ನಾ ಸಾಕಿದ ನಾಯಿ

ಶರಣಬಸವ. ಕೆ.ಗುಡದಿನ್ನಿ.

ನಾಯಿ,, Dog

ನನಗೆ ನಾಯಿ ಎಂದರೆ ಮೊದಲಿನಿಂದಲೂ ಇಶ್ಟ, ಆದರೆ ಚಹಾ ಮಾಡೋದಕ್ಕೂ ಹಾಲನ್ನು ಅಚ್ಚೇರು ಪಾವು ತರೊ ಮನೆ ನಮ್ಮದು. ಆ ಕಾರಣಕ್ಕೆ ನಾನು ನಾಯಿ ತಂದಾಗಲೆಲ್ಲ ನಮ್ಮಮ್ಮ ಎಂಬೋ ಶಾಂತಮೂರ‍್ತಿ “ನಿನಗ ಏನ ಬಂದಾದಲೋ ನಿನ ಬಳ್ಕೊಂಡೋಗ, ನಿನಗ ಮಾರೆಮ್ಮ ಬರಾ, ಚಾವ(ಚಹಾ) ಮಾಡಾಕ ಹಾಲಿಲ್ಲೊ ಅಂತ ಹೈನೇರ ಅಂಬ್ರಮ್ಮನ ಮನೀ ಮುಂದ ನಿಂದ್ರತೀವಿ, ಇವ ನಾಯಿಕುನ್ನಿ ತಂದಾನ, ನೆಡಿ ಬಿಟ್ಟು ಬಾ” ಎಂದು ನಾಯಿ ಬದಲಾಗಿ ನನ್ನ ಕಿವಿಯನ್ನ ಅನಾಮತ್ತಾಗಿ ಹಿಡಿದು, ನಾಯಿಯನ್ನೂ ನನ್ನನ್ನು ರಸ್ತೆ ದಾಟಿಸುತಿದ್ದಳು.

ನಾನು ಬೆಳೆದು ದೊಡ್ಡವನಾಗಿ ನೌಕರಿ ಹಿಡಿದ ಮ್ಯಾಲೆ ನಾಯಿ ಸಾಕಬೇಕೆಂಬ ಆಸೆ ಮತ್ತೆ ಚಿಗುರೊಡೆದಿತ್ತು, ಆದರೆ ನಾನು ಹಿಡಿದಿದ್ದೆಲ್ಲ ಮಹಡಿ ಮೇಲಿನ ಬಾಡಿಗೆ ಮನೆಗಳನ್ನ. ನನಗೆ ಮನೇಲಿರೋ ಬಾತುರೂಮಲಿ ಉಚ್ವೆ ಹೊಯ್ದರೇ ಮನೇಲೇ ಹೊಯ್ದಂಗೆ ಅನಿಸೋದು. ಇನ್ನು ನಾಯಿ ಕಟ್ಟೋದೆಲ್ಲಿ ಅದು ಕಕ್ಕಸು ಮಾಡೋದೆಲ್ಲಿ ಅಂತ ತಲೆಕೆರೆದುಕೊಂಡು ಸುಮ್ಮನಾಗಿದ್ದೆ. ಆದರೆ ಯಾವಾಗ ಊರ ಹೊರಗೆ ಮನೆ ಕಟ್ಟಿದೆ ನೋಡಿ, ನಾಯಿ ಬೇಕೇ ಬೇಕು ಎಂಬುದು ನನ್ನನ್ನು ಸೇರಿಸಿ ಮನೆಯವರೆಲ್ಲರ ಇಂಗಿತವೂ ಆಯಿತು.ಆವಾಗಲೇ ಪ್ರಸನ್ನನೆಂಬೋ ಅದ್ಬುತ ಆಸಾಮಿ ಹತ್ತಿರ ಆಗಿದ್ದು.

“ಅಣ್ಣ, ನಿಂಗ ನಾಯಿ ತಾನೆ ಬೇಕು ಬಾ ನನ್ನಿಂದೆ” ಎಂದವನೆ ನನ್ನ ಬೆನ್ನಿಗೆ ಕಟ್ಟಿಕೊಂಡು ಬುರ‍್ರನೇ ಹೊರಟೇಬಿಟ್ಟ, ಒಂಟೆ ಡುಬ್ಬದ ಬೈಕಿನ ಮೇಲೆ. “ಎಲ್ಯಾರ ಹೆಣ್ ನಾಯಿ ಮರಿ ಹಾಕಿದ್ದು ನೋಡಿಯೇನೋ” ಅಂದ್ರೆ, “ಇಲ್ಲ ಮಾರಾಯ, ಇಲ್ಲೊಬ್ಬ ಸಾಬು ಆದಾನು, ಅವ ಎಂತಾ ನಾಯಿ ಸಾಕ್ಯಾನ ಗೊತ್ತಾ, ಹುಲಿ ಹುಲಿ ಆಗ್ಯಾದ.. ಕರ‍್ರಗ..ನೀ ನೋಡಿದ್ರ ಬಿಡಾದಿಲ್ಲ ಬಿಡು” ಅಂತ ಆ ನಾಯಿಯ ಬಗ್ಗೆಯೂ ಮತ್ತು ನಾಯಿಯ ಮಾಲೀಕನ ಬಗ್ಗೆಯೂ ತರಾವರಿ ಕೊರೆಯತೊಡಗಿದ. ನನಗೆ ಬೆಳೆದ ನಾಯಿ ತಂದರೆ ಅಡ್ಜಸ್ಟ್ ಆಗುತ್ತಾ ಅಂತ ಅನುಮಾನ ಶುರುವಾಗಿತ್ತು. ಅಲ್ಲದೇ ಅವನು ಹೇಳುವ ಬರದಲ್ಲೇ ಅದೊಂದು ಲ್ಯಾಬ್ರಡಾರ್ ತಳಿ ಅಂತಲೂ ಗೊತ್ತಾಗಿ ಎಶ್ಟು ದುಡ್ಡು ಪೀಕುತ್ತಾನೋ ಅಂತ ಆಗಲೇ ತಳಮಳ ಶುರುವಾಗಿತ್ತು.

ಹತ್ತಾರು ಮಂದಿ ಮಾಂಸಕ್ಕಾಗಿ ಪಾಳಿ ನಿಂತ ಅಂಗಡಿಯ ಮುಂದೆ ಹೋಗಿ ನಿಂತ ಕೂಡಲೆ ಮಂದಿಯ ನಡುವೆ ತೂರಿಕೊಂಡು ಪ್ರಸನ್ನ “ಬಾಯಿ, ನಿಮ್ ನಾಯಿ ಕೊಡ್ತೀವಂದ್ರಲ ನಮ್ ಸಾರ್ ನ ಕರ‍್ಕಮಂದೀನಿ. ಯಾವ್ದಾರ ನಾಯಿ ಕಾಣ್ಲಿ ಬಾರಿ ಪ್ರೀತಿ ಇವ್ರಿಗೆ” ಅಂತ ಪರಿಚಯಿಸಿದ. ಮ್ಯಾಲ ತೆಳಗ(ಕೆಳಗೆ) ನೋಡಿದ ಆಸಾಮಿ ಎರಡು ನಿಮಿಶ ಅಂತ ಸನ್ನೆ ಮಾಡಿದ. ಆಮೇಲೆ ಅವನು ಕಡಿಯುವ ಕತ್ತಿಯನ್ನು ಬೇರೆಯವರಿಗೆ ವರ‍್ಗಾಯಿಸಿ, ಅವನೊಂದು ಬೈಕ್ ಹತ್ತಿ “ಚಲೋ” ಅಂತ ಹೊರಟೇ ಹೋದ. ಹಳೇ ಸಿನಿಮಾದ ಕಳರನ್ನ ಬೆನ್ನಟ್ಟಿಕೊಂಡು ಜಾಡು ಪತ್ತೆಹಚ್ಚುವ 007 ನಂತೆ ಎಕ್ಸಲೇಟರ್ ಅಮುಕಿ ನಾವೂ ಅವನ ಬೆನ್ನತ್ತಿ ಹೊರಟೆವು.

“ಗುಂಡಾsss…” ಎಂದು ಕರೆಯುತ್ತಿದ್ದಂತೆ ಓಡಿ ಬಂತು ದೈತ್ಯಾಕಾರದ ನಾಯಿಯೊಂದು ಪರಮ ವಾಸನೆಯ ಕೋಳಿ ಪಾರಮ್ಮಿನೊಳಗಿಂದ. ಮಜಬೂತಾಗಿತ್ತು ನಾಯಿ. “ಸರಾ ಐದಸಾವ್ರ ಕೊಟ್ಟ ತಂದೀನ್ರಿ ಹುಬ್ಬಳ್ಯಾಗ. ಸಣ್ಣದಿದ್ದಾಗ ಬಾರೀ ನಾಯಿರಿ” ಎಂದವನೆ ನಾಯಿಯನ್ನು ಕುರಿತು ಹೇ ಗುಂಡು “ಚಡೋ” ಅಂತ ಗಾಡಿ ತೋರಿಸಿದ. ಅಶ್ಟು ದ್ರುಡಕಾಯದ ನಾಯಿ ಚಂಗನೆ ಎಗರಿ ಗಾಡಿ ಮೇಲೆ ಆಸೀನವಾಯಿತು. “ಉತ್ರೋ” ಅಂದ ಪಟ್ಟನೇ ನೆಲಕೆ ದುಮುಕಿತು. “ಬಾಗೋ” ಅಂದ ಅಶ್ಟು ದೂರ ಓಡಿತು. “ಆಹೋ” ಅಂದ ಓಡಿ ಬಂದಿತು. ಕಣ್ಣಲಿ ನೀರು ತುಂಬಿಕೊಂಡು ಬಾವುಕನಾಗಿ “ಇಂತ ನಾಯಿ ಕೊಡಾಕ ನನಗ ಇಚ್ಚಾ ಇಲ್ರಿ ಆದ್ರ ನಮ್ಮಂದ್ಯಾಗ ಮನ್ಯಾಗ ನಾಯಿ ಸಾಕಬಾರ‍್ದಂತ. ಅಲ್ದ, ಓಣ್ಯಾಗ ಒದ್ರತದ ಅಂತ ಪಕ್ಕದ ಮನಿಯವ್ರ ಗಲಾಟಿ” ಅಂತ ನಾಯಿ ಯಾಕೆ ಕೊಡುತಿದ್ದೇನಂತ ಕಾರಣ ಹೇಳುತ್ತಾ ಹೋದ.

ನಾನು ಮನದಲ್ಲೇ ಯೋಚಿಸುತಿದ್ದೆ. ‘ಮರಿ ಇದ್ದಾಗ ತಂದ ನಾಯೀನ ಐದು ಸಾವ್ರ. ಆದ್ರ ಇಶ್ಟು ದೊಡ್ಡದು ಮಾಡ್ಯಾನ, ಅಲ್ದ ಇದು ಮಾತು ಕೇಳೋ ನಾಯಿ’ ಎಂದು ಜೇಬು ಮುಟ್ಟಿಕೊಂಡೆ. ನಾಲ್ಕೈದು ನೂರಿಗಿಂತ ಜಾಸ್ತಿಯಿಲ್ಲ, ಪೇಚಾಟಕ್ಕೆ ಸಿಲುಕಿದೆ. “ಆಯ್ತು ಬಾಯಿ, ನಮ್ ಸಾರು ಒಯ್ತಾರ ನಿಮಗೆಶ್ಟು ಕೊಡಾಮು ಹೇಳ್ರಿ” ಅಂತ ಪ್ರಸನ್ನ ಮಾತಿಗಿಳಿದ. “ಇಲ್ರಿ ಸರಾ, ನಾ ರೊಕ್ಕದ ಸಮಂದ ನಾಯಿ ಕೊಡಾಕತ್ತಿಲ್ರಿ. ಹುಲಿಯಂತ ಇದ್ನ ಕೋಳಿಪಾರಮ್ಮಿನ್ಯಾಗ ಇಡಾಕ ಬೇಜಾರ ಆಗೇದ್ರಿ. ಅದಕ ನೀವೇನು ಕೊಡಾದ ಬ್ಯಾಡ. ಆದ್ರ ಚೆಂದ ನೋಡ್ಕ್ಯಾರಿ(ನೋಡ್ಕೋಳಿ). ಯಾವಾಗರ ನೋಡಾಕ ಬಂದ್ರ ತೋರಸರಿ” ಎಂದು ಸುಮ್ಮನಾದ.

ಆದ್ರೆ ಪ್ರಸನ್ನ ಕಿವಿಯಲಿ ಉಸುರಿದ್ದೆ ಬೇರೆ. “ಯಣ್ಣಾ, ಒಂದೆಲ್ಡು ಸಾವಿರ ಇದ್ರ ಕೊಟ್ಟಬಿಡು. ಇಂತ ನಾಯಿ ಮತ್ತಾ ಸಿಗಾಂಗಿಲ್ಲ. ದುಡ್ಡಿಲ್ದ ಒಯ್ದ್ರ ನಾಳಿ ನಾಡ್ದ ಬಂದು ಇಲ್ರಿ ನಮ್ ನಾಯಿ ಕೊಡ್ರಿ ಅಂದ್ರ? ಅದ್ನ ಅಶ್ಟ ಹಚ್ಗ್ಯಂಡ್ಯಾನ ( ಹಚ್ಚಿಕೊಂಡಿದಾನ) ಅವ  ಅಂದ”. ಅದು ಸರಿ ಇತ್ತು “ಆಯ್ತಪ ಈಗ ರೊಕ್ಕ ತಂದಿಲ್ಲ, ಆಮೇಲ ಒಂದೆಲ್ಡು ಸಾವ್ರ ಕೊಡ್ತೀನಿ. ಈಗ ಈ ನಾಯಿನ ನನ್ ಮನಿ ಮುಟ್ಸು” ಅಂದೆ. “ಚಲೋ” ಅಂದವನೇ ಗಾಡಿ ಚಾಲು ಮಾಡಿ “ಗುಂಡಾ ಚಡೋ” ಅಂದ ಪುಸುಕ್ಕನೇ ಗಾಡಿ ಏರಿದ ನಾಯಿಯೊಂದಿಗೆ ಸವಾರಿ ಮನೆ ಕಡೆ ಹೊರಟಿತು. ಇನ್ನು ಹೆಂಡತಿಯ ಮನವೊಲಿಸುವದು ಸೇರಿದಂತೆ ನಾಯಿಗೆ ಕಟ್ಟಲು ಚೈನು, ಕತ್ತಿಗೆ ಬೆಲ್ಟು, ಊಟದ ತಟ್ಟೆ, ಅದನ್ನು ಕಟ್ಟಬೇಕಾದ ಜಾಗ, ಅಪ್ಪಿ ತಪ್ಪಿ ಅದು ಕಕ್ಕಸು ಮಾಡಿದರೆ ನನ್ನ ಪರಿಸ್ತಿತಿ ಎಲ್ಲವನ್ನೂ ಮನಸು ಲೆಕ್ಕ ಹಾಕುತಿತ್ತು.

ನಾಯಿಯನ್ನು ನೋಡಿದ್ದೆ ತಡ, ಹೆಂಡತಿ ಎಂಬೋ ಡೈನಾಮೈಟ್ ಸಿಡಿದೇಬಿಡ್ತು “ಇಶ್ಟು ದೊಡ್ಡ ನಾಯಿ ತಂದ್ರ ಎಲ್ಲಿಂದ ಮಾಡಿ ಹಾಕದ. ನಿನಗಾ ಸೇರು ಅದಕ ಸೇರು ಹೊಸ ಬೋಗಣಿ ತರಬೇಕು ನೋಡು” ಅಂತ ಶುರುವಿಟ್ಲು. “ಸರಾ ನಿಮ್ದು ಬಾಳ ತಿಪ್ಲಾ ಐತಲ್ರಿ” ಎಂಬಂತೆ ಕರುಣೆಯಿಂದ ಸಾಬು ನನ್ನೆಡೆ ನೋಡಿದ. ‘ನೀ ಚಿಂತಿ ಮಾಡಬ್ಯಾಡ’ ಎಂಬಂತೆ ಕಣ್ಣಲೇ ಅವನನ್ನು ಸಮಾದಾನಿಸಿದೆ.

ಆದರೆ ಆ ಗುಂಡನೆಂಬೋ ನಾಯಿ ನಮ್ಮ ಮನೆಗೆ ಎಶ್ಟು ಬೇಗ ಹೊಂದಿಕೊಂಡಿತೆಂದರೆ ನಾ ರಾತ್ರಿ ಪೋನಚ್ಚಿ “ಬರಾಕ ಲೇಟಾತದ, ಬಾಗಲಾಕ್ಯಂಡು ಮಕ್ಕಾರಿ” ಅಂದ್ರ “ಬಾ ಅರ ಬಾ, ಇಲ್ಲ ಆಕ್ಕಡೇ ದಂಡೀ ಹರ‍್ಕೊಂಡೋಗು” ಅಂತ ಉತ್ತರ ಬರ‍್ತಿದ್ವು. ಆ ನಾಯಿ ಇದ್ದದ್ದೇ ದೈರ‍್ಯವಾಗಿತ್ತು. ಮಕ್ಕಳಿಗೂ ಹೊಂದಿಕೊಂಡ ಗುಂಡ, ಮಗಳಿಗೆ ಅವಳ ಪ್ರೆಂಡ್ಸ್ ಮುಂದೆ ಪ್ರೆಸ್ಟೀಜ್ ವಿಶಯವಾಗಿ ಮಾಡಿತ್ತು. ಅವಳು ಮತ್ತೆ ಮತ್ತೆ ಚಡೋ, ಉತ್ರೋ, ಬಾಗೊ ಅಂತ ಆಡುತಿದ್ದರೆ ಅವಳ ವಾರಿಗೆಯ ಮಕ್ಕಳು ಬಾಯಿ ತೆಗೆದು ಬೆರಗಾಗಿ ನೋಡುತಿದ್ದವು. ಮಗ ತನಗಾಗಿ ತಂದ ಜಾತ್ರೆಯ ಕನ್ನಡಕವನ್ನು ಗುಂಡನಿಗೆ ಹಾಕಿ ಪೋಟೊ ತೆಗಿ ಅಂತ ನನಗೆ ದುಂಬಾಲು ಬೀಳುತಿದ್ದ. ಜನರಿಗೆ ಅದು ಕಡಿಯುವ(ಕಚ್ಚುವ) ಬಗ್ಗೆ ಮಾಹಿತಿ ಇದ್ದಿಲ್ಲ. ಆದರೆ ಅದರ ಆಕಾರ ನೋಡಿಯೇ ಅವರಿಗೆ ಹೆದರಿಕೆಯಾಗುತ್ತಿತ್ತು. ಅಂಗಳದಾಗ ಕಾಲಿಡಬೇಕಂದ್ರು ‘ನಾಯಿ ಕಟ್ಟಿರೇನಣ’ ಅಂತ ದೂರದಿಂದಲೇ ಕೇಳುತ್ತಾ ಅಂಜುತ್ತ,ಅಳುಕುತ್ತಾ ಮನೆ ಕಡೆ ಹಾಯುತಿದ್ದರು.

ಇಂತ ಗುಂಡ ನಮ್ಮೊಡನೆ ತುಂಬ ದಿನ ಇರಲಿಲ್ಲ. ನಮ್ಮೆಲ್ಲರನ್ನ ದುಕ್ಕದಲಿ ಮುಳುಗಿಸಿ ಹೊರಟೋದ. ಆ ಎರಡು ದಿನ ನಾವ್ಯಾರೂ ಊಟ ಮಾಡಲಿಲ್ಲ. ಮಗಳು ಶಾಲೆಗೆ ಹೋಗಲಿಲ್ಲ. ಮಗ ಅಳುತ್ತಲೇ ಇದ್ದ. ಈಗಲೂ ಮಾಂಸ ತರಲು ಹೋದಾಗ ಸಾಬು ಕೇಳ್ತಾನೆ “ಹೆಂಗೈತ್ರಿ ಸರಾ ನಮ್ ಹುಲಿ” ಅಂತ. “ಚೊಲೊ ಐತಿ ಬಾಯಿ, ಮುಂದಿನ ಸಂಬಳಕ್ಕ ನಿನಗ ರೊಕ್ಕ ಕೊಡ್ತೀನಿ” ಅಂತೇಳಿ ಅಲ್ಲಿಂದ ಬರ‍್ತೀನಿ. “ರೊಕ್ಕ ನಾ ಕೇಳಿನೇನ್ರಿ, ಅದನ್ನ ಚಂದ ನೋಡ್ಕೋರಿ” ಅಂತಾನವನು. ನನಗೆ ಮತ್ತೆ ಗುಂಡಾ ನೆನಪಾಗುತ್ತೆ. ಅದಕ್ಕೆ  ಅರಾಮ ತಪ್ಪಿದ್ದು, ಉಳಿಸಿಕೊಳ್ಳಲೂ ಮನೆಯವರೆಲ್ಲ ಶ್ರಮಪಟ್ಟಿದ್ದು, ಕೊನೆಗೆ ನನ್ನ ಮಡಿಲಲ್ಲೆ ಅದು ಪ್ರಾಣ ಬಿಟ್ಟಿದ್ದು, ಯಾವುದನ್ನೂ ಆ ಅಮಾಯಕ ಸಾಬುಗೆ ಹೇಳಿಲ್ಲ, ಮುಂದೆ ಎಂದಾದರೂ ಹೇಳಿಯೇನು.

( ಚಿತ್ರ ಸೆಲೆ: clipart-library.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks