಲಸಂಗಮದೇವ+ಅಯ್ಯ; ಕೂಡಲಸಂಗಮದೇವ=ಶಿವ/ಈಶ್ವರ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಅಯ್ಯ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ )
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ=ಕೊಡುವುದಕ್ಕೆ/ದಾನ ಮಾಡುವುದಕ್ಕೆ/ನೆರವಾಗುವುದಕ್ಕೆ ನಿಮಗೆ ಮನಸ್ಸಿಲ್ಲದಿದ್ದರೂ/ನಿಮ್ಮ ಕಯ್ಯಲ್ಲಿ ಆಗದಿದ್ದರೂ/ಅವರ ಸಂಕಟವನ್ನು ನಿಮ್ಮಿಂದ ನಿವಾರಿಸಲಾಗದಿದ್ದರೂ, ಬಳಿ ಬಂದವರನ್ನು ಒಲವು ನಲಿವಿನಿಂದ/ಕರುಣೆಯಿಂದ ಕಾಣುವ ಮತ್ತು ಮಾತನಾಡಿಸುವ ಗುಣವನ್ನು ಹೊಂದಿರಬೇಕು . ಬೇಡಿ ಬಂದವರನ್ನು/ನೆರವು ಕೋರಿ ಬಂದವರನ್ನು ಅಹಂಕಾರದಿಂದ ಕಡೆಗಣಿಸುವ/ತಿರಸ್ಕರಿಸುವ ವ್ಯಕ್ತಿಗಳನ್ನು ಕೂಡಲಸಂಗಮದೇವನು ದಂಡಿಸುತ್ತಾನೆ.
‘ಸಹಮಾನವರ ಬಗ್ಗೆ ಒಲವು/ಕರುಣೆ ಇಲ್ಲದಿದ್ದರೆ, ಅಂತಹವರಿಗೆ ಶಿವನು ಒಲಿಯುವುದಿಲ್ಲ’ ಎಂಬ ಶಿವಶರಣಶರಣೆಯರ ನಿಲುವನ್ನು ಈ ನುಡಿಗಳು ಸೂಚಿಸುತ್ತವೆ.
( ಚಿತ್ರಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು