ಸಮಸ್ಯೆಗಳು : ವರವೇ ಇಲ್ಲ ಶಾಪವೇ?

ಪ್ರಕಾಶ್ ಮಲೆಬೆಟ್ಟು.

ವರ-ಶಾಪ, boon-bane

ಸಮಸ್ಯೆಗಳು ಯಾರಿಗೆ ಇಲ್ಲ ಹೇಳಿ? ಸದ್ಯಕ್ಕೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಲ್ಲಿ ಮುಳುಗಿ ಹೋಗಿರುವುದು ನಮಗೆ ಗೊತ್ತಿದೆ.  ಮನುಶ್ಯನಾಗಿ ಹುಟ್ಟಿದ ಮೇಲೆ, ಬಾಳ ಪಯಣ ಮುಗಿಸುವ ತನಕ ಸಮಸ್ಯೆಗಳು ನಮ್ಮನ್ನ ಬೆಂಬಿಡದೆ ಕಾಡುತ್ತವೆ. ಕೆಲವರಿಗೆ ಸಮಸ್ಯೆಗಳು ಕಡಿಮೆಯಿರಬಹುದು, ಇನ್ನು ಕೆಲವರಿಗೆ ತುಸು ಜಾಸ್ತಿಯಿರಬಹುದು. ಆದರೆ ಸಮಸ್ಯೆ ಇಲ್ಲದ ಮನೆ, ಮನ ಎರಡು ಜಗತ್ತಿನಲ್ಲಿ ಇಲ್ಲ. ಹಾಗಾದ್ರೆ ಸಮಸ್ಯೆಗಳು ಮನುಜನಿಗೆ ವರವೇ ಇಲ್ಲ ಶಾಪವೇ?

ಆಲೋಚನೆ ಮಾಡದೇ ಉತ್ತರ ಹೇಳೋದಾದ್ರೆ ಶಾಪ ಅನಿಸಿ ಬಿಡುತ್ತೆ ಅಲ್ಲವೇ. ‘ಯಾಕಾದ್ರೂ ಸಮಸ್ಯೆಗಳು ಬರುತ್ತವೆಯೋ. ನೆಮ್ಮದಿಯಾಗಿ ಜೀವನ ನಡೆಸಲು ಕೂಡ ಬಿಡೋದಿಲ್ಲ ನಮ್ಮನ್ನು’ ಅಂತ ಗೊಣಗುತ್ತ ಇರುತ್ತೇವೆ ಅಲ್ಲವೇ? ಅಮೇರಿಕಾದ ಪ್ರಸಿದ್ದ ಲೇಕಕ ಟೋನಿ ರಾಬಿನ್ಸ್ ಒಂದು ಕಡೆ ಹೇಳುತ್ತಾರೆ “Every problem is a gift – without problems we would not grow.” ಅಂದ್ರೆ “ಪ್ರತಿಯೊಂದು ಸಮಸ್ಯೆಯೂ ಕೂಡ ನಮಗೆ ಒಂದು ಉಡುಗೊರೆ – ಸಮಸ್ಯೆಗಳಿಲ್ಲದೆ ನಾವು ಬೆಳೆಯುವುದಿಲ್ಲ.” ಎಶ್ಟೊಂದು ನಿಜ ಅಲ್ವಾ.

ಒಂದು ಪುಟ್ಟ ಉದಾಹರಣೆ ಕೊಡುತೇನೆ. “ರೆಡ್ ಬಸ್” ಕಂಪನಿಯ ಹೆಸರನ್ನು ನೀವು ಕೇಳಿರಬಹುದು. ಬೆಂಗಳೂರಿನಲ್ಲಿ ಪ್ರದಾನ ಕಚೇರಿಯನ್ನು ಹೊಂದಿರುವ ಕಂಪನಿ. ಸ್ವಲ್ಪ ಹಿಂದಕ್ಕೆ ಹೊರಳಿ ನೋಡೋದಾದ್ರೆ ಇಸವಿ 2005ರಲ್ಲಿ ಪಣೀಂದ್ರ ಸಾಮ ಎನ್ನುವ ಆಂದ್ರಪ್ರದೇಶದ ಹುಡುಗ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ. ಆ ವರ‍್ಶ ದೀಪಾವಳಿಗೆ ಊರಿಗೆ ಹೋಗಬೇಕೆಂದು ರಜೆ ಸಿಕ್ಕ ತಕ್ಶಣ ಬಸ್ ನಿಲ್ದಾಣಕ್ಕೆ ಹೋದ. ಹಬ್ಬದ ಸಮಯವಾದ್ದರಿಂದ ಯಾವುದೇ ಬಸ್ಸಿನ ಟಿಕೆಟ್ ಸಿಗಲಿಲ್ಲ. ಆ ವರ‍್ಶ ಹಬ್ಬಕೆ ಊರಿಗೆ ಹೋಗಲಾರದೆ ನಿರಾಶೆ ಅನುಬವಿಸಿದ.

ಆದರೆ ಅವನು ಯೋಚಿಸಲಾರಂಬಿಸಿದ. ಯಾಕೆ ನನಗೆ ಊರಿಗೆ ಹೋಗಲಿಕ್ಕೆ ಆಗಲಿಲ್ಲ? ಮೊದಲೇ ಬಸ್ ಸ್ಟ್ಯಾಂಡಿನಲ್ಲಿ ಹೋಗಿ ಕುಳಿತುಕೊಳ್ಳಲು ಸಾದ್ಯವಿಲ್ಲ. ಕಚೇರಿಯಲ್ಲಿ ಕೆಲಸ ಮುಗಿಸಿ ರಾತ್ರಿ ಹೊರಡುವ ಬಸ್ಸನ್ನು ಹತ್ತಬೇಕು. ಆದರೆ ಟಿಕೆಟ್ ಸಿಗಲಿಲ್ಲ. ಎಲ್ಲ ಟ್ರಾವೆಲ್ ಕಂಪನಿಯ ಬಸ್ ಗಳನ್ನೂ ಒಂದೆಡೆ ಸೇರಿಸಿ ಅವುಗಳನ್ನು ಆನ್ಲೈನ್ ಸಂಪರ‍್ಕಕ್ಕೆ ತಂದು ನಾವು ಕುಳಿತಲ್ಲಿಯೇ ಬಸ್ಸಿನ ಟಿಕೆಟ್ ಬುಕ್ ಮಾಡುವ ವ್ಯವಸ್ತೆ ಇದ್ರೆ ಎಶ್ಟೊಂದು ಚೆನ್ನಾಗಿರುತ್ತೆ ಅಂತ ಅನಿಸಲಾರಂಬಿಸಿತು. ತನ್ನ ಗೆಳೆಯರೊಂದಿಗೆ ಚರ‍್ಚೆ ಮಾಡಿದ. ಕಡೆಗೆ ಅವನು ಮತ್ತು ಅವನ ಗೆಳೆಯರು ಜೊತೆಗೂಡಿ ರೆಡ್ ಬಸ್ ಅನ್ನುವ ಆನ್ಲೈನ್ ನಲ್ಲಿ ಬಸ್ ಟಿಕೆಟ್ ಬುಕ್ ಮಾಡುವ ಕಂಪನಿಯನ್ನು ಶುರು ಮಾಡುತ್ತಾರೆ. ಪ್ರತಿಯೊಂದು ಟ್ರಾವೆಲ್ ಕಂಪನಿಯವರ ಹತ್ತಿರ ಮಾತನಾಡಿಸಿ ಅವರ ಮನವೊಲಿಸುತ್ತಾರೆ. ಈಗ ಅವರ ಕಂಪನಿ ಬೇರೆ ದೇಶಗಳಲ್ಲೂ ಇದೆ. ಅವರ ಬಳಿ ಇರುವ ಗ್ರಾಹಕರ ಸಂಕ್ಯೆ 20 ಮಿಲಿಯನ್ ಗಿಂತ ಹೆಚ್ಚು. ಒಂದು ಸಮಸ್ಯೆ ಹೇಗೆ ವರವಾಗಿ/ಉಡುಗೊರೆಯಾಗಿ ಪರಿಣಮಿಸಿತು ಅಂತ ಇಲ್ಲಿ ನೋಡಬಹುದು.

ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಇದೆ. ಸಮಸ್ಯೆ ತಾನಾಗಿಯೇ ಉಡುಗೊರೆಯಾಗಿ ಬದಲಾಗುವುದಿಲ್ಲ. ಪಣೀಂದ್ರ ಸಾಮಗೆ ಬಸ್ ಇಲ್ಲದೆ ಊರಿಗೆ ಹೋಗಲಾಗಲಿಲ್ಲ. ಒಂದು ಸಮಸ್ಯೆ ಅಲ್ಲಿ ಹುಟ್ಟಿಕೊಂಡಿತು. ಅದನ್ನು ಅವರು ಉಡೊಗೊರೆಯಾಗಿ ಪರಿವರ‍್ತಿಸಿಕೊಂಡು ಕಂಪನಿಯನ್ನು ಹುಟ್ಟುಹಾಕಿದರು. ಪಣೀಂದ್ರ ಸಾಮ ಸಮಸ್ಯೆಯನ್ನು ಉಡುಗೊರೆಯಾಗಿ ಪರಿವರ‍್ತಿಸಿಕೊಂಡರು!  ಹೌದು, ಸಮಸ್ಯೆಗಳು ನಮ್ಮದೇ. ಹಾಗೆ, ಬಹಳಶ್ಟು ಬಾರಿ ಅದಕ್ಕೆ ಪರಿಹಾರ ಕೂಡ ನಮ್ಮ ಕೈಯಲ್ಲೇ ಇರುತ್ತದೆ. ನಮ್ಮ ಯಶಸ್ಸು, ನಾವು ಹೇಗೆ ಸಮಸ್ಯೆಯನ್ನು ನಿರ‍್ವಹಿಸುತ್ತೇವೆ ಎನ್ನುವುದರ ಮೇಲೆ ನಿಂತಿರುತ್ತದೆ. ಹಾಗಂತ ಎಲ್ಲ ಸಮಸ್ಯೆಗಳನ್ನು ಸುಲಬವಾಗಿ ಬಗೆಹರಿಸಲು ಸಾದ್ಯವಾಗುವುದಿಲ್ಲ. ಸಮಸ್ಯೆಗೆ ಪರಿಹಾರ ಹುಡುಕುವ ಚಾಕ ಚಾಕ್ಯತೆ, ಗಟ್ಟಿ ಮನಸು, ಬುದ್ದಿವಂತಿಕೆ, ಅಳುಕು ಮೀರಿದ ವ್ಯಕ್ತಿತ್ವ, ಸಮಾದಾನವಾಗಿ ಯೋಚಿಸುವ ಮನಸು – ಇವೆಲ್ಲವೂ ಸಮಸ್ಯೆಯನ್ನು ಬಗೆಹರಿಸುವಲ್ಲಿ ನೆರವಾಗುತ್ತವೆ.

ಒಬ್ಬ ಯಾವುದೊ ಕಾರಣಕ್ಕೆ ನಮ್ಮ ಮೇಲೆ ಕೋಪಗೊಂಡಿದ್ದಾನೆ. ಅವನ ಪ್ರಕಾರ ನಾವು ತಪ್ಪು ಮಾಡಿದ್ದೇವೆ. ನಮ್ಮ ಪ್ರಕಾರ ತಪ್ಪು ಅವನದು. ಇದು ಒಂದು ಸಮಸ್ಯೆಯನ್ನು ಹುಟ್ಟುಹಾಕಿದೆ. ಇಲ್ಲಿ ಇಬ್ಬರೂ ಕೂಡ ತಮ್ಮ ತಮ್ಮ ಮೂಗಿನ ನೇರಕ್ಕೆ ಆಲೋಚನೆ ಮಾಡುತ್ತ ಪಟ್ಟು ಬಿಡದಿದ್ದರೆ ಸಮಸ್ಯೆಗೆ ಪರಿಹಾರ ಎಲ್ಲಿಂದ ಸಿಗಬೇಕು? ಇಲ್ಲಿ ಸಮಸ್ಯೆ ಉಡುಗೊರೆಯಾಗುವ ಬದಲು ಶಾಪವಾಗಿ ಬಿಡುವ ಸಂಬವನೀಯತೆಯೇ ಹೆಚ್ಚು. ಹಾಗಾದ್ರೆ ಇದನ್ನು ಉಡುಗೊರೆಯಾಗಿ ಹೇಗೆ ಪರಿವರ‍್ತಿಸಿಕೊಳ್ಳಬಹುದು? ಕೋಪಗೊಂಡವರು ನಿಮ್ಮ ಗೆಳೆಯರೇ ಆಗಿರಬಹುದು ಇಲ್ಲವೇ ನಿಮ್ಮ ಗ್ರಾಹಕರು, ನಿಮ್ಮ ಬಂದುಗಳು ಕೂಡ ಆಗಿರಬಹುದು. ‘ನೀನು ಕೋಪಗೊಂಡರೆ ನನಗೇನು ತೊಂದ್ರೆಯಿಲ್ಲ, ನಿನಗಿಂತ ಉತ್ತಮ ಗೆಳೆಯರು, ಬಂದುಗಳು ನನ್ನೊಡನೆ ಇದ್ದಾರೆ, ಇಲ್ಲವೇ ನೀನು ಒಬ್ಬ ಬರದಿದ್ರೆ ನನ್ನ ವ್ಯಾಪಾರಕ್ಕೇನು ತೊಂದ್ರೆ ಇಲ್ಲ’ ಅಂತ ಯೋಚನೆ ಮಾಡುತ್ತೇವೆಯಾದ್ರೆ ಅದು ನಮ್ಮ ಮೂರ‍್ಕತನ. ನಮ್ಮ ಹಟ ನಾವು ಬಿಡದಿದ್ದರೆ ತಕ್ಶಣಕ್ಕೆ ಅದು ಪರಿಣಾಮ ಬೀರದಿದ್ದರೂ, ಮುಂದೆ ಕಂಡಿತ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಸಂಬಂದಗಳು, ಗೆಳೆತನ ಮುರಿದು ಬೀಳಬಹುದು. ವ್ಯಾಪಾರದಲ್ಲಿ ನಶ್ಟಕ್ಕೂ ಕಾರಣವಾಗಬಹುದು.

ಹಾಗಾಗಿ ಯಾವುದೇ ಸಮಸ್ಯೆ ಬರಲಿ, ಸ್ವಲ್ಪ ಸಾವದಾನವಾಗಿ ಪರಿಹಾರದ ದಿಕ್ಕಿನತ್ತ ಆಲೋಚನೆ ಮಾಡಬೇಕು. ಯಾರೊಂದಿಗೂ ಶಾಶ್ವತ ಶತ್ರುತ್ವದ ಅಗತ್ಯ ಇಲ್ಲ. ಏಕೆಂದ್ರೆ ತಾತ್ಕಾಲಿಕ ಬದುಕಿನಲ್ಲಿ ಎಲ್ಲವೂ ತಾತ್ಕಾಲಿಕ. ಹಾಗಾಗಿ ಸಮಸ್ಯೆಗಳು ಬಂದಾಗ ನಿರಾಶರಾಗದೆ ಅದನ್ನು ಉಡುಗೊರೆಯಾಗಿ ಪರಿವರ‍್ತಿಸಕೊಳ್ಳುವುದರಲ್ಲೇ ನಮ್ಮ ಯಶಸ್ವು ಅಡಗಿದೆ.

( ಚಿತ್ರಸೆಲೆ : community.nasscom.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: