‘ದುಬೈ ಪ್ರೇಮ್’ – ಇದು ಗಿನ್ನೆಸ್ ದಾಕಲೆಯ ಪೋಟೋ ಪ್ರೇಮ್

ಪ್ರಕಾಶ್ ಮಲೆಬೆಟ್ಟು.

dubai frame, ದುಬೈ ಪ್ರೇಮ್

ಮರಳುಗಾಡಿನ ನಡುವೆ ಇರುವ ಕನಸಿನ ನಗರಿ ದುಬೈ ಮಾನವ ನಿರ‍್ಮಿತವಾದ ಅನೇಕ ಅದ್ಬುತ, ಅಚ್ಚರಿಗಳಿಗೆ ಹೆಸರುವಾಸಿ. ಶೂನ್ಯದಿಂದ ಎದ್ದು ನಿಂತು, ಬೆಳೆದು, ಹೇಗೆ ಪ್ರಪಂಚಕ್ಕೆ ತನ್ನ ಅಸ್ತಿತ್ವವನ್ನು ಸಾರಬಹುದೆಂಬುದಕ್ಕೆ ದುಬೈ ಒಂದು ಅತ್ಯುತ್ತಮ ಉದಾಹರಣೆ. ನೈಸರ‍್ಗಿಕ ಸಂಪನ್ಮೂಲಗಳ ಕೊರತೆಯಿರುವ ಈ ದೇಶದಲ್ಲಿ ಆದಾಯದ ಮೂಲ ವ್ಯಾಪಾರ ವಹಿವಾಟು ಹಾಗೂ ಪ್ರವಾಸಿಗರು. ತೈಲ ಸಂಪನ್ಮೂಲ ಇದ್ದರೂ, ಅದು ಈ ದೇಶದ ಬಳಕೆಗಶ್ಟೇ ಸೀಮಿತವಾಗಿದೆ. ಹಾಗಾಗಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಲು ಅನೇಕ ಅದ್ಬುತಗಳನ್ನು ಇಲ್ಲಿ ಸ್ರುಶ್ಟಿ ಮಾಡಿದ್ದಾರೆ. ಜಗತ್ತಿನ ಅತಿ ಎತ್ತರದ ಕಟ್ಟಡ, ವಿಶ್ವದ ಅತಿ ದೊಡ್ಡ ವಾಣಿಜ್ಯ ಕಟ್ಟಡ ನಿರ‍್ಮಿಸಿ ಮಾನವನ ಬುದ್ದಿ ಶಕ್ತಿಗೆ ಅಸಾದ್ಯವಾದದ್ದು ಯಾವುದೂ ಇಲ್ಲವೆಂದು ಸಾದಿಸಿ ತೋರಿಸಿದ ನಗರಿ ದುಬೈ. ಇದರ ಗರಿಮೆಗೆ ಇತ್ತೀಚಿನ ಸೇರ‍್ಪಡೆ ‘ದುಬೈ ಪ್ರೇಮ್’.

ಇದು ಗಿನ್ನೆಸ್ ದಾಕಲೆಯ ಪೋಟೋ ಪ್ರೇಮ್

‘ದುಬೈ ಪ್ರೇಮ್’ ದುಬೈಯ ಜಬಿಲ್ ಪಾರ‍್ಕ್‌ನಲ್ಲಿ ನಿರ‍್ಮಿಸಿದ ಅದುನಿಕ ವಾಸ್ತುಶಿಲ್ಪದ ಹೆಗ್ಗುರುತಾಗಿದೆ. ದಿ ಗಾರ‍್ಡಿಯನ್ ವ್ರುತ್ತ ಪತ್ರಿಕೆಯು ಇದನ್ನು “ಗ್ರಹದ ಮೇಲಿನ ಅತಿದೊಡ್ಡ ಚಿತ್ರ ಚೌಕಟ್ಟು” ಎಂದು ವಿವರಿಸಿದೆ. ಇದೇ ಮೇ 10 ರಂದು ‘ದುಬೈ ಪ್ರೇಮ್’ ಚಿತ್ರ ಚೌಕಟ್ಟು (ಪೋಟೋ ಪ್ರೇಮ್) ರೂಪದಲ್ಲಿರುವ ಪ್ರಪಂಚದ ಅಂತ್ಯಂತ ದೊಡ್ಡ ಕಟ್ಟಡ ಎಂದು ಗಿನ್ನಿಸ್ ವರ‍್ಲ್ಡ್ ರೆಕಾರ‍್ಡ್ ಬುಕ್ಕಿನಲ್ಲಿ ದಾಕಲಾಯಿತು.

ದುಬೈ ಪ್ರೇಮ್ – ಈ ಚೌಕಟ್ಟು ಎಶ್ಟು ದೊಡ್ಡದು?

ದುಬೈ ಪ್ರೇಮ್‌ನ ವೀಕ್ಶಣೆ ಒಂದು ಅದ್ಬುತ ಅನುಬವ. ಐತಿಹಾಸಿಕ ವಸ್ತುಗಳ ಪ್ರದರ‍್ಶನ ಹಾಗು ವಿಹಂಗಮ ವೀಕ್ಶಣೆಗಳೊಂದಿಗೆ ಚಿತ್ರ ಚೌಕಟ್ಟನ್ನು ಹೋಲುವ ಈ ವಿಶಿಶ್ಟ ಕಟ್ಟಡದ ಎತ್ತರ 150.24 ಮೀಟರ್ (493 ಅಡಿ) ಮತ್ತು ಅಗಲ 95.53 ಮೀಟರ್. ಈ ಕಟ್ಟಡ ನಿರ‍್ಮಿಸಲು ಗಾಜು, ಉಕ್ಕು, ಅಲ್ಯೂಮಿನಿಯಂ ಹಾಗು ಕಾಂಕ್ರೀಟನ್ನು ಉಪಯೋಗಿಸಲಾಗಿದೆ. ದುಬೈ ಮುನ್ಸಿಪಾಲಿಟಿ ನಿರ‍್ಮಿಸಿದ ಈ ಕಟ್ಟಡಕ್ಕೆ ಕರ‍್ಚು ಮಾಡಿದ ಹಣ 230 ಮಿಲಿಯನ್ ದೀರಾಮ್. ಈ ಕಟ್ಟಡದ ಪ್ರಮುಕ ಆಕರ‍್ಶಣೆ ಏನೆಂದರೆ ಮೇಲೆ ನಿಂತು ನೋಡಿದಾಗ ಒಂದು ಪಕ್ಕದಲ್ಲಿ ಹಳೆ ದುಬೈ ಮತ್ತೊಂದು ಬದಿಯಲ್ಲಿ ಹೊಸ ದುಬೈ ನೋಡಬಹುದು.ಈ ಕಟ್ಟಡ ದುಬೈಯ ಗತಕಾಲವನ್ನು, ವರ‍್ತಮಾನವನ್ನು ಹಾಗು ಮುಂದಿನ ಬವಿಶ್ಯವನ್ನು ನಮ್ಮ ಕಣ್ಣಿಗೆ ಕಟ್ಟಿ ಕೊಡುತ್ತದೆ.

ಈ ಕಟ್ಟಡದ ವಿನ್ಯಾಸ ಮಾಡಲು ಸ್ಪರ‍್ದೆಯೊಂದನ್ನು ನಡೆಸಲಾಗಿತ್ತು

ದುಬೈನ ಹೊಸ ಅದ್ಬುತಗಳನ್ನು ಸ್ರುಶ್ಟಿಸುವ ಮೊದಲು ಮಾಡಿಕೊಳ್ಳುವ ತಯಾರಿಯೇ ತುಂಬಾ ವಿಶಿಶ್ಟ. ದುಬೈನ ಒಂದು ಹೊಸ ಮುಕವನ್ನು ಜಗತ್ತಿಗೆ ಪರಿಚಯ ಮಾಡಿಕೊಡಬೇಕು ಎಂದು ಇಲ್ಲಿನ ಆಡಳಿತಗಾರರು ಕನಸು ಕಂಡಾಗ ಅವರು ಮೊದಲು ಮಾಡಿದ್ದೂ ಒಂದು ಹೊಸ ಕಟ್ಟಡದ ವಿನ್ಯಾಸದ ಸ್ಪರ‍್ದೆಯನ್ನು ಏರ‍್ಪಡಿಸಿ ಪ್ರಪಂಚದಾದ್ಯಂತದಿಂದ ಇಂಜಿನಿಯರ್ ಸಂಸ್ತೆಗಳಿಗೆ ಬಾಗವಹಿಸಲು ಅಹ್ವಾನ ಕೊಟ್ಟದ್ದು . ಜಗತ್ತಿನ 926 ಸಂಸ್ತೆಗಳು ಈ ಸ್ಪರ‍್ದೆಯಲ್ಲಿ ಬಾಗವಹಿಸಿದ್ದವು. ಇದರಲ್ಲಿ ವಿಜೇತರಾಗಿ ಹೊರ ಹೊಮ್ಮಿದ್ದು ಮೆಕ್ಸಿಕೋ ಮೂಲದ ವಾಸ್ತುಶಿಲ್ಪಿ ಪೆರ‍್ನಾಂಡೋ ಡೋನಿಸ್. ಇವರ ಅದ್ಬುತ ಕಲ್ಪನೆಯೇ ಈ ದುಬೈ ಪ್ರೇಮ್. ಈ ವಿನ್ಯಾಸಕ್ಕೆ ಆತನಿಗೆ ಸಿಕ್ಕ ಬಹುಮಾನದ ಮೊತ್ತ $100,000. ಡೋನಿಸ್ ಹೇಳುವ ಪ್ರಕಾರ, ಆತ ಈ ಸ್ಪರ‍್ದೆಯಲ್ಲಿ ಬಾಗವಹಿಸುವಾಗ ದುಬೈಯಲ್ಲಿ ಆಗಲೇ ಅನೇಕ ಮೊದಲುಗಳು ನಡೆದುಬಿಟ್ಟಿದ್ದವು. ಪ್ರಪಂಚದ ಅತಿ ದೊಡ್ಡ ಕಟ್ಟಡ ಬುರ‍್ಜ್ ಕಲೀಪಾ ಮುಗಿಲಿನ ಎತ್ತರಕ್ಕೆ ನಿಂತುಬಿಟ್ಟಿತ್ತು. ಹಾಗಾಗಿ ಇನ್ನೊಂದು ಹೊಸ ಕಟ್ಟಡ ನಿರ‍್ಮಾಣ ಮಾಡುವುದಕ್ಕಿಂತ, ಈಗಿರುವ ದುಬೈಯನ್ನು ಒಂದು ಪೋಟೋ ಪ್ರೇಮ್‌ನೊಳಗೆ ತೋರಿಸಿದರೆ ಹೇಗೆ ಎಂಬ ಕಲ್ಪನೆ ಹುಟ್ಟಿಕೊಂಡಾಗ ಆತ ವಿನ್ಯಾಸ ಮಾಡಿದ್ದು ‘ದುಬೈ ಪ್ರೇಮ್’.

ಇಲ್ಲಿದೆ ಸುಂದರ ಸಂಗೀತ ಕಾರಂಜಿ, 3D ಟೆಕ್ನಾಲಜಿಯ ವಸ್ತು ಸಂಗ್ರಹಾಲಯ

‘ದುಬೈ ಪ್ರೇಮ್’ ವೀಕ್ಶಣೆ ಒಂದು ಅನನ್ಯ ಅನುಬವ. ನೋಡಲು ಪೋಟೋ ಪ್ರೇಮ್ ನಂತೆ ಕಾಣಿಸುವ ಈ ಕಟ್ಟಡ ದೂರದಿಂದಲೇ ನಿಮ್ಮನ್ನು ಕೈ ಬಿಸಿ ಕರೆಯುತ್ತದೆ. ಸ್ಟೇನ್ಲೆಸ್ ಸ್ಟೀಲ್ ನಿಂದ ಮಾಡಿರುವ ಬಂಗಾರದ ಬಣ್ಣದ ಹೊರಪಟ್ಟಿ ಕಣ್ಮನ ಸೆಳೆಯುತ್ತದೆ. ಜಬೀಲ್ ಪಾರ‍್ಕಿನ ವಿಶಾಲವಾದ ಪಾರ‍್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ, ಕತ್ತೆತ್ತಿ ದುಬೈ ಪ್ರೇಮ್ ನೋಡಿದರೆ ಆಶ್ಚರ‍್ಯಚಕಿತರಾಗುತ್ತೇವೆ. ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಪಡೆದು ಒಳಗೆ ಹೋದೊಡನೆ ಸುಂದರವಾದ ಸಂಗೀತ ಕಾರಂಜಿ ನಿಮ್ಮನ್ನು ಸ್ವಾಗತಿಸುತ್ತದೆ. ಸಂಜೆ ವೇಳೆ ಸುಂದರ ಅರೇಬಿಕ್ ಸಂಗೀತಕ್ಕೆ ನೀರು ನರ‍್ತಿಸುವಾಗ ನಮಗೆ ಮೈಸೂರಿನ ಬ್ರುಂದಾವನದ ನೀರಿನ ಕಾರಂಜಿ ನೆನಪಿಗೆ ಬರುತ್ತದೆ. ಟಿಕೆಟ್ ಸ್ಕ್ಯಾನ್ ಮಾಡಿಸಿ ಒಳಗೆ ಹೊರಟಾಗ ಮೊದಲಿಗೆ ಎದುರುಗೊಳ್ಳುವುದು ಗತ ಕಾಲದ ದುಬೈನ ಜನರ ಜೀವನಶೈಲಿಯನ್ನು ನಮಗೆ ಪರಿಚಯ ಮಾಡಿಕೊಡುವ ಹೊಸ 3D ಟೆಕ್ನಾಲಜಿ ಉಪಯೋಗಿಸಿ ಸ್ರುಶ್ಟಿಸಿದ ವಸ್ತು ಸಂಗ್ರಹಾಲಯ. ಅಲ್ಲಿ ಸಂಗ್ರಹಿಸಿ ಇಟ್ಟಿರುವ ಪ್ರಾಚೀನ ವಸ್ತುಗಳು ಮನ ಸೆಳೆಯುತ್ತವೆ.

ನೂರೈವತ್ತು ಮೀಟರ್ ಎತ್ತರದಿಂದ ದುಬೈನ ಸುಂದರ ನೋಟ ಬಣ್ಣಿಸಲದಳ

ವಸ್ತುಸಂಗ್ರಹಾಲಯ ನೋಡಿ ಮೈ ಮರೆತು ಮುಂದೆ ಸಾಗುವಶ್ಟರಲ್ಲಿ, ವಿಶಾಲವಾದ ಲಿಪ್ಟ್ ನಿಮ್ಮನ್ನು ಎದುರುಗೊಳ್ಳುತ್ತದೆ. ಲಿಪ್ಟನೊಳಗೆ ಹೋಗಿ ಗುಂಡಿ ಒತ್ತಿದೊಡನೆ ಒಂದು ನಿಮಿಶದಲ್ಲಿ 150 ಮೀಟರ್ ಎತ್ತರಕ್ಕೇರಿರುತ್ತೀರಿ. ಅಲ್ಲಿಂದ ಸುತ್ತ ಎತ್ತ ನೋಡಿದರು ವಿಹಂಗಮ ನೋಟ. ಅಲ್ಲಿ 93 ಮೀಟರ್ ಉದ್ದದ ಸೇತುವೆ ನಿಮ್ಮನ್ನು ಸ್ವಾಗತಿಸುತ್ತದೆ. ಸೇತುವೆಯ ನಡುವೆ ಹೊಳೆಯುವ ಗಾಜಿನ ನಡೆದಾರಿಯಲ್ಲಿ ನಡೆಯುವ ಅನುಬವ ರೋಮಾಂಚನಕಾರಿ ಹಾಗು ಬಯಾನಕ. ಎರಡು ದಟ್ಟವಾದ ಗಾಜಿನ ರಸ್ತೆ ಹಾಗು ಅದರಲ್ಲಿ ನಡೆಯುವಾಗ ನೆಲ ನಿಮಗೆ ಕಾಣಸಿಗುತ್ತದೆ. ಮೊದಲಿಗೆ ನಡೆಯಲು ಆರಂಬಿಸಿದಾಗ ಎಲ್ಲರೂ ಒಮ್ಮೆ ತಡವರಿಸುವುದನ್ನು ನೋಡುವುದೇ ಒಂದು ಮಜಾ. ಕೆಳಗೆ ಬೀಳುತ್ತೇವೆ ಎಂಬ ಬಯ ನಮ್ಮನ್ನು ಕಾಡಲಾರಂಬಿಸುತ್ತದೆ. ಹೀಗೆ ಬಯದಲ್ಲಿ ಹೆಜ್ಜೆ ಹಾಕುವಾಗ ಆದುನಿಕ ತಂತ್ರಗ್ನಾನ ನಿಮನ್ನು ವಿಸ್ಮಯಗೊಳಿಸುತ್ತದೆ. ಇದ್ದಕ್ಕಿದ್ದಂತೆ ನೆಲ ಮಾಯವಾದಂತೆ ಬಾಸವಾಗುತ್ತದೆ. ಎಲ್ಲಿ ಹೋಯಿತು ಅಂತ ಯೋಚಿಸುತ್ತಿರುವಾಗ ಪುನಹ ಪ್ರತ್ಯಕ್ಶವಾಗಿ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ. ಮಕ್ಕಳಿಗೆ ಒಂದು ಉತ್ತಮ ಅನುಬವ. ಸೇತುವೆಯಲ್ಲಿ ನಡೆಯುತ್ತ ಎಡಬಾಗಕ್ಕೆ ಹೊರಳಿ ನೋಡಿದರೆ ನಿಮಗೆ ಹಳೆ ದುಬೈ ಕಾಣಸಿಗುತ್ತದೆ. ಪುರಾತನ ಕಟ್ಟಡಗಳು ನಿಮಗೆ ಹಿಂದಿನ ದುಬೈ ಪರಿಚಯ ಮಾಡಿಕೂಡುತ್ತವೆ. ಹಾಗೆ ಬಲಬಾಗಕ್ಕೆ ಹೊರಳಿ ನೋಡಿದಾಗೆ ಒಮ್ಮೆ ನಿಬ್ಬೆರಗಾಗುತ್ತೀರಿ. ಪ್ರಪಂಚದ ಅತೀ ಎತ್ತರದ ಕಟ್ಟಡ ಬುರ್‍ಜ್ ಕಲೀಪಾದಿಂದ ಹಿಡಿದು ದೊಡ್ಡ ದೊಡ್ಡ ಆದುನಿಕ ಕಟ್ಟಡಗಳು ನವ ದುಬೈಗೆ ನಿಮನ್ನು ಸ್ವಾಗತಿಸುತ್ತವೆ.

ಇಲ್ಲಿ ದುಬೈನ ನಿನ್ನೆ-ಇಂದು-ನಾಳೆಗಳ ಚಿತ್ರಣವಿದೆ

ಒಂದು ಕ್ಶಣ ನಿಂತ ಜಾಗದಿಂದಲೇ ಇಡೀ ದುಬೈ ನಗರವನ್ನು ನೋಡಿದ ಅನುಬವ ನಿಮಗಾಗುತ್ತದೆ. ಇಲ್ಲಿನ ಮತ್ತೊಂದು ಪ್ರಮುಕ ಆಕರ‍್ಶಣೆ ದೊಡ್ಡ ಪರದೆ. ಕೆಳಗೆ ಕೊಟ್ಟಿರುವ ಸ್ಕ್ರೀನ್ ಮೇಲೆ ನೀವು ಏನನ್ನು ಬೇಕಿದ್ರೂ ನಿಮ್ಮ ಕೈ ಬೆರಳಿನಿಂದ ಬರೆಯಿರಿ ಅದು ಹಿಂದಿರುವ ದೊಡ್ಡದಾದ ಪರದೆ ಮೇಲೆ ಮೂಡಿ ಬರುತ್ತದೆ. ಹಾಗೆ ಇಲ್ಲಿರುವ ಸ್ವಯಂಚಾಲಿತ ಯಂತ್ರದ ಮುಂದೆ ನಿಂತು ನೀವು ಸೆಲ್ಪಿ ತೆಗೆದುಕೊಳ್ಳಬಹುದು. ನಿಮ್ಮ ಚಾಯಾಚಿತ್ರದ ಹಿಂಬದಿಯಲ್ಲಿ ದುಬೈ ಪ್ರೇಮ್ ಮೂಡಿ ಬರುತ್ತದೆ. ಹಾಗೆ ನೆಲದಿಂದ 150 ಮೀಟರ್ ಎತ್ತರದಲ್ಲಿ ನಿಂತುಕೊಂಡು ನೀವು ಅಲ್ಲಿರುವ ಕೆಪೆಟೇರಿಯಾದಲ್ಲಿ ಕಾಪಿಯ ಸವಿಯನ್ನು ಅನುಬವಿಸಬಹುದು. ಹಾಗೆ ಒಂದು ಹೊಸ ಅನುಬವ ಪಡೆದುಕೊಂಡು ಮತ್ತೊಂದು ಬದಿಯಲ್ಲಿರುವ ಲಿಪ್ಟ್ ಮೂಲಕ ಕೆಳಗೆ ಹೋದರೆ ಅಲ್ಲಿ ನಿಮಗಾಗಿ ಮತ್ತೊಂದು ಹೊಸ ಲೋಕ ಕಾದಿರುತ್ತದೆ. ಗೋಡೆಯ ಮೇಲೆ ದೊಡ್ಡದಾದ ಒಂದು ಪರದೆ. ಅದರಲ್ಲಿ ಮುಂದಿನ 50 ವರ‍್ಶಗಳಲ್ಲಿ ದುಬೈ ಹೇಗೆ ಬದಲಾಗುತ್ತದೆ ಎಂಬುದನ್ನು ಪರದೆಯ ಮೇಲೆ ವಿಡಿಯೋ ಮತ್ತು ವರ‍್ಚುವಲ್ ರಿಯಾಲಿಟಿ ತಂತ್ರಗ್ನಾನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ಹಾರುವ ಕಾರುಗಳು, ಆದುನಿಕ ತಂತ್ರಗ್ನಾನದ ಆಸ್ಪತ್ರೆಗಳು, ಸುದಾರಿತ ಜೀವನ ಶೈಲಿ, 3D ತಂತ್ರಗ್ನಾನದಿಂದ ನಿರ‍್ಮಿಸಲ್ಪಡುವ ಕಟ್ಟಡಗಳು, ಹೀಗೆ ಬವಿಶ್ಯದ ದುಬೈಯನ್ನು ಇಲ್ಲಿ ಪರದೆಯ ಮೇಲೆ ಸಾದರಪಡಿಸುತ್ತಾರೆ. ನೆನಪಿಡಿ ಇದು ಕೇವಲ ಕನಸಲ್ಲ, ಬವಿಶ್ಯದ ದುಬೈ ನಗರದ ವಾಸ್ತವ ಸತ್ಯ.

ಹೀಗೆ ದುಬೈ ಪ್ರೇಮ್ ಬೇಟಿ ಮಾಡುವುದು ಒಂದು ಸುಂದರವಾದ ಅನುಬವ. ದುಬೈಗೆ ಪ್ರವಾಸ ಬರುವವರು ಒಮ್ಮೆ ಇಲ್ಲಿಗೆ ಬೇಟಿ ಕೊಡಲು ಮರೆಯದಿರಿ 🙂

(ಚಿತ್ರ ಸೆಲೆ: gulfbusiness.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.